ಕರ್ನಾಟಕಕ್ಕೆ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಖಂಡಿಸಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಶನಿವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು. ಬಜೆಟ್ ನಲ್ಲಿ ರಾಜ್ಯಕ್ಕೆ ಹೊಸ ಯೋಜನೆ ಘೋಷಿಸಿಲ್ಲ, ಯಾವ ಅನುದಾನ ನೀಡದೆ ಮತ್ತೊಮ್ಮೆ ರಾಜ್ಯದ ಜನತೆಗೆ 'ಚೊಂಬು ನೀಡಿದೆ ಎಂದು ಕಿಡಿಕಾರಿದರು.
ಬೆಂಗಳೂರು (ಜು.28): ಕರ್ನಾಟಕಕ್ಕೆ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಖಂಡಿಸಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಶನಿವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು. ಬಜೆಟ್ ನಲ್ಲಿ ರಾಜ್ಯಕ್ಕೆ ಹೊಸ ಯೋಜನೆ ಘೋಷಿಸಿಲ್ಲ, ಯಾವ ಅನುದಾನ ನೀಡದೆ ಮತ್ತೊಮ್ಮೆ ರಾಜ್ಯದ ಜನತೆಗೆ 'ಚೊಂಬು ನೀಡಿದೆ ಎಂದು ಕಿಡಿಕಾರಿದರು. ಪ್ರತಿಭಟನೆ ವೇಳೆ ಚೊಂಬು ಪ್ರದರ್ಶಿಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಕಾಂಗ್ರೆಸ್ ಮುಖಂಡರಾದನಾರಾಯಣಸ್ವಾಮಿ, ರಾಜೀವ್ ಗೌಡ, ವಿ.ಎಸ್.ಉಗ್ರಪ್ಪ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ರಾಜ್ಯಕ್ಕೆ ಅನುದಾನ ನೀಡದ ಕೇಂದ್ರದ ಧೋರಣೆ ಖಂಡಿಸಿ, 'ಚೊಂಬು' ಪ್ರದರ್ಶನ ಮಾಡಿ ಅಣಕಿಸಿದರು. ಚಿತ್ರದುರ್ಗದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಸಂಸದ ಗೋವಿಂದ ಕಾರಜೋಳರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಮಲತಾಯಿ ಧೋರಣೆ ಆಗಿಲ್ಲ: ಸಂಸದ ಬೊಮ್ಮಾಯಿ
ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್ ಘೋಷಿತ 25,300 ಕೋಟಿ ಅನುದಾನ ತರುವವರೆಗೆ ಗೋವಿಂದ ಕಾರಜೋಳಗೆ ಘರಾವ್ ಮಾಡುವುದಾಗಿ ಆಕ್ರೋಶ ವ್ಯಕ್ತಪಡಿಸಿದರು. ಬಾಗಲಕೋಟೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವ ಆ೯.ಬಿ.ತಿಮ್ಮಾಪೂರ, ಪ್ರಧಾನಿ ಮೋದಿ ಅವರು ತಮ್ಮ ಪಕ್ಷದ ಧೋರಣೆಗಳಿಗೆ ಅಂಟಿಕೊಳ್ಳುವುದನ್ನು ಬಿಟ್ಟು, ದೇಶದ ಅಭಿವೃದ್ಧಿ ಕಡೆಗೆ ಗಮನ ಹರಿಸಬೇಕು. ಈ ದೇಶದ ಪ್ರಧಾನಿಗೆ ತಾಯಿ ಹೃದಯ ಇರಬೇಕು ಎಂದರು. ಮಂಡ್ಯದದ ಒಡೆಯರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕೈ ಕಾರ್ಯಕರ್ತರು, ಕೇಂದ್ರ ಸರ್ಕಾರ, ಪ್ರಧಾನಿ, ವಿತ್ತ ಸಚಿವೆ ನಿರ್ಮಲ ವಿರುದ್ಧ ಧಿಕ್ಕಾರ ಕೂಗಿದರು. ಖಾಲಿ ಚೊಂಬು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.