3ನೇ ದಿನವೂ ಶಾಸಕರ ಅಭಿಪ್ರಾಯ ಸಂಗ್ರಹ ಮಾಡಿದ ರಣದೀಪ್‌ ಸುರ್ಜೇವಾಲಾ

Kannadaprabha News   | Kannada Prabha
Published : Jul 03, 2025, 09:23 AM IST
Randeep surjewala

ಸಾರಾಂಶ

ಸುರ್ಜೆವಾಲಾ ಅವರು ಸತತ 3ನೇ ದಿನವಾದ ಬುಧವಾರವೂ ಶಾಸಕರೊಂದಿಗಿನ ಸಭೆ ಮುಂದುವರಿಸಿದ್ದು, ಕ್ಷೇತ್ರದ ಅಭಿವೃದ್ಧಿ, ಸಚಿವರ ಕಾರ್ಯವೈಖರಿ ಸೇರಿದಂತೆ ಇನ್ನಿತರ ಮಾಹಿತಿಯನ್ನು ಶಾಸಕರಿಂದ ಪಡೆದರು.

ಬೆಂಗಳೂರು (ಜು.03): ಕರ್ನಾಟಕ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೆವಾಲಾ ಅವರು ಸತತ 3ನೇ ದಿನವಾದ ಬುಧವಾರವೂ ಶಾಸಕರೊಂದಿಗಿನ ಸಭೆ ಮುಂದುವರಿಸಿದ್ದು, ಕ್ಷೇತ್ರದ ಅಭಿವೃದ್ಧಿ, ಸಚಿವರ ಕಾರ್ಯವೈಖರಿ ಸೇರಿದಂತೆ ಇನ್ನಿತರ ಮಾಹಿತಿಯನ್ನು ಶಾಸಕರಿಂದ ಪಡೆದರು. ಇನ್ನು, ಶಾಸಕರೊಂದಿಗಿನ ಮೊದಲ ಹಂತದ ಸಭೆಯನ್ನು ಬುಧವಾರಕ್ಕೆ ಅಂತ್ಯ ಮಾಡಿರುವ ಸುರ್ಜೇವಾಲಾ, ಸೋಮವಾರದಿಂದ (ಜು.7) ಉಳಿದ ಶಾಸಕರೊಂದಿಗೆ ಮುಖಾಮುಖಿ ಚರ್ಚೆ ಮುಂದುವರಿಸಲಿದ್ದಾರೆ.

ಸಚಿವರ ಕಾರ್ಯವೈಖರಿ ವಿರುದ್ಧ ಶಾಸಕರ ಅಸಮಾಧಾನ ಹಿನ್ನೆಲೆಯಲ್ಲಿ ಶಾಸಕರನ್ನು ಶಾಂತವಾಗಿಸಲು ರಾಜ್ಯಕ್ಕಾಮಿಸಿದ್ದ ಸುರ್ಜೇವಾಲಾ ಸೋಮವಾರದಿಂದ ಬುಧವಾರದವರೆಗೆ 40ಕ್ಕೂ ಹೆಚ್ಚಿನ ಶಾಸಕರೊಂದಿಗೆ ಸಭೆ ನಡೆಸಿದರು. ಸಭೆಯ ಮೊದಲೆರಡು ದಿನ ಸರ್ಕಾರದ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿದ್ದ ಶಾಸಕರು ಸೇರಿ ಕೋಲಾರ, ಮೈಸೂರು, ರಾಮನಗರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಜಿಲ್ಲೆಗಳ ಶಾಸಕರನ್ನು ಕರೆದು ಮುಖಾಮುಖಿ ಸಭೆ ನಡೆಸಿದರು. ಬುಧವಾರ ಮಂಡ್ಯ, ಕೊಡಗು, ಚಿಕ್ಕಮಗಳೂರಿನ ಶಾಸಕರೊಂದಿಗೆ ಸಭೆ ನಡೆಸಲಾಗಿದ್ದು, ಈ ವೇಳೆ ನಾಯಕತ್ವ ಬದಲಾವಣೆ ಸೇರಿ ಬೇರೆ ಯಾವುದೇ ವಿಷಯಗಳ ಚರ್ಚೆಗೆ ಆಸ್ಪದ ನೀಡದೆ ಕ್ಷೇತ್ರಗಳ ಅಭಿವೃದ್ಧಿ, ಅನುದಾನ ಬಳಕೆಯಂತಹ ವಿಷಯಗಳ ಕುರಿತು ಮಾಹಿತಿ ಪಡೆದರು.

ಖಂಡ್ರೆ ಭೇಟಿ: ಸುರ್ಜೇವಾಲಾ ಬೆಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಬೀದರ್‌ ಕಾಂಗ್ರೆಸ್‌ನ ಕೆಲ ನಾಯಕರು ಸಚಿವ ಖಂಡ್ರೆ ವಿರುದ್ಧ ದೂರು ನೀಡಿದ್ದರು. ಆ ಹಿನ್ನೆಲೆಯಲ್ಲಿ ಬುಧವಾರ ಖಂಡ್ರೆ ಅವರು ಸುರ್ಜೇವಾಲಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಈ ವೇಳೆ ತಮ್ಮ ವಿರುದ್ಧದ ಅಸಮಧಾನದ ಕುರಿತಂತೆ ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಪೂರ್ವ ನಿಗದಿಯಂತೆ ಬುಧವಾರ ಮಂಡ್ಯ, ಕೊಡಗು, ಚಿಕ್ಕಮಗಳೂರು ಭಾಗದ 12 ಶಾಸಕರೊಂದಿಗೆ ಸಭೆ ನಡೆಸಿದರು. ಉಳಿದಂತೆ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಮೇಲುಕೋಟೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಸಭೆಗೆ ಗೈರಾಗಿದ್ದರು. ಅವರೊಂದಿಗೆ ಲಿಂಗಾಯತ ಸಮುದಾಯದ ಶಾಸಕರನ್ನು ಕರೆದು ಸುರ್ಜೇವಾಲಾ ಮಾತುಕತೆ ನಡೆಸಿದ್ದಾರೆ. ಪ್ರಮುಖವಾಗಿ ಗಣೇಶ್ ಹುಕ್ಕೇರಿ, ಗಣೇಶ್‌ ಪ್ರಸಾದ್‌, ಎಚ್‌.ಡಿ.ತಮ್ಮಯ್ಯ, ಮಹಾಂತೇಶ್ ಕೌಜಲಗಿ ಸೇರಿ ಮತ್ತಿತರರೊಂದಿಗೂ ಚರ್ಚೆ ನಡೆಸಿದರು. ಈ ವೇಳೆ ಶಾಸಕರು ಸುರ್ಜೇವಾಲಾ ಎದುರು ತಮ್ಮ ಬೇಡಿಕೆಗಳನ್ನು ಮುಂದಿಟ್ಟರು. ಪ್ರಮುಖವಾಗಿ ಕ್ಷೇತ್ರಕ್ಕೆ ಅನುದಾನ ನೀಡುವುದು, ಸಚಿವರ ಕಾರ್ಯವೈಖರಿ, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರು ಸಹಕರಿಸುತ್ತಿರುವ ರೀತಿ ಬಗ್ಗೆ ವಿವರಿಸಿದರು.

ಜು.7ರಿಂದ ಉಳಿದ ಶಾಸಕರೊಂದಿಗೆ ಸಭೆ: ಮೊದಲ ಹಂತದ ಸಭೆಯನ್ನು ಬುಧವಾರಕ್ಕೆ ಅಂತ್ಯಗೊಳಿಸಿರುವ ರಣದೀಪ್‌ ಸಿಂಗ್‌ ಸುರ್ಜೆವಾಲಾ, ಬುಧವಾರ ರಾತ್ರಿ ದೆಹಲಿಗೆ ವಾಪಾಸಗಿದ್ದಾರೆ. ಎರಡನೇ ಹಂತದ ಸಭೆಯನ್ನು ಜು.7ರಿಂದ ಮುಂದುವರಿಸಲಿದ್ದಾರೆ. ಸುರ್ಜೇವಾಲಾ ಭೇಟಿ ನಂತರ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಈಶ್ವರ್‌ ಖಂಡ್ರೆ, ರಾಜ್ಯ ಉಸ್ತುವಾರಿಯನ್ನು ಭೇಟಿಯಾಗಿ ಚರ್ಚೆ ನಡೆಸಿದ್ದೇನೆ. ಪಕ್ಷ ಸಂಘಟನೆ ಕುರಿತು ಅಭಿಪ್ರಾಯ ತಿಳಿಸಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಮುಂದೆಯೂ ಕಾಂಗ್ರೆಸ್‌ ಸರ್ಕಾರ ಬರಲಿದೆ. ಅದಕ್ಕೆ ಬೇಕಾಗುವ ತಯಾರಿ ಕುರಿತು ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ