ಕಾಂಗ್ರೆಸ್ ನಾಯಕರ ವಿರುದ್ಧ ಗುಡುಗಿದ ಗೃಹ ಸಚಿವ ಆರಗ ಜ್ಞಾನೇಂದ್ರ
6 ತಿಂಗಳು ಮೊದಲೇ ನಿಗದಿಯಾಗಿದ್ದ ಗುಜರಾತ್ ಕಾರ್ಯಕ್ರಮ ನಿಗದಿ
ಸ್ಯಾಂಟ್ರೋ ರವಿ ಜೊತೆಗೆ ಸಂಪರ್ಕ ಇದ್ದಿದ್ದರೆ ಬಂಧನ ತಡೆಯುತ್ತಿದ್ದೆ
ಶಿವಮೊಗ್ಗ (ಜ.16): ಸ್ಯಾಂಟ್ರೋ ರವಿ ಜೊತೆಗೆ ಸಂಪರ್ಕ ಇದ್ದಿದ್ದರೆ ಬಂಧನ ತಡೆಯುತ್ತಿದ್ದೆ. ನನ್ನ ಮುಂದೆ ಸ್ಯಾಂಟ್ರೋ ರವಿ ಬಂದರೂ ನಾನು ಗುರುತು ಹಿಡಿಯುವುದಿಲ್ಲ. 6 ತಿಂಗಳು ಮೊದಲೇ ನಿಗದಿಯಾಗಿದ್ದ ಗುಜರಾತ್ ಕಾರ್ಯಕ್ರಮಕ್ಕೆ ನಾನು ಹೋಗಿ ಬಂದಿದ್ದೇನೆ. ಈ ಬಗ್ಗೆ ಸರ್ಕಾರದಲ್ಲಿ ಪೂರ್ಣ ಪ್ರಮಾಣದಲ್ಲಿ ಮಾಹಿತಿ ಇರುತ್ತದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಘನತೆಗೆ ತಕ್ಕಂತೆ ಮಾತನಾಡಬೇಕು ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಕಿಡಿಕಾರಿದ್ದಾರೆ.
ಶಿವಮೊಗ್ಗದಲ್ಲಿ ಇಂದು ನಡೆದ ಕಾಂಗ್ರೆಸ್ ಪಕ್ಷದಿಂದ ಬಿಜೆಪಿ ಸೇರ್ಪಡೆಯಾಗುವ ಕಾರ್ಯಕರ್ತರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಸ್ಯಾಂಟ್ರೋ ರವಿ ಈಗಲೂ ಎದುರುಗಡೆ ಬಂದರೆ ಗುರುತು ಹಿಡಿಯಲಾರೆ. ವಿನಾಹಾರಣ ನನ್ನ ಹೆಸರು ಹೇಳಿ ಗೊಂದಲ ಹುಟ್ಟಿಸಿಸುತ್ತಿರುವುದು ಸರಿಯಲ್ಲ. ಇದು ಮಾಜಿ ಸಿಎಂ ಅವರ ಘನತೆಗೆ ತಕ್ಕುದಲ್ಲ. ರವಿಯ ಜೊತೆಗೆ ನನಗೆ ಸಂಪರ್ಕ ಇದ್ದರೆ ಅವನನ್ನು ಬಂಧಿಸದಂತೆ ತಡೆಯುವುದು ದೊಡ್ಡ ವಿಚಾರವಾಗಿರಲಿಲ್ಲ. ಅಂಥವನ ಹತ್ತಿರ ದುಡ್ಡು ತೆಗೆದುಕೊಳ್ಳುವ ಸಂದರ್ಭ ಬಂದರೆ ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಹೇಳಿದ್ದಾರೆ.
ಸ್ಯಾಂಟ್ರೋ ರವಿಯನ್ನು ಗುಜರಾತ್‌ಗೆ ಕರೆಸಿಕೊಂಡಿದ್ದೇ ಗೃಹ ಸಚಿವರು: ಮತ್ತೊಂದು ಬಾಂಬ್ ಸಿಡಿಸಿದ ಕುಮಾರಸ್ವಾಮಿ
6 ತಿಂಗಳ ಮುಂಚೆಯೃ ಗುಜರಾತ್ ಪ್ರವಾಸ ನಿಗದಿ: ನನ್ನ ಗುಜರಾತ್ ಕಾರ್ಯಕ್ರಮ ಆರು ತಿಂಗಳು ಮುಂಚೆ ನಿಗದಿ ಆಗಿತ್ತು. ಅದು ಅಪರಾಧ ವಿಧಿವಿಜ್ಞಾನ ಯೂನಿವರ್ಸಿಟಿ ಶಂಕು ಸ್ಥಾಪನೆ ಕಾರ್ಯಕ್ರಮವಾಗಿದೆ. ಸರ್ಕಾರದ ಪ್ರತಿನಿಧಿಯಾಗಿ ಹೋಗಿದ್ದೇನೆ. ಪ್ರತಿ ಕ್ಷಣ ಎಲ್ಲಿಗೆ ಹೋಗಿದ್ದೆ ಎನ್ನುವ ಮಾಹಿತಿ ಸರ್ಕಾರದ ಬಳಿ ಇರುತ್ತದೆ. ವೃಥಾ ಆರೋಪ ಮಾಡುವುದು ಸರಿಯಲ್ಲ. ನಮ್ಮ ಮನೆಗೆ ನನ್ನನ್ನು ನೋಡಲು ಸಾವಿರಾರು ಜನರು ಬರುತ್ತಾರೆ. ಕಳ್ಳರು ಸುಳ್ಳರು ಯಾರು ಎಂದು ನೋಡಲು ಆಗುವುದಿಲ್ಲ. ಈ ಬಗ್ಗೆ ಅವರ ಬಳಿ ಸರ್ಟಿಫಿಕೇಟ್ ತೆಗೆದುಕೊಂಡು ಒಳಗೆ ಬಿಡಲಾಗುವುದಿಲ್ಲ. ಎಲ್ಲರೂ ಮನೆಯ ಒಳಗಡೆಗೆ ಬರುತ್ತಾರೆ. ಫೋಟೋ ತೆಗೆಸಿಕೊಳ್ಳುತ್ತಾರೆ. ಈ ವೇಳೆ ನೀನು ಬರಬೇಡ, ನೀನು ಬಾ ಎಂದು ಹೇಳಲು ಆಗುವುದಿಲ್ಲ. ಫೋಟೋ ತೆಗೆಸಿಕೊಳ್ಳುವುದಕ್ಕೆ ಇಲ್ಲ ಎನ್ನಲಾಗುವುದಿಲ್ಲ. ಎಂದು ತಿಳಿಸಿದರು.
ಕಿಮ್ಮನೆ ರತ್ನಾಕರ್ ಸವೆದು ಹೋದ ನಾಣ್ಯ:
ನನ್ನ ಬಗ್ಗೆ ಆರೋಪ ಮಾಡುವ ಮಾಜಿ ಸಚಿವ ಕಿಮ್ಮನೆ ರತ್ನಾಕರ ಮಾತನಾಡುವ ಬಗ್ಗೆ ಸಂಪೂರ್ಣ ಪ್ರಮಾಣದ ಮಾಹಿತಿಯನ್ನು ಇಟ್ಟುಕೊಂಡಿರಬೇಕು. ಅದರನ್ನು ಬಿಟ್ಟು ವೃಥಾ ಆರೋಪ ಮಾಡುವುದು ಸರಿಯಲ್ಲ. ಇನ್ನು ಕಿಮ್ಮನೆ ರತ್ನಾಕರ ಅವರು ತೀರ್ಥಹಳ್ಳಿಯಲ್ಲಿ ಸವೆದು ಹೋದ ನಾಣ್ಯವಾಗಿದ್ದಾರೆ. ಅವರ ಪಕ್ಷದ ಕಾರ್ಯಕರ್ತರೇ ಕಿಮ್ಮನೆ ನಾಯಕತ್ವ ಒಪ್ಪದೆ ಬೇಷರತ್ ಆಗಿ ಬಿಜೆಪಿಗೆ ಸೇರುತ್ತಿದ್ದಾರೆ. ಇದರಿಂದ ಅವರು ಕಂಗೆಟ್ಟು ಹೋಗಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಅಸಂಬದ್ಧವಾಗಿ ಮಾತಾಡುವ ಸ್ಥಿತಿ ತಲುಪಿದ್ದಾರೆ ಎಂದರು.
ನಮ್ಮ ನಾಲಿಗೆ ನಮ್ಮ ಕುಲವನ್ನು ಹೇಳುತ್ತದೆ:
ಒಬ್ಬ ಗೃಹಸಚಿವನಾಗಿ ಈ ಸ್ಥಾನದಲ್ಲಿ ಕೂರಲು ಯೋಗ್ಯತೆ ಇತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ತಾಲೂಕಿನ ಜನ ಚುನಾವಣೆಯಲ್ಲಿ 22 ಸಾವಿರ ಮತಗಳಿಂದ ಗೆಲ್ಲಿಸಿದ್ದಾರೆ. ನನ್ನ ಪಕ್ಷ ನನ್ನನ್ನು ಗೃಚಿವರನ್ನಾಗಿ ಮಾಡಿದೆ. ಇಂದು ಏಕವಚನದಲ್ಲಿ ನನ್ನ ಬಗ್ಗೆ ಕಾಮೆಂಟ್ ಮಾಡುತ್ತಾರೆ. ಯಾವತ್ತೂ ಹೇಳುತ್ತಿರುತ್ತೀನಿ. ನಮ್ಮ ನಾಲಿಗೆ ನಮ್ಮ ಕುಲವನ್ನು ಹೇಳುತ್ತಂತೆ. ಅದು ನಮ್ಮ ಸಂಸ್ಕೃತಿಯನ್ನು ತೋರಿಸುತ್ತಂತೆ ಎಂದು ಕಿಮ್ಮನೆ ರತ್ನಾಕರ್ ವಿರುದ್ಧ ವಾಗ್ಧಾಳಿ ನಡೆಸಿದರು.
ರವಿ ಬಂಧನ ವೇಳೆ ಆರಗ ಗುಜರಾತಿಗೆ ಹೋಗಿದ್ದೇಕೆ?: ಕುಮಾರಸ್ವಾಮಿ ಪ್ರಶ್ನೆ
ಪಿಎಸ್‌ಐ ಹಗರಣ ಬಯಲಿಗೆ ಎಳೆದಿದ್ದೇನೆ:
ಕಿಮ್ಮನೆ ರತ್ನಾಕರ್ ಅವರು, ನನ್ನ ಹಾಗೂ ಪಕ್ಷದ ಬಗ್ಗೆ ಇಲ್ಲಸಲ್ಲದ ಆರೋಪವನ್ನು ಮಾತಾಡುತ್ತಿದ್ದಾರೆ. ನನ್ನ ಚಾರಿತ್ರ್ಯವಧೆ ಮಾಡುತ್ತಿದ್ದಾರೆ. ಇದಕ್ಕೆಲ್ಲ ನಾನು ಹೆದರುವುದಿಲ್ಲ. ಪೊಲೀಸ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ಹಗರಣವನ್ನು ರಾಜ್ಯದಲ್ಲಿ ಹೇಗೆ ಬಯಲಿಗೆ ಎಳೆದಿದ್ದೇನೆ ಎಂಬುದನ್ನು ಇಡೀ ರಾಜ್ಯದ ಜನತೆಯೇ ನೋಡಿದೆ. ರಾಜಕೀಯವಾಗಿ ನನ್ನನ್ನು ಮುಗಿಸಬೇಕು ಎಂದು ನೋಡುವವರು ಏನು ಬೇಕಾದರೂ ಮಾಡಬಹುದು. ಇದರಿಂದ ಅವರಿಗೆ ಏನೂ ಮಾಡಿಕೊಳ್ಳಲು ಸಾಧ್ಯವಿಲ್ಲ. ನನ್ನ ಕ್ಷೇತ್ರ ಅಭಿವೃದ್ಧಿಯಿಂದ ಜನರು ನಿರಂತರ ಆಶೀರ್ವಾದ ಮಾಡುತ್ತಿರುತ್ತಾರೆ ಎಂದರು.