ಕೋರ್ಟ್‌ಗಳಲ್ಲಿ 61000 ನೀರಾವರಿ ಕೇಸ್‌, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತನಿಖೆ: ಡಿಕೆಶಿ ಹೇಳಿದ್ದೇನು?

Published : Nov 23, 2025, 09:11 PM IST
DK Shivakumar

ಸಾರಾಂಶ

ರಾಜ್ಯದ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ಪ್ರಕರಣಗಳ ಇತ್ಯರ್ಥದಲ್ಲಿ ವಿಳಂಬ ಮಾಡಿ, ಸರ್ಕಾರಕ್ಕೆ ನಷ್ಟವುಂಟು ಮಾಡಿರುವ ಕುರಿತಂತೆ ತನಿಖೆ ನಡೆಸಲು ನಿರ್ಧರಿಸಲಾಗಿದೆ.

ಬೆಂಗಳೂರು (ನ.23): ರಾಜ್ಯದ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳಲ್ಲಿ ಪ್ರಕರಣಗಳ ಇತ್ಯರ್ಥದಲ್ಲಿ ವಿಳಂಬ ಮಾಡಿ, ಸರ್ಕಾರಕ್ಕೆ ನಷ್ಟವುಂಟು ಮಾಡಿರುವ ಕುರಿತಂತೆ ತನಿಖೆ ನಡೆಸಲು ನಿರ್ಧರಿಸಲಾಗಿದೆ. ತನಿಖೆಯಲ್ಲಿ ಅಧಿಕಾರಿಗಳು ಅಥವಾ ವಕೀಲರಲ್ಲಿ ಯಾರು ಷಡ್ಯಂತ್ರ ಮಾಡಿದ್ದಾರೆ ಎಂಬುದನ್ನು ಪತ್ತೆ ಮಾಡಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ವಿಧಾನಸೌಧದಲ್ಲಿ ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯ ವಿವಿಧ ನಿಗಮಗಳಿಗೆ ಸಂಬಂಧಿಸಿದ ನ್ಯಾಯಾಲಯ ಪ್ರಕರಣಗಳು, ಯೋಜನೆಗಳ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿ ಕುರಿತಂತೆ ಸಭೆ ನಡೆಸಿ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಲಸಂಪನ್ಮೂಲ ಇಲಾಖೆ ಅಡಿಯಲ್ಲಿ ಕಾವೇರಿ ನೀರಾವರಿ ನಿಗಮ, ವಿಶ್ವೇಶ್ವರಯ್ಯ ಜಲ ನಿಗಮ, ಕರ್ನಾಟಕ ನೀರಾವರಿ ನಿಗಮ ಹಾಗೂ ಕೃಷ್ಣಾ ಭಾಗ್ಯ ಜಲನಿಗಮಗಳಿಗೆ ಸಂಬಂಧಿಸಿದ 61 ಸಾವಿರ ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿವೆ. ಅದರಲ್ಲಿ ಭೂಸ್ವಾಧೀನಕ್ಕೆ ಸೇರಿದಂತೆ 33 ಸಾವಿರಕ್ಕೂ ಹೆಚ್ಚಿನ ಪ್ರಕರಣಗಳಿವೆ. ನೀರಾವರಿ ಯೋಜನೆಗಳಿಗೆ ಸಂಬಂಧಿಸಿದ ಪ್ರಕರಣಗಳು ನ್ಯಾಯಾಲಯದಲ್ಲಿ ಇತ್ಯರ್ಥಗೊಳ್ಳುವುದರಲ್ಲಿ ವಿಳಂಬವಾಗುತ್ತಿದೆ. ಇದರಿಂದ ಯೋಜನೆ ಅನುಷ್ಠಾನಕ್ಕೆ ಹಿನ್ನಡೆಯಾಗುವಂತಾಗಿದೆ. ಭೂಸ್ವಾಧೀನ ಪ್ರಕರಣಗಳಿಗೆ ಸಮರ್ಪಕವಾಗಿ ವಾದ ಮಂಡಿಸದ ಕಾರಣ ಹೆಚ್ಚಿನ ಪರಿಹಾರ ನೀಡಬೇಕಾದ ಪರಿಸ್ಥಿತಿಯೂ ಎದುರಾಗಿದೆ.

ಸರ್ಕಾರಕ್ಕೆ ಎದುರಾಗಿರುವ ನಷ್ಟ ಮತ್ತು ನ್ಯಾಯಾಲಯಗಳಲ್ಲಿ ಸರ್ಕಾರಕ್ಕೆ ಹಿನ್ನಡೆಯಾಗಲು ಯಾರು ಕಾರಣ ಎಂಬುದನ್ನು ಪತ್ತೆ ಮಾಡಲು ತನಿಖೆ ನಡೆಸಲು ನಿರ್ಧರಿಸಲಾಗಿದೆ ಎಂದರು. ತನಿಖೆ ಯಾವ ರೀತಿ ಇರಲಿದೆ ಎಂಬ ಬಗ್ಗೆ ಶೀಘ್ರದಲ್ಲಿ ಪ್ರಕಟಿಸಲಾಗುವುದು. ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕೆ? ಇಲಾಖಾ ವ್ಯಾಪ್ತಿಯಲ್ಲಿಯೇ ಉನ್ನತಾಧಿಕಾರಿಗಳಿಂದ ತನಿಖೆ ಮಾಡಿಸಬೇಕೆ ಎಂಬ ಕುರಿತು ನಿರ್ಧರಿಸಲಾಗುವುದು. ಈ ತನಿಖೆ ಮೂಲಕ ನಿಗದಿತ ಸಮಯದಲ್ಲಿ ಅನುಮತಿ ನೀಡದೆ ಮತ್ತು ಕ್ರಮ ಕೈಗೊಳ್ಳದೆ ಅಧಿಕಾರಿಗಳು ತಪ್ಪು ಮಾಡಿದ್ದಾರೆಯೇ? ಅಥವಾ ನ್ಯಾಯಾಲಯಗಳಲ್ಲಿ ಸರ್ಕಾರದ ಪರವಾಗಿ ಸಮರ್ಪಕವಾಗಿ ವಾದ ಮಂಡಿಸದೆ ವಕೀಲರು ತಪ್ಪು ಮಾಡಿದ್ದಾರೆಯೇ ಎಂಬುದನ್ನು ಪತ್ತೆ ಮಾಡಲಾಗುವುದು. ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಹಾಗೂ ವಕೀಲರನ್ನು ತೆಗೆದು ಹಾಕಲಾಗುವುದು. ಸರ್ಕಾರಕ್ಕೆ ಯಾರೇ ನಷ್ಟವುಂಟು ಮಾಡಿದ್ದರೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಹಲವು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪ್ರತಿ ಎಕರೆಗೆ 9 ಲಕ್ಷ ರು. ಪರಿಹಾರ ಮೊತ್ತ ನಿಗದಿ ಮಾಡಿದ್ದರೆ, ಅದು ನ್ಯಾಯಲದಲ್ಲಿ ಪ್ರಕರಣ ದಾಖಲಾಗಿ ಸರ್ಕಾರದ ವಿರುದ್ಧ ತೀರ್ಪು ಬಂದು 20 ಕೋಟಿ ರು.ಗಳಷ್ಟು ಪರಿಹಾರ ನೀಡಿರುವ ಉದಾಹರಣೆಗಳೂ ಇವೆ. ಭೂಸ್ವಾಧೀನ ವಿಳಂಬ ಮಾಡುತ್ತಾ ಪರಿಹಾರ ಮೊತ್ತ ಮತ್ತು ಯೋಜನಾ ವೆಚ್ಚ ಹೆಚ್ಚುವಂತೆ ಮಾಡಿರುವ ದೂರುಗಳೂ ಬಂದಿವೆ. ಈ ಎಲ್ಲದರ ಬಗ್ಗೆಯೂ ತನಿಖೆ ಮಾಡಲಾಗುವುದು. ಇನ್ನು, ಹಲವು ಪ್ರಕರಣಗಳಲ್ಲಿ ಜಲಸಂಪನ್ಮೂಲ ಇಲಾಖೆ ಗಮನಕ್ಕೆ ತರದೇ ಕೇವಲ ನಿಗಮಗಳನ್ನು ಮಾತ್ರ ಪ್ರತಿವಾದಿಯನ್ನಾಗಿ ಮಾಡಲಾಗಿದೆ. ಅದರಿಂದಲೂ ನ್ಯಾಯಾಲಯಗಳಲ್ಲಿ ಹಿನ್ನಡೆಯಾಗುವಂತಾಗಿದೆ. ಈ ಎಲ್ಲವನ್ನು ಗಮನಿಸಿ ತನಿಖೆಗೆ ನಿರ್ಧರಿಸಲಾಗಿದೆ ಎಂದು ವಿವರಿಸಿದರು.

ಅಂದಾಜು 5 ಲಕ್ಷ ಕೋಟಿ ರು. ಹೊರೆ ಆತಂಕ: ಪ್ರಕರಣಗಳ ಇತ್ಯರ್ಥದಲ್ಲಿನ ವಿಳಂಬ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸರ್ಕಾರಕ್ಕೆ ಸುಮಾರು 5 ಲಕ್ಷ ಕೋಟಿ ರು.ಗಳಷ್ಟು ಹೊರೆಯಾಗುವ ಆತಂಕವಿದೆ. ಉದಾಹರಣೆಗೆ ಕೃಷ್ಣಾ ಮೇಲ್ದಂಡೆ ಯೋಜನೆಯ ಭೂ ಪರಿಹಾರವು ಹೆಚ್ಚಳವಾಗುವಂತಾಗಿರುವುದು ಇದೇ ಕಾರಣಕ್ಕೆ. ಈ ಎಲ್ಲವನ್ನು ತಪ್ಪಿಸಲು ಹೊಸ ಕ್ರಮಗಳನ್ನು ಕೈಗೊಳ್ಳಲಾಗುವುದು. ಜತೆಗೆ ನಿಗದಿತ ಕಾಯ್ದೆಗೆ ತಿದ್ದುಪಡಿ ತರಲಾಗುತ್ತದೆ. ಇನ್ನು, ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯ ನಿಗಮಗಳ ನ್ಯಾಯಾಲಯ ಪ್ರಕರಣಗಳ ಮೇಲೆ ನಿಗಾವಹಿಸಲು ಪ್ರತ್ಯೇಕ ಕಾನೂನು ಘಟಕ ಸ್ಥಾಪಿಸಲಾಗುವುದು. ಜತೆಗೆ, ವಕೀಲರು ವಾದ ಮಂಡಿಸುವುದನ್ನು ರೆಕಾರ್ಡ್‌ ಮಾಡಿ ಅದನ್ನು ಪರಿಶೀಲಿಸುವ ವ್ಯವಸ್ಥೆಯನ್ನೂ ಜಾರಿಗೊಳಿಸಲಾಗುವುದು ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಭೂಸ್ವಾಧೀನ ಸೇರಿದಂತೆ ಜಲಸಂಪನ್ಮೂಲ ಇಲಾಖೆ ಪ್ರಕರಣಗಳ ಇತ್ಯರ್ಥಕ್ಕೆ ಹಾಲಿ ಅಥವಾ ನಿವೃತ್ತ ನ್ಯಾಯಾಲಯಧೀಶರ ನೇತೃತ್ವದಲ್ಲಿ ಸಮಿತಿ ರಚಿಸಲು ಅವಕಾಶವಿದೆ. ಆದರೆ, ಅದನ್ನು ಜಿಲ್ಲಾ ಮಟ್ಟದಲ್ಲಿ ಮಾಡಬೇಕೆ ಅಥವಾ ರಾಜ್ಯಮಟ್ಟದಲ್ಲಿ ಮಾಡಬೇಕೆ ಎಂಬ ಬಗ್ಗೆ ಮುಂದೆ ತೀರ್ಮಾನಿಸುತ್ತೇವೆ. ಈ ಸಮಿತಿಯ ನಗರಾಭಿವೃದ್ಧಿ ಇಲಾಖೆ ಮತ್ತು ಜಲಸಂಪನ್ಮೂಲ ಇಲಾಖೆಯನ್ನೊಳಗೊಂಡು ಕೆಲಸ ಮಾಡುವಂತೆ ಮಾಡಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಸಚಿವರಾದ ಎಚ್‌.ಕೆ. ಪಾಟೀಲ್‌, ಕೃಷ್ಣ ಬೈರೇಗೌಡ, ಅಪರ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತ, ಅಡ್ವೋಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ, ಸುಪ್ರೀಂಕೋರ್ಟ್‌ ಹಿರಿಯ ವಕೀಲ ಮೋಹನ್‌ ಕಾತರಕಿ ಇತರರಿದ್ದರು.

ರಸ್ತೆ ವಿಚಾರವಾಗಿ ಪ್ರತ್ಯೇಕ ವಿಭಾಗ: ಬಿಡಿಎ, ಬಿಎಂಆರ್‌ಡಿಎ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನ ಪ್ರಕ್ರಿಯೆ ನಡೆಸುವುದು ಸೇರಿದಂತೆ ಮತ್ತಿತರ ಕೆಲಸ ಮಾಡಲು ಪ್ರತ್ಯೇಕ ವಿಭಾಗ ರಚಿಸಲಾಗುವುದು. ಪೆರಿಫೆರಲ್‌ ರಿಂಗ್‌ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭೂ ಪರಿಹಾರ ನೀಡುವ ಪ್ರಕ್ರಿಯೆ ಆರಂಭಿಸಲಾಗುವುದು. ಅದಕ್ಕೆ ಸಂಬಂಧಿಸಿದಂತೆ ವರದಿ ಸಿದ್ಧಪಡಿಸಲು ಅಧಿಕಾರಿಗಳಿಗೆ ಹೇಳಿದ್ದೇನೆ. ಅದರ ಬಗ್ಗೆ ರೈತರಿಗೂ ಮಾಹಿತಿ ನೀಡಲಾಗುತ್ತದೆ. ಇನ್ನು, ಭೂಸ್ವಾಧೀನ ಪ್ರಕ್ರಿಯೆಯನ್ನು ಮುಂದಿನ 6 ತಿಂಗಳಲ್ಲಿ ಆರಂಭಿಸುವಂತೆ ಅಧಿಕಾರಿಗಳಿಗೆ ಗಡುವು ನೀಡಲಾಗಿದೆ ಎಂದು ಡಿ.ಕೆ. ಶಿವಕುಮಾರ್‌ ಮಾಹಿತಿ ನೀಡಿದರು.

ಮೇಕೆದಾಟಿಗೆ ಸರ್ವಪಕ್ಷ ಸಭೆ

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ನೀಡಿರುವ ಆದೇಶದ ಕುರಿತಂತೆ ರಾಜ್ಯದ ಸಂಸದರು, ಶಾಸಕರಿಗೆ ತಿಳಿಸಲು ಶೀಘ್ರದಲ್ಲಿ ಸರ್ವಪಕ್ಷ ಸಭೆ ಕರೆಯಲಾಗುವುದು. ಸರ್ವಪಕ್ಷ ಸಭೆಯನ್ನು ಬೆಂಗಳೂರಿನಲ್ಲೇ ಮಾಡಬೇಕೆ ಅಥವಾ ದೆಹಲಿಯಲ್ಲಿ ಮಾಡಬೇಕೆ ಎಂಬುದನ್ನು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ನಿರ್ಧರಿಸುತ್ತೇವೆ. ಪ್ರಧಾನಿ ಅವರ ಬಳಿ ಸರ್ವಪಕ್ಷ ನಿಯೋಗ ಕೊಂಡೊಯ್ಯಬೇಕೆ ಎಂಬ ಬಗ್ಗೆಯೂ ಸಭೆಯಲ್ಲಿ ನಿರ್ಧರಿಸಲಾಗುತ್ತದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ
India Latest News Live: ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ - ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ