
ಉಡುಪಿ (ಸೆ.17): ರಾಜ್ಯದಲ್ಲಿ ಬಿಜೆಪಿಯಿಂದ ವಿಪಕ್ಷ ನಾಯಕನ ಆಯ್ಕೆಯ ವಿಚಾರ ಅದು ನಮ್ಮ ರೇಡಾರ್ ಪರಿಧಿಯೊಳಗಿಲ್ಲ, ಅಲ್ಲಿಗೆ ನಮ್ಮದು ನಾಟ್ ರೀಚೇಬಲ್ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಉಡುಪಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರಿಷ್ಠರು ವಿಪಕ್ಷ ನಾಯಕನನ್ನು ಆಯ್ಕೆ ಮಾಡದೆ ಇರುವುದಕ್ಕೆ ನನಗೆ ಹೇಳುವುದಕ್ಕೆ ಕಾರಣಗಳಿಲ್ಲ, ಏನಾದರೂ ಲಾಜಿಕ್ ಇರಬಹುದು, ನನಗೂ ಬಹಳ ಗೊತ್ತಿಲ್ಲ, ಆಯ್ಕೆ ಮಾಡಬೇಕಾಗಿತ್ತು, ಈಗಾಗಲೇ ಲೇಟ್ ಆಗಿದೆ. ಪಕ್ಷದ ಹಿರಿಯರು ಸುಖಾಸುಮ್ಮನೆ ತಡ ಮಾಡುತ್ತಿಲ್ಲ, ಏನೋ ಇರಬಹುದು ಎಂಬ ವಿಶ್ವಾಸ ಇದೆ ಎಂದರು.
ರಾಜ್ಯಾಧ್ಯಕ್ಷರಾಗಿ ನಳಿನ್ ಕುಮಾರ್ ಕಟೀಲ್ ಇದ್ದಾರೆ. ವಿಧಾನಸಭಾ ಚುನಾವಣಾ ಫಲಿತಾಂಶ ಹಿನ್ನೆಲೆಯಲ್ಲಿ ಅವರು ನನ್ನನ್ನು ಜವಾಬ್ದಾರಿಯಿಂದ ಮುಕ್ತ ಮಾಡಿ ಎಂದು ವಿನಂತಿಸಿದ್ದರು. ಅವರ ನೇತೃತ್ವದಲ್ಲಿ ಸಂಘಟನೆ ಕೆಲಸ ಮಾಡುತ್ತಿದ್ದೇವೆ ಎಂದವರು ಹೇಳಿದರು. ಮೈತ್ರಿ ಅಂತಿಮ ಅಗಿಲ್ಲ: ಲೋಕಸಭಾ ಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಮಧ್ಯೆ ಮೈತ್ರಿ ಆಗಿಲ್ಲ. ಯಡಿಯೂರಪ್ಪ ಮತ್ತು ದೇವಗೌಡರ ಹೇಳಿಕೆಯಿಂದ ಬಿಜೆಪಿ, ಜೆಡಿಎಸ್ ಮೈತ್ರಿಯ ಪ್ರಯತ್ನ ವಿಚಾರ ತಿಳಿದಿದೆ. ಆದರೆ ಅಂತಿಮ ನಿರ್ಣಯ ಆಗಿಲ್ಲ ಎಂಬುದು ಅವರಿಬ್ಬರ ಹೇಳಿಕೆ ಸಾಕ್ಷೀಕರಿಸಿದೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಗೋವಿಂದ ಬಾಬು ಹಾಗೆ ಭಾವಿಸಿದ್ದು ತಪ್ಪು: ಬಿಜೆಪಿಯಲ್ಲಿ ದುಡ್ಡು ಕೊಟ್ಟವರಿಗೆ ಟಿಕೆಟ್ ಸಿಗುವುದಾಗಿದ್ದರೆ ಬೈಂದೂರಿನಲ್ಲಿ ಗೋವಿಂದ ಬಾಬು ಪೂಜಾರಿಯವರಿಗೆ ನೀಡಬೇಕಿತ್ತು. ಆದರೆ ಪಕ್ಷ ಕೊಟ್ಟದ್ದು ಗುರುರಾಜ್ ಗಂಟಿಹೊಳೆಯವರಿಗೆ, ಸುಳ್ಯದಲ್ಲಿ ಖಾತೆಯಲ್ಲಿ ಕೆಲವು ಸಾವಿರ ರು. ಇಲ್ಲದಿದ್ದ ಭಾಗೀರಥಿ ಮರುಳ್ಯಾ ಅವರಿಗೆ ನೀಡಿದ್ದೇವೆ. ಗೋವಿಂದ ಬಾಬು ಅವರು ದುಡ್ಡು ಕೊಟ್ಟರೆ ಟಿಕೆಟ್ ಸಿಗುತ್ತದೆ ಎಂದು ಭಾವಿಸಿದ್ದೇ ತಪ್ಪು, ಅವರು ಹಾಗೇ ಭಾವಿಸುತ್ತಿದ್ದಾರೆ ಎಂದು ಗೊತ್ತಾಗಿಯೇ ಅವರಿಗೆ ಮೋಸ ಮಾಡಿದ್ದಾರೆ ಎಂದು ಚೈತ್ರಾ ಕುಂದಾಪುರ ಪ್ರಕರಣೆಯ ಬಗ್ಗೆ ಸಿ.ಟಿ. ರವಿ ಪ್ರತಿಕ್ರಿಯಿಸಿದರು.
ಕಾವೇರಿ ನೀರಿನ ವಿಚಾರದಲ್ಲಿ ಕಾಂಗ್ರೆಸ್ ದುರಹಂಕಾರದ ಮಾತುಗಳನ್ನಾಡುತ್ತಿದೆ: ಅಶ್ವತ್ಥನಾರಾಯಣ
ಪದವಿಧರ ಶಿಕ್ಷಕರ ಎರಡೂ ಕ್ಷೇತ್ರ ಗೆಲ್ಲುತ್ತೇವೆ: ಪದವಿಧರ ಶಿಕ್ಷಕರ ಕ್ಷೇತ್ರದ ಚುನಾವಣೆ ಸಂಬಂಧಪಟ್ಟಂತೆ ಮತದಾರರ ನೊಂದಣಿಗೆ ಚುನಾವಣಾ ಆಯೋಗ ಆಕ್ಟೋಬರ್ ಮೊದಲ ವಾರದಲ್ಲಿ ಅನುಮತಿ ನೀಡುವ ಸಾಧ್ಯತೆ ಇದೆ. ಆದ್ದರಿಂದ ಬಿಜೆಪಿ ಈಗಾಗಲೇ ನೈಋತ್ಯ ಪದವೀಧರ ಕ್ಷೇತ್ರದ ಮತದಾರರ ನೋಂದಣಿಗೆ ಆರು ಜಿಲ್ಲೆಗಳಲ್ಲಿ ದಾವಣಗೆರೆಯ 2, ಶಿವಮೊಗ್ಗ 7, ಉಡುಪಿ - ಚಿಕ್ಕಮಗಳೂರಿನ ತಲಾ 5, ದ.ಕ.ದ 8, ಕೊಡಗಿನ 2 ವಿಧಾನಸಭಾ ಕ್ಷೇತ್ರಗಳಿಗೆ ತಂಡ ರಚಿಸಲಾಗಿದೆ. ಎರಡೂ ಕ್ಷೇತ್ರಗಳನ್ನು ಬಿಜೆಪಿ ಗೆಲ್ಲುತ್ತದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.