ಹಿಂದೆ ವಾಜಪೇಯಿ ಮತ್ತು ಅಡ್ವಾಣಿ ಅವರು 371(ಜೆ) ಮಾಡಲು ಆಗುವುದಿಲ್ಲ ಎಂದು ಹೇಳಿದ್ದರು. ಕಾಂಗ್ರೆಸ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಶ್ರಮದಿಂದ ಈ ಭಾಗಕ್ಕೆ 371 (ಜೆ) ತಿದ್ದುಪಡಿ ಮಾಡಲಾಗಿದೆ: ರಾಹುಲ್ ಗಾಂಧಿ
ರಾಯಚೂರು(ಅ.23): ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಖಾಲಿ ಇರುವ 60 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಘೋಷಿಸಿದರು. ಭಾರತ್ ಜೋಡೋ ಯಾತ್ರೆಯ ಎರಡನೇ ದಿನ ರಾಯಚೂರು ನಗರದ ವಾಲ್ಕಾಟ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಸಮಾವೇಶದಲ್ಲಿ ಶನಿವಾರ ಸಂಜೆ ಮಾತನಾಡಿದ ಅವರು, ಹಿಂದೆ ವಾಜಪೇಯಿ ಮತ್ತು ಅಡ್ವಾಣಿ ಅವರು 371(ಜೆ) ಮಾಡಲು ಆಗುವುದಿಲ್ಲ ಎಂದು ಹೇಳಿದ್ದರು. ಕಾಂಗ್ರೆಸ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಶ್ರಮದಿಂದ ಈ ಭಾಗಕ್ಕೆ 371 (ಜೆ) ತಿದ್ದುಪಡಿ ಮಾಡಲಾಗಿದೆ. ಆದರೆ, ಇಂದು ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ 371 (ಜೆ) ಅನುಷ್ಠಾನದಲ್ಲಿ ವಿಫಲತೆ ಕಂಡಿದೆ. ಇದರಿಂದಾಗಿ ಈ ಭಾಗದಲ್ಲಿ ಖಾಲಿ ಹುದ್ದೆಗಳ ಭರ್ತಿಯನ್ನು ಮಾಡಲಾಗಿಲ್ಲ ಎಂದು ಹೇಳಿದರು.
ದೀಪಾವಳಿ ಶುಭಾಶಯ:
ಕರ್ನಾಟಕ ರಾಜ್ಯಕ್ಕೆ ಹಾಗೂ ನನ್ನ ಕುಟುಂಬದ ಸದಸ್ಯರಿಗೆ ಅವಿನಾಭಾವ ಸಂಬಂಧವಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಚಿಕ್ಕಮಗಳೂರಿನಿಂದ ಗೆಲ್ಲಿಸಿದ್ದನ್ನು ನಾವು ಎಂದಿಗೂ ಮರೆಯುವುದಿಲ್ಲ. ಅದೇ ರೀತಿ ತಾಯಿ ಸೋನಿಯಾ ಗಾಂಧಿ ಅವರನ್ನು ಬಳ್ಳಾರಿಯಿಂದ ಗೆಲ್ಲಿಸಿದ್ದನ್ನು ಯಾವುದೇ ಕಾರಣಕ್ಕೂ ಮರೆಯುವುದಿಲ್ಲ. ಕಳೆದ 22 ದಿನಗಳಿಂದ ಕರ್ನಾಟಕದಲ್ಲಿ 500 ಕಿ.ಮೀ.ಗಿಂತ ಹೆಚ್ಚು ದೂರ ಪಾದಯಾತ್ರೆ ಮಾಡಿದ್ದು, ನಾಳೆ ಮುಂದಿನ ರಾಜ್ಯಕ್ಕೆ ಹೋಗುತ್ತಿದ್ದೇವೆ. ಪಾದಯಾತ್ರೆ ಉದ್ದಕ್ಕೂ ಎಲ್ಲ ಜನರು ತಮ್ಮ ಶಕ್ತಿ, ಪ್ರೀತಿಯನ್ನು ನೀಡಿದ್ದು, ನಾನು ಆಭಾರಿಯಾಗಿದ್ದೇನೆ. ಬಿಸಿಲು, ಚಳಿ, ಮಳೆ, ಬಿರುಗಾಳಿಯನ್ನು ಲೆಕ್ಕಿಸದೆ ಈ ಪಾದಯಾತ್ರೆ ಮಾಡಿದ್ದೇವೆ. ಯಾವ ಶಕ್ತಿಯಿಂದಲೂ ಪಾದಯಾತ್ರೆ ತಡೆಯಲು ಸಾಧ್ಯವಿಲ್ಲ. ಜಮ್ಮು ಕಾಶ್ಮೀರದಲ್ಲಿಯೇ ಪಾದಯಾತ್ರೆ ಮುಗಿಯಲಿದೆ ಎಂದು ಹೇಳಿದ ರಾಹುಲ್ ಗಾಂಧಿ ಅವರು ನೆರೆದ ಸಮಸ್ತ ಜನರಿಗೆ ದೀಪಾವಳಿ ಹಬ್ಬದ ಶುಭಾಷಯಗಳನ್ನು ಕೋರಿದರು.
ಬಿಜೆಪಿ, ಆರ್‌ಎಸ್‌ಎಸ್ ಜನರಲ್ಲಿ ಕೋಮುದ್ವೇಷ ಹರಡುತ್ತಿದೆ: ರಾಹುಲ್ ಗಾಂಧಿ
ಬಸವಣ್ಣ, ಅಂಬೇಡ್ಕರ್ ಮಾರ್ಗದಲ್ಲಿ ಯಾತ್ರೆ:
ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನವರು ದೇಶದಲ್ಲಿ ಕೋಮು, ಅಸೂಯೆ ಹರಡುವ ಕೆಲಸ ಮಾಡುತ್ತಿದ್ದಾರೆ. ಅಣ್ಣ- ತಮ್ಮಂದಿರಲ್ಲಿ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ದೇಶ ವಿಭಜಿಸುವ ಕೆಲಸ ಮಾಡುತ್ತಿದ್ದು, ಇದರ ವಿರುದ್ಧ ಪಾದಯಾತ್ರೆ ಆರಂಭಿಸಿದ್ದೇವೆ. ಇಡೀ ಮನುಕುಲಕ್ಕೆ ದಾರಿ ತೋರಿದ ಬಸವಣ್ಣ, ಡಾ. ಬಿ.ಆರ್.ಅಂಬೇಡ್ಕರ್, ಮಹರ್ಷಿ ವಾಲ್ಮೀಕಿ ಅವರು ಉತ್ತಮ ಮಾರ್ಗಗಳನ್ನು ತೋರಿಸಿದ್ದಾರೆ. ಈ ಪಾದಯಾತ್ರೆ ಕೂಡಾ ಅವರ ವಿಚಾರಧಾರೆಯ ಭಾಗವಾಗಿದೆ. ಈ ಯಾತ್ರೆಯಲ್ಲಿ ಯಾವುದೇ ದ್ವೇಷ, ಅಸೂಯೆ ಕಾಣಿಸುವುದಿಲ್ಲ. ಯಾತ್ರೆಯಲ್ಲಿ ಯಾರಾದರೂ ಎಡವಿ ಬಿದ್ದರೆ ಎಲ್ಲರೂ ಸೇರಿ ಎತ್ತುವ ಕೆಲಸ ಮಾಡುತ್ತಾರೆ. ಇದನ್ನೇ ಬಸವಣ್ಣನವರು ಕಲಿಸಿದ್ದಾರೆ. ಅದನ್ನೇ ನಾವು ಈ ಪಾದಯಾತ್ರೆಯಲ್ಲಿ ಮಾಡುತ್ತಿದ್ದೇವೆ ಎಂದು ನುಡಿದರು.
ಸಮಾರಂಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರಾದ ಕೆ.ಸಿ.ವೇಣುಗೋಪಾಲ್, ಈಶ್ವರ ಖಂಡ್ರೆ, ರಾಜ್‌ದೀಪ್ ಸುರ್ಜಿವಾಲಾ, ಎನ್.ಎಸ್.ಬೋಸರಾಜು, ಎಂ.ಬಿ.ಪಾಟೀಲ್, ಶಾಸಕ ಬಸನಗೌಡ ದದ್ದಲ್, ಅಜಯ್‌ಸಿಂಗ್, ಪ್ರಿಯಾಂಕ್ ಖರ್ಗೆ, ಕೃಷ್ಣ ಭೈರೇಗೌಡ, ರವಿ ಬೋಸರಾಜು ಸೇರಿದಂತೆ ಅನೇಕರು ಇದ್ದರು.