Vidhan Parishat Election: ಬಿಜೆಪಿ ಕಾರ್ಯಕಾರಿಣೀಲಿ ಎಮ್ಸೆಲ್ಸಿ ಹಿನ್ನಡೆಯ ಆತ್ಮಾವಲೋಕನ

By Kannadaprabha News  |  First Published Dec 19, 2021, 7:44 AM IST

*   ಡಿ.28, 29 ಹುಬ್ಬಳ್ಳಿಯಲ್ಲಿ ಬಿಜೆಪಿ ರಾಜ್ಯಕಾರ್ಯಕಾರಿಣಿ ಸಭೆ
*   ಬೆಳಗಾವಿ, ಕೊಪ್ಪಳ, ಮೈಸೂರು, ತುಮಕೂರು, ಕೋಲಾರ ಸೋಲು
*   ಪಕ್ಷದ ಅಭ್ಯರ್ಥಿ ಹಿಂದಿಕ್ಕಿ ಪಕ್ಷೇತರ ಲಖನ್‌ ಜಾರಕಿಹೊಳಿ ಗೆಲುವು
 


ಮಲ್ಲಿಕಾರ್ಜುನ ಸಿದ್ದಣ್ಣವರ

ಹುಬ್ಬಳ್ಳಿ(ಡಿ.19):  ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ(Vidhan Parishat) ಆಯ್ಕೆ ಸಂದರ್ಭದಲ್ಲಿ ಭಾರೀ ಮುಜುಗರ ಮತ್ತು ಹಿನ್ನಡೆ ಎದುರಿಸಿರುವ ಬಿಜೆಪಿ(BJP) ಇದೇ ಡಿ.28, 29 ರಂದು ಹುಬ್ಬಳ್ಳಿಯಲ್ಲಿ(Hubballi) ನಡೆಯಲಿರುವ ತನ್ನ ‘ರಾಜ್ಯ ಕಾರ್ಯಕಾರಿಣಿ ಸಭೆ’ಯಲ್ಲಿ ಗಂಭೀರ ಆತ್ಮಾವಲೋಕನಕ್ಕೆ ಮುಂದಾಗಿದೆ.

Tap to resize

Latest Videos

ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರ್ಕಾರವಿದೆ. 14 ರಿಂದ 15 ಸ್ಥಾನಗಳನ್ನು ಸುಲಭವಾಗಿ ಗೆಲ್ಲುವ ಮೂಲಕ ಮೇಲ್ಮನೆಯಲ್ಲಿ ಬಹುಮತ ಸಾಧಿಸುತ್ತೇವೆ ಎನ್ನುವ ಅತಿಯಾದ ಆತ್ಮವಿಶ್ವಾಸ ಹೊಂದಿದ್ದ ಬಿಜೆಪಿಗೆ ಪ್ರತಿಪಕ್ಷ ಕಾಂಗ್ರೆಸ್ಸಿಗೆ(Congress) ಸಮನಾಗಿ 11 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಲು ಸಾಧ್ಯವಾಗಿರುವುದು ಮತ್ತು ಬೆಳಗಾವಿ, ಮೈಸೂರು, ಕೊಪ್ಪಳ, ತುಮಕೂರು, ಕೋಲಾರ ಜಿಲ್ಲೆಗಳಲ್ಲಿನ ಸೋಲನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ ಈ ಹಿನ್ನಡೆಯ ಆತ್ಮಾವಲೋಕನಕ್ಕೆ ರಾಜ್ಯ ಕಾರ್ಯಕಾರಿಣಿಯನ್ನು ವೇದಿಕೆ ಮಾಡಿಕೊಳ್ಳುತ್ತಿದೆ.

Karnataka Politics: ಕಾಂಗ್ರೆಸ್‌-ಬಿಜೆಪಿ ಬ್ರೇಕ್‌ಅಪ್‌ ಸನ್ನಿಹಿತ?

ಬೆಳಗಾವಿಯಲ್ಲಿ(Belagavi) ಪಕ್ಷದ ಅಧಿಕೃತ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಹೀನಾಯ ಸೋಲು ಮತ್ತು ಧಾರವಾಡ(Dharwad) ಕ್ಷೇತ್ರದಲ್ಲಿ ತಮ್ಮ ಸೋದರ ಪ್ರದೀಪ ಶೆಟ್ಟರ್‌ ಪ್ರಯಾಸದ ಗೆಲುವು ಕುರಿತಂತೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ್ದು ಬಿಟ್ಟರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲು(Nalin Kumar Kateel) ಸೇರಿದಂತೆ ಬಿಜೆಪಿಯ ಉಳಿದ ನಾಯಕರೆಲ್ಲ ಹಿನ್ನಡೆಯ ಬಗ್ಗೆ ಚಕಾರ ಎತ್ತದೇ ‘ಕಳೆದ ಬಾರಿಗಿಂತ 5 ಸ್ಥಾನ ಹೆಚ್ಚಿಗೆ ಗೆದ್ದಿದ್ದೇವೆ’ ಎಂದು ಬೀಗುತ್ತಿದ್ದಾರೆ.

ಆಂತರ್ಯದಲ್ಲಿ ಕೊತಕೊತ:

ಬಹಿರಂಗವಾಗಿ ಹೇಳಿಕೆ ನೀಡಿದರೆ ಇನ್ನೇನೋ ಆದೀತು ಎನ್ನುವ ಅಳುಕಿನಿಂದ ಬಿಜೆಪಿಗರು ಪಕ್ಷಕ್ಕೆ ಆಗಿರುವ ಹಿನ್ನಡೆಯನ್ನು ಮರೆಮಾಚಲು ಯತ್ನಿಸುತ್ತ, ಆಗಿರುವ ಅವಮಾನವನ್ನು ಎದೆಯಲ್ಲಿ ಅದುಮಿಟ್ಟುಕೊಳ್ಳುತ್ತ, ಏನೂ ಆಗಿಯೇ ಇಲ್ಲ ಎನ್ನುವಂತೆ ಮುಖದ ಮೇಲೆ ಒತ್ತಾಯದ ನಗೆ ಚೆಲ್ಲುತ್ತಿದ್ದಾರೆ. ಆದರೆ, ಈ ಹಿನ್ನಡೆಯ ಕುದಿ ಮಾತ್ರ ಒಳಗೊಳಗೇ ಕೊತಕೊತ ಎನ್ನುತ್ತಿದೆ.

ಬೆಳಗಾವಿಯಲ್ಲಿ ಉಸ್ತುವಾರಿಯೂ ಸೇರಿದಂತೆ ನಾಲ್ವರು ಮಂತ್ರಿಗಳು, ಇಬ್ಬರು ಸಂಸದರು, ಓರ್ವ ರಾಜ್ಯಸಭಾ ಸದಸ್ಯ, 13 ಜನ ಶಾಸಕರು ಇದ್ದಾಗ್ಯೂ ಪ್ರತಿಪಕ್ಷ ಅಲ್ಲ ಪಕ್ಷೇತರ ಅಭ್ಯರ್ಥಿ ಎದುರು ಪಕ್ಷ ಸೋಲುಂಡಿರುವುದನ್ನು ಬಿಜೆಪಿಯ ಯಾವುದೇ ನಾಯಕನೂ ಒಪ್ಪುತ್ತಿಲ್ಲ.

ಕಾಂಗ್ರೆಸ್‌ ಅಭ್ಯರ್ಥಿ ಚೆನ್ನರಾಜ ಹಟ್ಟಿಹೊಳಿ ಮೊದಲ ಪ್ರಾಶಸ್ತದ 3718 ಮತಗಳಲ್ಲಿ ಜಯಭೇರಿ ಭಾರಿಸಿದರೆ, ಬಿಜೆಪಿ ಅಧಿಕೃತ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಪಕ್ಷೇತರ ಅಭ್ಯರ್ಥಿ ಲಖನ್‌ ಜಾರಕಿಹೊಳಿ (2522) ಎದುರು ಹೀನಾಯ ಸೋಲು (2432) ಉಂಡಿದ್ದಾರೆ. ಈ ಸೋಲಿಗೆ ಕುಟುಂಬ ರಾಜಕಾರಣ, ಸ್ವಜನ ಪಕ್ಷಪಾತವೇ ಕಾರಣ ಎನ್ನುತ್ತಿದ್ದಾರೆ. ಆ ನೋವು, ಆಕ್ರೋಶ ಹೊರಹಾಕಲು ಅವರೆಲ್ಲ ಸೂಕ್ತ ವೇದಿಕೆಯನ್ನು ಎದುರು ನೋಡುತ್ತಿದ್ದಾರೆ.

‘ಕವಟಗಿಮಠ ಸೋಲಿಗೆ ಬೆಳಗಾವಿ ಜಿಲ್ಲೆಯ ಬಿಜೆಪಿ-ಕಾಂಗ್ರೆಸ್‌ ನಾಯಕರ ಮ್ಯಾಚ್‌ಫಿಕ್ಸಿಂಗ್‌ ಕಾರಣವೇ ಹೊರತು ಜಾರಕಿಹೊಳಿ ಸೋದರರು ಅಲ್ಲ’ ಎಂದು ಲಖನ್‌ ಜಾರಕಿಹೊಳಿ ಹೇಳಿರುವುದು ಅಲ್ಲಿನ ಬಿಜೆಪಿ ನಾಯಕರನ್ನು ಇನ್ನಷ್ಟು ಬಡಿದೆಬ್ಬಿಸಿದೆ. ಹಾಗಾಗಿ ರಾಜ್ಯ ಕಾರ್ಯಕಾರಿಣಿ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರ ರಾಜಕೀಯ ಭವಿಷ್ಯ ನಿರ್ಧರಿಸುವ ವೇದಿಕೆಯೂ ಆಗುವ ಸಾಧ್ಯತೆಗಳಿವೆ.

ಕೊಪ್ಪಳದಲ್ಲೂ ಹೆಚ್ಚಿದ ಕುದಿ:

ರಾಯಚೂರು-ಕೊಪ್ಪಳ(Raichur-Koppal) ಜಿಲ್ಲೆಗಳಲ್ಲೂ ಬಿಜೆಪಿ ಸೋಲಿನ ಕುದಿ ಹೆಚ್ಚಿದೆ. ಕಾಂಗ್ರೆಸ್‌ ಅಭ್ಯರ್ಥಿ ಶರಣಗೌಡ ಭಯ್ಯಾಪುರ (3369) ಎದುರು ಬಿಜೆಪಿ ಅಭ್ಯರ್ಥಿ ವಿಶ್ವನಾಥ ಬನಹಟ್ಟಿ(2942) ಸೋಲಿಗೆ ಸ್ವಜನ ಪಕ್ಷಪಾತ, ಪಕ್ಷ ವಿರೋಧಿ ಚಟುವಟಿಕೆ, ನಿಷ್ಕಿ್ರೕಯತೆ, ತಟಸ್ಥ ನಿಲುವುಗಳ ಕಾರಣ ಎಂದು ಎರಡನೇ ಸಾಲಿನ ಬಿಜೆಪಿ ನಾಯಕರುಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನ, ಆಕ್ರೋಶ ಹೊರಹಾಕುತ್ತಿದ್ದಾರೆ. ಮೊನ್ನೆಯಷ್ಟೇ ಸಾಮಾಜಿಕ ಜಾಲತಾನದಲ್ಲಿ ಬಿಡುಗಡೆಯಾದ ಇಬ್ಬರು ಬಿಜೆಪಿ ಮುಖಂಡರ ಮೊಬೈಲ್‌ ಸಂಭಾಷಣೆಯಲ್ಲಿ ಸಚಿವ ಹಾಲಪ್ಪ ಆಚಾರ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡಣಗೌಡ ಪಾಟೀಲ್‌, ಸಂಸದ ಸಂಗಣ್ಣ ಕರಡಿ ಅವರನ್ನು ಬನಹಟ್ಟಿಅವರ ಸೋಲಿಗೆ ಹೊಣೆಮಾಡಲಾಗಿದೆ.

MLC Election: ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಾಯಕ 6 ವರ್ಷ ಉಚ್ಚಾಟನೆ

ಬಸವರಾಜ ಬೊಮ್ಮಾಯಿ ಅವರ ಆಪ್ತ ಮಲ್ಲಿಕಾರ್ಜುನ ಹಾವೇರಿ ಪಕ್ಷೇತರರಾಗಿ ಕಣದಲ್ಲಿ ಉಳಿದದ್ದೇ ಬಿಜೆಪಿ ಅಭ್ಯರ್ಥಿ ಪ್ರತೀಪ ಶೆಟ್ಟರ್‌ ಗೆಲ್ಲಲು ಪ್ರಯಾಸ ಪಡುವಂತಾಯಿತು. ಅವಿಭಜಿತ ಧಾರವಾಡ ಜಿಲ್ಲೆಯ ಕೆಲವು ಶಾಸಕರು ಈ ಚುನಾವಣೆಯಲ್ಲಿ ಅಷ್ಟಾಗಿ ಕೆಲಸ ಮಾಡಲಿಲ್ಲ ಎನ್ನುವುದು ಜಗದೀಶ ಶೆಟ್ಟರ್‌ಅಸಮಾಧಾನಕ್ಕೆ ಕಾರಣ ಎನ್ನಲಾಗುತ್ತಿದೆ.

ಇದರ ಜೊತೆಯಲ್ಲಿ ಕಳೆದ ಆರು ವರ್ಷಗಳ ಕಾಲ ಪ್ರದೀಪ ಶೆಟ್ಟರ್‌ ನಿಷ್ಕ್ರೀಯರಾಗಿದ್ದರು, ಯಾವುದೇ ಕೆಲಸ ಮಾಡಿಲ್ಲ, ಪ್ರಚಾರ ಸಭೆಗಳಲ್ಲಿ ಮತದಾರರೇ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನುವ ಮಾತುಗಳೂ ಕೇಳಿಬರುತ್ತಿದ್ದು, ಈ ಎಲ್ಲ ಸಂಗತಿಗಳ ಬಿರುಸಿನ ಚರ್ಚೆಗೆ ರಾಜ್ಯ ಬಿಜೆಪಿ ಕಾರ್ಯಕಾರಣಿ ವೇದಿಕೆಯಾಗಲಿದೆ.

ಎಮ್ಮೆಲ್ಸಿ ಚುನಾವಣೆಯಲ್ಲಿ ಬಿಜೆಪಿಗೆ 14 ರಿಂದ 15 ಸ್ಥಾನಗಳ ನಿರೀಕ್ಷೆ ಹೊಂದಿದ್ದೆವು. ಗೆಲವು ಆಗಿದ್ದು 11 ಮಾತ್ರ. ಈ ಹಿನ್ನಡೆಯ ಬಗ್ಗೆ ಆಯಾ ಕ್ಷೇತ್ರಗಳ ಜಿಲ್ಲಾ ಅಧ್ಯಕ್ಷರಿಂದ ಮಾಹಿತಿ ಕೇಳಿದ್ದೇವೆ. ಹುಬ್ಬಳ್ಳಿಯಲ್ಲಿ ನಡೆಯುವ ರಾಜ್ಯ ಕಾರ್ಯಕಾರಣಿಯಲ್ಲಿ ಈ ಕುರಿತು ಗಂಭೀರವಾಗಿ ಚರ್ಚಿಸಿ, ತಪ್ಪಿತಸ್ಥರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಕೊಳ್ಳುತ್ತೇವೆ ಅಂತ ಬಿಜೆಪಿ ಶಿಸ್ತುಪಾಲನಾ ಸಮಿತಿ ಕರ್ನಾಟಕ ಘಟಕದ ಅಧ್ಯಕ್ಷ ಲಿಂಗರಾಜ ಪಾಟೀಲ್‌ ತಿಳಿಸಿದ್ದಾರೆ. 
 

click me!