ವಿಜಯೇಂದ್ರ ಬಿಜೆಪಿ ಪ್ರಧಾನ ಕಾರ‍್ಯದರ್ಶಿ?

Published : Jul 21, 2022, 04:33 AM IST
ವಿಜಯೇಂದ್ರ ಬಿಜೆಪಿ ಪ್ರಧಾನ ಕಾರ‍್ಯದರ್ಶಿ?

ಸಾರಾಂಶ

ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಅರುಣ್‌ಕುಮಾರ್‌ ಅವರನ್ನು ದಿಢೀರನೆ ಬದಲಾಯಿಸಿ ರಾಜೇಶ್‌ ಕುಂತೂರು ಅವರನ್ನು ನೇಮಿಸಿದ ಬೆನ್ನಲ್ಲೇ ಪಕ್ಷದಲ್ಲಿ ವಿಜಯೇಂದ್ರ ನೇಮಕದ ಬಗ್ಗೆ ಗುಸು ಗುಸು ಆರಂಭ 

ಬೆಂಗಳೂರು(ಜು.21):  ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಬಡ್ತಿ ಸಿಗುವ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ.
ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಅರುಣ್‌ಕುಮಾರ್‌ ಅವರನ್ನು ದಿಢೀರನೆ ಬದಲಾಯಿಸಿ ರಾಜೇಶ್‌ ಕುಂತೂರು ಅವರನ್ನು ನೇಮಿಸಿದ ಬೆನ್ನಲ್ಲೇ ಪಕ್ಷದಲ್ಲಿ ವಿಜಯೇಂದ್ರ ನೇಮಕದ ಬಗ್ಗೆ ಗುಸು ಗುಸು ಆರಂಭವಾಗಿದೆ. ಜತೆಗೆ ಸಾಮಾಜಿಕ ಜಾಲತಾಣದಲ್ಲೂ ಪೋಸ್ಟ್‌ಗಳು ಹರಿದಾಡುತ್ತಿವೆ.

ಮುಂದಿನ ತಿಂಗಳು ಹಾಲಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರ ಅವಧಿ ಪೂರ್ಣವಾಗಲಿದೆ. ವಿಧಾನಸಭಾ ಚುನಾವಣೆ ಮುಗಿಯುವವರೆಗೆ ಅವರನ್ನೇ ಮುಂದುವರೆಸುವರೋ ಅಥವಾ ಬೇರೊಬ್ಬರನ್ನು ಅಧ್ಯಕ್ಷರನ್ನಾಗಿಸುವರೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹೀಗಾಗಿ, ವಿಜಯೇಂದ್ರ ಅವರ ನೇಮಕದ ಬಗ್ಗೆ ಆಗಸ್ಟ್‌ನಲ್ಲೇ ಸ್ಪಷ್ಟಚಿತ್ರಣ ಹೊರಬೀಳಲಿದೆ ಎಂದು ತಿಳಿದು ಬಂದಿದೆ.

ಬಸವಣ್ಣನ ಆದರ್ಶದಂತೆ ದುಡಿದವರು ಬಿಎಸ್‌ವೈ: ವಿಜಯೇಂದ್ರ

ವಿಜಯೇಂದ್ರ ಅವರ ಹೆಸರನ್ನು ಇತ್ತೀಚೆಗೆ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಯ ವೇಳೆ ಪ್ರಸ್ತಾಪವಾಗಿ, ಹೈಕಮಾಂಡ್‌ಗೆ ಶಿಫಾರಸು ಮಾಡಲಾಗಿತ್ತು. ಆದರೆ, ಹೈಕಮಾಂಡ್‌ ವಿಜಯೇಂದ್ರ ಅವರ ಹೆಸರನ್ನು ತಿರಸ್ಕರಿಸಿತ್ತು. ಇದೀಗ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಓಲೈಸುವ ದೃಷ್ಟಿಯಿಂದ ಹಾಗೂ ಚುನಾವಣೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ವಿಜಯೇಂದ್ರ ಅವರನ್ನು ಪಕ್ಷದ ಸಂಘಟನೆಯಲ್ಲಿ ಇನ್ನಷ್ಟು ಸಕ್ರಿಯವಾಗಿ ಬಳಸಿಕೊಳ್ಳುವ ಚಿಂತನೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ರಾಜೇಶ್‌ ಕುಂತೂರು

ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ಬಿಜೆಪಿಯ ಅತ್ಯಂತ ಮಹತ್ವದ ಜವಾಬ್ದಾರಿಗೆ ಕರಾವಳಿ ಮೂಲದವರೊಬ್ಬರು ಆಯ್ಕೆಯಾಗಿದ್ದು, ಬಿಜೆಪಿ ಮತ್ತು ಆರ್‌ಎಸ್‌ಎಸ್‌ ನಡುವೆ ಸಮನ್ವಯಕಾರರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಂತೂರು ನಿವಾಸಿ ರಾಜೇಶ್ ಕುಂತೂರು ರಾಜ್ಯ ಬಿಜೆಪಿಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ಈ ವರೆಗೆ ಅರುಣ್ ಕುಮಾರ್ ನಿರ್ವಹಿಸಿದ ಜವಾಬ್ದಾರಿ ಇದೀಗ ರಾಜೇಶ್ ಅವರ ಹೆಗಲ ಮೇಲೇರಿದ್ದು, ಅರುಣ್ ಕುಮಾರ್ ಮತ್ತೆ ಮಾತೃಸಂಸ್ಥೆ ಆರ್‌ಎಸ್‌ಎಸ್‌ಗೆ ಮರಳಲಿದ್ದಾರೆ ಎಂದು ತಿಳಿದು ಬಂದಿದೆ. 

ಸಂಘಟನಾ ಕಾರ್ಯದರ್ಶಿ ಹುದ್ದೆ ಬಿಜೆಪಿಯ ಮಟ್ಟಿಗೆ ಅತ್ಯಂತ ಮಹತ್ವದ ಜವಾಬ್ದಾರಿಯಾಗಿದ್ದು, ಇವರು ಪಕ್ಷ ಮತ್ತು ಸಂಘದ ಮಧ್ಯೆ ಸಮನ್ವಯಕಾರರಾಗಿ ಇರಲಿದ್ದಾರೆ. ಈಗಿನ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿರೋ ಉಡುಪಿ ಮೂಲದ ಬಿ.ಎಲ್.ಸಂತೋಷ್ ಕೂಡ ಹಲವು ವರ್ಷಗಳ ಹಿಂದೆ ರಾಜ್ಯ ಬಿಜೆಪಿಯ ಸಂಘಟನಾ ಕಾರ್ಯದರ್ಶಿಯಾಗಿದ್ದು, ಪಕ್ಷದ ಮೇಲೆ ಗಟ್ಟಿ ಹಿಡಿತದ ಜೊತೆಗೆ ಆರ್‌ಎಸ್‌ಎಸ್‌ ಸೂಚನೆ ಮತ್ತು ಸಲಹೆಗಳನ್ನು ಪಕ್ಷದಲ್ಲಿ ಸ್ಪಷ್ಟವಾಗಿ ಜಾರಿಗೆ ತರುವ ಮೂಲಕ ಕಟ್ಟುನಿಟ್ಟಾಗಿದ್ದರು. ಈ ಜವಾಬ್ದಾರಿ ಆರ್‌ಎಸ್‌ಎಸ್‌ ನೇಮಕವಾದ ಕಾರಣ ಬಹುತೇಕ ಪಕ್ಷದ ಪ್ರಮುಖರು ಇವರ ಸಲಹೆ ಸೂಚನೆಗಳನ್ನು ಪಾಲಿಸುವುದು ವಾಡಿಕೆ. ಇದೀಗ ಬಿ‌.ಎಲ್‌.ಸಂತೋಷ್ ಬಳಿಕ ಮತ್ತೊಬ್ಬ ಕರಾವಳಿಗನಿಗೆ ಈ ಜವಾಬ್ದಾರಿ ಹೆಗಲೇರಿದೆ.
ಯಾರು ಈ ರಾಜೇಶ್ ಕುಂತೂರು?

ಅಂದ ಹಾಗೆ ಬಿಜೆಪಿ ಸಂಘಟನಾ ಕಾರ್ಯದರ್ಶಿ ಜವಾಬ್ದಾರಿ ಪಡೆಯುವವರಿಗೆ ಯಾವುದೇ ರಾಜಕೀಯ ಹಿನ್ನೆಲೆ ಇರುವುದಿಲ್ಲ. ಆದರೆ ಆರ್‌ಎಸ್‌ಎಸ್‌ ಜೊತೆ ನಿಕಟ ನಂಟಿರುವ ಮತ್ತು ಪೂರ್ಣಾವಧಿ ಜವಾಬ್ದಾರಿ ಇರುವವರನ್ನು ಈ ಹುದ್ದೆಗೆ ನೇಮಿಸಲಾಗುತ್ತದೆ. ಸದ್ಯ ಜವಾಬ್ದಾರಿ ಹೊತ್ತಿರುವ ರಾಜೇಶ್ ಕುಂತೂರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪೂರ್ಣಾವಧಿ ಪ್ರಚಾರಕರಾಗಿದ್ದರು.

ಹುನಗುಂದ ವಿಧಾನಸಭಾ ಮತಕ್ಷೇತ್ರದಲ್ಲಿ ಮಾಜಿ ಸಿಎಂ ಮಕ್ಕಳ ಭರ್ಜರಿ ಹವಾ..! 

32 ವರ್ಷ ಪ್ರಾಯದ ರಾಜೇಶ್ ಕಡಬ ತಾಲೂಕಿನ ಕುಂತೂರು ಗ್ರಾಮದ ನೂಜಿಲದ ವೀರಪ್ಪ ಹಾಗೂ ದಿ‌‌.ಚೆನ್ನಮ್ಮರ ಪುತ್ರ. ರಾಜೇಶ್ ಅವರ ತಂದೆ ಕೂಲಿ ಕಾರ್ಮಿಕರಾಗಿದ್ದು, ಇವರು ಬಾಲ್ಯದಲ್ಲೇ ಸಂಘದ ನಂಟಿಗೆ ಬಂದಿದ್ದಾರೆ. ಪುತ್ತೂರಿನ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಪದವಿ ಮುಗಿಸಿದ ರಾಜೇಶ್, ಆ ಹೊತ್ತಿಗೂ ಸಂಘದ ಜೊತೆ ನಂಟು ಹೊಂದಿದ್ದರು. ವಿದ್ಯಾರ್ಥಿ ಜೀವನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪುತ್ತೂರು ತಾಲೂಕಿನ ಅರಿಯಡ್ಕ ಮಂಡಲದ ಕಾರ್ಯವಾಹರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ಆ ಬಳಿಕ ಪದವಿ ಮುಗಿಸಿ ಸಂಘದ ಪೂರ್ಣಾವಧಿ ಪ್ರಚಾರಕರಾಗಿ ಸಾಗಿದ್ದಾರೆ. 

ದ.ಕ ಜಿಲ್ಲೆಯ ಮೂಡಬಿದ್ರೆ ತಾಲೂಕು ಪ್ರಚಾರಕರಾಗಿ, ಸಾಗರ ಜಿಲ್ಲಾ ಪ್ರಚಾರಕರಾಗಿ, ಶಿವಮೊಗ್ಗ ಜಿಲ್ಲಾ ಪ್ರಚಾರಕರಾಗಿ, ಮೈಸೂರು ವಿಭಾಗ ಪ್ರಚಾರಕರಾಗಿ ಜವಾಬ್ದಾರಿ ಹೊತ್ತಿದ್ದರು. ಸದ್ಯ ತುಮಕೂರು ವಿಭಾಗ ಪ್ರಚಾರಕರಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ‌. ಆರ್‌ಎಸ್‌ಎಸ್‌ ಉತ್ತರ ಮತ್ತು ದಕ್ಷಿಣ ಪ್ರಾಂತಗಳ ಸಮನ್ವಯ ಬೈಠಕ್ ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್‍ನಲ್ಲಿ ಮಂಗಳವಾರ ನಡೆಯಿತು. ಅಲ್ಲಿ ಒಟ್ಟು ಐವರು ಪ್ರಚಾರಕರ ಜವಾಬ್ದಾರಿಗಳಲ್ಲಿ ಬದಲಾವಣೆ ಮಾಡಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕರ್ನಾಟಕ ಗದ್ದುಗೆ ಫೈಟ್‌ ಬಗ್ಗೆ ಹೈಕಮಾಂಡ್‌ ನಾಯಕರ ಚರ್ಚೆ
ಚುಂಚ ಶ್ರೀ ಬಳಿ ಕೈ ಮುಗಿದು ಎಚ್‌ಡಿಕೆ ಕ್ಷಮೆ