ನಾನು ಯಾವುದೇ ತಪ್ಪು ಮಾಡಿಲ್ಲ, ತನಿಖೆಗೆ ಸಿದ್ಧ: ಮುರುಗೇಶ ನಿರಾಣಿ

By Kannadaprabha News  |  First Published Sep 1, 2024, 9:30 PM IST

ನನಗೆ ಕೋರ್ಟ್‌, ಪೊಲೀಸ್‌ ಇಲಾಖೆ, ಲೋಕಾಯುಕ್ತ ಸೇರಿದಂತೆ ಯಾರಿಂದಲೂ ನಮಗೆ ನೋಟಿಸ್ ಬಂದಿಲ್ಲ. ಕಿರುಚಿತ್ರ ವಿಚಾರವಾಗಿ ಕೋರ್ಟ್‌ಗೆ ಹೋದಾಗಲೂ ಎಲ್ಲೂ ನನ್ನ ಹೆಸರು ಪ್ರಸ್ತಾಪವೇ ಇಲ್ಲ ಎಂದ ಮಾಜಿ ಸಚಿವ ಮುರುಗೇಶ ನಿರಾಣಿ 


ಬಾಗಲಕೋಟೆ(ಸೆ.01):  ನಾನು ಯಾವುದೇ ತಪ್ಪು ಮಾಡಿಲ್ಲ. ನಮಗೆ ಯಾವುದೇ ನೋಟಿಸ್ ಬಂದಿಲ್ಲ. ಪ್ರಾಸಿಕ್ಯೂಷನ್ ಸೇರಿ ಯಾವುದೇ ತನಿಖೆಗೂ ಸಿದ್ಧವಾಗಿದ್ದೇನೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು. 

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಾಸಿಕ್ಯೂಷನ್ ಸಂಬಂಧ ಸ್ಪಷ್ಟೀಕರಣ ನೀಡಿದ ಅವರು, 2022ರಲ್ಲಿ ನಮ್ಮ ಸರ್ಕಾರ ಇದ್ದಾಗ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಮಾಡಿದ್ದೆವು. ಆಗ ಅಧಿಕಾರಿಗಳು 5 ನಿಮಿಷದ ಕಿರುಚಿತ್ರಕ್ಕೆ ನಾಲ್ಕೂವರೆ ಕೋಟಿ ನಿಗದಿ ಮಾಡಿ ಆರ್ಡರ್ ಮಾಡಿದ್ರು. ನನ್ನ ಗಮನಕ್ಕೆ ಬರುತ್ತಲೇ 2022 ಅಕ್ಟೋಬರ್ 21ರಂದೇ ಪತ್ರ ಬರೆದು ನಿಲ್ಲಿಸಿದ್ದೆ. ಸಿಎಂ ಸೇರಿದಂತೆ ಮುಖ್ಯ ಕಾರ್ಯದರ್ಶಿ, ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ಬಂದ್ ಮಾಡಿಸಿದ್ದೆ. ವಿಡಿಯೋ ಮಾಡಿದ ವ್ಯಕ್ತಿ ಇದೇ ಗುರುತಾಗಿ ಕೋರ್ಟ್‌ಗೆ ಹೋಗುತ್ತಾನೆ. ದ್ವಿಸದಸ್ಯ ಪೀಠ ನಮ್ಮ ಪತ್ರವನ್ನು ಮಾನ್ಯ ಮಾಡುತ್ತದೆ. ಸರ್ಕಾರದ ಹಣ ಪೋಲಾಗಬಾರದೆಂದು ಕೋರ್ಟ್‌ ಅಂದೇ ಆದೇಶ ಮಾಡುತ್ತದೆ. ನನ್ನ ವಿರುದ್ಧ ಯಾವುದೇ ಆಪಾದನೆ ಇಲ್ಲ. ಮುರುಗೇಶ ನಿರಾಣಿಯಿಂದ ಹಾನಿಯಾಗೋದು ತಪ್ಪಿದೆ ಹೊರತು, ಸರ್ಕಾರದಕ್ಕಾಗಲಿ, ಇಲಾಖೆಗೆ ಆಗಲಿ ನಷ್ಟ ಆಗಿಲ್ಲ ಎಂದು ವಿವರಣೆ ನೀಡಿದರು.

Tap to resize

Latest Videos

ನನ್ನ ತಂಟೆಗೆ ಬಂದವರನ್ನ ಹಿಂದೆಯೂ ಬಿಟ್ಟಿಲ್ಲ ಮುಂದೆಯೂ ಬಿಡಲ್ಲ: ಏಕವಚನದಲ್ಲೇ ನಿರಾಣಿಗೆ ಎಂ.ಬಿ. ಪಾಟೀಲ್‌ ತಿರುಗೇಟು ..!

ನಾನು ತಪ್ಪು ಮಾಡಿದ್ದರೆ ತನಿಖೆ ಎದುರಿಸುವೆ:

ಪ್ರಾಸಿಕ್ಯೂಷನ್ ವಿಚಾರವನ್ನೇ ಕಾಂಗ್ರೆಸ್ ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತಿದೆ ಎಂದು ಆಪಾದಿಸಿದ ಅವರು, ಸಿಎಂ ಸಿದ್ದು ವಕೀಲರು, ಡಿಸಿಎಂ ಡಿಕೆಶಿ ರಾಜಕೀಯ ಧುರೀಣರಿದ್ದಾರೆ. ಇವರಿಗೆಲ್ಲಾ 40, 50 ವರ್ಷದ ಅನುಭವ ಇದೆ. ವಿಷಯಾಂತರ ಮಾಡೋದು ಸರಿಯಲ್ಲ. ನಮ್ಮ ಬಿಜೆಪಿಯ 4 ಜನರ ಹೆಸರು ಹೇಳುತ್ತಿದ್ದಾರೆ. ಹಣ್ಣು ಇದ್ದ ಗಿಡಕ್ಕೆ ಕಲ್ಲು ಹೊಡೆಯೋದು ಅಂತರಲ್ಲಾ ಹಾಗೆ ಕಾಂಗ್ರೆಸ್ ಪಕ್ಷ ಮಾಡುತ್ತಿದೆ. ಹೇಗಾದ್ರೂ ಮಾಡಿ ಪ್ರಾಸಿಕ್ಯೂಷನ್ ಮಾಡಿ, ನಿಮ್ಮಲ್ಲೇನು ಶುದ್ಧ ಅಂತ ಕೇಳುತ್ತಿದ್ದಾರೆ. ನೀವೆಲ್ಲಾ ಬುದ್ಧಿವಂತರಿದ್ದೀರಿ ನಿರಾಣಿಯವರೇ ಇಂತಹ ತಪ್ಪು ಮಾಡಿದ್ದೀರಿ ಅಂತ ತೋರಿಸಲಿ ಪ್ರಾಸಿಕ್ಯೂಷನ್ ಇದೆ ಅಂತ ಹೇಳಿ ಅದನ್ನ ಎದುರಿಸಲಿಕ್ಕೆ ನಾನು ಧೈರ್ಯವಾಗಿದ್ದೇನೆ ಎಂದರು.
ಆ ತನಿಖೆ ಎದುರಿಸಲು ಸಹಕಾರ ಮಾಡುತ್ತೇನೆ. ಆದರೆ ಮೊದಲು ನಿಮ್ಮ ಮೇಲಿರೋದನ್ನು ನೀವು ನೋಡಿಕೊಳ್ಳಿ. ಯಾವುದೇ ತಪ್ಪಿಲ್ಲ ಅಂತ ಆಧಾರ ಸಮೇತ ನೀಡಿದ್ದೇನೆ. ನೀವು ಕೊಡಿ ನೋಡೋಣ ಎಂದು ಸವಾಲು ಹಾಕಿದ ಅವರು, ತನಿಖೆಯಾಗಿ ನಿರ್ದೋಷಿ ಅಂದಾಗ ಮತ್ತೆ ನೀವು ಸಿಎಂ ಆಗಿ ಮುಂದುವರೆಯಿರಿ. ನಿಮ್ಮಲ್ಲಿ ಆಪಾದನೆ ಇದೆ. ತನಿಖೆ ಎದುರಿಸಿ ಸಿಎಂ ಅವರೇ ಎಂದು ತಿಳಿಸಿದರು.

ನನಗೆ ಕೋರ್ಟ್‌, ಪೊಲೀಸ್‌ ಇಲಾಖೆ, ಲೋಕಾಯುಕ್ತ ಸೇರಿದಂತೆ ಯಾರಿಂದಲೂ ನಮಗೆ ನೋಟಿಸ್ ಬಂದಿಲ್ಲ. ಕಿರುಚಿತ್ರ ವಿಚಾರವಾಗಿ ಕೋರ್ಟ್‌ಗೆ ಹೋದಾಗಲೂ ಎಲ್ಲೂ ನನ್ನ ಹೆಸರು ಪ್ರಸ್ತಾಪವೇ ಇಲ್ಲ ಎಂದರು.

ನಮ್ಮ ಬಗ್ಗೆ ಮಾತಾಡುವ ಯೋಗ್ಯತೆ ನಿಮಗಿಲ್ಲ:

ಸಚಿವ ಎಂ.ಬಿ.ಪಾಟೀಲ್ ಅವರ ವಿರುದ್ಧ ವಾಗ್ದಾಳಿ ನಡೆಸಿದ ನಿರಾಣಿ, ಎಂ.ಬಿ.ಪಾಟೀಲ್ ಉತ್ತರ ಕರ್ನಾಟಕ ಲೀಡರ್. 40 ವರ್ಷ ರಾಜಕಾರಣ ಮಾಡಿದವರು. ಛಲವಾದಿ ನಾರಾಯಣಸ್ವಾಮಿ ಅವರಿಗೆ ಶೆಡ್ ಗಿರಾಕಿ ಅಂದಿದ್ದೀರಿ, ಖರ್ಗೆ ವಿರುದ್ಧ ಮಾತನಾಡಲು ಒಂದೇ ಕಮ್ಯೂನಿಟಿ ಬಿಟ್ಟೀರಿ ಅಂದ್ರಿ, ಶೆಡ್ ಕಟ್ಟೋಕೆ ಆಗಿಲ್ಲ ಅಂತೀರಿ. ನನ್ನ ವಿರುದ್ಧ ಮಾತನಾಡುವ ನೀವು ಯಾರು ಹೇಳಿದ್ದಕ್ಕೆ ಬಂದಿದ್ದಿರಿ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ನಮಗೆ ಮಾತನಾಡುವ ಯೋಗ್ಯತೆ ನಿಮಗೇನಿದೆ ಎಂದು ಪ್ರಶ್ನೆ ಮಾಡಿದರು.

ಬಿಎಲ್‌ಡಿ ತೊರೆದು ನಿಮ್ಮದೇ ಸಂಸ್ಥೆ ಕಟ್ಟಿ:

ಕಾರಜೋಳ ಗ್ರಾಮದಲ್ಲಿ 350 ಎಕರೆ ಜಮೀನು ಸಕ್ಕರೆ ಕಾರ್ಖಾನೆಗೆ ತೆಗೆದುಕೊಂಡಿರಿ. ಎಸ್ಸಿ ಮತ್ತು ಎಸ್ಟಿ ಜನರಿರುವ ಊರಿನಲ್ಲಿ ಹೆಚ್ಚಿನ ಜಮೀನು ತೆಗೆದುಕೊಂಡಿದ್ದಿರಿ. ಸಕ್ಕರೆ ಕಾರ್ಖಾನೆ ಕಟ್ಟಿ ಬೇರೆ ರಾಜ್ಯದವರಿಗೆ ಮಾರಾಟ ಮಾಡಿದಿರಿ. ರೈತರಿಗೆ ಸುಳ್ಳು ಹೇಳಿ ಮೋಸ ಮಾಡಿದಿರಿ ಎಂದು ಆರೋಪಿಸಿದ ಅವರು, ನಿರಾಣಿ ಯೋಗ್ಯತೆ ಏನಿದೆ ಎಂತ ಬಾಗಲಕೋಟೆ, ವಿಜಯಪುರ ಜನರಿಗೆ ಗೊತ್ತಿದೆ. ನಿಮ್ಮ ಬಿಎಲ್‌ಡಿಎ ಸಂಸ್ಥೆ ಬೇರೆಯವರು ಕಟ್ಟಿದ್ದು, ನೀವು ಬಂದು ಕೂತಿರಿ. ಅಲ್ಲಿ ರಾಜೀನಾಮೆ ಕೊಟ್ಟು ಹೊರಬಂದು ಸಂಸ್ಥೆ ಕಟ್ಟಿ ಎಂದು ಸವಾಲು ಹಾಕಿದರು.

ಹೌದು, ನಾನು ದನಾ ಕಾಯೋನೆ

ಮುರುಗೇಶ ನಿರಾಣಿಯಿಂದ ಕೈಗಾರಿಕಾ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಸಚಿವ ಎಂ.ಬಿ.ಪಾಟೀಲ್ ಅವರ ಆರೋಪಕ್ಕೆ ಉತ್ತರಿಸುವ ಸಂದರ್ಭದಲ್ಲಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ ನಿರಾಣಿ, ಮತ್ತೊಬ್ಬರ ಯೋಗ್ಯತೆ ಬಗ್ಗೆ ಮಾತಾಡುತ್ತಿರಿ. ನಾವೆಲ್ಲ ದನಾ ಕಾಯೋರು ಅಂತೀರಿ. ಹೌದು ನಾನು ದನಾ ಕಾಯೋನೆ. ನಾನು ನಿಮ್ಮ ತರಾ ಅಲ್ಲ. ಯಾರೋ ಕಟ್ಟಿರುವ ಬಿಎಲ್‌ಡಿ ಸಂಸ್ಥೆಗೆ ಹುತ್ತಿನಲ್ಲಿ ಹಾವಾಗಿ ಬಂದು ಕೂತು ಅಧ್ಯಕ್ಷನಾಗಿ ಮಜಾ ಮಾಡ್ತಿದ್ದೀಯಾ ಗೌಡ. ಅದಕ್ಕೆ ಮತ್ತೊಬ್ಬರ ಬಗ್ಗೆ ಅಪಾದನೆ ಮಾಡೋದಿದ್ರೆ ಬಹಳ ಎಚ್ಚರ ವಹಿಸು. ಅವರ ಕಡೆ ಒಂದು ಬೆರಳು ಬಂದ್ರೆ ನಿನ್ನ ಕಡೆ ನಾಲ್ಕು ಬೆರಳು ಬಂದಿರುತ್ತವೆ ಎಂಬುವುದನ್ನು ಮರೆಯಬೇಡ ಎಂದು ಎಚ್ಚರಿಸಿದರು.

ನಿನ್ನ ಅಧಿಕಾರ, ಗೌಡಕಿ ದರ್ಪ ನನ್ಮುಂದೆ ತೋರಿಸಬೇಡ

ನಿನಗೆ ತಾಕತ್ತು ಇದ್ರೆ ಬಂಥನಾಳ ಸ್ವಾಮೀಜಿ ಕಟ್ಟಿದ ಸಂಸ್ಥೆಯನ್ನು ಸಾಮರ್ಥ್ಯ (ಕ್ಯಾಪೆಬೆಲ್‌) ಇರುವಂತವರಿಗೆ ಸಂಸ್ಥೆ ಕೊಟ್ಟು, ಹೊರಗಡೆ ಬಂದು ಒಂದು ಫ್ಯಾಕ್ಟರಿನೋ ಸಂಸ್ಥೆನೋ ಕಟ್ಟಿ ತೋರಿಸು. ಆವಾಗ ನಿನ್ನ ಯೋಗ್ಯತೆ ಗೊತ್ತಾಗುತ್ತದೆ ಎಂದು ಸಚಿವ ಎಂಬಿಪಾ ವಿರುದ್ಧ ಏಕವಚನಲದಲ್ಲಿಯೇ ವಾಗ್ದಾಳಿ ನಡೆಸಿದರು.

ನೀನು ಹಿಂದುಳಿದವರ ಬಗ್ಗೆ ಪಂಚಮಸಾಲಿಗಳ ಬಗ್ಗೆ ನಿನ್ನ ಗೌಡಕಿ ದರ್ಪ ಅಧಿಕಾರದ ದರ್ಪವನ್ನು ನಮ್ಮ ಮುಂದೆ ಇನ್ನುಮುಂದೆ ತೋರಿಸಬೇಡ. ನಾನು ಒಂಬತ್ತು ವರ್ಷ ಮಂತ್ರಿ ಆಗಿದ್ದೀನಿ. ನಿನಗಿಂತ 15 ವರ್ಷ ಮೊದಲೇ ಮಂತ್ರಿ ಆಗಿದ್ದೀನಿ. ನನ್ನ ಜೀವ ಜಾಲಾಡಿಸ್ತೀನಿ ಅಂತಿಯಲ್ಲ, ಜೀವ ಜಾಲಾಡಿಸೋಕೆ ಸಾಕಷ್ಟಿವೆ. ನೀನು ತಗಿ, ಒಂದಾದ್ರೂ ನನ್ನ ತಪ್ಪು ತೋರಿಸು. ಅದಕ್ಕೆ ನಾನು ತಲೆ ಬಾಗ್ತಿನಿ. ಗಾಳಿಯಲ್ಲಿ ಗುಂಡು ಹಾರಿಸಲು ಹೋಗಬೇಡ. ಒಂದು ನೆನಪು ಇಟ್ಟಿಕೋ ಮಿಸ್ಟರ್ ಎಂ.ಬಿ.ಪಾಟೀಲ್, ನೀನು ಗ್ಲಾಸ್ ಹೌಸ್‌ನಲ್ಲಿ ಇದ್ದಿಯ. ನೀನು ಗ್ಲಾಸ್ ಹೌಸ್‌ನಲ್ಲಿ ಇದ್ದುಕೊಂಡು ಮತ್ತೊಬ್ಬರ ಮನಿಗೆ ಕಲ್ಲು ಹೊಡೆದ್ರೆ ಬಹಳ ಹುಷಾರಾಗಿ ಲೆಕ್ಕಾ ಹಾಕಿ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.

ಪ್ರಾಸಿಕ್ಯೂಷನ್‌ಗೆ ಮತ್ತೆ ಮನವಿ: ಗಣಿ ರೆಡ್ಡಿ, ನಿರಾಣಿ ತನಿಖೆ, ರಾಜ್ಯಪಾಲಗೆ ಲೋಕಾ ಸ್ಪಷ್ಟನೆ

ಕಾಲ ಬರಲಿ ನಿನ್ನ ಭ್ರಷ್ಟಾಚಾರ ಒಂದೊಂದಾಗಿ ಇಡ್ತಿವಿ:

ನೀರಾವರಿ ಸಚಿವನಾಗಿದ್ದಾಗ ಏನೇನ್ ಮಾಡಿದಿ, ಏನೇನು ಭ್ರಷ್ಟಾಚಾರ ಇದೆ. ಒಂದೂವರೆ ವರ್ಷದಿಂದ ಕೆಐಎಡಿಬಿನಲ್ಲಿ ಯಾರ್ ಯಾರ ಹೆಸರಿನಲ್ಲಿ ಪ್ಲಾಟ್ ಡಮ್ಮಿಯಾಗಿ ತಗೊಂಡು ನಿನ್ನ ಹೆಸರಿನಲ್ಲಿದೆ ಅನ್ನೋದು ನೆನಪು ಮಾಡಿಕೋ. ನಿಂದೆ ಓನರ್‌ಶಿಪ್ ಬೇರೆಯವರ ಹೆಸರಿನಲ್ಲಿ ತೆಗೆದುಕೊಂಡಿದಿಯಾ. ಕಾಲ ಬರಲಿ ಎಲ್ಲವನ್ನೂ ಒಂದೊಂದಾಗಿ ಮುಂದೆ ಇಡುತ್ತೇನೆ. ನಿನ್ನ ಪ್ಲೇಟ್‌ನಲ್ಲಿ ಹೆಗ್ಗಣ ಬಿದ್ದಿದೆ. ಮತ್ತೊಬ್ಬರ ಪ್ಲೇಟ್‌ನಲ್ಲಿ ನೊಣ ತೆಗೆಯೋ ಕೆಲಸವನ್ನು ನೀನು ಮತ್ತು ಕಾಂಗ್ರೆಸ್‌ನವರು ಮಾಡ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

ಭ್ರಷ್ಟಾಚಾರ ಮಾಡಿಲ್ಲಂತ ತಾಯಿ ಮೇಲೆ ಪ್ರಮಾಣ ಮಾಡು:

ನೀನು ಏ ನಾರಾಯಣಸ್ವಾಮಿ, ಲೆಹರ್ ಸಿಂಗ್ ಜಿ ಅಂತ ಮಾತಾಡೋ ಸ್ಟೈಲ್, ನಿನ್ನ ಯೋಗ್ಯತೆ ಏನಿದೆ ಅಂತ ನೀನು ನೋಡ್ಕೋಪಾ. ಪುಣ್ಯಾತ್ಮರು ಕಟ್ಟಿದ ಸಂಸ್ಥೆಯಲ್ಲಿ ನೀನು ಅಧ್ಯಕ್ಷ ಆಗಿ ಮಜಾ ಮಾಡ್ತಿದ್ದೀಯಾ ಹೊರತು ನಿನ್ನ ಪರಿಶ್ರಮ ಏನಿದೆ? ನಿನ್ನ ಕೊಡುಗೆ ಕರ್ನಾಟಕಕ್ಕೆ ಏನಿದೆ? ಅದನ್ನ ಮೊದಲು ಹೇಳು. ಆಮೇಲೆ ನಮ್ಮ ಬಗ್ಗೆ ಆಗಲಿ. ಪ್ರಸಂಗ ಬರಲಿ ಎಲ್ಲ ಬಿಚ್ಚಿಡ್ತಿನಿ. ನಾನು ನಾನೇ ನೀರು ಕಾಸಿ ಜಳಕಾ ಮಾಡಿ ಬಂದಿರುವವನು. ನೀನು ಎರಕೊಂಡವರ ಬಡ್ಯಾಗ (ಕೆಳಗೆ) ಜಳಕಾ ಮಾಡುವ ವ್ಯಕ್ತಿ. ನೀರಾವರಿ ಸಚಿವನಾದಾಗ ಮತ್ತು ಈಗ ಕೈಗಾರಿಕಾ ಸಚಿವನಾದಾಗ ಒಂದು ಭ್ರಷ್ಟಾಚಾರ ಮಾಡಿಲ್ಲ ಅಂತ ನಿನ್ನ ತಾಯಿ ತಂದೆ ಮೇಲೆ ಪ್ರಮಾಣ ಮಾಡಿ ಹೇಳು ಎಂದು ಸವಾಲು ಹಾಕಿದರು. ಸರ್ಕಾರದ ಆಸ್ತಿಯನ್ನು ಬೇರೆಯವರ ಹೆಸರಿನಿಂದ ನಾನು ತೆಗೆದುಕೊಂಡಿಲ್ಲ ಅಂತ ಪ್ರಮಾಣ ಮಾಡು. ನೀನು ಹೇಳಿದನ್ನ ನಾನು ಕೇಳೋಕೆ ತಯಾರಿದ್ದೇನೆ. ಇದು ನನ್ನ ಸವಾಲು ಇದು ಎಂದರು.

click me!