ನಮ್ಮ ಪಕ್ಷದಲ್ಲಿ ಶಿಸ್ತು ಸಮಿತಿ ಇದೆ ಎಂದು ಗೊತ್ತಾಗಿದ್ದೇ ನನಗೆ ನೋಟಿಸ್ ಕೊಟ್ಟಮೇಲೆ. ಯಾವುದೇ ಕಾರಣಕ್ಕೂ ನಾನು ನೋಟಿಸ್‌ಗೆ ಉತ್ತರ ಕೊಡುವುದಿಲ್ಲ ಎಂದು ಹೊನ್ನಾಳಿಯ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ದಾವಣಗೆರೆ (ಜು.06): ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಪಕ್ಷದಲ್ಲಿ ಶಿಸ್ತು ಸಮಿತಿ ಅಧ್ಯಕ್ಷರು ಯಾರೆಂದೇ ಗೊತ್ತಿಲ್ಲ. ಅಲ್ಲದೆ, ನಾನು ಯಾವುದೇ ರೀತಿಯಲ್ಲೂ ತಪ್ಪು ಮಾತನಾಡಿಲ್ಲ. ನಮ್ಮೆಲ್ಲ ಕಾರ್ಯಕರ್ತರು ಮಾತನಾಡುತ್ತಿರುವುದನ್ನೇ ಹೇಳಿದ್ದೇನೆ ಅಷ್ಟೆಎಂದರು.
ನನ್ನ ಮಾತುಗಳನ್ನು ಕೇಳಿ, ನಾನು ಹೇಳಿದ್ದನ್ನು ನೋಡಿ ಪಕ್ಷದ ನಾಯಕರೇ ನನಗೆ ಕರೆ ಮಾಡಿ, ನೀವು ಮಾತನಾಡಿದ್ದು ಸರಿಯಾಗಿದೆ ಎನ್ನುತ್ತಿದ್ದಾರೆ ಎಂದು ಹೇಳಿದ ರೇಣುಕಾಚಾರ್ಯ, ನಮ್ಮ ನಾಯಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಮಾತನಾಡಿದವರಿಗೆ ಮಾತ್ರ ಪಕ್ಷದಲ್ಲಿ ರಾಜ ಮರ್ಯಾದೆನಾ ಎಂದು ಮುಖಂಡರ ವಿರುದ್ಧ ಅಸಮಾಧಾನ ಹೊರಹಾಕಿದರು. ಪಕ್ಷದಲ್ಲಿ 11 ಮಂದಿಗೆ ನೋಟಿಸ್ ಕೊಟ್ಟಿರುವುದಾಗಿ ಹೇಳಿದ್ದಾರೆ. ಆದರೆ, ನನಗೆ ನೀಡಿದ್ದ ನೋಟಿಸ್‌ವೊಂದನ್ನು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತಾರೆ. ನಾನು ಯಾವುದೇ ಕಾರಣಕ್ಕೂ ಇಂಥ ನೋಟಿಸ್‌ಗೆ ಉತ್ತರ ಕೊಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ವಿಜಯಪುರ ಜಿಲ್ಲೆಯಲ್ಲಿ 3.4ರ ತೀವ್ರತೆಯ ಭೂಕಂಪ: ಬೆಚ್ಚಿಬಿದ್ದ ಜನತೆ
ಕಾಂಗ್ರೆಸ್ ಸೇರಲ್ಲ: ಹಿರಿಯರಾದ ಕಾಂಗ್ರೆಸ್ ನಾಯಕ, ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರ ಜೊತೆಗೆ ರಾಜಕೀಯ ಹೊರತುಪಡಿಸಿ ಉತ್ತಮ ಒಡನಾಟವಿದೆ. ನಾನು ಈಗಲೂ ನಮ್ಮ ಪಕ್ಷದಲ್ಲೇ ಇದ್ದೇನೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರುವುದಿಲ್ಲ. ನಮ್ಮ ಪಕ್ಷವೇ ನನಗೆ ಎಲ್ಲವನ್ನೂ ಕೊಟ್ಟಿದೆ ಎಂದು ರೇಣುಕಾಚಾರ್ಯ ಇದೇ ವೇಳೆ ಸ್ಪಷ್ಟಪಡಿಸಿದರು.
ರಾಜ್ಯ ಸುತ್ತಲು ಬಿಎಸ್‌ವೈ ಬೇಕಾ?: ‘ಈ ಬಾರಿ ರಾಜ್ಯದ ಬಿಜೆಪಿ ನಾಯಕರು ಚುನಾವಣೆಯಲ್ಲಿ ಮೋದಿ, ಬಿಎಸ್‌ವೈ ಮುಖ ತೋರಿಸಿ ಮತ ಕೇಳಿದ್ದರು. ಹಾಗಾದರೆ ಪಕ್ಷಕ್ಕೆ ಇವರ (ಇತರ ನಾಯಕರ) ಕೊಡುಗೆ ಏನು? 78 ವರ್ಷ ಎಂದು ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸಿದರು. ರಾಜ್ಯ ಸುತ್ತಲು ಅದೇ ಯಡಿಯೂರಪ್ಪ ಬೇಕಾ? ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದರು.
ಪಕ್ಷ ಕಟ್ಟಿಬೆಳೆಸಿದ್ದು ಬಿಎಸ್‌ವೈ: ‘ಕೆಲವರು ಯಡಿಯೂರಪ್ಪ, ರೇಣುಕಾಚಾರ್ಯನ ಹೆಗಲ ಮೇಲೆ ಬಂದೂಕು ಇರಿಸಿ ಗುಂಡು ಹೊಡೆಯುತ್ತಿದ್ದಾರೆ ಎನ್ನುತ್ತಿದ್ದಾರೆ. ಯಡಿಯೂರಪ್ಪ ಎಂದಿಗೂ ಕೀಳುಮಟ್ಟದ ರಾಜಕಾರಣ ಮಾಡಿಲ್ಲ. ಮುಂದೆಯೂ ಮಾಡಲ್ಲ. ಅವರು ಯಾವತ್ತೂ ಸಹ ಪಕ್ಷ ಹಾಗೂ ಪಕ್ಷದ ನಾಯಕರ ವಿರುದ್ಧ ಮಾತನಾಡಬೇಡಿ ಎನ್ನುತ್ತಾರೆ. ಬಿಎಸ್‌ವೈಗೆ ಸಂಘ ಪರಿವಾರದ ಹಿನ್ನೆಲೆ ಇದೆ. ಕರ್ನಾಟಕದಲ್ಲಿ ಬಿಜೆಪಿ ಕಟ್ಟಿಬೆಳೆಸಿದ್ದು ಬಿಎಸ್‌ವೈ. ಇವರ ಜತೆಗೆ ಅನಂತಕುಮಾರ್. ಇಂದು ಪಕ್ಷದಲ್ಲಿ ಇರುವ ಯಾರೂ ಪಕ್ಷ ಕಟ್ಟಿಬೆಳೆಸಿಲ್ಲ ಎಂದು ಹಿಂದೆ ಹೇಳಿದ್ದೆ. ಇಂದೂ ಹೇಳುತ್ತೇನೆ. ನಾನು ಬಿಜೆಪಿ ಬಿಡುತ್ತೇನೆ ಎಂದು ಎಲ್ಲೂ ಹೇಳಿಲ್ಲ. ನಾನು ಪಕ್ಷದಲ್ಲೇ ಇರುತ್ತೇನೆ’ ಎಂದರು
ರಾಜಕೀಯದ ತೆವಲುಗಳಿಗೆ ಅಮಾಯಕರ ಜೀವದ ಜೊತೆ ಚೆಲ್ಲಾಟ: ಸರ್ಕಾರದ ವಿರುದ್ಧ ಎಚ್‌ಡಿಕೆ ಕಿಡಿ
ಅಧ್ಯಕ್ಷರು ಕೇಳಲೇ ಇಲ್ಲ: ‘ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲಿಗೆ ಕಾರಣಗಳೇನು ಎಂದು ರಾಜ್ಯಾಧ್ಯಕ್ಷರಿಗೆ ಹೇಳಿದೆ. ಆದರೆ, ಅವರು ಕೇಳಲಿಲ್ಲ. ಸರ್ಕಾರ ಮತ್ತು ಪಕ್ಷದ ತಪ್ಪು ನಿರ್ಧಾರಗಳಿಂದ ಒಳ ಮೀಸಲಾತಿಯಿಂದ 40-50 ಮಂದಿ ಸೋತರು. ಹೊಸಮುಖಗಳಿಗೆ ಅವಕಾಶ ನೀಡಿದ್ದು, ವ್ಯವಸ್ಥಿತವಾಗಿ ಹಿರಿಯ ಮುಖಂಡರನ್ನು ಕಡಗಣಿಸಿದ್ದು ಹೀನಾಯ ಸ್ಥಿತಿಗೆ ಕಾರಣ. ಯಡಿಯೂರಪ್ಪ ಅವರಿಗೆ ಅಪಮಾನ, ಅವಮಾನ ಮಾಡಿದರೆ ಸುಮ್ಮನಿರಲ್ಲ ಎಂದು ಹೇಳಿದ್ದೇನೆ’ ಎಂದು ಹೇಳಿದರು.