Davanagere: ಅನುಕಂಪದ ರಾಜಕಾರಣ ನನಗೆ ಅಗತ್ಯವಿಲ್ಲ: ಶಾಸಕ ರೇಣುಕಾಚಾರ್ಯ

By Govindaraj SFirst Published Dec 17, 2022, 7:46 PM IST
Highlights

ರಾಜ್ಯದ ಮುಖ್ಯಮಂತ್ರಿಯವರು ತನ್ನ ಪುತ್ರ ದಿವಂಗತ ಚಂದ್ರು ಸಾವಿನ ಪ್ರಕರಣ ಸಿ.ಐ.ಡಿಗೆ ವಹಿಸಿದ್ದು, ತನಿಖೆ ಆರಂಭವಾಗಿದೆ. ಪುತ್ರನ ಸಾವಿನ ಅನುಕಂಪದ ರಾಜಕಾರಣ ಮಾಡುವ ಅಗತ್ಯ ನನಗಿಲ್ಲ.

ಹೊನ್ನಾಳಿ (ಡಿ.17): ರಾಜ್ಯದ ಮುಖ್ಯಮಂತ್ರಿಯವರು ತನ್ನ ಪುತ್ರ ದಿವಂಗತ ಚಂದ್ರು ಸಾವಿನ ಪ್ರಕರಣ ಸಿ.ಐ.ಡಿಗೆ ವಹಿಸಿದ್ದು, ತನಿಖೆ ಆರಂಭವಾಗಿದೆ. ಪುತ್ರನ ಸಾವಿನ ಅನುಕಂಪದ ರಾಜಕಾರಣ ಮಾಡುವ ಅಗತ್ಯ ನನಗಿಲ್ಲ. ರಾಜಕೀಯ ವಿರೋಧಿಗಳು ಏನೇ ಹೇಳಿದರೂ ತಾನು ತಲೆಕೆಡಿಸಿಕೊಳ್ಳುವುದಿಲ್ಲ ಚುನಾವಣಾ ರಾಜಕಾರಣಕ್ಕೆ ಚಂದ್ರವಿನ ಹೆಸರು ಬಳಸುವುದಿಲ್ಲ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಅವರು ಪಟ್ಟಣ ಶೆಟ್ಟಿ ಬಡಾವಣೆ ಮೈದಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಮ್ಮ ಸಹೋದರನ ಪುತ್ರ ದಿವಂಗತ ಎಂ.ಆರ್‌. ಚಂದ್ರಶೇಖರ್‌ ಅವರ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿ, ತಮ್ಮ ಪುತ್ರನ ಸಾವು ಸಹಜಸಾವಲ್ಲ ಆತನ ಸಾವಿನ ಬಗ್ಗೆ ನಿಖರವಾದ ಸತ್ಯಾಂಶ ತಮ್ಮ ಕುಟುಂಬಕ್ಕೆ ಹಾಗೂ ಅವಳಿ ತಾಲೂಕಿನ ಜನತೆಗೆ ತಿಳಿಯಬೇಕಾಗಿದೆ. ಚಂದ್ರವಿನ ಸಾವು ಹೇಗಾಯಿತು ಎಂದು ಜನರು ಕೇಳುವ ಪ್ರಶ್ನೆಗಳಿಗೆ ತನಗೆ ಉತ್ತರಿಸಲಾಗುತ್ತಿಲ್ಲ. ಆತನ ಸಾವಿಗೆ ನ್ಯಾಯಸಿಗಬೇಕಾಗಿದೆ. ಚಿಕ್ಕ ವಯಸ್ಸಿನಲ್ಲಿ ಕ್ಷೇತ್ರದಲ್ಲಿ ಜನಮನ್ನಣೆ ಗಳಿಸಿದ್ದ ಚಂದ್ರು ಎಂದು ನೆನೆದು ಕೆಲಕಾಲ ಭಾವುಕರಾಗಿ ಮಾತುಹೊರಡದೆ ಮೌನಕ್ಕೆ ಶರಣಾದರು.

ಜನಪರ ಯೋಜನೆಗಳ ಕಾಂಗ್ರೆಸ್‌ ಏಕೆ ತಂದಿಲ್ಲ: ಶಾಸಕ ರೇಣುಕಾಚಾರ್ಯ

ಅವಳಿ ತಾಲೂಕಿನ ಜನತೆ ಚಂದ್ರುನನ್ನು ನೆನೆದು ಪ್ರತಿ ಗ್ರಾಮದ ಜನತೆ ಸ್ವಯಂ ಪ್ರೇರಣಿಯಿಂದ ವಿವಿಧ ರೀತಿಯ ಊಟ ಕಟ್ಟಿಕೊಂಡು ತಮ್ಮ ನಿವಾಸಕ್ಕೆ ಬಂದು ತನ್ನನ್ನು ಹಾಗೂ ಕುಟುಂಬದವರನ್ನು ಸಂತೈಸಿದ್ದಾರೆ. ಜನತೆಯ ಈ ಔದಾರ್ಯಕ್ಕೆ ಬೆಲೆಕಟ್ಟಲಾಗದು. ಈ ಬಗ್ಗೆಯೂ ಕೂಡ ಕೆಲ ರಾಜಕೀಯ ವಿರೋಧಿಗಳು ಇಲ್ಲಸಲ್ಲದ ಟೀಕೆ ಮಾಡುತ್ತಾರೆ. ಅದು ಅವರ ಸಂಸ್ಕೃತಿ ಎಂದು ಹೇಳಿದ ಅವರು ಚಂದ್ರವಿನ ಹೆಸರಿನಲ್ಲಿ ಟ್ರಸ್ಟ್‌ ರಚಿಸಿ ಸಾಮಾಜ ಮುಖಿ ಕೆಲಸಗಳನ್ನು ಮಾಡುತ್ತಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಸೇರಿದಂತೆ ಸುಮಾರು 20ಕ್ಕೂ ಹೆಚ್ಚಿನ ವಿವಿಧ ಮಠಾಧೀಶರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಧುರೆ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ, ಹರಿಹರದ ಪಂಚಮಸಾಲಿ ಗುರುಪೀಠದ ವಚನಾನಂದ ಮಹಾಸ್ವಾಮೀಜಿ, ಹೊಸದುರ್ಗ ಕುಂಚಿಟಿಗ ಸಮಾಜದ ಶಾಂತವೀರ ಮಹಾಸ್ವಾಮಿಜಿ,ಅಂಬಿಗರ ಚೌಡಯ್ಯ ಗುರಪೀಠ ಹಾವೇರಿಯ ಶ್ರೀಶಾಂತಭೀಷ್ಮ ಅಂಬಿಗರ ಚೌಡಯ್ಯ ಸ್ವಾಮೀಜಿ, ಜಗದ್ಗುರು ವಿಶ್ವಕರ್ಮ ಸಂಸ್ಥಾನ ಸಾವಿತ್ರಿ ಪೀಠ ಕಾಶಿಮಠ ಸ್ವಾಮೀಜಿ ವಡ್ನಾಳ್‌ಚನ್ನಗಿರಿ, ಜದ್ಗುರು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಜಿ ಹಾಗೂ ನಂದಿಗುಡಿ ಶ್ರೀಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮಿಜಿ, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮಿಜಿ, ಗೋಸಾಯಿ ಮಹಾಸಂಸ್ಥಾನ ಗವಿಪುರಂ ಗುಟ್ಟಳ್ಳಿ ಬೆಂಗಳೂರಿನ ವೇದಾಂತಚಾರ್ಯ ಶ್ರಿಮಂಜುನಾಥ ಮಹಾಸ್ವಾಮಿಜಿ ಸೇರಿದಂತೆ ಅನೇಕ ಮಠಾಧೀಶರು ಮಾತನಾಡಿದರು.

ದಿವಂಗತ ಚಂದ್ರುವಿನ ಗೌರವಾರ್ಥ 2 ನಿಮಿಷ ಮೌನಾಚಾರಣೆ ಅಚರಿಸಲಾಯಿತು. ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿನಿಯರಿಂದ ಚಂದ್ರವಿನ ಪೋಟೋ ಹಿಡಿದು ಅವರ ಕುರಿತ ಸಂಗೀತ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಎಲ್ಲರ ಕಣ್ಣುಗಳು ಒದ್ದೆಯಾಗಿ ಇಡೀ ಜನಸ್ತೋಮ ಭಾವುಕವಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರೇಕಲ್ಮಠದ ಡಾ. ಶ್ರೀ ಒಡೆಯರ್‌ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಜಿ ವಹಿಸಿ ಮಾತನಾಡಿದರು. ಹಿರೇಮಠ, ಹೊಟ್ಯಾಪುರದ ಶ್ರೀ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಜಿ, ರಾಂಪುರ ಹಾಲಸ್ವಾಮಿ ಮಠದ ಸದ್ಗುರು ಶಿವಯೋಗಿ ಶಿವಕುಮಾರ ಹಾಲಸ್ವಾಮಿಜಿಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಚಂದ್ರು ಸಾವಿನ ಸಮಗ್ರ ವರದಿಗೆ ಕಾಯುತ್ತಿರುವೆ: ರೇಣುಕಾಚಾರ್ಯ

ಶಿವಮೊಗ್ಗದ ನಾರಾಯಣ ಗುರುಪೀಠದ ರೇಣುಕಾನಂದ ಸ್ವಾಮಿಜಿ, ಯಾದವ ಗುರುಪೀಠ ಚಿತ್ರದುರ್ಗದ ಶ್ರೀಕೃಷ್ಣಯಾದವಾನಂದ ಸ್ವಾಮಿಜಿ ಶಿವಣಿಗೆ ಕೊರಮ ಗುರುಪೀಠದ ನೂಲಿಯ ಚಂದ್ರಯ್ಯ ರಸುಬೇಂದ್ರಸ್ವಾಮಿಜಿ, ಬಸಮಾಜಿದೇವ ಸ್ವಾಮೀಜಿ, ಗುಬ್ಬಿ, ಕೋಡಿಹಳ್ಳಿ ಬಸವ ಬೃಂಗೇಶ್ವರ ಸ್ವಾಮಿಜಿ, ಹೊನ್ನಾಳಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾನಿಯಲದ ಜ್ಯೋತಿ ಅಕ್ಕ, ನ್ಯಾಮತಿ ಘಟಕದ ವಂದನ ಅಕ್ಕ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಹೊನ್ನಾಳಿ ತಹಶೀಲ್ದಾರ್‌ ರಶ್ಮಿ, ನ್ಯಾಮತಿ ತಹಸೀಲ್ದಾರ್‌ ರೇಣುಕಾ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಶಾಸಕ ರೇಣುಚಾಚಾರ್ಯ ಸಹೋದರ ಎಂ. ಶಿವಶಂಕರಯ್ಯ ಸ್ವಾಗತಿಸಿದರು.

click me!