ಚುನಾವಣಾ ಹೊಸ್ತಿಲಲ್ಲಿ ಇಂಡಿ ಪ್ರತ್ಯೇಕ ಜಿಲ್ಲೆಯ ಕೂಗು..!
ಇಂಡಿ ಪ್ರತ್ಯೇಕ ಜಿಲ್ಲೆ ಮಾಡಿಯೇ ತೀರುವೆ ಎಂದು ವಗ್ದಾನ ನೀಡಿದ ಶಾಸಕ ಯಶವಂತರಾಯಗೌಡ..!
ಇಂಡಿ ಪ್ರತ್ಯೇಕ ಜಿಲ್ಲೆಯಾಗದಿದ್ದರೆ ರಾಜಕೀಯ ನಿವೃತ್ತಿ
ವರದಿ- ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಫೆ.09) : ಇಂಡಿ ಅಭಿವೃದ್ಧಿಯಾಗಬೇಕಾದ್ರೆ ಜಿಲ್ಲೆಯಾಗಬೇಕು ಎನ್ನುವ ಕೂಗಿದೆ. ಮೊದಲಿನಿಂದಲು ಈ ಇಂಡಿ ಪ್ರತ್ಯೇಕ ಜಿಲ್ಲೆ ಕೂಗು ಕೇಳುತ್ತಲೆ ಬರುತ್ತಿರುತ್ತೆ. ಆದ್ರೆ ಸಧ್ಯದ ಅಪಡೇಟ್ ಏನಂದ್ರೆ ಸ್ವತಃ ಇಂಡಿ ಶಾಸಕರೇ ಇಂಡಿ ಜಿಲ್ಲೆಯಾಗಬೇಕು ಅಂತಾ ಧ್ವನಿ ಎತ್ತಿದ್ದಾರೆ. ಸಾಲದ್ದಕ್ಕೆ ಸವಾಲು ಬೇರೆ ಹಾಕಿದ್ದಾರೆ. ಚುನಾವಣೆಯಲ್ಲಿ ಗೆದ್ದರೆ ಇಂಡಿ ಜಿಲ್ಲಾ ಘೋಷಣೆ ಫಿಕ್ಸ್, ಆಗದೆ ಹೋದ್ರೆ ರಾಜಕೀಯ ನಿವೃತ್ತಿ ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಸವಾಲು ಹಾಕಿದ್ದಾರೆ.
ವಿಜಯಪುರ ಜಿಲ್ಲೆಯ ಗಡಿ ಭಾಗದಲ್ಲಿರುವ ಇಂಡಿ ಜಿಲ್ಲೆಯಾಗಬೇಕು ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಆಗ್ರಹಿಸಿದ್ದಾರೆ. ಅಭೀವೃದ್ಧಿಯ ದೃಷ್ಟಿಯಿಂದ ಹೆಚ್ಚೆಚ್ಚು ಜಿಲ್ಲೆಗಳು ಆಗಬೇಕು. ಇದರಿಂದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದಿದ್ದಾರೆ. ಪತ್ರಕರ್ತರೊಬ್ಬರು ಇಂಡಿಯಲ್ಲಿ ಪ್ರತ್ಯೇಕ ಜಿಲ್ಲೆಯ ಪೋಸ್ಟ್‌ಗಳು ಓಡಾಡುತ್ತಿವೆ, ಕಾಂಗ್ರೆಸ್ ಸರ್ಕಾರ ಬಂದ್ರೆ ಇಂಡಿ ಜಿಲ್ಲೆಯಾಗಲಿದೆಯಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಯಶವಂತರಾಯಗೌಡ ಖಂಡಿತ ಇಂಡಿ ಜಿಲ್ಲೆಯಾಗಬೇಕು. ಜಿಲ್ಲೆಯಾದ್ರೆ ಮಹಾರಾಷ್ಟ್ರ ಗಡಿಯಲ್ಲಿರುವ ಈ ಪ್ರದೇಶಗಳು ಅಭಿವೃದ್ಧಿ ಹೊಂದಲು ಅನೂಕುಲ ಎಂದರು.
ಶಿವರಾತ್ರಿಗೆ ಜಗತ್ತಿನ ಭವಿಷ್ಯ ನುಡಿಯುವ ಬಬಲಾದಿ ಮುತ್ಯಾ: ಈವರೆಗೆ ಹೇಳಿದ್ದೆಲ್ಲ ಭವಿಷ್ಯವೂ ಸತ್ಯವಾಗಿದೆ
ಚುನಾವಣೆ ಹೊಸ್ತಿಲಕ್ಕೆ ಇಂಡಿ ಶಾಸಕ ಸವಾಲ್: ಇಂಡಿ ಜಿಲ್ಲೆಯನ್ನಾಗಿಸುವ ವಿಚಾರದಲ್ಲಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಸವಾಲು ಹಾಕಿದ್ದಾರೆ. ಮತ್ತೆ ತಾವು ಗೆದ್ದರೆ ಇಂಡಿ ಜಿಲ್ಲೆ ಘೋಷಣೆ ಪಕ್ಕಾ ಎಂದಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ್ರೆ, ತಾವು ಇಂಡಿಯಲ್ಲಿ ಗೆದ್ದರೆ ಇಂಡಿ ಜಿಲ್ಲೆಯನ್ನಾಗಿ ಮಾಡ್ತೀನಿ. ಮಾಡದೆ ಹೋದ್ರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ. ರಾಜಕೀಯ ವ್ಯಕ್ತಿಗಳಿಗೆ ಬದ್ದತೆ ಇರಬೇಕು. ರಾಜಕಾರಣ ಮಾಡುವಾಗ ಅವರವರ ಪಕ್ಷಗಳ ಪರ ನಿಲ್ಲುವದು ತಪ್ಪಲ್ಲ ಆದರೆ ಜಿಲ್ಲೆಯ ಅಭಿವೃದ್ಧಿ ವಿಷಯ ಬಂದಾಗ ಎಲ್ಲ ಪಕ್ಷದ ನಾಯಕರು ಒಗ್ಗೂಡಿ ನಮಗೆ ದೊರೆಯುವ ಸೌಲಭ್ಯ ಪಡೆಯಲೇ ಬೇಕು, ಇಲ್ಲವಾದರೆ ಜನಪ್ರತಿನಿಧಿಯಾಗಿ ಇರುವದರಲ್ಲಿ ಅರ್ಥವೇ ಇಲ್ಲ ಎಂದರು. ಇನ್ನೊಂದು ಹೆಜ್ಜೆ ಮುಂದು ಹೋಗಿ ಮಾತನಾಡಿದ ಶಾಸಕರು, ಒಂದೇ ಪಕ್ಷದಲ್ಲಿ ಇದ್ದುಕೊಂಡು ರಾಜಕೀಯ ಮಾಡಿದ್ದೇನೆ ಸೌಲಭ್ಯ ಪಡೆಯುವ ವಿಚಾರ ಬಂದರೆ ಪಕ್ಷವನ್ನು ನೋಡದೆ, ಬೇರೆ ಪಕ್ಷಕ್ಕೆ ಹೋಗಲು ತಾವು ಹಿಂಜರಿಯುವದಿಲ್ಲ ಎಂದು ಖಡಕ ಆಗಿ ತಮ್ಮ ಪಕ್ಷದ ನಾಯಕರಿಗೂ ಪರೋಕ್ಷವಾಗಿ ಸವಾಲು ಹಾಕಿದರು.
ಪಾದಯಾತ್ರೆ ಮಾಡಿ ನುಡಿದಂತೆ ನಡೆದಿದ್ದೇವೆ: 2013ರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ಎದುರಿಸುವ ವೇಳೆ ಕೃಷ್ಣಾ ಮೇಲ್ದಂಡೆ ಯೋಜನೆಗೆ ಪ್ರತಿ ವರ್ಷ 50ಸಾವಿರ ಕೋಟಿ ನೀಡುವುದಾಗಿ ಜನತೆಗೆ ಭರವಸೆ ನೀಡಿ ಕೂಡಲಸಂಗಮದವರೆಗೆ ಪಾದಯಾತ್ರೆ ಮಾಡಿದ್ದೇವು. ಅದರಂತೆ ಅಧಿಕಾರ ಬಂದ ಮೇಲೆ ನುಡಿದಂತೆ ನಡೆದಿದ್ದೇವೆ ಎಂದರು. ನಮ್ಮ ಜನತೆಗೆ ಮೊದಲು ಮೂಲಭೂತ ಸೌಲಭ್ಯ ದೊರೆಯಬೇಕು. ಬೇಕಾದರೆ ಒಂದು ವರ್ಷ ಜನಪ್ರಿಯ ಯೋಜನೆ ಘೋಷಣೆ ಮಾಡದೇ ಜನರ ಆಶೋತ್ತರದಂತೆ ಯೋಜನೆ ಮಾಡಬೇಕು. ಇಲ್ಲವಾದರೆ ಇಲ್ಲಿ ಕುಳಿತುಕೊಳ್ಳುವ ನೈತಿಕತೆ ನಮಗಿಲ್ಲ ಎಂದರು.
ವಿಜಯಪುರ: ಕೊಲ್ಹಾರದಲ್ಲಿ ಅದ್ಧೂರಿಯಾಗಿ ನಡೆದ ತರಪಿ ಯಲ್ಲಮ್ಮದೇವಿ ಜಾತ್ರೆ
ಇಂಡಿ ಜಿಲ್ಲೆ ಮಾಡಿಯೇ ತೀರುವೆ ಎಂದ ಶಾಸಕ: ನಂಜುಂಡಪ್ಪ ವರದಿಯಂತೆ ಜನಸಂಖ್ಯೆ ಹಾಗೂ ತಾಲೂಕುಗಳ ಹೆಚ್ಷಳದಂತೆ ಇಂಡಿ ತಾಲೂಕನ್ನು ಜಿಲ್ಲೆ ಮಾಡಬೇಕು ಎನ್ನುವ ಬೇಡಿಕೆ ಬಹಳ ವರ್ಷದಿಂದ ಇದೆ ಅದನ್ನು ಮಾಡುತ್ತೇನೆ. ಸದ್ಯ ಇಂಡಿ ಕ್ಷೇತ್ರ ಎಲ್ಲ ಕಡೆಗೆ ಅಭಿವೃದ್ಧಿ ಕಾಣುತ್ತಿದೆ. ಬರ ತಾಲೂಕು ಎಂದು ಹಣೆಪಟ್ಟಿ ಇತ್ತು. ಈಗ 24×7ನೀರು ಜನರಿಗೆ ಸಿಗುತ್ತಿದೆ. ಜಿಲ್ಲಾ ಕೇಂದ್ರವಾದ ವಿಜಯಪುರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಯೋಜನೆ ಅಷ್ಟಾಗಿ ಯಶಸ್ವಿ ಯಾಗಿಲ್ಲ. ಆದರೆ ತಮ್ಮ ಕ್ಷೇತ್ರದಲ್ಲಿ ಕೇವಲ ಮೂರು ವರ್ಷದಲ್ಲಿ ಕುಡಿಯುವ ನೀರಿನ ಯೋಜನೆ ಜಾರಿ ಮಾಡಲಾಗಿದೆ. ಇದರ ಜತೆ ಉತ್ತಮ ಬಸ್ ನಿಲ್ದಾಣ, ರಸ್ತೆಗಳು ಸೇರಿದಂತೆ ಎಲ್ಲ ರೀತಿಯ ಅಗತ್ಯ ಸೌಲಭ್ಯ ನೀಡಲಾಗಿದೆ. ನಮ್ಮ ಜನತೆಗೆ ಗೊತ್ತು ನಾನು ನೀಡಿದ ಭರವಸೆ ಈಡೇರಿಸುವವರಿಗೂ ಸುಮ್ಮನಿರಲ್ಲ ಎಂದರು.
ಫೆ.11 ರಂದು ಇಂಡಿಯಲ್ಲಿ ಕಾಂಗ್ರೆಸ್ ರಥಯಾತ್ರೆ: ಇದೇ ಫೆ. 11ರಂದು ಸಿದ್ದರಾಮಯ್ಯ ನೇತ್ವತೃದಲ್ಲಿ ವಿಜಯಪುರ ಜಿಲ್ಲೆಯ ಗಡಿಭಾಗದಲ್ಲಿ ಕಾಂಗ್ರೆಸ್ ರಥಯಾತ್ರೆ ನಡೆಯಲಿದೆ. ಮುಂದೆ 21,22ರಂದು ಮುದ್ದೇಬಿಹಾಳ, ಬಾಗೇವಾಡಿ ಇತರೆ ಭಾಗದಲ್ಲಿ ರಥಯಾತ್ರೆ ನಡೆಯಲಿದೆ ಎಂದರು.