ಸೋಮಣ್ಣನಾದ್ರೂ ಬರಲಿ ಯಾರಾದರೂ ಬರಲಿ ನಾನು ವರುಣದಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರು (ಏ.14): ಸೋಮಣ್ಣನಾದ್ರೂ ಬರಲಿ ಯಾರಾದರೂ ಬರಲಿ ನಾನು ವರುಣದಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಗುರುವಾರ ಸಂಜೆ ಭೇಟಿ ನೀಡಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎದುರಾಳಿ ಯಾರು ಅಂಥಾ ನಾನು ನೋಡಲ್ಲ. ಮತದಾರರ ಮೇಲೆ ನಾನು ವಿಶ್ವಾಸ ಇಟ್ಟಿದ್ದೇನೆ ಎಂದರು. ಸಿದ್ದರಾಮಯ್ಯ ಅವರನ್ನು ಗೆಲ್ಲಿಸಬೇಕೆಂದು ಮತದಾರರು ಕಾರ್ಯಕರ್ತರು ತೀರ್ಮಾನ ಮಾಡಿದ್ದಾರೆ. ಅವನು (ಸೋಮಣ್ಣ) ಈಗ ಬಂದಿದ್ದಾನೆ.
ಪ್ರಚಾರ ಮಾಡಲಿ. ನಮ್ಮ ಹುಡುಗ (ಡಾ. ಯತೀಂದ್ರ) ಈಗಾಗಲೇ ಪ್ರಚಾರ ಮಾಡಿ ಮುಗಿಸಿದ್ದಾನೆ. ರಾಹು- ಕೇತುಗಳು ಈಗಲೂ ಇದ್ದಾರಾ? ನಾನು ಅದರ ಬಗ್ಗೆ ಮಾತನಾಡಲ್ಲ ಎಂದು ಅವರು ಹೇಳಿದರು. ಶ್ರೀನಿವಾಸಪ್ರಸಾದ್ ಬಿಜೆಪಿ ಮುಖಂಡ. ಸೋಮಣ್ಣ ಅವರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿದೆ? ವರುಣ ಕ್ಷೇತ್ರದಲ್ಲಿ ಹಣದ ಹೊಳೆಯನ್ನು ಹರಿಸಲಿ ಏನನ್ನಾದರೂ ಮಾಡಲಿ, ನಾನು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು. ಕೋಲಾರದಿಂದ ಸ್ಪರ್ಧೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸ್ಪರ್ಧೆ ಮಾಡಿ ಅಂದ್ರೇ ಮಾಡುತ್ತೇನೆ, ಇಲ್ಲ ಅಂದ್ರೇ ವರುಣದಲ್ಲೇ ಇರುತ್ತೇನೆ. ಏ.19 ರಂದು ವರುಣದಲ್ಲಿ ನಾಮಪತ್ರ ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದರು.
undefined
ಸೋಮಣ್ಣ ಸೇರಿ ಯಾರೇ ನನ್ನ ವಿರುದ್ಧ ಸ್ಪರ್ಧಿಸಿದರೂ ಸ್ವಾಗತ: ಸಿದ್ದರಾಮಯ್ಯ
ವರುಣದಲ್ಲಿ 1 ದಿನ ಪ್ರಚಾರ: ಈ ಮೊದಲು ವರುಣ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಕೆಗೆ ಮಾತ್ರ ಬರುತ್ತೇನೆ, ಪ್ರಚಾರಕ್ಕೆ ಬರುವುದಿಲ್ಲ ಎಂದಿದ್ದ ಸಿದ್ದರಾಮಯ್ಯ ಅವರು, ವರುಣಗೆ ಬಿಜೆಪಿಯಿಂದ ವಿ. ಸೋಮಣ್ಣ ಹೆಸರು ಘೋಷಣೆಯಾದ ಬಳಿಕ ನಿಲುವು ಬದಲಾಯಿಸಿದ್ದು, ವರುಣದಲ್ಲಿ ಒಂದು ದಿನ ಪ್ರಚಾರಕ್ಕೆ ಬರುತ್ತೇನೆ. ವರುಣದಲ್ಲಿ ಒಂದು ದಿನ ನಾಲ್ಕು ಕಡೆಗಳಲ್ಲಿ ಪ್ರಚಾರ ಮಾಡುತ್ತೇನೆ ಎಂದು ಹೇಳಿದರು. ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿ ಮಾವಿನಹಳ್ಳಿ ಎಸ್. ಸಿದ್ದೇಗೌಡ, ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾದ ಪ್ರದೀಪ್‌ಕುಮಾರ್, ಕೆ. ಹರೀಶ್‌ಗೌಡ ಮೊದಲಾದವರು ಇದ್ದರು.
ಅಶೋಕ್, ಸೋಮಣ್ಣ ಸ್ಪರ್ಧೆಗೆ ಡಿಕೆಶಿ, ಸಿದ್ದರಾಮಯ್ಯ ಡೋಂಟ್ ಕೇರ್?
ಸುತ್ತೂರು ಶ್ರೀಗಳೊಂದಿಗೆ ಸಿದ್ದು ಪ್ರತ್ಯೇಕ ಮಾತುಕತೆ: ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರೊಂದಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತ್ಯೇಕವಾಗಿ ಕೆಲಕಾಲ ಮಾತುಕತೆ ನಡೆಸಿದರು. ತಮ್ಮೊಂದಿಗೆ ಬಂದಿದ್ದ ಮುಖಂಡರು ಹಾಗೂ ಕಾರ್ಯಕರ್ತರನ್ನು ಎಲ್ಲರನ್ನೂ ದೂರವಿಟ್ಟು ಶ್ರೀಗಳ ಜೊತೆಗೆ ಸಿದ್ದರಾಮಯ್ಯ ಮಾತುಕತೆ ನಡೆಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.