ಮೋದಿ ಅಕ್ಕಿ ಕೊಡದಿದ್ರೇನು? ನೀವೇ ಜೋಳ ರಾಗಿ ಕೊಡಿ: ರೈತ ಸಂಘ ಆಗ್ರಹ

By Kannadaprabha News  |  First Published Jun 16, 2023, 5:10 AM IST

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅಕ್ಕಿ ಕೊಡದಿದ್ದರೇನಂತೆ, ರಾಜ್ಯದ ರೈತರು ಬೆಳೆದಿರುವ ರಾಗಿ ಮತ್ತು ಜೋಳವನ್ನು ಖರೀದಿಸಿ ಪಡಿತರ ವ್ಯವಸ್ಥೆಯಲ್ಲಿ ವಿತರಣೆ ಮಾಡುವಂತೆ ರೈತ ಸಂಘದ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.


ಚಿತ್ರದುರ್ಗ (ಜೂ.16) : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅಕ್ಕಿ ಕೊಡದಿದ್ದರೇನಂತೆ, ರಾಜ್ಯದ ರೈತರು ಬೆಳೆದಿರುವ ರಾಗಿ ಮತ್ತು ಜೋಳವನ್ನು ಖರೀದಿಸಿ ಪಡಿತರ ವ್ಯವಸ್ಥೆಯಲ್ಲಿ ವಿತರಣೆ ಮಾಡುವಂತೆ ರೈತ ಸಂಘದ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ರೈತ ವಿರೋಧಿ ಕರಾಳ ಕಾಯಿದೆಗಳನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ(rajya raita sangha)ದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಎಂ.ಶಂಕರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರು ಚುನಾವಣಾ ಪೂರ್ವದಲ್ಲಿ ಘೋಷಿಸಿದಂತೆ ಹತ್ತು ಕೆ.ಜಿ ಅಕ್ಕಿ ಉಚಿತವಾಗಿ ನೀಡಲು ಮುಂದಾಗಿದ್ದಾರೆ. ಕೇಂದ್ರ ಸರ್ಕಾರ ಅಕ್ಕಿ ನೀಡುವುದಿಲ್ಲ ಎಂದು ಯೋಜನೆಗೆ ಅಡ್ಡಗಾಲಾಗಿದೆ ಎಂದು ಸ್ವತಃ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇದಕ್ಕೆ ಸಿಎಂ ಧೃತಿಗೆಡುವ ಅಗತ್ಯವಿಲ್ಲ. ಪರ್ಯಾಯವಾಗಿ ಆಲೋಚಿಸಬೇಕಿದೆ. ಹಳೇ ಮೈಸೂರು ಭಾಗದ ಜನ ರಾಗಿ ಹೆಚ್ಚಾಗಿ ಬಳಸುವುದರಿಂದ ಅಕ್ಕಿ ಬದಲು ರಾಗಿ ಹಾಗೂ ಕಿತ್ತೂರು ಕರ್ನಾಟಕ, ಹೈದರಾಬಾದ್‌ ಕರ್ನಾಟಕದ ಜನ ಜೋಳ ಬಳಸುವುದರಿಂದ ಅಕ್ಕಿಯ ಬದಲು ಅಲ್ಲಿ ಜೋಳ ವಿತರಣೆ ಮಾಡಬಹುದೆಂದರು.

Tap to resize

Latest Videos

ಅಕ್ಕಿ ವಿಚಾರದಲ್ಲಿ ರಾಜಕೀಯ ಬೇಡ, ಇದು ರಾಜ್ಯದ ಬಡ ಜನರ ಹಸಿವಿನ ಪ್ರಶ್ನೆ: ಸಿ.ಟಿ.ರವಿಗೆ ದಿನೇಶ್‌ ತಿರುಗೇಟು

ರೈತ ವಿರೋಧಿ ಕಾಯಿದೆಯನ್ನು ರಾಜ್ಯ ಸರ್ಕಾರ ಕೂಡಲೆ ಹಿಂದಕ್ಕೆ ಪಡೆಯುವತನಕ ರೈತರಿಗೆ ಸಮಾಧಾನವಿರುವುದಿಲ್ಲ. ಕೇಂದ್ರ ಸರ್ಕಾರ ಮೂರು ಕಾಯಿದೆಗಳನ್ನು ಹಿಂದಕ್ಕೆ ಪಡೆದ ಮೇಲೆ ರಾಜ್ಯ ಸರ್ಕಾರ ಹಿಂದಕ್ಕೆ ಪಡೆಯುವುದಕ್ಕೇಕೆ ಮೀನಾಮೇಷ ಎಣಿಸುತ್ತಿದೆ. ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್‌ ಅಳವಡಿಕೆಯಿಂದ ಸರ್ಕಾರ ಹಿಂದಕ್ಕೆ ಸರಿಯಬೇಕು. ಚಿತ್ರದುರ್ಗ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಕೊಬ್ಬರಿ ಬೆಳೆಗಾರರು ಸಂಕಷ್ಠದಲ್ಲಿದ್ದಾರೆ. ಸರ್ಕಾರ ನೆರವಿಗೆ ಧಾವಿಸಬೇಕು ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‌ಬಾಬು ಮಾತನಾಡಿ ಹಿಂದಿನ ಬಿಜೆಪಿ ಸರ್ಕಾರ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ಉಳುವವನೆ ಭೂಮಿಯ ಒಡೆಯ ಎನ್ನುವ ಮಹಾತ್ವಾಂಕ್ಷೆಗೆ ಕೊಡಲಿ ಪೆಟ್ಟು ನೀಡಿದೆ. ಎಪಿಎಂಸಿ ಕಾಯಿದೆಯನ್ನು ತಿದ್ದುಪಡಿ ಮಾಡಿ, ಗೋಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯಿದೆಯನ್ನು ಜಾರಿಗೊಳಿಸಿ ಕೃಷಿಗೆ ಪರ್ಯಾಯವಾಗಿ ಹೈನುಗಾರಿಕೆಯನ್ನೆ ನಂಬಿಕೊಂಡಿರುವ ರೈತನನ್ನು ಹೈರಾಣಾಗಿಸಿದೆ. ಈ ಮೂರು ತಿದ್ದುಪಡಿ ಕಾಯಿದೆಗಳನ್ನು ರಾಜ್ಯ ಸರ್ಕಾರ ಹಿಂದಕ್ಕೆ ಪಡೆಯಬೇಕು. ಚುನಾವಣಾ ಪೂರ್ವದಲ್ಲಿಯೇ ಐದು ಉಚಿತ ಗ್ಯಾರಂಟಿಗಳನ್ನು ಘೋಷಿಸಿದ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾದ ಕೂಡಲೆ ಅನ್ನ ಭಾಗ್ಯ ಹಾಗೂ ಮಹಿಳೆಯರಿಗೆ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣವನ್ನು ಒದಗಿಸಿದ್ದಾರೆ. ಅದೆ ರೀತಿ ರೈತರಿಗೆ ಮಾರಕವಾಗಿರುವ ಕಾನೂನುಗಳನ್ನು ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿಗೇನೋ ರೈತರ ಮೇಲೆ ಕನಿಕರವಿರಬಹುದು. ಆದರೆ ಎಲ್ಲಾ ಪಕ್ಷಗಳಲ್ಲಿಯೂ ಭೂಗಳ್ಳರಿರುವುದರಿಂದ ರೈತ ವಿರೋಧಿ ಕಾಯಿದೆಯನ್ನು ಹಿಂದಕ್ಕೆ ಪಡೆಯಲು ತಡವಾಗುತ್ತಿದೆಯೇನೋ ಅನ್ನಿಸುತ್ತದೆ. ಹಿಂದಿನ ಸರ್ಕಾರ ಭೂ ಮಂಜೂರಾತಿ ಕಾಯಿದೆಯ ನಿಯಮಗಳನ್ನು ಮೀರಿ ಸರ್ಕಾರಿ ಭೂಮಿಯನ್ನು ಸಂಘ ಪರಿವಾರಕ್ಕೆ ಮಂಜೂರು ಮಾಡಿದೆ. ಅವುಗಳನ್ನೆಲ್ಲಾ ರದ್ದುಪಡಿಸಿ ಭೂಮಿಯನ್ನು ಸರ್ಕಾರ ವಶಕ್ಕೆ ಪಡೆಯಬೇಕೆಂದರು.

ರಾಜ್ಯ ಮುಖಂಡ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ, ವಿಧಾನಸಭಾ ಚುನಾವಣೆಗೂ ಮುಂಚೆಯೇ ಐದು ಉಚಿತ ಗ್ಯಾರೆಂಟಿಗಳನ್ನು ಘೋಷಿಸಿದ ಕಾಂಗ್ರೆಸ್‌, ರೈತ ವಿರೋಧಿ ಕಾಯಿದೆಗಳನ್ನು ಹಿಂದಕ್ಕೆ ಪಡೆಯುತ್ತೇವೆಂದು ಪ್ರಣಾಳಿಕೆಯಲ್ಲಿ ಏಕೆ ಘೋಷಿಸಲಿಲ್ಲ? ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ 2023 ವಿದ್ಯುಚ್ಚಕ್ತಿ ತಿದ್ದುಪಡಿ ಮಸೂದೆಯನ್ನು ರಾಜ್ಯದಲ್ಲಿ ಜಾರಿಗೆ ತರುವುದಿಲ್ಲವೆಂದು ಮುಂಬರುವ ಅಧಿವೇಶನದಲ್ಲಿ ತೀರ್ಮಾನಿಸಬೇಕು. ಹತ್ತು ಎಚ್‌ಪಿ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತವಾಗಿ ಗುಣಾತ್ಮಕ ವಿದ್ಯುತ್‌ ಸರಬರಾಜು ಮಾಡಿ ಕೃಷಿ ವಿದ್ಯುತ್‌ ಮೀಟರ್‌ಗಳಿಗೆ ಆಧಾರ್‌ ಜೋಡಣೆ ಮಾಡುವುದನ್ನು ತಡೆಹಿಡಿಯಬೇಕೆಂದು ಒತ್ತಾಯಿಸಿದರು.

ಕೇಂದ್ರದತ್ತ ಬೊಟ್ಟು ಮಾಡಿ ಜಾರಿಕೊಳ್ಳಬೇಡಿ : ಸಿದ್ದರಾಮಯ್ಯಗೆ ಸುನಿಲ್ ತಿರುಗೇಟು

ರೈತ ಮುಖಂಡರಾದ ಕೆ.ಪಿ. ಭೂತಯ್ಯ, ತಾಲೂಕು ಅಧ್ಯಕ್ಷ ಧನಂಜಯ, ಸಿ. ನಾಗರಾಜ್‌ ಮುದ್ದಾಪುರ, ಎಸ್‌. ರೇವಣ್ಣ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಹಂಪಣ್ಣ, ಸಿದ್ದಪ್ಪ, ಎಂ.ಬಿ. ತಿಪ್ಪೇಸ್ವಾಮಿ, ಕೆ.ಸಿ. ಹೊರಕೇರಪ್ಪ, ಬಿ.ಓ. ಶಿವಕುಮಾರ್‌, ಆರ್‌. ಚೇತನ, ಎಂ. ಲಕ್ಷ್ಮಿಕಾಂತ, ತಿಪ್ಪೇಸ್ವಾಮಿ, ಓ.ಟಿ. ತಿಪ್ಪೇಸ್ವಾಮಿ, ರೈತ ಮಹಿಳೆಯರಾದ ಕಲ್ಪನಾ, ಶಶಿಕಲ ಇನ್ನು ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

click me!