ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶದಲ್ಲಿ ಆಡಳಿತ ಬಂದ ದಿನಗಳಿಂದ ಅಮೆರಿಕಕ್ಕೆ ಸಲಾಂ ಹೊಡೆಯುವ ಸಂಪ್ರದಾಯ ದೂರಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಕಲಘಟಗಿ (ಮಾ.14): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶದಲ್ಲಿ ಆಡಳಿತ ಬಂದ ದಿನಗಳಿಂದ ಅಮೆರಿಕಕ್ಕೆ ಸಲಾಂ ಹೊಡೆಯುವ ಸಂಪ್ರದಾಯ ದೂರಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ಪಟ್ಟಣದಲ್ಲಿ ನೂತನವಾಗಿ ಆರಂಭಗೊಂಡ ಬಿಜೆಪಿ ಕಚೇರಿ ಉದ್ಘಾಟಿಸಿ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು. ದೇಶದಲ್ಲಿ ಬಿಜೆಪಿ ಆಡಳಿತಕ್ಕೆ ಬರುವ ಮುನ್ನ ಅಮೆರಿಕ ಹೇಳುವ ಮಾತುಗಳೇ ವೇದ ವಾಕ್ಯದಂತಿದ್ದವು. ಆದರೆ ಮೋದಿ ಪ್ರಧಾನಿ ಆದ ಮೇಲೆ ಭಾರತದ ಗೌರವ-ಶಕ್ತಿ ವಿಶ್ವಕ್ಕೆ ಗೊತ್ತಾಗಿದೆ ಎಂದರು.
ಮೋದಿಯವರ ಮೂರನೇ ಅವಧಿಯಲ್ಲಿ ಭಾರತ ವಿಶ್ವದ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ. ಭಾರತ ಆರ್ಥಿಕವಾಗಿ ಈಗ ಸಬಲವಾಗಿದೆ. ಐಎಂಎಫ್ ಪ್ರಕಾರ ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ. ಜಗತ್ತಿನ ಪ್ರತಿಯೊಂದು ರಾಷ್ಟ್ರಗಳು ಕೂಡಾ ಭಾರತದಲ್ಲಿ ಹೂಡಿಕೆ ಮಾಡಲು ಬಯಸುತ್ತಿವೆ ಎಂದ ಅವರು, ದೇಶಿಯ ವಸ್ತುಗಳ ಉತ್ಪಾದನೆ ಹೆಚ್ಚಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿದೆ. ರೈಲ್ವೆ ಇಲಾಖೆಯಲ್ಲಿ ವಿದ್ಯುದೀಕರಣ 40 ಸಾವಿರ ಕಿಮಿ ತಲುಪಿದೆ. ಭಯೋತ್ಪಾದನೆ ಸಂಪೂರ್ಣ ಮಟ್ಟಹಾಕಲಾಗಿದೆ. ಮೋದಿಯವರ ಮುಂದಿನ ಅವಧಿಯಲ್ಲಿ ಭಾರತ ವಿಶ್ವದಲ್ಲೇ ನಂ.1 ಸ್ಥಾನಕ್ಕೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ಎಂದು ಹೇಳಿದರು.
ಕಾಂಗ್ರೆಸ್ ಗ್ಯಾರಂಟಿ ಯೋಜನೆ ಮೂಲಕ ರಾಜ್ಯದಲ್ಲಿ ಬದಲಾವಣೆ ಪರ್ವ: ಸಚಿವ ಎಚ್.ಕೆ.ಪಾಟೀಲ್
ಮಾಜಿ ವಿಧಾನ ಪರಿಷತ್ ಸದಸ್ಯ ನಾಗರಾಜ ಛಬ್ಬಿ ಮಾತನಾಡಿ, ಬಿಜೆಪಿ ಕಚೇರಿ ಕೇವಲ ಚುನಾವಣೆಗಾಗಿ ಮಾತ್ರವಲ್ಲ, ಜನಸೇವೆಗಾಗಿ ನಿರಂತರ ತೆರೆದಿರುತ್ತದೆ. ಪ್ರಹ್ಲಾದ ಜೋಶಿ ಅವರ ಮಾರ್ಗದರ್ಶನದಲ್ಲಿ ಎಲ್ಲ ಕಾರ್ಯಕರ್ತರು ಜನರ ಸೇವೆಯಲ್ಲಿ ತೊಡಗುತ್ತೇವೆ. ಅವರು ಪ್ರತಿ ಕಾರ್ಯಕರ್ತರನ್ನೂ ಕೂಡ ಮನೆಯ ಸದಸ್ಯ ಎಂದು ಭಾವಿಸುತ್ತಾರೆ. ನನಗೆ ತಾಲೂಕಿನ 72 ಸಾವಿರ ಮತ ನೀಡಿ ಜನರು ಆಶೀರ್ವಾದ ಮಾಡಿದ್ದಾರೆ. ಜನರ ಸೇವೆಯಲ್ಲಿ ಮುಂದುವರಿಯುತ್ತೇನೆ. ನನಗೆ ಬಿಜೆಪಿಯಲ್ಲಿ ಒಬ್ಬ ಎಂಎಲ್‌ಎಗಿಂತ ಹೆಚ್ಚಿನ ಗೌರವ ಸಿಕ್ಕಿದೆ ಎಂದರು.
ಗ್ಯಾರಂಟಿ ಯೋಜನೆ ಕಾರ್ಯಕ್ರಮಕ್ಕೆ ನೂರಾರು ಬಸ್ ಬಿಡುವ ಸಚಿವ ಸಂತೋಷ ಲಾಡ್, ಕ್ಷೇತ್ರದ ಹಳ್ಳಿಗಳಿಗೆ ವಿದ್ಯಾರ್ಥಿಗಳು, ರೈತರಿಗೆ ಅನುಕೂಲವಾಗುವಂತೆ ಬಸ್ ಬಿಡುತ್ತಿಲ್ಲ. ಮೋದಿ ಬಗ್ಗೆ ಇಲ್ಲಸಲ್ಲದ ಮಾತನಾಡುವ ಲಾಡ್ ಅವರು ಬಿಜೆಪಿಯ ಸಾಮಾನ್ಯ ಕಾರ್ಯಕರ್ತರ ಜತೆ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು. ಹುಬ್ಬಳ್ಳಿ ಮೂರು ಸಾವಿರಮಠದ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಮಾತನಾಡಿ, ಇಂದು ಎಲ್ಲ ದೇಶಗಳು ಭಾರತವನ್ನು ನೋಡುತ್ತಿವೆ. ಭಾರತದ ಅರ್ಥವ್ಯವಸ್ಥೆ ಉತ್ತಮಗೊಳ್ಳುತ್ತ ಸಾಗುತ್ತಿದೆ ಎಂದರು ಈ ಮೊದಲು ಋಷಿಮುನಿಗಳು ರಾಜನಿಗೆ ಮಾರ್ಗದರ್ಶನ ನೀಡುತ್ತಿದ್ದರು. ಈಗ ವಿವಿಧ ಸ್ವಾಮೀಜಿಗಳು, ಮಠಾಧೀಶರು ಮಾರ್ಗದರ್ಶನ ನೀಡಬೇಕು. ಇಂದಿನ ಯುಗದಲ್ಲಿ 18 ವರ್ಷ ತುಂಬಿದ ಪ್ರತಿಯೊಬ್ಬರೂ ರಾಜಕೀಯ ಮಾಡುತ್ತಾರೆ, ಸೇವೆಯೇ ರಾಜಕಾರಣದ ಧ್ಯೇಯವಾಗಬೇಕು.
ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಹಣದ ಕೊರತೆ ಇಲ್ಲ: ಸಿಎಂ ಸಿದ್ದರಾಮಯ್ಯ
ಆದರೆ ಜಾತಿಯ ಅಧಾರದ ಮೇಲೆ ಎಂದಿಗೂ ರಾಜಕಾರಣ ಮಾಡಬಾರದು ಎಂದು ಕಿವಿಮಾತು ಹೇಳಿದರು. ಧಾರವಾಡ ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿದರು. ಬಿಜೆಪಿ ಗ್ರಾಮಾಂತರ ಅಧ್ಯಕ್ಷ ನಿಂಗಪ್ಪ ಸುತಗಟ್ಟಿ, ಕಲಘಟಗಿ ತಾಲೂಕಾಧ್ಯಕ್ಷ ಬಸವರಾಜ ಶೇರೆವಾಡ, ಅಳ್ನಾವರ ತಾಲೂಕಾಧ್ಯಕ್ಷ ಕಲ್ಮೇಶ ಬೇಲೂರು, ಶಶಿ ನಿಂಬಣ್ಣವರ, ಈರಣ್ಣ ಜಡಿ, ಸಿ.ಎಫ್. ಪಾಟೀಲ, ಐ.ಸಿ. ಪಾಟೀಲ, ಶಶಿಧರ ಹುಲಿಕಟ್ಟಿ, ಚಂದ್ರಗೌಡ ಪಾಟೀಲ, ಕಿರಣ ಪಾಟೀಲ ಕುಲಕರ್ಣಿ, ಅಣ್ಣಪ್ಪ ಓಲೇಕಾರ, ಕಲ್ಲಪ್ಪ ಪುಟ್ಟಪ್ಪನವರ, ಫಕ್ಕೀರೇಶ ನೇಸರೇಕರ, ಶಿವಲಿಂಗ ಯಲಿವಾಳ, ಮದನ ಕುಲಕರ್ಣಿ, ಗೀತಾ ಮರಲಿಂಗಣ್ಣವರ, ಮಾಲಾ ಗೋಕುಲ, ನೀಲಕಂಠಗೌಡ ಪಾಟೀಲ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.