
ರಾಮನಗರ (ಜು.03): ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹೇಳಿಕೆ ನೀಡಕೂಡದೆಂದು ಕೆಪಿಸಿಸಿ ಅಧ್ಯಕ್ಷರು ನೋಟೀಸ್ ಕೊಟ್ಟಿದ್ದರು ಸಹ ಶಾಸಕ ಇಕ್ಬಾಲ್ ಹುಸೇನ್ ಅವರು, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಬೇಕು ಎನ್ನುವ ತಮ್ಮ ಹೇಳಿಕೆಗೆ ಬದ್ಧ ಎಂದು ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಮ್ಮ ಪಕ್ಷದ ಅಧ್ಯಕ್ಷರಾಗಿದ್ದು, ಕಾಂಗ್ರೆಸ್ ಸದಸ್ಯರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವ ಸ್ವಾತಂತ್ರ್ಯ ಅವರಿಗಿದೆ. ನನಗೆ ನೋಟೀಸ್ ನೀಡಿ 7 ದಿನದೊಳಗೆ ಉತ್ತರ ನೀಡುವಂತೆ ತಿಳಿಸಿದ್ದಾರೆ. ನಾನು ಉತ್ತರ ಕೊಡುತ್ತೇನೆ. ಆದರೆ ನನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ ಎಂದರು. ಬೇರೆ ಶಾಸಕರೂ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ. ಅವರಿಗಿಲ್ಲದ ನೋಟೀಸ್ ನಿಮಗ್ಯಾಕೆ ಅಂತ ಮಾಧ್ಯಮದವರು ಪ್ರಶ್ನೆಗೆ ಪ್ರತಿಕ್ರಿಯಿಸಿ, ಈ ಪ್ರಶ್ನೆಯನ್ನು ನನಗಲ್ಲ, ಅವರನ್ನೇ ಕೇಳಬೇಕು ಎಂದರು.
ಡಿಕೆಶಿ ಎರಡೂವರೆ ವರ್ಷಗಳ ಅವಧಿಗೆ ಸಿಎಂ: ನೂರಕ್ಕೂ ಹೆಚ್ಚು ಶಾಸಕರು ಬದಲಾವಣೆ ಬಯಸಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಳಿದ ಎರಡೂವರೆ ವರ್ಷಗಳ ಅವಧಿಗೆ ಶೀಘ್ರದಲ್ಲಿಯೇ ಮುಖ್ಯಮಂತ್ರಿ ಆಗುತ್ತಾರೆ ಎಂದು ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ಹೊಸ ಬಾಂಬ್ ಸಿಡಿಸಿದ್ದಾರೆ. ನಗರದ ಮಂಜುನಾಥ ನಗರ - ಚಾಮುಂಡಿಪುರ ರಸ್ತೆ ಬಿಳಗುಂಬ ಸರ್ಕಲ್ ನಲ್ಲಿ 6.9 ಕೋಟಿ ರು. ವೆಚ್ಚದಲ್ಲಿ ಬಿಳಗುಂಬ - ಅರೇಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ತರುವಾಯ ಸುದ್ದಿಗಾರರೊಂದಿಗೆ ಮಾತನಾಡಿದರು.
ಡಿ.ಕೆ.ಶಿವಕುಮಾರ್ ರವರು ಮುಖ್ಯಮಂತ್ರಿಯಾಗಲು ಶಾಸಕರು ಬೆಂಬಲ ಕೊಡುತ್ತಾರೆ. ವರಿಷ್ಠರು ತೀರ್ಮಾನ ತೆಗೆದುಕೊಳ್ಳಬೇಕು ಅಷ್ಟೆ. ಕ್ಷೇತ್ರವನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಹಾಗೂ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂಬ ಒತ್ತಾಸೆಯಿಂದ ಸಾಕಷ್ಟು ಶಾಸಕರು ಬದಲಾವಣೆಯ ತೀರ್ಮಾನಕ್ಕೆ ಬಂದಿದ್ದಾರೆ. ಹಾಗಾಗಿ ಅವರ ಪರವಾಗಿ ಸಾಕಷ್ಟು ಶಾಸಕರು ಧ್ವನಿಗೂಡಿಸ್ತಾರೆ ಎಂದರು.
ಅಧಿಕಾರಕ್ಕೆ ತರುವಲ್ಲಿ ಡಿಕೆಶಿ ಪ್ರಮುಖ ಪಾತ್ರ: ರಾಜ್ಯದಲ್ಲಿ ಸಾಕಷ್ಟು ರೀತಿಯಲ್ಲಿ ಹೋರಾಟ ಮಾಡಿ ಡಿ.ಕೆ.ಶಿವಕುಮಾರ್ ರವರು ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಕಷ್ಟಕಾಲದಲ್ಲಿದ್ದ ಪಕ್ಷಕ್ಕೆ ಶಕ್ತಿ ತುಂಬಿ ಎತ್ತರಕ್ಕೆ ತೆಗೆದುಕೊಂಡು ಹೋದವರು. ಅವರು ಕೆಪಿಸಿಸಿ ಅಧ್ಯಕ್ಷರಾದಾಗ 75 ಶಾಸಕರಿದ್ದರು. ಈಗ ಅದರ ಸಂಖ್ಯೆ 136 ತಲುಪಿದೆ. ಮೇಕೆದಾಟು ಪಾದಯಾತ್ರೆ, ಭಾರತ್ ಜೋಡೊ, ಆರೋಗ್ಯ ಹಸ್ತ, ಸಹಾಯ ಹಸ್ತದಂತಹ ಸಾಕಷ್ಟು ಕಾರ್ಯಕ್ರಮಗಳನ್ನು ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಡಿ.ಕೆ.ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಕ್ಷೇತ್ರದ ಅಭಿವೃದ್ಧಿ ಮತ್ತು ಅನುದಾನ, ಮನಸ್ತಾಪ ಇದೆಯೇ ಎಂದು ಕೇಳುತ್ತಾರೆ. ಅದರ ಬಗ್ಗೆಯೂ ಮಾತನಾಡುತ್ತೇನೆ. ಎರಡೂವರೆ ವರ್ಷ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಬೇಕೆಂಬ ನಮ್ಮ ಅಭಿಲಾಷೆಯನ್ನೂ ವ್ಯಕ್ತಪಡಿಸುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.