ನನ್ನ ವಿರುದ್ಧ ಪ್ರಧಾನಿ, ಸಿಎಂ ಯಾರೇ ಸ್ಪರ್ಧಿಸಿದ್ರು ಗೆಲುವು ನಂದೇ: ಮಾಜಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ

By Kannadaprabha News  |  First Published Apr 4, 2023, 2:20 AM IST

ನನ್ನ ವಿರುದ್ಧ ಯಾರು ಬೇಕಾದರೂ ಸ್ಪರ್ಧಿಸಲಿ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಷ್ಟೇ ಅಲ್ಲ, ಸ್ವತಃ ಪ್ರಧಾನಿ ನರೇಂದ್ರ ಮೋದಿ ಬಂದರೂ ಬೇಡ ಎನ್ನುವುದಿಲ್ಲ ಆದರೆ ಗೆಲ್ಲುವುದು ನಾನೇ ಎಂದು ಕಾಂಗ್ರೆಸ್‌ ಉತ್ತರ ಕ್ಷೇತ್ರದ ಅಭ್ಯರ್ಥಿ, ಮಾಜಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 


ದಾವಣಗೆರೆ (ಏ.04): ನನ್ನ ವಿರುದ್ಧ ಯಾರು ಬೇಕಾದರೂ ಸ್ಪರ್ಧಿಸಲಿ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಷ್ಟೇ ಅಲ್ಲ, ಸ್ವತಃ ಪ್ರಧಾನಿ ನರೇಂದ್ರ ಮೋದಿ ಬಂದರೂ ಬೇಡ ಎನ್ನುವುದಿಲ್ಲ ಆದರೆ ಗೆಲ್ಲುವುದು ನಾನೇ ಎಂದು ಕಾಂಗ್ರೆಸ್‌ ಉತ್ತರ ಕ್ಷೇತ್ರದ ಅಭ್ಯರ್ಥಿ, ಮಾಜಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಗರದ ಹೊರ ವಲಯದ ಶಾಬನೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ, ಶ್ರೀ ಈಶ್ವರ ದೇವಸ್ಥಾನದಲ್ಲಿ ಸೋಮವಾರ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿ ಉತ್ತರ ಕ್ಷೇತ್ರದಲ್ಲಿ ತಮ್ಮ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಬಿಜೆಪಿಯ ಭ್ರಷ್ಟಾಚಾರದಿಂದ ಜನ ರೋಸಿ ಹೋಗಿದ್ದಾರೆ. 

ಎಲ್ಲಾ ಜನರ ಆಶೀರ್ವಾದ ನಮ್‌ ಮೇಲೆ, ಕಾಂಗ್ರೆಸ್ಸಿನ ಮೇಲೆ ಇದೆ. ದಾವಣಗೆರೆ ನಗರ, ಜಿಲ್ಲೆಯ ಅಭಿವೃದ್ಧಿ ಆಗಬೇಕಾಗಿದೆ. 5 ವರ್ಷದ ಹಿಂದೆ ನಾವು ಮಾಡಿದ್ದ ಕೆಲಸಗಳೇ ಈಗಲೂ ಸಾಗಿವೆ. ನಮ್ಮ ಕೆಲಸಕ್ಕೆ ಈಗ ಬಿಜೆಪಿಯವರು ಕಲ್ಲು ಹಾಕಿಸಿಕೊಂಡಿದ್ದಾರೆ ಎಂದು ಟೀಕಿಸಿದರು. ಜಿಲ್ಲೆಗೆ ಒಳ್ಳೆಯ ನೀರಾವರಿ ಯೋಜನೆಗಳನ್ನು ತರಬೇಕಿದೆ. ಬರಲಿರುವ ಚುನಾವಣೆಯಲ್ಲಿ ನಮ್ಮ ಪಕ್ಷವೇ ಅಧಿಕಾರಕ್ಕೆ ಬರಲಿದ್ದು, ಇಂತಹ ಇನ್ನೂ ಅನೇಕ ಯೋಜನೆಗಳನ್ನು ತರುತ್ತೇವೆ. ಜನರ ಪ್ರೀತಿ, ವಿಶ್ವಾಸವು ನಮ್ಮ ಮೇಲೆ, ನಮ್ಮ ತಂದೆ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳ ಮೇಲೆ ಇರಲಿ. ರಾಜ್ಯಾದ್ಯಂತ ಕಾಂಗ್ರೆಸ್‌ ಪಕ್ಷಕ್ಕೆ ಮತದಾರರು ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

Latest Videos

undefined

ಮುಸ್ಲಿ​ಮ​ರಿಗೆ ಸೌಲಭ್ಯ ನೀಡಿ​ಲ್ಲ​ವೆಂದರೆ ರಾಜ​ಕೀಯ ನಿವೃ​ತ್ತಿ: ಬಿ.ಎಸ್‌.ಯಡಿಯೂರಪ್ಪ

ಶೇ.40 ಪರ್ಸೆಂಟೇಜ್‌ನ ಬಿಜೆಪಿಯವರು ದಾವಣಗೆರೆ ಜಿಲ್ಲೆಯಲ್ಲೂ ತಿನ್ನುತ್ತಿದ್ದಾರೆ. ಕೋವಿಡ್‌ ವೇಳೆ ಜನರ ಪ್ರಾಣ ತೆಗೆದುಕೊಂಡರು. ಅದಕ್ಕೆ ಸರಿ ಸಮಾನವಾಗಿ ಅಂದು ಕೋವಿಡ್‌ ಸೋಂಕಿತರಿಗೆ ಲಸಿಕೆ ಸಿಗದೇ ಸಾಕಷ್ಟುಸಾವು ಸಂಭವಿಸಿದವು. ನಾವು ಸಹ ಕೋವಿಡ್‌ ಸಂಕಷ್ಟದ ಪರಿಸ್ಥಿತಿಯಲ್ಲಿ ಸಾಕಷ್ಟುಕೆಲಸ ಮಾಡಿದೆವು. ದಾವಣಗೆರೆ ನಗರ, ಜಿಲ್ಲೆಯು ಅಭಿವೃದ್ಧಿ ಪಥದತ್ತ ಹೋಗುವಂತೆ ಮತದಾರರು ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳಿಗೆ ಆಶೀರ್ವದಿಸಬೇಕು ಎಂದು ಕೋರಿದರು.

ನನ್ನ ಮೇಲೆ, ತಮ್ಮ ತಂದೆ ಡಾ.ಶಾಮನೂರು ಶಿವಶಂಕರಪ್ಪ ಇತರರ ಮೇಲೂ ಕೇಸ್‌ ಮಾಡಿದ್ದಾರೆ. ಬಿಜೆಪಿಯವರ ಕೈಯಲ್ಲಿ ಅಧಿಕಾರ ಇದ್ದು, ಕೇಸ್‌ ಮಾಡಿಸುತ್ತಿದ್ದಾರೆ. ಹಿಂದೆ ಜಿಂಕೆ ಪ್ರಕರಣದ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು, ಅದರ ಬಗ್ಗೆ ಈಗ ಮಾತನಾಡಲ್ಲ. ಕೇಂದ್ರ, ರಾಜ್ಯದಲ್ಲಷ್ಟೇ ಅಲ್ಲ, ಸ್ಥಳೀಯ ಬಿಜೆಪಿ ನಾಯಕರು ಎದುರಾಳಿಗಳು, ವಿಪಕ್ಷದವರ ಮೇಲೆ ಕೇಸ್‌ ಹಾಕಿಸುತ್ತಿದ್ದು, ಕೇಂದ್ರ, ರಾಜ್ಯ ನಾಯಕರ ಹಣೆಬರಹದಂತೆ ಜಿಲ್ಲಾ ಬಿಜೆಪಿ ನಾಯಕರದ್ದೂ ಇದೆ ಎಂದು ವ್ಯಂಗ್ಯವಾಡಿದರು. ಹೆದರಿಸಿ, ಜಗತ್ತನ್ನು ಗೆಲ್ಲಬಹುದೆಂದು ಬಿಜೆಪಿಯವರು ಹೊರಟಿದ್ದಾರೆ. ಅರ್ಧ ಮುಖ ಹಿಟ್ಲರ್‌, ಇನ್ನರ್ಧ ಮುಖ ಗಡ್ಡ ಮೀಸೆ ಇದೆ ಎಂದು ಬಿಜೆಪಿ ವಿರುದ್ಧ ಎಸ್‌.ಎಸ್‌.ಮಲ್ಲಿಕಾರ್ಜುನ ಹರಿಹಾಯ್ದರು.

ಕಾಂಗ್ರೆಸ್‌ ಅಭ್ಯರ್ಥಿಗಳ ಆಯ್ಕೆ; ಗೊಂದಲ ಸಹಜ: ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳ ಆಯ್ಕೆಗಾಗಿ ದೆಹಲಿಯಲ್ಲಿ ಸಭೆ ನಡೆಯಲಿದ್ದು, ಗೊಂದಲ ಇರುವ ಕ್ಷೇತ್ರಗಳಲ್ಲಿ ಗೆಲ್ಲುವಂತಹ ಅಭ್ಯರ್ಥಿಗಳ ಹೆಸರನ್ನು ಘೋಷಿಸುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್‌ ಪಕ್ಷದ ಉತ್ತರ ಕ್ಷೇತ್ರ ಅಭ್ಯರ್ಥಿ ಎಸ್‌.ಎಸ್‌.ಮಲ್ಲಿಕಾರ್ಜುನ ತಿಳಿಸಿದರು. ಶಾಬನೂರು ಗ್ರಾಮದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ ಜಿಲ್ಲೆಯ ಉಳಿದ ನಾಲ್ಕು ಕ್ಷೇತ್ರ ಸೇರಿ ರಾಜ್ಯದ ಅನೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಗೊಂದಲವಿದೆ. 

ಇನ್ನೆರಡು ದಿನಗಳಲ್ಲೇ ಪಕ್ಷದ ವರಿಷ್ಠರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು. ಕಾಂಗ್ರೆಸ್‌ ಪಕ್ಷದಲ್ಲಿ ಕೊನೆಯ ಕ್ಷಣದವರೆಗೂ ಗೊಂದಲ ಇದ್ದೇ ಇರುತ್ತದೆ. ನಾಮಪತ್ರ ಸಲ್ಲಿಸುವಾಗಲಷ್ಟೇ ನಮ್ಮ ಕೈಗೆ ಪಕ್ಷ ಬಿ ಫಾರಂ ನೀಡುತ್ತದೆ. ವೀರಶೈವ ಲಿಂಗಾಯತ ಸಮುದಾಯಕ್ಕೆ 75 ಕ್ಷೇತ್ರಗಳ ಟಿಕೆಟ್‌ ನೀಡುವಂತೆ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಡಾ.ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಸಮಾಜದ ನಾಯಕರು ಮನವಿ ಮಾಡಿದ್ದು, ಶೇ.100ರಷ್ಟುಬೇಡಿಕೆಗೆ ವರಿಷ್ಠರು ಸ್ಪಂದಿಸುವ ವಿಶ್ವಾಸವಿದೆ ಎಂದು ಹೇಳಿದರು.

ಕಾಂಗ್ರೆಸ್ಸಿನ ಗ್ಯಾರಂಟಿ ಕಾರ್ಡ್‌ಗೆ ಮೋಸ ಹೋಗಬೇಡಿ: ಸಚಿವ ಹಾಲಪ್ಪ ಆಚಾರ್

ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಜನರೇ ಈ ಸಲ ಒತ್ತಾಯ ಮಾಡಿದ್ದರು. ಅದಕ್ಕಾಗಿ ನಾನು ಸ್ಪರ್ಧೆ ಮಾಡುತ್ತಿದ್ದೇನೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪರ ಜನರ ಒಲವಿದೆ. ನನ್ನ ವಿರುದ್ಧ ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಈ ಸಲ ಯಾರೇ ನಿಂತರೂ ಗೆಲ್ಲುತ್ತೇನೆ.
-ಎಸ್‌.ಎಸ್‌.ಮಲ್ಲಿಕಾರ್ಜುನ, ಉತ್ತರದ ಕಾಂಗ್ರೆಸ್‌ ಅಭ್ಯರ್ಥಿ.

click me!