ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನ್ನು ಅಧಿಕಾರಕ್ಕೆ ತಂದರೆ ಕಾವಲುಗಾರನಾಗಿ ಸೇವೆ ಮಾಡಲಾಗುವುದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.
ಮಾನ್ವಿ (ಜ.29): ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನ್ನು ಅಧಿಕಾರಕ್ಕೆ ತಂದರೆ ಕಾವಲುಗಾರನಾಗಿ ಸೇವೆ ಮಾಡಲಾಗುವುದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು. ಪಟ್ಟಣದಲ್ಲಿ ಪಂಚರತ್ನ ಯಾತ್ರೆಯ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷಕ್ಕೆ ಅಧಿಕಾರ ನೀಡಿದ್ದೇ ಆದಲ್ಲಿ ಪಂಚರತ್ನ ಯೋಜನೆಗಳ ಮುಖಾಂತರ ಸಮಗ್ರ ಅಭಿವೃದ್ಧಿಯನ್ನು ಮಾಡಲಾಗುವುದು. ಈ ಭಾಗದ ರೈತರು ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದು, ಪ್ರತಿವರ್ಷ ಎರಡು ಬೆಳೆ ಬೆಳೆಯಲು ಕಾಲುವೆ ನೀರು ಸರಬರಾಜು ಮತ್ತು ರು.84 ಕೋಟಿ ವೆಚ್ಚದಲ್ಲಿ ಯಡಿವಾಳ ಏತ ನೀರಾವರಿ ಯೋಜನೆ, ಮಿನಿವಿಧಾನಸೌಧ ನಿರ್ಮಾಣಕ್ಕೆ ಶಂಕುಸ್ಥಾಪನೆ, ಸಣ್ಣಪುಟ್ಟಜಾತಿಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುತ್ತೇನೆ ಎಂದರು.
ಹಳೇ ಪಿಂಚಣಿ ಯೋಜನೆ ಒಪಿಎಸ್ ಜಾರಿಗೆಗೆ ಬದ್ದ ಹಾಗೂ ಅತಿಥಿ ಶಿಕ್ಷಕರಿಗೆ ಉತ್ತಮ ವೇತನ, ಅಂಗನವಾಡಿ, ಆಶಾ ಕಾರ್ಯಕರ್ತೆಯರ ಬೇಡಿಕೆಗಳು ಸೇರಿದಂತೆ ರಾಜ್ಯದ ಎಲ್ಲಾ ಜನತೆಯ ಆಶೋತ್ತರಗಳನ್ನು ಸಂಪೂರ್ಣವಾಗಿ ಈಡೇರಿಸಲು ನಿಮ್ಮ ಕಾವಲುಗಾರನಾಗಿ ಪ್ರಾಮಾಣಿಕ ಆಡಳಿತ ನೀಡುವುದಾಗಿ ಎಚ್.ಡಿ.ಕುಮಾರಸ್ವಾಮಿ ಆಶ್ವಾಸನೆಯಿತ್ತರು. ಮಾನ್ವಿ ವಿಧಾನಸಭೆ ಕ್ಷೇತ್ರಕ್ಕೆ ಪಂಚರತ್ನ ಯಾತ್ರೆ ಆಗಮಿಸುತ್ತಿದ್ದಂತೆ ಈ ಭಾಗದ ರೈತರು, ವ್ಯಾಪಾರಸ್ಥರು, ಮಹಿಳೆಯರು, ಯುವ ಜನತೆ, ವಿವಿಧ ಸಂಘಸಂಸ್ಥೆಗಳ ಮುಖಂಡರು ಕುಮಾರಸ್ವಾಮಿ ಅವರಿಗೆ ಮನವಿಗಳನ್ನು ಸಲ್ಲಿಸಿದರು.
ದೇವೇಗೌಡರ ಬದುಕು ಮುಖ್ಯ ನನಗೆ: ಮಾಜಿ ಸಿಎಂ ಕುಮಾರಸ್ವಾಮಿ ಭಾವನಾತ್ಮಕ ಮಾತು
ಮಾನ್ವಿ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಂಚರಿಸಿ ಕೋನಾಪುರಪೇಟೆ ಮಾರ್ಗವಾಗಿ ಚೀಕಲಪರ್ವಿ ಗ್ರಾಮಕ್ಕೆ ಆಗಮಿಸಿ ಅಲ್ಲಿಯೇ ಮಧ್ಯಾಹ್ನದ ಊಟ ಸೇವಿಸಿ ಅಲ್ಲಿಂದ ಚಿಕ್ಕಕೊಟ್ನೆಕಲ್, ಅಡವಿಅಮರೇಶ್ವರಮಠ, ಅಮರೇಶ್ವರಕ್ಯಾಂಪ್, ಹಿರೇಕೊಟ್ನೆಕಲ್, ಬ್ಯಾಗವಾಟ್, ಬಾಗಲವಾಡದಿಂದ ಕವಿತಾಳ್, ಮಲ್ಲಟ್ ಗ್ರಾಮದಿಂದ ನಂತರ ಬಲ್ಲಟಗಿ ಗ್ರಾಮದಲ್ಲಿ ರಾತ್ರಿ ಗ್ರಾಮವಾಸ್ತವ್ಯ ಕೈಗೊಂಡರು. ಈ ಸಂದರ್ಭದಲ್ಲಿ ಪಕ್ಷದ ಶಾಸಕರು, ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಕಾಂಗ್ರೆಸ್ 60 ಸ್ಥಾನ ಕಳೆದುಕೊಳ್ಳಲಿದೆ: ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ 60 ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ತಾಲೂಕಿನ ಮಿಟ್ಟಿಮಲ್ಕಾಪುರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ದೇಶದಲ್ಲಿ ಪ್ರಜಾಧ್ವನಿಯನ್ನು ಕಳೆದುಕೊಂಡಿದೆ. ನನ್ನ ಹೆಸರು ಹೇಳದೇ ಇದ್ದರೆ ಅವರಿಗೆ ಜೀರ್ಣವಾಗುವುದಿಲ್ಲ. ನನ್ನ ವಿರುದ್ಧ ಆರೋಪ ಮಾಡುವ ಮೂಲಕ ಇರುವ ಸ್ಥಾನಗಳನ್ನು ಸಹ ಕಳೆದುಕೊಳ್ಳುತ್ತಾರೆ ಎಂದರು. ಮೂರ್ನಾಲ್ಕು ಜಿಲ್ಲೆಗಳಿಗೆ ಜೆಡಿಎಸ್ ಸೀಮಿತ ಎಂದು ಪದೇ ಪದೆ ಆರೋಪಿಸುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮಲ್ಲಿ ತಾಕತ್ತಿದ್ದರೆ ಸ್ವತಂತ್ರ ಪಕ್ಷ ಸ್ಥಾಪನೆ ಮಾಡಿ 5 ಸ್ಥಾನಗಳನ್ನು ಗೆಲ್ಲಲಿ ಎಂದು ಸವಾಲು ಎಸೆದರು.
Pancharatna Rathayatra: ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಡಮಾರ್: ಎಚ್.ಡಿ.ಕುಮಾರಸ್ವಾಮಿ
ನಾವಿದ್ದಾಗ 58 ಸ್ಥಾನಗಳನ್ನು ಗೆಲ್ಲಿಸಿದ್ದೇವೆ ಎಂದು ಸುಳ್ಳಿನ ರಾಮಯ್ಯ ಹೇಳುತ್ತಾರೆ. ಅದರಲ್ಲಿ ನಮ್ಮ ಕೊಡುಗೆಯೂ ಇದೆ. ನಾನು ಏಕಾಂಗಿಯಾಗಿ 40 ಸ್ಥಾನ ಗೆಲ್ಲಿಸಲು ಕಾರ್ಯಕರ್ತರು ಶಕ್ತಿ ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ಜೆಡಿಎಸ್‌ನ್ನು ನಿಂದಿಸುತ್ತಿರುವುದರಿಂದ ಮೂರ್ನಾಲ್ಕು ಜಿಲ್ಲೆಗಳಲ್ಲಿದ್ದ ಶಕ್ತಿಯು ಇಡೀ ರಾಜ್ಯಕ್ಕೆ ಹಬ್ಬಿದೆ. ಸಿದ್ದರಾಮಯ್ಯ ಅವರಿಗೆ ಇದು ಕೊನೆ ಚುನಾವಣೆ ಎಂದು ಅವರ ಮಗನು ಹೇಳಿಕೆ ನೀಡಿರುವುದು ಸರಿಯಾಗಿದೆ. ಚಾಮುಂಡೇಶ್ವರಿ ದೇವಿಯೇ ಅವರಿಂದ ಹೇಳಿಸಿದ್ದಾರೆ. ಕೋಲಾರದಲ್ಲಿ ನಿಂತರೆ ಇದೇ ಕೊನೆ ಚುನಾವಣೆಯಾಗಲಿದೆ ಎಂದರು. ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಬಂದಿದ್ದಾರೆ ಹೊರತು ಬಡವರಿಗೆ ಯೋಜನೆ ತಂದಿಲ್ಲ. ಮಹಾದಾಯಿ ಯೋಜನೆ ಜಾರಿ ಮಾಡುತ್ತೇವೆಂದು ಹೇಳುತ್ತಿದ್ದವರು ಇದೀಗ ಸುಮ್ಮನಾಗಿದ್ದಾರೆ. ಅರಣ್ಯ ಇಲಾಖೆ ಸರ್ಕಾರಕ್ಕೆ ನೋಟಿಸ್ ನೀಡಿದೆ ಎಂದು ಹೇಳಿದರು.