ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ಕಾಂಗ್ರೆಸ್‌ನಲ್ಲಿನ ಅವರ ಬೆಂಬಲಿಗರು ಬ್ಯಾಟಿಂಗ್ ಮಾಡುತ್ತಿರುವ ಬೆನ್ನಲ್ಲೇ ಸ್ವತಃ ಸಿದ್ದರಾಮಯ್ಯ ಅವರೇ ತಾವು ಮತ್ತೆ ಮುಖ್ಯಮಂತ್ರಿ ಆಗುವ ಇಂಗಿತವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ನ.28): ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ಕಾಂಗ್ರೆಸ್‌ನಲ್ಲಿನ ಅವರ ಬೆಂಬಲಿಗರು ಬ್ಯಾಟಿಂಗ್ ಮಾಡುತ್ತಿರುವ ಬೆನ್ನಲ್ಲೇ ಸ್ವತಃ ಸಿದ್ದರಾಮಯ್ಯ ಅವರೇ ತಾವು ಮತ್ತೆ ಮುಖ್ಯಮಂತ್ರಿ ಆಗುವ ಇಂಗಿತವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ. ರಾಜ್ಯ ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಕುರಿತ ಬಹಿರಂಗ ಹೇಳಿಕೆಗಳು ಮುಂದುವರೆದಿದ್ದು, ಭಾನುವಾರ ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ಸಿದ್ದರಾಮಯ್ಯ ಸಮ್ಮುಖದಲ್ಲೇ ಹೆಬ್ಬಾಳ ಶಾಸಕ ಬೈರತಿ ಸುರೇಶ್ ಅವರು ‘ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ’ ಎಂದು ಘೋಷಣೆ ಕೂಗಿದರೆ, ಮಾಜಿ ಸಚಿವ ಎಚ್.ಎಂ. ರೇವಣ್ಣ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುವ ಸ್ಥಿತಿ ನಿರ್ಮಿಸೋಣ ಎಂದು ಹೇಳಿದ್ದಾರೆ.
ಮಾಜಿ ಸಚಿವ ಹಾಗೂ ಹಾಲಿ ಶಾಸಕರ ಹೇಳಿಕೆಗಳ ಬೆನ್ನಲ್ಲೇ ಅದೇ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ಮೊದಲ ಬಾರಿ ಮುಖ್ಯಮಂತ್ರಿ ಆಗಿ ಅಧಿಕಾರ ಕೊಟ್ಟಂತಹ ಸಂದರ್ಭದಲ್ಲಿ ಜನಪರ ಕಾರ್ಯಕ್ರಮಗಳ ಮೂಲಕ ನಾನು ಶೋಷಿತ, ಹಿಂದುಳಿದ ವರ್ಗಗಳ ಪರ ಹೋರಾಟ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಅಧಿಕಾರ ಸಿಕ್ಕರೆ ಇದೇ ರೀತಿಯ ಆಡಳಿತ ನೀಡುತ್ತೇನೆ’ ಎಂದು ಹೇಳುವ ಮೂಲಕ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಎಲ್ಲಿ ನಿಂತರೂ ಗೆಲ್ಲುತ್ತಾರೆ: ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್
ನಗರದ ದೇವರಾಜ ಅರಸು ಭವನದಲ್ಲಿ ಭಾನುವಾರ ‘ಕಾಳಿದಾಸ ಮತ್ತು ಸಂಗೊಳ್ಳಿ ರಾಯಣ್ಣ ವಿದ್ಯಾರ್ಥಿ ನಿಲಯದ ಹಳೆಯ ವಿದ್ಯಾರ್ಥಿಗಳ ಸಂಘದ ಉದ್ಘಾಟನೆ ಮತ್ತು ಭಕ್ತ ಶ್ರೇಷ್ಠ ಶ್ರೀ ಕನಕದಾಸ ಜಯಂತ್ಯುತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಆವರು ಮಾತನಾಡಿದರು. ನಾನು ಎರಡನೇ ಬಾರಿ ಮುಖ್ಯಮಂತ್ರಿಯಾಗಬಹುದಾಗಿದ್ದ ಸಂದರ್ಭದಲ್ಲಿ ಜಾತಿ, ಧರ್ಮದ ವಿರೋಧಿಯೆಂದು ಅಪಪ್ರಚಾರ ಮಾಡಿದರು. ಜನರು ಕೂಡ ಇದನ್ನೇ ನಂಬಿದರು. ಆದರೆ, ವಾಸ್ತವವಾಗಿ ನಾನು ಯಾವುದೇ ಜಾತಿ ವಿರೋಧಿಯಲ್ಲ. ಇಂತಹ ವಿಚಾರಗಳ ಬಗ್ಗೆ ಜನರು ಜಾಗ್ರತೆಯಿಂದ ಇರಬೇಕು ಎಂದು ಕಿವಿ ಮಾತು ಹೇಳಿದರು.
ನನ್ನ ಅರ್ಹತೆ ನೋಡಿ ಬೆಂಬಲಿಸಿ- ಸಿದ್ದು: ನನ್ನನ್ನು ಕಣ್ಮುಚ್ಚಿ ಬೆಂಬಲಿಸಬೇಡಿ. ನಾನು ಅರ್ಹನೇ ಅಥವಾ ಇಲ್ಲವಾ ಎಂಬುದನ್ನು ಪ್ರಶ್ನಿಸಿಕೊಳ್ಳಿ. 5 ವರ್ಷ ಅಧಿಕಾರದಲ್ಲಿದ್ದಾಗ ಜಾತ್ಯತೀತವಾಗಿ ಕೆಲಸ ಮಾಡಿದ್ದೇನೆ. ನಾನು ಇಲ್ಲದಿದ್ದರೆ ಕುರುಬರ ಸಂಘವನ್ನು ಮಾರಿಬಿಡುತ್ತಿದ್ದರು. ಸಂಘವನ್ನು ಉಳಿಸುವ ಕೆಲಸಕ್ಕೆ ಮುಂದಾದ ವೇಳೆ ಕೊಲೆ ಬೆದರಿಕೆ ಬಂದಿತ್ತು. ಆಗಲೂ ಹಿಂಜರಿಯದೆ ಸಂಘವನ್ನು ಉಳಿಸಿದ್ದೇನೆ. ಹೀಗಾಗಿ, ಸಮುದಾಯದವರು ಜಾಗ್ರತರಾಗಬೇಕು. ನನ್ನ ಅರ್ಹತೆಯನ್ನು ನೋಡಿ ಬೆಂಬಲಿಸಿ ಎಂದು ಮನವಿ ಮಾಡಿದರು.
ಸಿಎಂ ಆಗುವ ಸ್ಥಿತಿ ನಿರ್ಮಿಸೋಣ: ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಎಚ್.ಎಂ. ರೇವಣ್ಣ, ‘ಪ್ರಬಲ ಸಮುದಾಯ ಸಿದ್ದರಾಮಯ್ಯ ಅವರ ಬೆನ್ನ ಹಿಂದೆ ನಿಂತಿದೆ. ಹೀಗಾಗಿ ಬೇರೆ ಬೇರೆ ಸಮುದಾಯಗಳವರೂ ಸಹ ಇವರ ಪರವಾಗಿ ನಿಂತಿದ್ದಾರೆ. ಅದಕ್ಕಾಗಿ ಮತ್ತೊಮ್ಮೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗುವ ಪರಿಸ್ಥಿತಿಯನ್ನು ನಾವೆಲ್ಲರೂ ನಿರ್ಮಿಸೋಣ. ಈ ನಿಟ್ಟಿನಲ್ಲಿ ಕುರುಬರು ಒಗ್ಗೂಡಿ ಕೆಲಸ ಮಾಡಬೇಕು’ ಎಂದು ಕರೆ ನೀಡಿದರು.
ಸಿದ್ದು ಮುಂದಿನ ಸಿಎಂ- ಶಾಸಕ ಬೈರತಿ: ಇನ್ನು ಹೆಬ್ಬಾಳ ಕ್ಷೇತ್ರದ ವಿ.ನಾಗೇನಹಳ್ಳಿಯಲ್ಲಿ ನಡೆದ ಕನಕ ಜಯಂತಿ ಕಾರ್ಯಕ್ರಮದಲ್ಲಿ ‘ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ’ ಎಂಬ ಘೋಷಣೆಗಳು ಮೊಳಗಿದವು. ಕನಕ ಜಯಂತಿ ಮುಖ್ಯ ಆಯೋಜಕರೂ ಆದ ಸಿದ್ದರಾಮಯ್ಯ ಆಪ್ತ ಶಾಸಕರಾದ ಬೈರತಿ ಸುರೇಶ್ ಅವರೂ ‘ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ’ ಎಂದು ಘೋಷಣೆ ಕೂಗಿದರು. ಬಳಿಕ ಸ್ವಾಗತ ಭಾಷಣ ಮಾಡುವಾಗಲೂ ಇದೇ ಘೋಷಣೆಗಳು ಕೇಳಿ ಬಂದವು. ಇದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕಾಂಗ್ರೆಸ್ಸಲ್ಲಿ ಸಿಎಂ ಪೈಪೋಟಿ: ಕಳೆದ ಕೆಲವು ದಿನಗಳಿಂದ ತಣ್ಣಗಾಗಿದ್ದ ‘ಮುಂದಿನ ಸಿಎಂ’ ವಿಚಾರ ಕಾಂಗ್ರೆಸ್ಸಿನಲ್ಲಿ ಮತ್ತೆ ಭುಗಿಲೆದ್ದಿದೆ. ಒಕ್ಕಲಿಗರು ಸಿಎಂ ಆಗುವ ಅವಕಾಶ ಬಂದಿದೆ ಎಂದು ಒಕ್ಕಲಿಗರ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೇಳುವ ಮೂಲಕ ಪರೋಕ್ಷವಾಗಿ ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಸಿದ್ದು ಕೂಡ ಪರೋಕ್ಷವಾಗಿ ಮತ್ತೆ ಸಿಎಂ ಆಗುವ ಆಸೆ ಹೊರಹಾಕಿದ್ದಾರೆ. ಅವರ ಬೆಂಬಲಿಗರೂ ಬಹಿರಂಗವಾಗಿ ಘೋಷಣೆ ಕೂಗಿದ್ದಾರೆ. ಇದರಿಂದಾಗಿ ಕಾಂಗ್ರೆಸ್ಸಿನೊಳಗಿನ ಸಿಎಂ ಪೈಪೋಟಿ ತಾರಕಕ್ಕೇರಿದಂತಾಗಿದೆ.
ರಾಜ್ಯದಲ್ಲಿ ಅಶಾಂತಿಗೆ ಸಿದ್ದರಾಮಯ್ಯ ಕಾರಣ: ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ
ಮೊದಲ ಬಾರಿ ಮುಖ್ಯಮಂತ್ರಿ ಆಗಿ ಅಧಿಕಾರ ಕೊಟ್ಟಂತಹ ಸಂದರ್ಭದಲ್ಲಿ ಜನಪರ ಕಾರ್ಯಕ್ರಮಗಳ ಮೂಲಕ ನಾನು ಶೋಷಿತ, ಹಿಂದುಳಿದ ವರ್ಗಗಳ ಪರ ಹೋರಾಟ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಅಧಿಕಾರ ಸಿಕ್ಕರೆ ಇದೇ ರೀತಿಯ ಆಡಳಿತ ನೀಡುತ್ತೇನೆ.
- ಸಿದ್ದರಾಮಯ್ಯ ವಿಪಕ್ಷ ನಾಯಕ