* ವಿಧಾನ ಪರಿಷತ್ ಚುನಾವಣೆ ಮುಕ್ತಾಯ
* ನಾನು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದೇನೆ ಎಂದ ಜೆಡಿಎಸ್ ಶಾಸಕ
* ಮೂಲಕ ಗೌಪ್ಯ ಮತದಾನ ನಿಯಮ ಉಲ್ಲಂಘಿಸಿದ ಶಾಸಕ
ಕೋಲಾರ, (ಡಿ.10): ಸ್ಥಳೀಯ ಸಂಸ್ಥೆಯಿಂದ ನಡೆಯುವ ವಿಧಾನ ಪರಿಷತ್ ಚುನಾವಣೆ ಮುಕ್ತಾಯವಾಗಿದ್ದು, ಇದೀಗ ಸೋಲು-ಗೆಲುವಿನ ಲೆಕ್ಕಾಚಾರ ಶುರುವಾಗಿದೆ.
ಇದರ ಮಧ್ಯೆ ನಾನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಿದ್ದೇನೆ ಎಂದು ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದು ಅಚ್ಚರಿಗೆ ಕಾರಣವಾಗಿದೆ. ಅಲ್ಲದೇ ಯಾರಿಗೂ ಭಯ ಪಡುವ ಅವಶ್ಯಕತೆ ಎಂದು ಪರೋಕ್ಷವಾಗಿ ಜೆಡಿಎಸ್ ಹೈಕಮಾಂಡ್‌ಗೆ ಟಾಂಗ್ ಕೊಟ್ಟಿದ್ದಾರೆ. ಈ ಮೂಲಕ ಗೌಪ್ಯ ಮತದಾನ ನಿಯಮ ಉಲ್ಲಂಘಸಿದ್ದಾರೆ.
undefined
Karnataka Politics: ಜೆಡಿಎಸ್ ಟಿಕೆಟ್ ಕೈತಪ್ಪಲು 'ಮೈಸೂರು ಮಹಾರಾಜ'ರು ಕಾರಣ: ಸಿಡಿದೆದ್ದ ಸಂದೇಶ್ ನಾಗರಾಜ್
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಇಂದು (ಶುಕ್ರವಾರ) ಕೋಲಾರ ನಗರಸಭೆಯ ಮತಗಟ್ಟೆಯಲ್ಲಿ ಮತದಾನ ಮಾಡಿದ ಬಳಿಕ ಮಾತನಾಡಿದ ಅವರು, ನಾನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಿದ್ದೇನೆ, ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ ಎಂದು ಬಹಿರಂಗವಾಗಿಯೇ ಹೇಳಿದರು.
ನಾನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಿದ್ದೇನೆ. 1994 ರಲ್ಲಿ ನಾನು ಕಾಂಗ್ರೆಸ್ ಪಕ್ಷದಿಂದ ಮಂತ್ರಿ ಆಗಿದ್ದೆ. ಈಗ ಕಾಂಗ್ರೆಸ್ ಗೆ ವೋಟ್ ಹಾಕುವ ಅವಕಾಶ ಸಿಕ್ಕಿದೆ ವೋಟು ಹಾಕಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಯಾರಿಗೂ ಭಯ ಪಡುವ ಅವಶ್ಯಕತೆ ಇಲ್ಲ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಶ್ರೀನಿವಾಸ ಗೌಡ,
ಕೋಲಾರ-ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿದ್ದಾರೆ. ನಮಗೆ ಪ್ರಬಲ ಪೈಪೋಟಿ ಯಾರೂ ಇಲ್ಲ ಎಂದು ಹೇಳಿದರು.
ಇನ್ನು ಬಿಜೆಪಿ ಅಭ್ಯರ್ಥಿ ಹಣ ಹಂಚುತ್ತಿದ್ದಾರೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿ, ಶಾಸಕರು ಹಣ ಹಂಚದೆ ಚುನಾವಣೆ ಎದುರಿಸುವ ಹರಿಶ್ವಂದ್ರರರು ಯಾರೂ ಇಲ್ಲ ಎಂದು ಎಂದರು.
ಗೌಪ್ಯ ಮತದಾನ ನಿಯಮ ಉಲ್ಲಂಘಿಸಿದ ಸಂಸದ
ಕಲಬುರಗಿ-ಯಾದಗಿರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾನದ ವೇಳೆ ಬಿಜೆಪಿ ಸಂಸದ ಜಾಧವ್ ಗೌಪ್ಯ ಮತದಾನ ನಿಯಮ ಉಲ್ಲಂಘನೆ ಮಾಡಿರುವುದು ಮೇಲ್ನೋಟಕ್ಕೆ ಎದ್ದುಕಾಣುತ್ತಿದೆ. ನನ್ನ ಮತ ಬಿಜೆಪಿ ಅಭ್ಯರ್ಥಿ ಬಿ.ಜಿ. ಪಾಟೀಲ್ ಪರ ಚಲಾಯಿಸಿದೆ ಎಂದು ಬಿ.ಜಿ.ಪಾಟೀಲ್ಗೆ ಮತಚಲಾವಣೆ ಬಗ್ಗೆ ಫೇಸ್ಬುಕ್ನಲ್ಲಿ ಸಂಸದ ಡಾ. ಉಮೇಶ್ ಜಾಧವ್ ಪೋಸ್ಟ್ ಒಂದನ್ನು ಚಿತ್ರ ಸಮೇತ ಹಾಕಿದ್ದಾರೆ. ಇದರೊಂದಿಗೆ ಕಲಬುರಗಿ ಕ್ಷೇತ್ರದ ಬಿಜೆಪಿ ಸಂಸದ ಡಾ.ಉಮೇಶ್ ಜಾಧವ್ ತಾವು ವೋಟ್ ಹಾಕಿರುವ ಬಗ್ಗೆ ಬಹಿರಂಗವಾಗಿ ಹೇಳಿದಂತಾಗಿದೆ.
ಉಮೇಶ್ ಜಾಧವ್ ಫೇಸ್ಬುಕ್ ಪೋಸ್ಟ್ ಹೀಗಿದೆ
ಇಂದು ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್ ಗೆ ನಡೆಯುತ್ತಿರುವ ಚುನಾವಣೆಯಲ್ಲಿ ಭಾಗವಹಿಸಿ ಜಿಲ್ಲೆಯ ತಾಲೂಕಾ ಪಂಚಾಯತ ಕಛೇರಿಗೆ ತೆರಳಿ ನನ್ನ ಮತವನ್ನು ಚಲಾಯಿಸಿದೆ. ಈ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಭಾರಿ ಬಹುಮತದಿಂದ ಗೆಲ್ಲುವ ವಿಶ್ವಾಸ ನಮಗಿದೆ. #MLCElections
20 ಕ್ಷೇತ್ರಗಳ 25 ಸ್ಥಾನಗಳಿಗೆ ಚುನಾವಣೆ
ದಕ್ಷಿಣ ಕನ್ನಡ, ಧಾರವಾಡ, ವಿಜಯಪುರ, ಬೆಳಗಾವಿ, ಬಳ್ಳಾರಿ, ಮೈಸೂರಿನ ತಲಾ 2 ಕ್ಷೇತ್ರ, ಚಿಕ್ಕಮಗಳೂರು, ಕಲಬುರಗಿ, ಉತ್ತರ ಕನ್ನಡ, ಬೀದರ್, ರಾಯಚೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಡ್ಯ, ಶಿವಮೊಗ್ಗ, ಹಾಸನ, ಚಿತ್ರದುರ್ಗ, ಕೋಲಾರ, ತುಮಕೂರು ಸೇರಿದಂತೆ ಒಟ್ಟು 20 ಕ್ಷೇತ್ರಗಳಲ್ಲಿ 25 ಸ್ಥಾನಗಳಿಗೆ ಇಂದು(ಡಿ.10) ಚುನಾವಣೆ ನಡೆದಿದೆ.
ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ 20 ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸಿದ್ದು. ಜೆಡಿಎಸ್ 6 ಕ್ಷೇತ್ರದಲ್ಲಿ ಮಾತ್ರ ಸ್ಪರ್ಧೆ ಮಾಡಿದೆ. ಚುನಾವಣೆ ಫಲಿತಾಂಶ ಡಿಸೆಂಬರ್ 14 ರಂದು ಹೊರಬೀಳಲಿದೆ.
ಕಾಂಗ್ರೆಸ್ ಸೇರ್ಪಡೆಗೆ ಶ್ರೀನಿವಾಸ್ ಸಜ್ಜು
ಹೌದು.. ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಈ ಹಿಂದೆ ಕಾಂಗ್ರೆಸ್ ನಲ್ಲಿಯೇ ಇದ್ದ ಶ್ರೀನಿವಾಸ್ ಗೌಡ ಇದೀಗ ಮತ್ತೆ ಮಾತೃಪಕ್ಷಕ್ಕೆ ಹೋಗಲು ಮುಂದಾಗಿದ್ದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಚರ್ಚೆ ಮಾಡಿದ್ದಾರೆ.