ಕೆಲವರು ನನ್ನ ಹಾಗೂ ಸಿದ್ದರಾಮಯ್ಯನವರ ನಡುವೆ ಭಿನ್ನಾಭಿಪ್ರಾಯವಿದೆ ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಸೇರಿದಂತೆ ಯಾರೊಂದಿಗೂ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಪಕ್ಷದ ವಿಚಾರದಲ್ಲಿ ನಾನೇ ಹಲವು ಬಾರಿ ಸೋತಿದ್ದೇನೆ.
ತುಮಕೂರು (ಮೇ.15): ‘ಕೆಲವರು ನನ್ನ ಹಾಗೂ ಸಿದ್ದರಾಮಯ್ಯನವರ ನಡುವೆ ಭಿನ್ನಾಭಿಪ್ರಾಯವಿದೆ ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ ಸೇರಿದಂತೆ ಯಾರೊಂದಿಗೂ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಪಕ್ಷದ ವಿಚಾರದಲ್ಲಿ ನಾನೇ ಹಲವು ಬಾರಿ ಸೋತಿದ್ದೇನೆ. ಸಿದ್ದರಾಮಯ್ಯನವರ ಸರ್ಕಾರದಲ್ಲಿ ನಾನು ಮಂತ್ರಿಯಾಗಿಲ್ಲದೇ ಇದ್ದಾಗ ತಾಳ್ಮೆಯಿಂದ ಇರಲಿಲ್ಲವೇ?. ಅವರಿಗೆ ನಾನು ಸಹಕಾರ ಕೊಟ್ಟಿದ್ದೇನೆ. ಅವರೂ ಅವಕಾಶ, ಸಹಕಾರ ಕೊಡುವ ವಿಶ್ವಾಸವಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಅಲ್ಲದೆ, ಅಜ್ಜಯ್ಯನ ಆಶೀರ್ವಾದದಿಂದ ಇನ್ನೂ ಎತ್ತರಕ್ಕೆ ಹೋಗುವ ನಂಬಿಕೆಯಿದೆ.
ನೋಡೋಣ, ಮುಖ್ಯಮಂತ್ರಿ ಆಗುತ್ತೇನೆ ಎಂಬ ವಿಶ್ವಾಸವಿದೆ ಎನ್ನುವ ಮೂಲಕ ಸಿಎಂ ಆಗುವ ಬಯಕೆ ವ್ಯಕ್ತಪಡಿಸಿದ್ದಾರೆ. ಚುನಾವಣೆಯಲ್ಲಿ ಪಕ್ಷ ಬಹುಮತ ಪಡೆದ ಹಿನ್ನೆಲೆಯಲ್ಲಿ ತಿಪಟೂರಿನ ನೊಣವಿನಕೆರೆಯ ಕಾಡಸಿದ್ಧೇಶ್ವರ ಮಠಕ್ಕೆ ಭಾನುವಾರ ಕುಟುಂಬ ಸಮೇತರಾಗಿ ಭೇಟಿ ನೀಡಿದ ಡಿಕೆಶಿ, ಕರಿವೃಷಭ ಶ್ರೀಗಳ ಆಶೀರ್ವಾದ ಪಡೆದರು. ಪತ್ನಿ ಉಷಾ, ಪುತ್ರ ಆಕಾಶ್, ಪುತ್ರಿ ಐಶ್ವರ್ಯ, ಅಳಿಯ ಅಮಾರ್ಥ್ಯ ಸಿದ್ದಾಥ್‌ರ್, ಪುತ್ರಿ ಆಭರಣ ಸೇರಿದಂತೆ ಕುಟುಂಬ ಸಮೇತ ಆಗಮಿಸಿ, ಶ್ರೀಗಳ ಗದ್ದುಗೆಯ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.
ಸಿಎಂ ಹುದ್ದೆ: ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ವಾದವೇನು?
ಬಳಿಕ, ಸುದ್ದಿಗಾರರ ಜೊತೆ ಮಾತನಾಡಿ, ಶಾಸಕಾಂಗ ಪಕ್ಷದ ಸಭೆಯಲ್ಲಿ ಹಾಗೂ ವರಿಷ್ಠರ ತೀರ್ಮಾನದಂತೆ ಮುಖ್ಯಮಂತ್ರಿ ಆಯ್ಕೆ ಮಾಡಲಾಗುತ್ತದೆ. ಪಕ್ಷಕೋಸ್ಕರ ಹಗಲು, ರಾತ್ರಿ ದುಡಿದಿದ್ದೇನೆ. ಸಿದ್ದರಾಮಯ್ಯನವರ ಸರ್ಕಾರದ ವೇಳೆ ನಾನು ಮಂತ್ರಿಯಾಗಿಲ್ಲದೇ ಇದ್ದಾಗ ತಾಳ್ಮೆಯಿಂದ ಇರಲಿಲ್ಲವೇ? ಅವರಿಗೆ ನಾನು ಸಹಕಾರ ಕೊಟ್ಟಿದ್ದೇನೆ. ಅವರೂ ಸಹಕಾರ ಕೊಡುವ ವಿಶ್ವಾಸವಿದೆ. ಮಂಡ್ಯ ಜಿಲ್ಲೆಯ ಎಲ್ಲಾ ಶಾಸಕರು, ಸ್ಥಳೀಯ ಶಾಸಕರು, ಬೇಳೂರು ಗೋಪಾಲಕೃಷ್ಣ ಎಲ್ಲರೂ ಅವರವರಾಗಿಯೇ ಬಂದಿದ್ದಾರೆ. ಅಜ್ಜಯ್ಯನ ಆಶೀರ್ವಾದದಿಂದ ಇನ್ನೂ ಎತ್ತರಕ್ಕೆ ಹೋಗುವ ನಂಬಿಕೆಯಿದೆ ಎಂದರು.
ಗುರು ಮಾರ್ಗದರ್ಶನ ಬೇಕಾಗುತ್ತದೆ: ಈ ಮಠ ನನಗೆ ಪುಣ್ಯಕ್ಷೇತ್ರ. ಪ್ರತಿಯೊಂದು ಸಂದರ್ಭದಲ್ಲಿ ಕೂಡ ಗಂಗಾಧರ ಅಜ್ಜ, ಇಲ್ಲಿಯ ಸ್ವಾಮೀಜಿ ನನಗೆ ಮಾರ್ಗದರ್ಶನ ಮಾಡಿದ್ದಾರೆ. ಟಿಕೆಟ್, ‘ಬಿ’ ಫಾರಂ, ನಾಮಿನೇಷನ್ ಕ್ಷಣದಿಂದ, ಗೆಲುವಿನವರೆಗೂ ಅಜ್ಜಯ್ಯನವರ ಆಶೀರ್ವಾದ, ಮಾರ್ಗದರ್ಶನ ಪಡೆದಿರುವೆ. ನನ್ನ ಸುಖ ಹಾಗೂ ಕಷ್ಟದ ದಿನಗಳಲ್ಲಿ ಪೀಠ ಹಾಗೂ ಶ್ರೀಗಳು ನನ್ನ ಜೊತೆ ನಿಂತಿದ್ದಾರೆ. ಐಟಿ ದಾಳಿಯಾದಾಗ, ಹೆಲಿಕಾಪ್ಟರ್ ಅವಘಡ ಆದ ನಂತರ ಕೂಡ ಇಲ್ಲಿಯ ಮಾರ್ಗದರ್ಶನ ಪಡೆದಿದ್ದೇನೆ. ಶ್ರೀಗಳ ಮಾರ್ಗದರ್ಶನದ ಮೇರೆಗೆ ಗೃಹಲಕ್ಷ್ಮೀ, ಹೆಣ್ಣು ಮಕ್ಕಳಿಗೆ ಉಚಿತ ಬಸ್ ಪಾಸ್ ಕೊಡುವ ಯೋಜನೆ ಘೋಷಣೆ ಮಾಡಿದ್ದೇವೆ ಎಂದರು.
ಮೊಳಗಿದ ‘ಡಿಕೆಶಿ ಸಿಎಂ’ ಕೂಗು: ಡಿಕೆಶಿಯವರು ಕಾಡಸಿದ್ಧೇಶ್ವರ ಮಠಕ್ಕೆ ಭೇಟಿ ನೀಡಿದ ವೇಳೆ ತಿಪಟೂರಿನ ನೂತನ ಕಾಂಗ್ರೆಸ್ ಶಾಸಕ ಷಡಕ್ಷರಿಯವರು ಹಾರ ಹಾಕಿ ಅವರನ್ನು ಬರ ಮಾಡಿಕೊಂಡರು. ಈ ವೇಳೆ, ‘ಮುಂದಿನ ಸಿಎಂ ಡಿಕೆಶಿ’ ಎಂದು ಅಭಿಮಾನಿಗಳು ಜೈಕಾರ ಹಾಕಿದರು. ಈ ವೇಳೆ ಸಿಟ್ಟಾಗಿ, ‘ಇದು ದೇವಸ್ಥಾನ, ಸ್ವಲ್ಪ ಸುಮ್ಮನಿರಿ’ ಎಂದು ಅಭಿಮಾನಿಗಳಿಗೆ ಗದರಿದರು
ಸಿಎಂ ಹುದ್ದೆಗೆ ಡಿ.ಕೆ.ಶಿವಕುಮಾರ್-ಸಿದ್ದರಾಮಯ್ಯ ಬಿಗಿಪಟ್ಟು: ನೂತನ ಸಿಎಂ ಆಯ್ಕೆ ಕಾಂಗ್ರೆಸ್ಸಿಗೆ ಕಗ್ಗಂಟು
ಸಿದ್ಧಗಂಗಾ ಮಠಕ್ಕೂ ಭೇಟಿ: ಬಳಿಕ, ಸಿದ್ಧಗಂಗಾ ಮಠಕ್ಕೂ ಭೇಟಿ ನೀಡಿ, ಸ್ವಾಮೀಜಿಗಳ ಆಶೀರ್ವಾದ ಪಡೆದರು. ಮೊದಲಿಗೆ ಹಿರಿಯ ಲಿಂ.ಡಾ.ಶಿವಕುಮಾರಸ್ವಾಮಿಗಳ ಗದ್ದುಗೆಗೆ ಪೂಜೆ ಸಲ್ಲಿಸಿ, ಧ್ಯಾನ ಮಂದಿರದಲ್ಲಿ ಕೆಲ ಕಾಲ ಧ್ಯಾನ ಮಾಡಿದರು. ನಂತರ, ಸಿದ್ಧಗಂಗಾ ಮಠದ ಪೀಠಾಧ್ಯಕ್ಷರಾದ ಸಿದ್ದಲಿಂಗಸ್ವಾಮೀಜಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದು, ಕೆಲ ಕಾಲ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು.