ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದ ಜನತೆ ಜೆಡಿಎಸ್‌ಗೆ ಸರ್ಕಾರ ರಚಿಸಲು ಪೂರ್ಣ ಆಶೀರ್ವಾದ ಮಾಡಿದ್ದಲ್ಲಿ, ಪಕ್ಷದ ಪ್ರಮುಖ ಪ್ರಣಾಳಿಕೆಯಾದ ಪಂಚರತ್ನ ಯೋಜನೆ ಜಾರಿಗೆ ತರುವುದಾಗಿ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಕನಕಪುರ (ಡಿ.28): ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ರಾಜ್ಯದ ಜನತೆ ಜೆಡಿಎಸ್‌ಗೆ ಸರ್ಕಾರ ರಚಿಸಲು ಪೂರ್ಣ ಆಶೀರ್ವಾದ ಮಾಡಿದ್ದಲ್ಲಿ, ಪಕ್ಷದ ಪ್ರಮುಖ ಪ್ರಣಾಳಿಕೆಯಾದ ಪಂಚರತ್ನ ಯೋಜನೆ ಜಾರಿಗೆ ತರುವುದಾಗಿ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ತಾಲೂಕಿನ ಮರಳವಾಡಿ ಗ್ರಾಮದ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಾಮಕೃಷ್ಣರವರ ನಿವಾಸದಲ್ಲಿ ಪಕ್ಷದ ಮಹಿಳಾ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲಿ ಮಾತು ಕೊಟ್ಟಂತೆ ರೈತರ ಸಾಲ ಮನ್ನಾ ಮಾಡಲಾಯಿತು. ಈ ಬಾರಿಯೂ ಸ್ತ್ರೀಶಕ್ತಿ ಸಂಘದಲ್ಲಿ ಪಡೆದ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದೇವೆ. ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ ಎಲ್ಲಾ ವರ್ಗದ ಮಕ್ಕಳಿಗೂ ವಿದ್ಯಾಭ್ಯಾಸ, ಉದ್ಯೋಗ, ನಿರ್ವಸಿತರಿಗೆ ಮನೆ ನೀಡಿಯೇ ತೀರುತ್ತೇವೆ ಎಂದರು.
ಮಾತೃದ್ರೋಹ ಮಾಡಿದವರಿಗೆ ಬುದ್ಧಿ ಕಲಿಸಿ: ನಿಖಿಲ್ ಕುಮಾರಸ್ವಾಮಿ
ನಮ್ಮ ತಂದೆ ಹಾಗೂ ತಾಯಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ ಮೇಲೆ ಕ್ಷೇತ್ರದ ಮೂಲಭೂತ ಸಮಸ್ಯೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇತ್ತೀಚೆಗೆ ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಮಳೆಯಿಂದ ಹಾನಿಗೊಳಗಾದ ನಾಲೆಗಳ ದುರಸ್ತಿಗೆ 80 ಕೋಟಿ ರು.ಗಳ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಲಾಗಿದೆ. ಅಭಿವೃದ್ಧಿ ವಿಚಾರದಲ್ಲಿ ನಾವು ಎಂದು ಏಕಪಕ್ಷೀಯವಾಗಿ ನಡೆದುಕೊಂಡಿಲ್ಲ, ಕೊರೋನಾದಂತಹ ಸಂಕಷ್ಟದ ಸಮಯದಲ್ಲೂ ನಾವು ಕ್ಷೇತ್ರದ ಜನರನ್ನು ಕೈಬಿಡಲಿಲ್ಲ ಎಂದು ತಿಳಿಸಿದರು.
ಕೊರೋನಾ ವಾರಿಯರ್ಸ್ ಆಗಿ ತಮ್ಮ ಜೀವದ ಹಂಗನ್ನು ತೊರೆದು ಕರ್ತವ್ಯ ನಿರ್ವಹಿಸಿದ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಸರ್ಕಾರ ತಮಗೆ ನೀಡುತ್ತಿರುವ ವೇತನದ ಹೆಚ್ಚಳದ ಬಗ್ಗೆ ಬೇಡಿಕೆಯಿಟ್ಟಿದ್ದು, ಇದನ್ನು ಕುಮಾರಸ್ವಾಮಿ ಗಂಭೀರವಾಗಿ ತೆಗೆದುಕೊಂಡು ಇದರ ಪರಿಹಾರಕ್ಕೂ ಯೋಜನೆ ರೂಪಿಸಿಕೊಂಡಿರುವುದಾಗಿ ಹೇಳಿದರು.
ಕ್ಷೇತ್ರದ ಒಮ್ಮತದ ಅಭ್ಯರ್ಥಿ: ರಾಮನಗರ ಕ್ಷೇತ್ರದ ಜನರ ಒತ್ತಾಯದ ಮೇಲೆ ಪಕ್ಷ ನನ್ನನ್ನು ಮುಂದಿನ ವಿಧಾನಸಭಾ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ. ಇದರಲ್ಲಿ ಕುಟುಂಬ ರಾಜಕಾರಣದ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ಈ ಹಿಂದೆ ಮಾಜಿ ಶಾಸಕ ಕೆ.ರಾಜು ಅವರಿಗೆ ಈ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟು ಶಾಸಕರನ್ನಾಗಿ ಮಾಡಿದೆವು. ಈಗ ಅವರು ಜನರಿಗೆ ದ್ರೋಹ ಬಗೆದು ಪಕ್ಷಾಂತರ ಮಾಡಿ ಜನತೆಯ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಇದರಿಂದಾಗಿಯೇ ಕ್ಷೇತ್ರದ ಜೆಡಿಎಸ್ ಮುಖಂಡರು, ಕಾರ್ಯಕರ್ತರು, ಜನರು ಪಕ್ಷದ ಮೇಲೆ ಒತ್ತಡ ಹೇರಿ ನನಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ ಎಂದು ಹೇಳಿದರು.
ಲಿಂಗಪ್ಪರಿಗೆ ವಯಸ್ಸಾಗಿದೆ ಅಭಿವೃದ್ಧಿ ಕೆಲಸ ಕಾಣುತ್ತಿಲ್ಲ: ಅನಿತಾ ಕುಮಾರಸ್ವಾಮಿ
ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಾಮಕೃಷ್ಣ, ಗ್ರಾ.ಪಂ ಮಾಜಿ ಅಧ್ಯಕ್ಷರಾದ ಭೈರೇಗೌಡ, ಸಿದ್ದರಾಜು, ಸುನೇತ್ರ ಶಿವರುದ್ರೇಗೌಡ, ಬನವಾಸಿ ಬಸವರಾಜು, ರೆಹಮತ್, ಗ್ರಾಪಂ ಅಧ್ಯಕ್ಷ ರಾಮು, ನಾರಾಯಣ್, ವಿಎಸ್ ಎಸ್‌ಎನ್ ಅಧ್ಯಕ್ಷ ಸೋಮು, ತಾಪಂ ಮಾಜಿ ಸದಸ್ಯ ರಾಮು, ಪ್ರದೀಪ್, ಅನಿಲ್ ಮತ್ತಿತರರು ಉಪಸ್ಥಿತರಿದ್ದರು.