ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ ನನಗೇ ಸಿಗುವುದೆಂಬ ಸಂಪೂರ್ಣ ವಿಶ್ವಾಸವಿದೆ: ಸಂಸದೆ ಸುಮಲತಾ

By Kannadaprabha News  |  First Published Mar 2, 2024, 2:30 AM IST

ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ ನನಗೇ ಸಿಗುವುದೆಂಬ ಬಗ್ಗೆ ಸಂಪೂರ್ಣ ವಿಶ್ವಾಸವಿದೆ. ಪಕ್ಷ ಅದನ್ನು ಅಧಿಕೃತವಾಗಿ ಪ್ರಕಟಿಸಬೇಕಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು. 


ಮದ್ದೂರು (ಮಾ.02): ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ ನನಗೇ ಸಿಗುವುದೆಂಬ ಬಗ್ಗೆ ಸಂಪೂರ್ಣ ವಿಶ್ವಾಸವಿದೆ. ಪಕ್ಷ ಅದನ್ನು ಅಧಿಕೃತವಾಗಿ ಪ್ರಕಟಿಸಬೇಕಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು. ಟಿಕೆಟ್ ಸಿಗುವ ಭರವಸೆಯಿಂದಲೇ ನಾನು ಇಷ್ಟೊಂದು ವಿಶ್ವಾಸದಿಂದ ಇದ್ದೇನೆ. ಅದರ ಬಗ್ಗೆ ಭಯ-ಆತಂಕ ನನಗೇನೂ ಇಲ್ಲ. ಟಿಕೆಟ್ ಘೋಷಣೆಯಾದಾಗ ನಿಮಗೇ ತಿಳಿಯುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಚ್ಚಿದಾನಂದ ಜೊತೆ ಅಸಮಾಧಾನವಿಲ್ಲ: ಸಚ್ಚಿದಾನಂದ ಆಗಿರಲಿ, ಬೇರೆ ಯಾರೇ ಆಗಿರಲಿ ನನ್ನೊಂದಿಗೆ ವಿಶ್ವಾಸದಿಂದ ಇದ್ದಾರೆ. ಅವರ ಮತ್ತು ನನ್ನ ನಡುವೆ ಯಾವುದೇ ಅಸಮಾಧಾನವಿಲ್ಲ. ನಮ್ಮ ಮನೆಗೆ ಬರುವವರೆಲ್ಲರೂ ಅಂಬರೀಶ್ ಮೇಲಿನ ಪ್ರೀತಿ-ಗೌರವದಿಂದಲೇ ಬರುತ್ತಾರೆ. ಎಲ್ಲರೂ ನನ್ನಲ್ಲಿ ಆತ್ಮವಿಶ್ವಾಸ ತುಂಬಿ ಮಂಡ್ಯದಿಂದ ನೀವೇ ಕಣಕ್ಕಿಳಿಯಬೇಕೆಂದು ಒತ್ತಡ ಹೇರುತ್ತಿದ್ದಾರೆ ಎಂದರು. ಎಪಿಎಂಸಿ ಮಾಜಿ ಅಧ್ಯಕ್ಷ ಕುದರಗುಂಡಿ ನಾಗೇಶ, ಮುಖಂಡರಾದ ನೀಲಕಂಠನಹಳ್ಳಿ ರಾಜು, ಜಿ.ಬಿ.ಕೃಷ್ಣ, ಕೆ.ಪಿ.ಕೃಷ್ಣಪ್ಪ, ಸತೀಶ್, ಕೋಣಸಾಲೆ ಜಯರಾಂ, ಮುಟ್ಟನಹಳ್ಳಿ ಮಹೇಂದ್ರ ಇದ್ದರು.

Tap to resize

Latest Videos

ಪಾಪ ಕುಮಾರಣ್ಣ ಹೆದರಿ ಮಂಡ್ಯಕ್ಕೆ ಓಟ: ಶಾಸಕ ಬಾಲಕೃಷ್ಣ ಲೇವಡಿ

ಜಾತಿ ಗಣತಿ ವಿಚಾರದಲ್ಲಿ ಗೊಂದಲವಿದೆ: ಜಾತಿ ಗಣತಿ ವರದಿ ವಿಚಾರದಲ್ಲಿ ಒಂದಷ್ಟು ಗೊಂದಲ ಇದೆ, ಕೆಲವರು ನಾವು ಒಪ್ಪ್ಪೋಲ್ಲ ಎನ್ನುತ್ತಿದ್ದಾರೆ. ವರದಿ ಬಂದ ಮೇಲೆ ಅದರಲ್ಲಿ ಏನಾದರೂ ಲೋಪದೋಷಗಳಿವೆಯಾ ಎನ್ನುವುದು ಗೊತ್ತಾಗುತ್ತೆ ಎಂದ ಸುಮಲತಾ, ಕೆಆರ್‌ಎಸ್ ಸಮೀಪ ಟ್ರಯಲ್ ಬ್ಲಾಸ್ಟ್ ನಡೆಸುವುದು ಅಪಾಯಕಾರಿ ಬೆಳವಣಿಗೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದರು. ಕಳೆದ ಬಾರಿ ಬಂದ ವೇಳೆ ಶ್ರೀನಿಮಿಷಾಂಬ ದೇಗುಲಕ್ಕೆ ಭೇಟಿ ನೀಡಿದ್ದೆ. ಶ್ರೀ ನಿಮಿಷಾಂಬ ಸನ್ನಿಧಿಯಲ್ಲಿ ಬಲಗಡೆ ಹೂ ಬಿದ್ದಿರೋದು ಶುಭ ಸೂಚನೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ನನಗೂ ತುಂಬಾ ಸಂತೋಷವಾಗಿದೆ. ದೇವಿಯ ಆಶೀರ್ವಾದ ನನಗೆ ಸಿಕ್ಕಿದೆ ಎಂದು ಭಾವಿಸಿರುವುದಾಗಿ ತಿಳಿಸಿದರು.

ಮಂಡ್ಯದಲ್ಲೇ ಸ್ಪರ್ಧೆಗೆ ಬೆಂಬಲಿಗರ ಒತ್ತಾಯ: ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದಲೇ ನೀವು ಸ್ಪರ್ಧಿಸಬೇಕು. ಮಂಡ್ಯ ಬಿಟ್ಟು ಹೋಗಬಾರದು ಎಂಬುದಾಗಿ ಬೆಂಬಲಿಗರು ಒತ್ತಾಯಿಸಿದ್ದಾರೆ’ ಎಂದು ಮಂಡ್ಯದ ಸಂಸದೆ ಸುಮಲತಾ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಂಸದೆಯಾಗಿ ಐದು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಬೆಂಬಲಿಗರ ಸಭೆ ಕರೆದಿದ್ದೆ. ಈ ಐದು ವರ್ಷಗಳಲ್ಲಿ ಸಂಸದೆಯಾಗಿ ನಾನು ಮಾಡಿರುವ ಕೆಲಸಗಳ ಬಗ್ಗೆ ಬೆಂಬಲಿಗರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಇಡೀ ಸಭೆ ಧನಾತ್ಮಕವಾಗಿ ಇತ್ತು ಎಂದರು. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳು, ಮಾಧ್ಯಮಗಳಲ್ಲಿ ನನ್ನ ಸ್ಪರ್ಧೆ ಬಗ್ಗೆ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಇದರಿಂದ ಗೊಂದಲ ಆಗುವುದು ಸಹಜ. ಈಗ ಆ ರೀತಿಯ ಯಾವುದೇ ಗೊಂದಲ ಇಲ್ಲ ಎಂದರು.

ಕಾಂಗ್ರೆಸ್ ಗ್ಯಾರಂಟಿಗಳನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಪಕ್ಷೇತರ ಸ್ಪರ್ಧೆ ಬಗ್ಗೆ ಯೋಚಿಸಿಲ್ಲ: ಪಕ್ಷೇತರ ಸ್ಪರ್ಧೆ ಬಗ್ಗೆ ನಾನು ಯೋಚನೆ ಮಾಡಿಲ್ಲ. ಆ ರೀತಿಯ ಯಾವುದೇ ಚರ್ಚೆಗಳು ಆಗಿಲ್ಲ. ನಾನೂ ಎಲ್ಲಿಯೂ ಆ ಬಗ್ಗೆ ಹೇಳಿಲ್ಲ. ನಮ್ಮ ಬೆಂಬಲಿಗರು ಯಾವುದೇ ಕಾರಣಕ್ಕೂ ನೀವು ಮಂಡ್ಯ ಬಿಡಬಾರದು ಎಂದಿದ್ದಾರೆ. ಆ ಪಕ್ಷ ಈ ಪಕ್ಷದಿಂದಲೇ ಸ್ಪರ್ಧಿಸಿ ಎಂದು ಹೇಳಿಲ್ಲ. ಒಟ್ಟಿನಲ್ಲಿ ನೀವು ಮಂಡ್ಯ ಬಿಟ್ಟು ಹೋಗದಂತೆ ಹೇಳಿದ್ದಾರೆ ಎಂದು ಇದೇ ವೇಳೆ ತಿಳಿಸಿದರು. ಬಿಜೆಪಿ ಟಿಕೆಟ್‌ ಕೊಡುವುದು ಅಥವಾ ಬಿಡುವುದು ಒಂದು ಸಭೆಯಲ್ಲಿ ಅಂತಿಮವಾಗಲ್ಲ. ಪ್ರಧಾನಿ ನರೇಂದ್ರ ಮೊದಿ ಅವರ ಭೇಟಿ ವೇಳೆ ನನಗೆ ಪ್ರೋತ್ಸಾಹದ ಮಾತು ಹೇಳಿ ಕಳುಹಿಸಿದ್ದಾರೆ. ಅವರಿಗೆ ಬಿಜೆಪಿ ಪಕ್ಷವನ್ನು ಎಲ್ಲ ಕಡೆ ಬೆಳೆಸಬೇಕು. ಮಂಡ್ಯದಲ್ಲಿ ಈವರೆಗೆ ಬಿಜೆಪಿಯಿಂದ ಸಂಸದರು ಗೆದ್ದಿಲ್ಲ. ಹೀಗಾಗಿ ಮಂಡ್ಯದಲ್ಲಿ ಬಿಜೆಪಿ ಪಕ್ಷವನ್ನು ಗಟ್ಟಿಯಾಗಿ ಕಟ್ಟುವ ಉದ್ದೇಶವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

click me!