‘ನನ್ನ ಹೆಸರು ಪದೇಪದೇ ಏಕೆ ಬರುತ್ತಿದೆಯೋ ಗೊತ್ತಿಲ್ಲ’ : ನಾನು ಸ್ಪರ್ಧಿಸಲ್ಲ

By Kannadaprabha NewsFirst Published Jan 20, 2021, 8:52 AM IST
Highlights

ಬೆಳಗಾವಿ  ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಲ್ಲ. ನನ್ನ ಹೆಸರು ಪದೆ ಪದೆ  ಯಾಕೆ ಬರುತ್ತಿದೆಯೋ ಗೊತ್ತಿಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. 

 ಬೆಂಗಳೂರು (ಜ.20):  ಬೆಳಗಾವಿ ಲೋಕಸಭಾ ಉಪಚುನಾವಣೆಗೆ ತಾವು ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಸಚಿವ ಬೃಹತ್‌ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌, ಯಾರೋ ನನ್ನ ಹೆಸರು ಪದೇ ಪದೇ ಹರಿಬಿಡುತ್ತಿದ್ದಾರೆ ಎಂಬ ಸುದ್ದಿ ಇದ್ದು, ಅದನ್ನು ಯಾರೂ ನಂಬಬಾರದು ಎಂದು ಹೇಳಿದ್ದಾರೆ.

ನಗರದಲ್ಲಿ  ಸುದ್ದಿಗಾರರ ಜತೆ ಮಾತನಾಡಿದ ಅವರು, ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಆದರೂ ಪದೇ ಪದೇ ನನ್ನ ಹೆಸರು ಯಾಕೆ ಚರ್ಚೆಯಾಗುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ, ಪಕ್ಷ ಇಲ್ಲವೇ ಹೈಕಮಾಂಡ್‌ ಮಟ್ಟದಲ್ಲಿ ಈ ಬಗ್ಗೆ ಚರ್ಚೆಯೇ ನಡೆದಿಲ್ಲ. ಮುಖ್ಯಮಂತ್ರಿಗಳು ಸಹ ಚರ್ಚಿಸಿಲ್ಲ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ರಾಜ್ಯಕ್ಕೆ ಭೇಟಿ ನೀಡಿದ ವೇಳೆಯೂ ಅವರ ಜತೆಯಲ್ಲಿದ್ದೆ. ಆಗಲೂ ಈ ಬಗ್ಗೆ ಮಾತುಕತೆ ನಡೆದಿಲ್ಲ ಎಂದಿದ್ದಾರೆ.

ಬೆಳಗಾವಿ ಲೋಕಸಭಾ ಬೈ ಎಲೆಕ್ಷನ್: ಎಲ್ಲಾ ಗೊಂದಲಗಳಿಗೆ ಶೆಟ್ಟರ್ ತೆರೆ ...

ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತ್ತು ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಇನ್ನೂ ಅಂತಿಮಗೊಳಿಸಿಲ್ಲ. ಆದರೆ, ಉಸ್ತುವಾರಿಗಳನ್ನು ನಿಯೋಜಿಸಿ ತಳಮಟ್ಟದಲ್ಲಿ ಮಾಡಬೇಕಾದ ಕೆಲಸಗಳನ್ನು ಮಾಡಲಾಗುತ್ತಿದೆ. ಚುನಾವಣೆ ಘೋಷಣೆಯಾದ ಬಳಿಕವೇ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗುತ್ತದೆ ಎಂದರು.

ಸಚಿವ ಸ್ಥಾನಗಳು ಅದಲು-ಬದಲಾಗುವ ಸಾಧ್ಯತೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಚಿವ ಸ್ಥಾನಗಳನ್ನು ಅದಲು-ಬದಲು ಮಾಡುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟವಿಚಾರ. ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಯಾವ ಸಚಿವರಿಗೆ, ಯಾವ ಖಾತೆ ನೀಡಬೇಕು ಎಂಬುದು ಮುಖ್ಯಮಂತ್ರಿಗಳು ತೀರ್ಮಾನಿಸಲಿದ್ದಾರೆ ಎಂದು ತಿಳಿಸಿದರು.

click me!