ಕ್ಷೇತ್ರದಲ್ಲಿ ಈ ಬಾರಿ ಧನಬಲ ಗೆಲ್ಲುತ್ತೋ-ಜನಬಲ ಗೆಲ್ಲುತ್ತೋ ಎಂಬುದನ್ನು ನಿಶ್ಚಯಿಸಲು ನನ್ನ ಕ್ಷೇತ್ರದ ಸ್ವಾಭಿಮಾನವನ್ನು ಇಡೀ ರಾಜ್ಯಕ್ಕೆ ತೋರಿಸುವ ಛಲದಿಂದ ಈ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ಘೋಷಿಸಿದರು.
ಕಡೂರು (ಏ.10): ಕ್ಷೇತ್ರದಲ್ಲಿ ಈ ಬಾರಿ ಧನಬಲ ಗೆಲ್ಲುತ್ತೋ-ಜನಬಲ ಗೆಲ್ಲುತ್ತೋ ಎಂಬುದನ್ನು ನಿಶ್ಚಯಿಸಲು ನನ್ನ ಕ್ಷೇತ್ರದ ಸ್ವಾಭಿಮಾನವನ್ನು ಇಡೀ ರಾಜ್ಯಕ್ಕೆ ತೋರಿಸುವ ಛಲದಿಂದ ಈ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆ ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ಘೋಷಿಸಿದರು. ಪಟ್ಟಣದ ಲಕ್ಷ್ಮೀ ವೆಂಕಟೇಶ್ವರ ಗೀತಾಮಂದಿರದಲ್ಲಿ ಭಾನುವಾರ ನಡೆದ ಸ್ವಾಭಿಮಾನಿ ಕಾರ್ಯಕರ್ತರ ಹಾಗೂ ಅಭಿಮಾನಿಗಳ ಸಮಾವೇಶದಲ್ಲಿ ಈ ವಿಷಯ ಸ್ಪಷ್ಟಪಡಿಸಿದ ಅವರು, ಅಭ್ಯರ್ಥಿಯ ಮಾನದಂಡದ ಅವಲೋಕನ ಆರಂಭವಾಗುವುದೇ ಮೊದಲು ಜಾತಿ, ನಂತರ ಹಣ ಬಲದಿಂದ. ಆದರೆ ನನಗೆ ಜಾತಿ, ಹಣ ಬಲ ಎರಡೂ ಇಲ್ಲ.
ಇರುವುದು ಜನರ ನಿಸ್ವಾರ್ಥ ಪ್ರೀತಿ ಮಾತ್ರ ಎಂದರು. ಕಾಂಗ್ರೆಸ್ ಪಕ್ಷ ನನಗೆ ಟಿಕೆಟ್ ಕೊಡಲಿಲ್ಲ. ಇದನ್ನು ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಇದು ಪ್ರಸ್ತುತ ರಾಜಕಾರಣದ ವ್ಯವಸ್ಥೆಯಾಗಿದೆ. ನಾನು ಮೊದಲು ಸ್ಪರ್ಧಿಸಿದ್ದು ಕಡೂರಿನ ಧೀಮಂತ ನಾಯಕರಾಗಿದ್ದ ಕೆ.ಎಂ. ಕೃಷ್ಣಮೂರ್ತಿಯವರ ವಿರುದ್ಧ. ಜನರು ಪ್ರೀತಿ ಮಾಡಿದರೆ ಒಪ್ಪಿಕೊಳ್ಳುತ್ತಾರೆಂಬ ನಂಬಿಕೆ ನನ್ನದಾಗಿತ್ತು. ಜಾತಿ ಬೇಡ, ಪ್ರೀತಿ ರಾಜಕಾರಣ ಎಂಬ ಅಪ್ಪುಗೆಯೊಂದಿಗೆ 2013ರಲ್ಲಿ ಶಾಸಕನಾದೆ ಎಂದು ತಾವು ನಡೆದುಬಂದ ದಾರಿಯನ್ನು ಸ್ಮರಿಸಿಕೊಂಡರು.
ದೇವೇಗೌಡರ ಸಾವು ಬಯಸಿದವರಿಗೆ ತಕ್ಕ ಪಾಠ ಕಲಿಸಿ: ಎಚ್.ಡಿ.ಕುಮಾರಸ್ವಾಮಿ
ಈ ಬಾರಿ ಚುನಾವಣೆ ಒಂದು ವಿಶೇಷತೆಗೆ ಸಾಕ್ಷಿಕರಿಸಲಿದೆ. ಸ್ವಾಭಿಮಾನಿ ನಡೆಯ ತೀರ್ಮಾನದಿಂದ ಒಂದು ಐತಿಹಾಸಿಕ ಬದಲಾವಣೆಗೆ ಕ್ಷೇತ್ರ ಸನ್ನದ್ಧವಾಗಿದೆ ಎಂಬುದಕ್ಕೆ ಪೂರಕವಾಗಿ ಐವತ್ತು ವರ್ಷಗಳ ನಂಟನ್ನು ಬಿಟ್ಟು ಕಾಂಗ್ರೆಸ್ ಪಕ್ಷ ಸೇರಿದೆ. ಕ್ಷೇತ್ರದಲ್ಲಿ ನನಗೆ ಅವಕಾಶ ಸಿಗುವ ವಿಶ್ವಾಸವಿತ್ತು. ಆದರೆ ಪಕ್ಷ ನನಗೆ ಅವಕಾಶ ನೀಡಲಿಲ್ಲ. ಇದು, ನನ್ನನ್ನು ಪ್ರೀತಿಸುವ ಸಮುದಾಯಗಳ, ಅಭಿಮಾನಿಗಳ ಸ್ವಾಭಿಮಾನಕ್ಕೆ ಬಿದ್ದ ಪೆಟ್ಟು ಎಂದೇ ಭಾವಿಸಿ ಆ ಸ್ವಾಭಿಮಾನವನ್ನು ಉಳಿಸಿಕೊಳ್ಳಲು ಪಕ್ಷೇತರವಾಗಿ ಸ್ಪರ್ಧಿಸುತ್ತೇನೆ. ಪ್ರೀತಿಯಿಂದಲೇ ಜನರ ಬಳಿ ತೆರಳಿ ಹಣ ಸಹಾಯದ ಜೊತೆ ಮತ ಭಿಕ್ಷೆ ಬೇಡುತ್ತೇನೆ.
ಬುಧವಾರ ನಾಮಪತ್ರ ಸಲ್ಲಿಕೆ: ಸ್ವಾಭಿಮಾನವೆಂದರೇನೆಂಬುದನ್ನು ನನ್ನ ಅಭಿಮಾನಿಗಳು ಇಡೀ ರಾಜ್ಯಕ್ಕೆ ತೋರಿಸಲಿದ್ದಾರೆ. ಬುಧವಾರದಂದು ನಾಮಪತ್ರ ಸಲ್ಲಿಕೆ ಮುಂತಾದವುಗಳ ಕುರಿತು ಸಮನ ಮನಸ್ಕರು ಹಾಗೂ ಅಭಿಮಾನಿಗಳೊಂದಿಗೆ ಮಾಹಿತಿ ಹಂಚಿಕೊಳ್ಳುವುದಾಗಿ ಹೇಳಿದರು. ವೈನ್ಸ್ ಸ್ಟೋರ್ ಹಾಲಪ್ಪ ಹಾರ ಹಾಕಿ 50 ಸಾವಿರ ರು. ಕೈಗಿಟ್ಟಿದ್ದನ್ನು ಮರೆಯಲಾಗದು. ದತ್ತನ ಬಳಿ ಹಣವಿಲ್ಲ, ಶಕ್ತಿ ಇಲ್ಲ ಎಂದು ಸರ್ವೆಯಲ್ಲಿ ಹೇಳಿದ್ದಾರಂತೆ ಎಂದ ಅವರು, ನನ್ನ ಖಾಸಗಿ ಬದುಕು ನೋಡದೆ ಜನರ ನಾಡಿಮಿಡಿತ ಅರಿಯಲು 65 ವರ್ಷ ವಯಸ್ಸಿನಲ್ಲಿ ಈ ಕ್ಷೇತ್ರದಲ್ಲಿ 1086 ಕಿ.ಮೀ. ಪಾದಯಾತ್ರೆ ಮಾಡಿದೆ. 2018ರಲ್ಲಿ ನಾನು ನನ್ನ ಹೆಂಡತಿ ಮತದಾನ ಮಾಡಿ ಬಂದು ಸ್ವಲ್ಪ ಹೊತ್ತಿನಲ್ಲಿ ದತ್ತರವರ ಹೆಂಡತಿ ಸತ್ತರೆಂದು ಸುದ್ದಿ ಹಬ್ಬಿಸಿದ್ದರು. ಇಂತಹ ವಿಕೃತ ಮನಸ್ಥಿತಿ ಇರುವುದು ಅಮಾನವೀಯ ಎಂದರು.
ನನ್ನ ಕೊನೆ ಚುನಾವಣೆ: ರಾಜ್ಯದ ಕಾಂಗ್ರೆಸ್ ಮುಖಂಡರು ಟಿಕೆಟ್ ಬಗ್ಗೆ ತಮಗೆ ತಿಳಿಸದೆ ಹೋದರು. ಹಾಗಾಗಿ ನನ್ನ ಮುಂದಿನ ನಡೆ ಕುರಿತು ನಿಮ್ಮ ಅಭಿಪ್ರಾಯ ಪಡೆಯಲು ಈ ಸಮಾವೇಶ. ಸ್ವಾಭಿಮಾನ ಪ್ರೀತಿ ಮತ್ತು ಅಭಿಮಾನದಿಂದ ಗೆದ್ದು ತೋರಿಸಲು ಈ ಚುನಾವಣೆ ಪ್ರಯೋಗ ಶಾಲೆ ಆಗಲಿದೆ. ಹಣ ಬಲವೋ ಜನಬಲವೋ ಎಂಬುದನ್ನು ನೋಡಲು ಈ ಚುನಾವಣೆಯಲ್ಲಿ ನಿಮ್ಮ$ಮನೆಬಾಗಿಲಿಗೆ ಬರುತ್ತೇನೆ. ಇದು ನನ್ನ ಕೊನೆಯ ಚುನಾವಣೆ. ಮತ ನೀಡುವ ಜೊತೆ ಒಂದು ರುಪಾಯಿ ಕೊಡಿ ನನ್ನ ಸಿಂಬಲ್ ಟವಲ್ ಎಂದು ಹೇಳಿ ಮತ ಭಿಕ್ಷೆ ನೀಡಿ ಎಂದು ಕೋರಿದರು.
ಕಡೂರು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಬೆಂಗಳೂರು ಬೆಳಗಾಂನಿಂದ ಕಡೂರಿಗೆ ಬಂದ ಆಡಿಯೋ ಪರಿಣಾಮ ಹಾಗೂ ಕಾಣದ ಕೈಗಳ ತಂತ್ರ ದತ್ತರವರಿಗೆ ಟಿಕೆಟ್ ತಪ್ಪಿಸಿದೆ. ಆಡು ಮುಟ್ಟದ ಸೊಪ್ಪಿಲ್ಲ, ದತ್ತ ಮುಟ್ಟದ ಜಾತಿ ಇಲ್ಲ ಎಂದರು. ಜೆಡಿಎಸ್‌ನಲ್ಲಿ ನಡೆದ ಬೆಳವಣಿಗೆಯಿಂದ ದತ್ತರವರು ಬೇಸತ್ತು ಕಾಂಗ್ರೆಸ್ ಸೇರ್ಪಡೆಯಾದರು. ಇನ್ನೂ ಕಾಲ ಮಿಂಚಿಲ್ಲ ಕಾಂಗ್ರೆಸ್ ಮುಖಂಡರು ನಿರ್ಣಯ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಸಮುದಾಯಗಳ ಮುಖಂಡರಾದ ಎಸ್.ವಿ. ಉಮಾಪತಿ, ವೈ.ಎಸ್.ವಿ ರವಿಪ್ರಕಾಶ್, ಅಣೇಗೆರೆ ರಾಜಣ್ಣ , ಸಿ.ವಿ ಆನಂದ್, ಮಲ್ಲಿಕಾರ್ಜುನ್, ವಿರೂಪಾಕ್ಷ, ಬಿಳುವಾಲ ಪ್ರಕಾಶ್ ಮಾತನಾಡಿದರು.
ಅತಂತ್ರ ಫಲಿತಾಂಶಕ್ಕೆ ಕಾಯ್ತಿದೆ ಜೆಡಿಎಸ್: ಸಿದ್ದರಾಮಯ್ಯ
ಹರಿದು ಬಂದ ಜನ ಸಾಗರ: ಕಡೂರಿನ ಲಕ್ಷ್ಮೀ ವೆಂಕಟೇಶ್ವರ ಗೀತಾ ಮಂದಿರದಲ್ಲಿ ಭಾನುವಾರ ವೈಎಸ್‌ವಿ ದತ್ತ ಅವರು ಆಯೋಜಿಸಿದ್ದ ಸ್ವಾಭಿಮಾನಿಗಳ ಸಭೆಯತ್ತ ಎಲ್ಲರ ಚಿತ್ತ ಹರಿದಿತ್ತು. ಹಾಗಾಗಿ ನಿರೀಕ್ಷೆಗೂ ಮೀರಿ ಜನರು ಬಸವೇಶ್ವರ ವೃತ್ತದಿಂದ ಮೆರವಣಿಗೆಯಲ್ಲಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬಂದು ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೆಂದು ಹೇಳುವ ಜತೆಗೆ ವಿವಿಧ ಸಮುದಾಯದ ಮುಖಂಡರು ತಾವು ಸಂಗ್ರಹ ಮಾಡಿದ್ದ ಹಣವನ್ನು, ಕೆಲವರು ನಗದು ರೂಪದಲ್ಲಿ ಮತ್ತೆ ಕೆಲವರು ಚೆಕ್ ರೂಪದಲ್ಲಿ ದತ್ತರವರ ಟವಲ್‌ಗೆ ಸಮರ್ಪಿಸುವ ಮೂಲಕ ಧನ ಸಹಾಯದ ಭರವಸೆಯನ್ನು ನೀಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.