ಮೀಸಲಾತಿ ತೆಗೆದಿರುವುದರಿಂದ ಈಗ ಮುಸ್ಲಿಮರ ಹೋರಾಟವನ್ನು ಕಾಂಗ್ರೆಸ್ ಕೈಗೆತ್ತಿಕೊಳ್ಳದೆ ಇದ್ದರೆ ದಕ್ಷಿಣ ಕರ್ನಾಟಕದಲ್ಲಿ ಎಸ್‌ಡಿಪಿಐ ಮತ್ತು ಉತ್ತರ ಕರ್ನಾಟಕದಲ್ಲಿ ಓವೈಸಿ ಇನ್ನಷ್ಟುಒಳ ಪ್ರವೇಶಿಸಲು ಸುಲಭವಾಗಬಹುದು. ಹಾಗಂತ ಕಾಂಗ್ರೆಸ್ ಮುಸ್ಲಿಂ ವೋಟ್‌ಬ್ಯಾಂಕ್ ಮೇಲೆ ಕಣ್ಣಿಟ್ಟು ಜಾಸ್ತಿ ಏದೆ ಬಡಿದುಕೊಂಡರೆ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ಇನ್ನಷ್ಟುದೂರ ಆಗಬಹುದು.
India Gate Column by Prashant Natu
ಇವತ್ತಿನ ಕಾಲಘಟ್ಟದಲ್ಲಿ ಮೀಸಲಾತಿ ಅನ್ನುವುದು ಎರಡು ಅಲಗಿನ ಕತ್ತಿ ಇದ್ದ ಹಾಗೆ. ಕೆಲವೊಮ್ಮೆ ವಿರುದ್ಧ ಬಳಸಿದಾಗ ಯುದ್ಧದಲ್ಲಿ ಗೆಲುವು ಆಗಬಹುದು, ಕೆಲವೊಮ್ಮೆ ಹರಿತವಾದ ಆಯುಧ ತಾಗಿ ತಾವೇ ಗಾಯಗೊಳ್ಳಲೂಬಹುದು. ಇವತ್ತಿನವರೆಗೆ ಭಾರತದ ರಾಜಕೀಯ ಇತಿಹಾಸದಲ್ಲಿ ಮೀಸಲಾತಿ ಕುರಿತಾದ ಚುನಾವಣೆಯ ಮುನ್ನಾ ದಿನದ ಘೋಷಣೆಗಳಿಂದ ಬಹುತೇಕ ಬಾರಿ ಆಡಳಿತದಲ್ಲಿ ಇರುವ ಪಕ್ಷಕ್ಕೆ ಲಾಭವಾದ ಉದಾಹರಣೆಗಳು ಕಡಿಮೆ. ಬದಲಾಗಿ ನಷ್ಟವಾದ ಪ್ರಕರಣಗಳು ಜಾಸ್ತಿ. ಹೀಗಾಗಿ ತಾನು ಅಧಿಕಾರಕ್ಕೆ ಬರಬೇಕು ಅನ್ನುವುದಕ್ಕಿಂತ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಏಕಾಂಗಿಯಾಗಿ ಬರಬಾರದು ಎಂದು ತಂತ್ರ ಮಾಡುತ್ತಿರುವ ಬಿಜೆಪಿಯ ದಿಲ್ಲಿ ನಾಯಕರು ಯುದ್ಧ ಘೋಷಣೆಗೂ ಮುಂಚೆ ಬಂದೂಕಿಗೆ ಜಾತಿ ಮದ್ದುಗುಂಡು ಸೇರಿಸುವ ಪ್ರಯತ್ನ ಮಾಡಿದ್ದಾರೆ.
ಮೇಲುನೋಟಕ್ಕೆ ಮೀಸಲಾತಿ ನಿರ್ಣಯದ ತರಾತುರಿ ನೋಡಿದರೆ ಮುಂದೆ ಸುಪ್ರೀಂಕೋರ್ಟ್‌ನಲ್ಲಿ ಏನಾಗುತ್ತದೋ ಆಗಲಿ, ಆದರೆ ಸದ್ಯಕ್ಕೆ ಹಿಂದೂ ಮುಸ್ಲಿಂ ಧ್ರುವೀಕರಣ, ಲಿಂಗಾಯತ ಮತಗಳ ಕ್ರೋಢೀಕರಣದ ಜೊತೆಗೆ ದಲಿತ ಎಡಗೈ ಗಟ್ಟಿಯಾಗಿ ನಿಂತುಕೊಂಡರೆ ಸಾಕು, ಎಲ್ಲದಕ್ಕೂ ಮುಖ್ಯವಾಗಿ ಮೋದಿ ಇದ್ದಾರೆ, ಆಡಳಿತ ವಿರೋಧಿ ಅಲೆಯಿಂದ ಪಾರಾಗಬಹುದು ಎಂದು ಬಿಜೆಪಿ ಲೆಕ್ಕ ಹಾಕಿ ಮೀಸಲಾತಿ ನಿರ್ಣಯ ಮಾಡಿದೆ. ಕಳೆದ ಬಾರಿ ಬಿಜೆಪಿಗೆ ನಷ್ಟಮಾಡಲು ಲಿಂಗಾಯತ ಪ್ರತ್ಯೇಕ ಧರ್ಮ ಅಸ್ತ್ರ ಬಳಸಿ ಸಿದ್ದು ತಾವೇ ಗಾಯ ಮಾಡಿಕೊಂಡಿದ್ದರು. ಈ ಬಾರಿ ಲಾಭದ ಆಸೆಯಿಂದ ಬೊಮ್ಮಾಯಿ ಮೀಸಲಾತಿ ನಿರ್ಣಯ ಮಾಡಿದ್ದಾರೆ. ಫುಲ್‌ಟಾಸ್ ಬಾಲ್‌ಗೆ ಬ್ಯಾಟ್ ಬೀಸಲು ಹೋದಾಗ ಎರಡು ಸಾಧ್ಯತೆ ಇರುತ್ತದೆ- ಹೊಡೆದರೆ ಸಿಕ್ಸರು, ಇಲ್ಲ ಅಂದ್ರೆ ಕ್ಲೀನ್ ಬೋಲ್ಡು.
ಸಿಎಂ ಬೊಮ್ಮಾಯಿ ಮೀಸಲಾತಿ ಕ್ರಾಂತಿ: 4% ಮುಸ್ಲಿಂ ಮೀಸಲು ರದ್ದುಗೊಳಿಸಿ ಹಂಚಿಕೆ
ಮೀಸಲಾತಿ: ತೆರೆ ಹಿಂದೆ ನಡೆದಿದ್ದೇನು?: ಮುಸ್ಲಿಮರಿಗೆ ಕೊಟ್ಟಿರುವ ಮೀಸಲಾತಿ ತೆಗೆದು ಲಿಂಗಾಯತರಿಗೆ ಕೊಡಿ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದ್ದಾಗ ಮುಖ್ಯಮಂತ್ರಿ ಬೊಮ್ಮಾಯಿ ಕೂಡಲೇ ಒಪ್ಪಿರಲಿಲ್ಲ. ಜೊತೆಗೆ ಯಡಿಯೂರಪ್ಪಗೂ ಅದು ಇಷ್ಟಇರಲಿಲ್ಲ. ಆದರೆ ಅಮಿತ್ ಶಾ ಬಸನಗೌಡ ಪಾಟೀಲ್ ಯತ್ನಾಳರನ್ನು ದಿಲ್ಲಿಗೆ ಕರೆದಾಗ ಯತ್ನಾಳ ‘ನೀವು ಮಾತಾಡಬೇಡ ಅಂದ್ರ ನಾ ಸುಮ್ಮನೆ ಇರ್ತೀನಿ, ಆದರ ಬಿಜೆಪಿಯ ಪಕ್ಕಾ ಮತದಾರರನ್ನು ನಾರಾಜ್ ಮಾಡಿ ಮುಸ್ಲಿಮರ ಮೀಸಲಾತಿ ಮುಂದುವರೆಸೋದು ಅಂದ್ರ ಹೆಂಗರೀ? ನಾವು ರಾಜಕೀಯ ಹೆಂಗ ಮಾಡೋದು’ ಎಂದು ಕೇಳಿದಾಗ ಅಮಿತ್ ಶಾ, ಅರುಣ್ ಸಿಂಗ್‌ರಿಗೆ ಇದು ಸರಿ ಅನ್ನಿಸಿತ್ತು. ಅಷ್ಟುಹೊತ್ತಿಗೆ ಸರಿಯಾಗಿ ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದರೆ 4 ಪ್ರತಿಶತ ಮುಸ್ಲಿಂ ಮೀಸಲಾತಿ ರದ್ದು ಮಾಡುತ್ತೇವೆ ಎಂದು ಹೇಳಿದ್ದ ಅಮಿತ್ ಶಾ ಅದನ್ನು ಕರ್ನಾಟಕದಲ್ಲಿ ಮಾಡಿ ತೋರಿಸಿದರೆ ಎರಡು ಕಡೆ ಲಾಭ ಆಗಬಹುದು ಎಂದು ಲೆಕ್ಕ ಹಾಕಿ ಕೂಡಲೇ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾರನ್ನು ಕರೆಸಿ ಸುದೀರ್ಘ ಚರ್ಚೆ ನಡೆಸಿದ್ದರು.
10 ದಿನಗಳ ಹಿಂದೆ ಆರ್‌ಎಸ್‌ಎಸ್ ಸಹ ಸರ ಕಾರ್ಯವಾಹ ಮುಕುಂದರನ್ನು ಕರೆಸಿಕೊಂಡಿದ್ದ ಅಮಿತ್ ಶಾ ಆವತ್ತಿನ ಸಭೆಯಲ್ಲೇ ಮೀಸಲಾತಿ ನಿರ್ಣಯ ಮಾಡೋದರ ಕುರಿತು ತೀರ್ಮಾನಿಸಿ ಚುನಾವಣಾ ಪ್ರಭಾರಿ ಧರ್ಮೇಂದ್ರ ಪ್ರಧಾನರಿಗೆ ನೀವು ಇದರ ಸಮನ್ವಯ ಮಾಡಿ. ಕೇಂದ್ರದ ವಕೀಲರು, ಮುಖ್ಯಮಂತ್ರಿ ಬೊಮ್ಮಾಯಿ, ಆರ್‌ಎಸ್‌ಎಸ್ ಜೊತೆ ಇನ್ನಷ್ಟುಚರ್ಚೆ ಮಾಡಿ ಈ ನಿರ್ಣಯ ಸರಿಯಾಗಿ ಆಗುವಂತೆ ನೋಡಿಕೊಳ್ಳಿ ಎಂದು ಹೇಳಿದ್ದರು. ಧರ್ಮೇಂದ್ರ ಪ್ರಧಾನ್ ದಿಲ್ಲಿಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರ ಕಾರ್ಯದರ್ಶಿ ಮಂಜುನಾಥ್ ಪ್ರಸಾದರನ್ನು ಕೂಡ ಹಳೆಯ ದಾಖಲೆಗಳ ಸಮೇತ ಕರೆಸಿಕೊಂಡು ತುಷಾರ್ ಮೆಹ್ತಾರನ್ನು ಭೇಟಿ ಮಾಡಿ ಎಲ್ಲ ಸಾಧಕ ಬಾಧಕ ಚರ್ಚೆ ಮಾಡಿದ ನಂತರವೇ ಗುರುವಾರ ರಾತ್ರಿ ಮೀಸಲಾತಿ ಕುರಿತಾದ ಟಿಪ್ಪಣಿ ಸಂಪುಟ ಸಭೆ ಮುಂದೆ ಇಡುವ ತೀರ್ಮಾನಕ್ಕೆ ಬರಲಾಗಿತ್ತು. ಬಿಜೆಪಿ ಹಾಕಿರುವ ಲೆಕ್ಕಾಚಾರದ ಪ್ರಕಾರ ಈಗ ಲಿಂಗಾಯತರು ಹಾಗೂ ಒಕ್ಕಲಿಗರು ನಮಗೆ ಜಾಸ್ತಿ ಸಿಕ್ಕಿದೆ ಎಂದು ಬಿಜೆಪಿಯೊಂದಿಗೆ ನಿಂತರೆ, ಮುಸ್ಲಿಮರ ಮೀಸಲಾತಿ ತೆಗೆದು ಕೊಟ್ಟರು ಎಂದು ಹಿಂದುತ್ವ ಮನಸ್ಥಿತಿಯ ಹಿಂದುಳಿದ ಜಾತಿಗಳು ಇನ್ನಷ್ಟುಗಟ್ಟಿಯಾಗಬಹುದು.
ಮುಸ್ಲಿಂ ಮೀಸಲಾತಿಯ ಇತಿಹಾಸ: ಸ್ವಾತಂತ್ರ್ಯಪೂರ್ವದಲ್ಲಿ 1918ರಲ್ಲಿ ಮೈಸೂರು ಮಹಾರಾಜರು ನೇಮಿಸಿದ ಮಿಲ್ಲರ್ ಆಯೋಗದ ಶಿಫಾರಸಿನ ಆಧಾರದ ಮೇಲೆ ಮುಸ್ಲಿಮರ ಕೆಲ ಜಾತಿಗಳನ್ನು ಹಿಂದುಳಿದವರ ಪಟ್ಟಿಯಲ್ಲಿ ಸೇರಿಸುವ ತೀರ್ಮಾನ ಮಾಡಲಾಗಿತ್ತು. 1947ರ ನಂತರ ರಚನೆಯಾದ ನಾಗನಗೌಡ ಆಯೋಗ, ಹಾವನೂರ ಆಯೋಗ, ವೆಂಕಟಸ್ವಾಮಿ ಆಯೋಗ ಮತ್ತು ಚಿನ್ನಪ್ಪ ರೆಡ್ಡಿ ಆಯೋಗಗಳು ಮುಸ್ಲಿಮರ ಕೆಲ ಜಾತಿಗಳನ್ನು ಹಿಂದುಳಿದವರು ಎಂದು ವರದಿ ನೀಡಿವೆ. ಹೀಗಾಗಿ 1994ರಲ್ಲಿ ಮಂಡಲ ಆಯೋಗದ ವರದಿ ಜಾರಿಗೆ ಸುಪ್ರೀಂಕೋರ್ಟ್ ಒಪ್ಪಿಗೆ ಕೊಟ್ಟನಂತರ ವೀರಪ್ಪ ಮೊಯ್ಲಿ ಸರ್ಕಾರ ಮುಸ್ಲಿಮರ ಪೈಕಿ ನಾಲಬಂದ್, ಕಸಾಯಿ, ಮನ್ಸೂರಿ, ಸೈಕಲ್ಗಾರ, ಸಿಕ್ಕಲ್‌ಗಾರ, ಬಾಜಿಗರ, ತಕರಾರಿ ಸೇರಿದಂತೆ 14 ಉಪ ಜಾತಿಗಳಿಗೆ ಅತಿ ಹಿಂದುಳಿದ ಕೆಟಗೇರಿ 1ರಲ್ಲಿ ಮತ್ತು ಇತರ ಹಿಂದುಳಿದವರು ಎಂದು ಪ್ರವರ್ಗ ‘2ಬಿ’ನಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರು ಎಂದು 4 ಪ್ರತಿಶತ ಮೀಸಲಾತಿ ನೀಡಲು ತೀರ್ಮಾನಿಸಿತು.
ಆಂಧ್ರದಲ್ಲಿ ಮುಸ್ಲಿಮರಿಗೆ ಧಾರ್ಮಿಕ ಆಧಾರದಲ್ಲಿ ಪ್ರತ್ಯೇಕ ಮೀಸಲಾತಿ ಕೊಡಲು ಹೋದಾಗ ಸುಪ್ರೀಂಕೋರ್ಟ್ ಅದನ್ನು ರದ್ದು ಮಾಡಿತ್ತು. ಆದರೆ ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲಿ ಮುಸ್ಲಿಮರಿಗೆ ಹಿಂದುಳಿದವರ ಪಟ್ಟಿಯಲ್ಲಿ ಸೇರಿಸಿ ಮೀಸಲಾತಿ ಕೊಡಲಾಗಿದೆ. ಹೀಗಿರುವಾಗ ರಾಜ್ಯ ಸರ್ಕಾರ ಇದನ್ನು ತೆಗೆದುಹಾಕಿದರೆ ಸುಪ್ರೀಂಕೋರ್ಟ್‌ನಲ್ಲಿ ಮುಂದೆ ಏನಾಗುತ್ತದೆ ಎನ್ನುವುದು ಮುಂದಿನ ಕುತೂಹಲ. ನಿಶ್ಚಿತವಾಗಿ ಉದ್ಭವವಾಗುವ ಒಂದು ಪ್ರಶ್ನೆ ಎಂದರೆ, ತನಗೆ ಬೇಕಾದ ವೋಟ್ ಬ್ಯಾಂಕ್‌ಗಳನ್ನು ಓಲೈಸಲು ಮೀಸಲಾತಿ ಹೆಚ್ಚಿಗೆ ಮಾಡಿ, ತಮಗೆ ಬೇಡವಾದ ವೋಟ್ ಬ್ಯಾಂಕ್‌ಗಳ ಮೀಸಲಾತಿ ತೆಗೆಯುತ್ತಾ ಹೋದರೆ ರಾಜಕೀಯ ಲಾಭ-ನಷ್ಟಏನೇ ಇರಲಿ, ಕಾನೂನಿನ ವ್ಯಾಖ್ಯೆ ಏನು ಅನ್ನುವುದು ವ್ಯಾಪಕವಾಗಿ ಚರ್ಚೆ ಆಗಬೇಕಾದ ಸಂಗತಿ.
ಒಳಮೀಸಲಾತಿ ದಿಲ್ಲಿ ಅಂಗಳಕ್ಕೆ: ಮುಸ್ಲಿಮರಿಗೆ ಕೊಟ್ಟಿರುವ ಮೀಸಲಾತಿ ತೆಗೆದದ್ದು ಸರಿಯೋ ತಪ್ಪೋ ಎನ್ನುವುದು ನ್ಯಾಯಾಲಯದ ಪರಾಮರ್ಶೆಗೆ ಒಳಪಡುತ್ತದೆಯಾದರೂ ಹಿಂದುಳಿದ ಪಟ್ಟಿಯಲ್ಲಿ ಮೀಸಲಾತಿ ವರ್ಗೀಕರಣದ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ. ಆದರೆ ಅದಕ್ಕೆ ಇರುವ ಮಾನದಂಡ, ಆ ವರ್ಗೀಕರಣಕ್ಕೆ ಆಧಾರ ಏನು ಎಂಬುದಕ್ಕೆ ಸಾಮಾಜಿಕ ಆರ್ಥಿಕ ಸರ್ವೇಕ್ಷಣೆ ನಡೆದಿರಬೇಕು. ಆದರೆ ದಲಿತ ಮೀಸಲಾತಿ ವರ್ಗೀಕರಣದ ಅಧಿಕಾರ ಸದ್ಯಕ್ಕಂತೂ ರಾಜ್ಯದ ಬಳಿ ಇಲ್ಲ. ದಲಿತರಿಗೆ ಏರಿಸಿರುವ 2 ಪ್ರತಿಶತ ಮೀಸಲಾತಿ ಹಾಗೂ ಪರಿಶಿಷ್ಟಪಂಗಡಗಳಿಗೆ ಏರಿಸಿರುವ 4 ಪ್ರತಿಶತ ಮೀಸಲಾತಿ ಸೇರಿಸಿದರೆ ರಾಜ್ಯದಲ್ಲಿ ಮೀಸಲಾತಿ 56 ಪ್ರತಿಶತ ಆಗುತ್ತದೆ. ಹೆಚ್ಚುವರಿ 6 ಪ್ರತಿಶತ ನಿರ್ಧಾರವನ್ನು ಒಂದು ವೇಳೆ ಕೇಂದ್ರ ಒಪ್ಪಿಕೊಂಡು 9ನೇ ಶೆಡ್ಯೂಲ್‌ನಲ್ಲಿ ಸೇರಿಸಿದರೂ ಕೂಡ ಮೊದಲು ಅದು ಸುಪ್ರೀಂಕೋರ್ಟ್‌ನ ಪರಾಮರ್ಶೆಗೆ ಒಳಪಡುತ್ತದೆ.
ಜೊತೆಗೆ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಧ್ಯಕ್ಷತೆಯ ಪಂಚ ನ್ಯಾಯಮೂರ್ತಿಗಳ ಪೀಠ ಆರ್ಟಿಕಲ್ 341 ಮತ್ತು 342ರ ಪ್ರಕಾರ ದಲಿತರು ಒಂದು ಶ್ರೇಣಿಗೆ ಸೇರಿದವರು, ಅವರಲ್ಲಿ ಮೇಲೆ ಕೆಳಗೆ ಮಾಡಿ ಮೀಸಲಾತಿ ಕೊಡುವ ಅಧಿಕಾರ ರಾಜ್ಯ ಸರ್ಕಾರ ಕ್ಕಿಲ್ಲ ಎಂದು ಹೇಳಿತ್ತು. ಆದರೆ ಒಂದು ವರ್ಷದ ಹಿಂದೆ ಸುಪ್ರೀಂಕೋರ್ಟ್‌ನಲ್ಲೇ ನ್ಯಾಯಮೂರ್ತಿ ಅರುಣ್ ಮಿಶ್ರಾ ಅಧ್ಯಕ್ಷತೆಯ ಪಂಚಸದಸ್ಯ ಪೀಠ ದಲಿತರಲ್ಲಿ ಕೂಡ ಮೀಸಲಾತಿ ವರ್ಗಿಕರಣ ಮಾಡುವ ಅಧಿಕಾರ ರಾಜ್ಯಗಳಿಗೆ ಇದೆ ಎಂದು ಹೇಳಿತ್ತು. ಎರಡು ವ್ಯತಿರಿಕ್ತ ತೀರ್ಪುಗಳು ಪಂಚ ಪೀಠದಿಂದಲೇ ಬಂದಿರುವುದರಿಂದ 9 ಅಥವಾ 11 ನ್ಯಾಯಮೂರ್ತಿಗಳ ಪೀಠ ಇದನ್ನು ಪರಾಮರ್ಶೆಗೆ ಒಳಪಡಿಸಬೇಕು. ಆದರೆ ಮೇಲಿನ ನ್ಯಾಯಾಲಯಗಳು ತಡೆ ಕೊಡದೇ ಹೋದರೆ ರಾಜ್ಯ ತೆಗೆದುಕೊಂಡ ನಿರ್ಧಾರ ಅಬಾಧಿತವಾಗಿ ಜಾರಿಯಲ್ಲಿರುತ್ತದೆ.
ಕಾಂಗ್ರೆಸ್‌ಗೆ ಮುಸ್ಲಿಂ ದ್ವಂದ್ವ: ಒಂದು ಕಡೆ ಮುಸ್ಲಿಮರಿಗೆ ನೀಡಿದ್ದ 4 ಪ್ರತಿಶತ ಮೀಸಲಾತಿಯನ್ನು ಬೊಮ್ಮಾಯಿ ಸರ್ಕಾರ ರದ್ದುಪಡಿಸಿರುವಾಗ ನಿಸ್ಸಂದೇಹವಾಗಿ ಮುಸ್ಲಿಂ ಸಮುದಾಯ ಕಾಂಗ್ರೆಸ್‌ನತ್ತ ನಮ್ಮ ಹೋರಾಟ ನೀವು ಮಾಡುತ್ತೀರಾ ಎಂದು ಆಸೆಗಣ್ಣಿನಿಂದ ನೋಡುತ್ತಿದೆ. ಒಂದು ವೇಳೆ ಮುಸ್ಲಿಮರ ಹೋರಾಟವನ್ನು ಕಾಂಗ್ರೆಸ್ ಕೈಗೆತ್ತಿಕೊಳ್ಳದೆ ಇದ್ದರೆ ದಕ್ಷಿಣ ಕರ್ನಾಟಕದಲ್ಲಿ ಎಸ್‌ಡಿಪಿಐ ಮತ್ತು ಉತ್ತರ ಕರ್ನಾಟಕದಲ್ಲಿ ಓವೈಸಿ ಇನ್ನಷ್ಟುಒಳ ಪ್ರವೇಶಿಸಲು ಸುಲಭವಾಗಬಹುದು. ಹಾಗೆಂದು ಕಾಂಗ್ರೆಸ್ ಏನಾದರೂ ಮುಸ್ಲಿಂ ವೋಟ್ ಬ್ಯಾಂಕ್ ಮೇಲೆ ಕಣ್ಣು ಇಟ್ಟು ಜಾಸ್ತಿ ಏದೆ ಬಡಿದುಕೊಂಡರೆ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ಇನ್ನಷ್ಟುದೂರ ಆಗಬಹುದು. 2018ರಲ್ಲಿ ಕಾಂಗ್ರೆಸ್ 17 ಮುಸ್ಲಿಮರಿಗೆ ಟಿಕೆಟ್ ನೀಡಿತ್ತು. ಅದರಲ್ಲಿ ಗೆದ್ದವರು 7 ಜನ ಮಾತ್ರ. ಹೀಗಾಗಿ ಮೊದಲನೇ ಪಟ್ಟಿಯಲ್ಲಿ 8 ಮುಸ್ಲಿಮರಿಗೆ ಟಿಕೆಟ್ ಕೊಟ್ಟಿರುವ ಕಾಂಗ್ರೆಸ್, ಶಿಗ್ಗಾವಿ, ರಾಯಚೂರು, ಹುಬ್ಬಳ್ಳಿ ಧಾರವಾಡ ಪಶ್ಚಿಮ, ಮಂಗಳೂರು ದಕ್ಷಿಣದಲ್ಲಿ ಮುಸ್ಲಿಂ ಬದಲಿಗೆ ಅಲ್ಲಿನ ಪ್ರಬಲ ಹಿಂದೂ ಸಮುದಾಯಕ್ಕೆ ಟಿಕೆಟ್ ನೀಡುವ ತೀರ್ಮಾನ ಮಾಡಿದೆ. ಕಾಂಗ್ರೆಸ್‌ಗೆ ಮುಸ್ಲಿಮರನ್ನು ತುಂಬಾ ದೂರ ಮಾಡುವುದು ಅಥವಾ ಹತ್ತಿರ ಇಟ್ಟುಕೊಳ್ಳುವುದು ದುಬಾರಿ ಆಗಬಹುದು. ಒಂದು ವೇಳೆ ಎಸ್‌ಡಿಪಿಐ ಮತ್ತು ಓವೈಸಿ ಸೇರಿ 3 ಪ್ರತಿಶತ ವೋಟು ತೆಗೆದುಕೊಂಡರೂ ಅದರಲ್ಲಿ ಕಾಂಗ್ರೆಸ್‌ಗೆ ನಷ್ಟವಿದೆ, ಬಿಜೆಪಿಗೆ ಲಾಭವಿದೆ.
ಎಲ್ಲ ಸಮುದಾಯಗಳಿಗೆ ನ್ಯಾಯ ಒದಗಿಸಲು ಮೀಸಲಾತಿ ಹಂಚಿಕೆ: ಸಿಎಂ ಬೊಮ್ಮಾಯಿ
ಮಧ್ಯರಾತ್ರಿ ಪ್ರಕಟವಾಗದ ಕೈ ಪಟ್ಟಿ!: 2008ರವರೆಗೆ ಚುನಾವಣೆಯಲ್ಲಿ ಟಿಕೆಟ್‌ಗಾಗಿ ಎಂ.ಪಿ.ಪ್ರಕಾಶ್, ಪ್ರಭಾಕರ ಕೋರೆಯಂಥ ಘಟಾನುಘಟಿ ಲಿಂಗಾಯತ ನಾಯಕರು ತಮಗಿಂತ ವಯಸ್ಸು, ಅನುಭವ ಹಾಗೂ ಅರ್ಹತೆಯಲ್ಲಿ ಚಿಕ್ಕವರಿದ್ದ ನಾಯಕರ ಮನೆಗಳಿಗೆ ಎಡತಾಕಿ ತಾಕಿ ಸುಸ್ತು ಆಗುತ್ತಿದ್ದರು. ಕಾಂಗ್ರೆಸ್ ಟಿಕೆಟ್‌ಗಳೂ ರಾತ್ರಿ 1 ಗಂಟೆ, 2 ಗಂಟೆಗೆ ಕದ್ದು ಮುಚ್ಚಿ ಘೋಷಣೆ ಆಗಿ, ಗದ್ದಲ ಗಲಾಟೆ ಎದ್ದು, ಕೊನೆಗೆ ಬದಲು ಆಗುತ್ತಿದ್ದವು. ಆದರೆ ಇತಿಹಾಸದಲ್ಲಿಯೇ ಮೊದಲ ಬಾರಿ ಕಾಂಗ್ರೆಸ್ ಟಿಕೆಟ್‌ಗಳು ಚುನಾವಣೆ ಘೋಷಣೆಗಿಂತ ಮುಂಚೆ ಪ್ರಕಟವಾಗಿವೆ. ಟಿಕೆಟ್ ಪಟ್ಟಿಮಧ್ಯರಾತ್ರಿ ಎಲ್ಲರೂ ಮಲಗಿಕೊಂಡ ಮೇಲೆ ಆಗದೇ ಬೆಳಿಗ್ಗೆ 8 ಗಂಟೆಗೆ ಪ್ರಕಟವಾಗಿದೆ. ಕಾಂಗ್ರೆಸ್ ಇರಲಿ ಯಾವುದೇ ಸಂಘಟನೆ ಇರಲಿ, ಯುಗ ಧರ್ಮ ಪಾಲಿಸಿದರೆ ಉಳಿಯುತ್ತವೆ. ಇಲ್ಲವಾದರೆ ಕಾಲಗರ್ಭದಲ್ಲಿ ಹುದುಗಿ ಹೋಗುತ್ತವೆ. ಅದೇ ಅಲ್ಲವೇ ಜಗದ ನಿಯಮ. ಅಷ್ಟರ ಮಟ್ಟಿಗಾದರೂ ಡಿ.ಕೆ.ಶಿವಕುಮಾರ್ ಅವರಿಗೆ ಒಂದು ಕ್ರೆಡಿಟ್ ಕೊಡಲೇಬೇಕು.