ಹಿಂದುತ್ವದ ರಕ್ಷಣೆ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಸಲುವಾಗಿ ಕಾರ್ಕಳ ವಿಧಾನಸಭೆಯಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ನನ್ನ ಬಳಿ ಹಣವಿಲ್ಲ, ನಾನು ಭಿಕ್ಷೆ ಬೇಡುತ್ತಿದ್ದೇನೆ.
ಮೈಸೂರು (ಏ.05): ಹಿಂದುತ್ವದ ರಕ್ಷಣೆ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಸಲುವಾಗಿ ಉಡುಪಿ ಜಿಲ್ಲೆ ಕಾರ್ಕಳ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಆದರೆ, ನನ್ನ ಬಳಿ ಹಣವಿಲ್ಲ, ನಾನು ಭಿಕ್ಷೆ ಬೇಡುತ್ತಿದ್ದೇನೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಬುಧವಾರ ಮಾತನಾಡಿದ ಅವರು, ಉಡುಪಿ ಜಿಲ್ಲೆ ಕಾರ್ಕಳ ವಿಧಾನಸಭೆ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದೇನೆ. ಹಿಂದುತ್ವದ ರಕ್ಷಣೆ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಸಲುವಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಕಾರ್ಕಳ ಕ್ಷೇತ್ರದಲ್ಲಿ ನನಗೆ ನಿಶ್ಚಿತವಾಗಿಯೂ ಗೆಲುವು ಸಿಗಲಿದೆ. ಶಿಷ್ಟರ ರಕ್ಷಣೆಯಾಗಲಿ, ದುಷ್ಟರಿಗೆ ಶಿಕ್ಷೆಯಾಗಲಿ ಎಂದು ಬೇಡಿಕೊಳ್ಳಲು ಚಾಮುಂಡಿ ಬೆಟ್ಟಕ್ಕೆ ಹೋಗಿ ಆಶೀರ್ವಾದ ಪಡೆದುಕೊಂಡು ಹೋಗಲು ಬಂದಿದ್ದೆ ಎಂದು ಹೇಳಿದರು.
undefined
ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದರೂ ನನಗೆ ಸ್ವಂತ ಮನೆಯಿಲ್ಲ, ಬ್ಯಾಂಕ್ ಅಕೌಂಟ್ ಇಲ್ಲ. ನನ್ನ ಬಳಿ ಹಣವೂ ಇಲ್ಲ, ನಾನು ಭಿಕ್ಷೆ ಬೇಡುತ್ತಿದ್ದೇನೆ. ನನ್ನ ಬಳಿ ಒಂದಷ್ಟು ಬಟ್ಟೆಗಳಿವೆ ಅಷ್ಟೇ. ಹೆಂಡತಿ ಮಕ್ಕಳು ಯಾರು ಇಲ್ಲ. ನನಗೆ ಹಣ ಆಸ್ತಿ ಮಾಡುವ ಉದ್ದೇಶವಿಲ್ಲ. ನಾನು ಹಿಂದುತ್ವ, ಹಿಂದುಗಳ ರಕ್ಷಣೆಗೆ ಹೋರಾಟ ಮಾಡುತ್ತಿದ್ದೇನೆ. ಒಂದು ಓಟು ಕೊಡಿ 100 ರೂಪಾಯಿ ಕೊಡಿ ಎಂದು ಕೇಳುತ್ತಿದ್ದೇನೆ. ನಾನು ಹೋದಲ್ಲೆಲ್ಲಾ ನೂರು ರೂಪಾಯಿ ನೋಟು ಕೊಡುತ್ತಿರುವ ಜನರು ಓಟು ನೀಡುವುದು ಖಚಿತ ಎಂದು ಭರವಸೆ ನೀಡುತ್ತಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿ ಎರಡೂ ಪಕ್ಷಗಳು ನನಗೆ ಎದುರಾಳಿಗಳಾಗಿವೆ. ಆದರೂ ನಾನು ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇನೆ ಎಂದು ಹೇಳಿದರು.
ನನ್ನ ಬೆಂಬಲ ಸಿಎಂ ಬೊಮ್ಮಾಯಿಗೆ: ಕಿಚ್ಚ ಸುದೀಪ ಬಹಿರಂಗ ಹೇಳಿಕೆ
ಬಿಜೆಪಿಯಲ್ಲಿಯೂ ಭ್ರಷ್ಟಾಚಾರ ಇದೆ: ಇನ್ನು ನಮ್ಮ ರಾಜ್ಯದ ನಾಯಕರು ಹಣ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ಕಾರ್ಕಳ ಶಾಸಕ ಸುನೀಲ್ ಕುಮಾರ್ 2004ರಲ್ಲಿ ಚುನಾವಣೆ ಸ್ಪರ್ಧೆ ಮಾಡಿದಾಗ ಅವರ ಬಳಿ ಏನು ಇರಲಿಲ್ಲ. ಆದರೆ ಈಗ ಅವರ ಆಸ್ತಿ 1000 ಕೋಟಿ ದಾಟಿದೆ ಅದು ಎಲ್ಲಿಂದ ಬಂತು. ನಾನು ಈಗ ಪಕ್ಷೇತರವಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ. ಭ್ರಷ್ಟಾಚಾರ ಬಿಜೆಪಿಯಲ್ಲಿಯೂ ಇದೆ. ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ನಮ್ಮ ನಾಯಕರೇ ತಡೆಯುತ್ತಿದ್ದಾರೆ. ಕೇಂದ್ರದ ನಾಯಕರಿಗೆ ಇದರ ಮಾಹಿತ ಇದ್ಯೋ ಇಲ್ವೋ ಗೊತ್ತಿಲ್ಲ ಎಂದು ಹೇಳಿದರು.
ಬಿಜೆಪಿ ಸೇರ್ಪಡೆಗೆ ನಮ್ಮವರಿಂದಲೇ ಅಡ್ಡಿ: ನನ್ನ ಸ್ಪರ್ಧೆಯಿಂದ ಬೆಜೆಪಿಗೆ ತೊಂದರೆ ಇಲ್ಲ. ನಾನು ಬಿಜೆಪಿ ವಿರೋಧಿ ಅಲ್ಲ. ನನಗೆ ಮೋದಿಯೇ ನಾಯಕ. ಯುಪಿ ಸಿಎಂ ಯೋಗಿ ಆದಿತ್ಯನಾಥ್ ರೀತಿಯ ಅಧಿಕಾರ ಬೇಕು. ನಮಗೆ ಬಿಜೆಪಿ ಮೂಲ ಪಕ್ಷ. ನನ್ನ ಸ್ಪರ್ಧೆಯಿಂದ ಬಿಜೆಪಿಗೆ ತೊಂದರೆಯಾಗಲ್ಲ. ಹಾಗೆ ಅಂದುಕೊಂಡಿದ್ದರೆ ಅವರ ಮೂರ್ಖತನ. ಬಿಜೆಪಿ ಪಕ್ಷ ನಿಷ್ಟಾವಂತ ಹಿಂದೂಪರ ಕಾರ್ಯಕರ್ತರ ಪಕ್ಷ. ಬಿಜೆಪಿಯನ್ನ ಪ್ರಶ್ನಿಸುವಂತ ಅಧಿಕಾರ ನಮಗೆ ಇದೆ. ನಾನು ಕಾರ್ಕಳದಿಂದ ಗೆದ್ದರೆ ಬಿಜೆಪಿ ಸೇರುತ್ತೇನೆ. ಇನ್ನು ಭ್ರಷ್ಟಾಚಾರದ ವಿರುದ್ದ ಹೋರಾಟ ಮಾಡಲು ನನ್ನ ಪ್ರಯತ್ನವಿದೆ. ನಾವು ಕುಡುಕ ಗಂಡನನ್ನ ಮದ್ವೆಯಾಗಿದ್ದೆವೆ. ಅವನನ್ನ ಸರಿ ಮಾಡುವುದು ನಮ್ಮ ಕೆಲಸ ಎಂದು ಹೇಳಿದರು.
ದೇಗುಲದ ಹುಂಡಿ ಹಣ ಶಾದಿ ಮಹಲ್ ನಿರ್ಮಾಣಕ್ಕೆ ಬಳಕೆ: ನಂಜನಗೂಡು ಶ್ರೀಕಂಠೇಶ್ವರನ ಹುಂಡಿಯಲ್ಲಿ ಸಂಗ್ರಹವಾಗಿದ್ದ ಹಣವನ್ನು ಸ್ಥಳೀಯ ಶಾಸಕರು ಶಾದಿ ಮಹಲ್ ನಿರ್ಮಾಣಕ್ಕೆ ಬಳಕೆ ಮಾಡಿಕೊಳ್ಳಲು ಮುಂದಾಗಿರುವುದು ಖಂಡನೀಯ. ಶಾಸಕರ ಈ ನಿಲುವು ಸರಿಯಾದ ಕ್ರಮವಲ್ಲ. ಹೀಗಾಗಿ ಈ ನಿರ್ಧಾರವನ್ನು ಕೂಡಲೇ ಕೈಬಿಡಬೇಕು. ಧಾರ್ಮಿಕ ದತ್ತಿ ಇಲಾಖೆ ನಿಯಮಕ್ಕೆ ವಿರುದ್ಧವಾಗಿ ದೇಗುಲದ ಹುಂಡಿ ಹಣವನ್ನು ಶಾದಿ ಮಹಲ್ ನಿರ್ಮಾಣಕ್ಕೆ ನೀಡಬಾರದು. ದೇಗುಲದ ಹುಂಡಿ ಹಣವನ್ನು ಹಿಂದೂಗಳ ದೇವಾಲಯಗಳ ಅಭಿವೃದ್ಧಿಗೆ ಮಾತ್ರ ಬಳಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಕುರಾನ್ ಪಠಣ ಮಾಡಿ ಸುಳ್ಳು ಹೇಳಾಗುತ್ತಿದೆ: ಹಾಸನ ಜಿಲ್ಲೆ ಬೇಲೂರು ಚನ್ನಕೇಶವ ಸ್ವಾಮಿ ರಥೋತ್ಸವದ ವೇಳೆ ಕುರಾನ್ ಪಠಣ ಮಾಡಿದ್ದು ಅಕ್ಷಮ್ಯ ಅಪರಾಧ. ಅಲ್ಲಿನ ಸ್ಥಳೀಯ ಜೆಡಿಎಸ್ ನಾಯಕರ ಒತ್ತಡಕ್ಕೆ ಮಣಿದು ಕುರಾನ್ ಪಠಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಚುನಾವಣೆ ದೃಷ್ಟಿಯಿಂದ ಕುರಾನ್ ಪಠಣಕ್ಕೆ ಜೆಡಿಎಸ್ ನಾಯಕರು ಒತ್ತಡ ಹೇರಿದ್ದಾರೆ. ಈ ಮೂಲಕ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಲಾಗಿದೆ. ಹಾಗಾಗಿ ಅಲ್ಲಿನ ಜಿಲ್ಲಾಡಳಿತ, ಚುನಾವಣಾ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪುನೀತ್ ಕೆರೆಹಳ್ಳಿ ವಿರುದ್ಧ ಎಫ್‌ಐಆರ್ ದಾಖಲಿಸಬೇಡಿ: SDPI ಒಂದು ದೇಶದ್ರೋಹ ಪಕ್ಷವಾಗಿದೆ. ಕರ್ನಾಟಕದಲ್ಲಿ 30ಕ್ಕೂ ಹೆಚ್ಚು ಕೊಲೆಯಾದ ನಿದರ್ಶನವಾಗಿದೆ. ಪ್ರವೀಣ್ ನೆಟ್ಟರ್ ಕೊಲೆಯ ಪ್ರಮುಖ ಆರೋಪಿಯನ್ನ SDPI ಅಭ್ಯರ್ಥಿ ಅಂತ ಘೋಷಣೆ ಮಾಡಿದೆ. ಕೊಲೆ ಮಾಡೋರಿಗೆ ಎಸ್‌ಡಿಪಿಐ ಬೆಂಬಲ ಕೊಡುತ್ತಿದೆ. ಚುನಾವಣಾ ಆಯೋಗ ಈ ವಿಚಾರದ ಕಡೆ ಗಮನ ಕೊಡಬೇಕು. ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದೆ. ಆದರೂ ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡಲಾಗುತ್ತಿದೆ. ಅಕ್ರಮ ಗೋ ಸಾಗಾಟ ತಡೆಗಟ್ಟಲು ಮುಂದಾದ ಪುನಿತ್ ಕೆರೆಹಳ್ಳಿ ವಿರುದ್ಧ ಎಫ್ ಐ ಆರ್ ದಾಖಲಿಸಿರುವುದು ಸರಿಯಾದ ಕ್ರಮವಲ್ಲ ಎಂದರು.