ಮತಗಳ್ಳತನಕ್ಕೆ 2019ರಲ್ಲಿ ನಾನು ಬಲಿ ಆಗಿದ್ದೇನೆ: ಮಲ್ಲಿಕಾರ್ಜುನ ಖರ್ಗೆ ಆರೋಪ

Published : Aug 09, 2025, 05:59 AM IST
Mallikarjun Kharge son health condition

ಸಾರಾಂಶ

ನರೇಂದ್ರ ಮೋದಿ ಅವರು 2024ರಲ್ಲಿ ಕಳ್ಳತನ ಮಾಡಿ ಪ್ರಧಾನಿಯಾಗಿದ್ದಾರೆ. ನರೇಂದ್ರ ಮೋದಿ-ಅಮಿತ್‌ ಶಾ ಚುನಾವಣಾ ಆಯೋಗದ ನೆರವಿನೊಂದಿಗೆ ಚುನಾವಣೆ ಗೆದ್ದಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪ ಮಾಡಿದ್ದಾರೆ.

ಬೆಂಗಳೂರು (ಆ.09): ನನ್ನ ಜೀವನದಲ್ಲಿ 12 ಲೋಕಸಭಾ ಚುನಾವಣೆಗಳಲ್ಲಿ ಜಯಗಳಿಸಿದ್ದು, ಒಂದೇ ಒಂದು ಬಾರಿ ಸೋಲುಂಡಿದ್ದೇನೆ. 2019ರಲ್ಲಿ ಎದುರಾದ ಈ ಸೋಲು ಬಿಜೆಪಿ ಹಾಗೂ ಚುನಾವಣಾ ಆಯೋಗ ನಡೆಸಿದ ಮತಗಳ್ಳತನದಿಂದ ಆಗಿದ್ದು ಎಂಬ ಅನುಮಾನ ನನಗಿದೆ. ಹೀಗಂತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇರ ಆರೋಪ ಮಾಡಿದ್ದಾರೆ. ಅಲ್ಲದೆ, ಈ ರೀತಿಯ ಮತಗಳ್ಳತನ ನಡೆಸಿ ಕಳ್ಳತನದಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಈ ಷಡ್ಯಂತ್ರದ ವಿರುದ್ಧ ಮಾಡು ಇಲ್ಲವೇ ಮಡಿ ಹೋರಾಡ ನಡೆಸಬೇಕು ಎಂದು ಅವರು ಕರೆ ನೀಡಿದರು.

ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಕೆಪಿಸಿಸಿಯಿಂದ ಆಯೋಜಿಸಲಾಗಿದ್ದ ‘ನಮ್ಮ ಮತ, ನಮ್ಮ ಹಕ್ಕು, ನಮ್ಮ ಹೋರಾಟ’ ಪ್ರತಿಭಟನಾ ಸಮಾವೇಶದಲ್ಲಿ, ಚುನಾವಣಾ ಆಯೋಗ ಮತ್ತು ಬಿಜೆಪಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಹಲವು ಆರೋಪಗಳನ್ನು ಮಾಡಿದರು. ನರೇಂದ್ರ ಮೋದಿ ಅವರು 2024ರಲ್ಲಿ ಕಳ್ಳತನ ಮಾಡಿ ಪ್ರಧಾನಿಯಾಗಿದ್ದಾರೆ. ನರೇಂದ್ರ ಮೋದಿ-ಅಮಿತ್‌ ಶಾ ಚುನಾವಣಾ ಆಯೋಗದ ನೆರವಿನೊಂದಿಗೆ ಚುನಾವಣೆ ಗೆದ್ದಿದ್ದಾರೆ. ಹೀಗಾಗಿ ಕೇಂದ್ರದಲ್ಲಿರುವುದು ಕಳ್ಳತನದ ಸರ್ಕಾರ. ನೈತಿಕ ಬಲವಿಲ್ಲದ ಸರ್ಕಾರ. ಜನ ಬೆಂಬಲವಿಲ್ಲದ ಸರ್ಕಾರ. ಅದನ್ನು ಕೆಳಗಿಸಲೇಬೇಕು. ದೇಶದಲ್ಲಾಗಿರುವ ಮತ್ತಷ್ಟು ಚುನಾವಣಾ ಅಕ್ರಮವನ್ನು ಬಯಲಿಗೆಳೆದು ಜನರಿಂದ ಛೀಮಾರಿ ಹಾಕಿಸಿ, ಸರ್ಕಾರ ಕೆಳಗಿಳಿಯುವಂತೆ ಮಾಡುತ್ತೇವೆ ಎಂದು ಠೇಂಕರಿಸಿದರು.

ಮತಗಳ್ಳತನದಿಂದ ನನಗೆ ಸೋಲು: 2019ರಲ್ಲಿ ಕಲಬುರಗಿಯಲ್ಲಿ ನಾನು ಸೋಲಲು ಮತಗಳ್ಳತನವೇ ಕಾರಣ ಎಂದು ನೇರ ಆರೋಪ ಮಾಡಿದ ಅವರು, ನನ್ನ ರಾಜಕೀಯ ಜೀವನದಲ್ಲಿ 13 ಚುನಾವಣೆಗಳನ್ನು ಎದುರಿಸಿದ್ದೇನೆ. ಅದರಲ್ಲಿ 1 ಲೋಕಸಭಾ ಚುನಾವಣೆಯಲ್ಲಿ ಮಾತ್ರ ಸೋಲುಂಡಿದ್ದೇನೆ. ಇದಕ್ಕೆ ಮತಗಳ್ಳತನ ಕಾರಣ ಎಂಬ ಬಲವಾದ ಅನುಮಾನವಿದೆ. ಕಲಬುರಗಿ ಕ್ಷೇತ್ರ ವ್ಯಾಪ್ತಿಯಲ್ಲೇ 1 ಲಕ್ಷಕ್ಕೂ ಹೆಚ್ಚಿನ ನಕಲಿ ಮತದಾನ ನಡೆದಿದೆ ಎಂಬುದು ನನ್ನ ಗುಮಾನಿ. ಆಗ ನಮಗೆಲ್ಲ ಅದರ ಬಗ್ಗೆ ಸರಿಯಾಗಿ ತಿಳಿಯಲಿಲ್ಲ. ಈಗಿನ ಚುನಾವಣೆಯ ನಂತರ ಮತಗಳ್ಳತನದ ಮಾಹಿತಿ ಬಂದಿದೆ. ಇದನ್ನು ಇಲ್ಲಿಗೆ ಬಿಡದೆ ದೇಶದೆಲ್ಲೆಡೆ ಮತದಾನದ ಹಕ್ಕಿಗೆ ಚ್ಯುತಿ ತಂದಿರುವುದನ್ನು ಬಹಿರಂಗ ಮಾಡುತ್ತೇವೆ ಎಂದು ಹೇಳಿದರು.

ಸೋಮವಾರ ಕೇಂದ್ರ ಆಯೋಗಕ್ಕೆ ದೂರು: ಮತಗಳ್ಳತನ ವಿರುದ್ಧ ಹೋರಾಟದ ಭಾಗವಾಗಿ ಸೋಮವಾರ ಇಂಡಿಯಾ ಮೈತ್ರಿಕೂಟದ ಎಲ್ಲ ಸಂಸದರಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಸಲಾಗುವುದು. ಅದರ ಜತೆಗೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರನ್ನೂ ನೀಡುತ್ತೇವೆ. ನಮಗೆ ಬೇಕಿರುವ ದಾಖಲೆಗಳನ್ನು ನೀಡುವಂತೆ ಕೋರುತ್ತೇವೆ. 1942ರ ಆ.9ರಂದು ಮಹಾತ್ಮ ಗಾಂಧಿ ಅವರು ಕ್ವಿಟ್‌ ಇಂಡಿಯಾ ಚಳವಳಿ ಆರಂಭಿಸಿದರು. ಅದೇ ರೀತಿ ನಮ್ಮ ಸಂವಿಧಾನ, ಪ್ರಜಾಪ್ರಭುತ್ವ ರಕ್ಷಣೆಗೆ ಮಾಡು ಇಲ್ಲವೇ ಮಡಿ ಎಂಬ ಧ್ಯೇಯದೊಂದಿಗೆ ಹೋರಾಟ ಮಾಡಬೇಕಾಗುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!