Latest Videos

ಪ್ರಜ್ವಲ್‌ ವಿದೇಶದಿಂದ ಬರುವ ವಿಚಾರ ನನಗೆ ಗೊತ್ತಿಲ್ಲ: ಎಚ್‌.ಡಿ.ರೇವಣ್ಣ

By Kannadaprabha NewsFirst Published May 23, 2024, 8:43 PM IST
Highlights

ನ್ಯಾಯಾಲಯದಲ್ಲಿ ಪ್ರಕರಣ ಇರುವಾಗ ನಾನು ಯಾವುದೇ ಪ್ರತಿಕ್ರಿಯೆ ಕೊಡಲ್ಲ ಮತ್ತು ನನಗೆ ನ್ಯಾಯಾಲಯದ ಬಗ್ಗೆ ಗೌರವವಿದೆ. ದೇವರ ಮೇಲೆ ನಂಬಿಕೆ ಇದೆ. ಪ್ರಜ್ವಲ್ ರೇವಣ್ಣ ವಿದೇಶದಿಂದ ಬರುವ ವಿಚಾರ ಏನು ಗೊತ್ತಿಲ್ಲ ಎಂದು ಶಾಸಕ ಎಚ್‌.ಡಿ.ರೇವಣ್ಣ ಹೇಳಿದರು. 

ಹೊಳೆನರಸೀಪುರ (ಮೇ.23): ನ್ಯಾಯಾಲಯದಲ್ಲಿ ಪ್ರಕರಣ ಇರುವಾಗ ನಾನು ಯಾವುದೇ ಪ್ರತಿಕ್ರಿಯೆ ಕೊಡಲ್ಲ ಮತ್ತು ನನಗೆ ನ್ಯಾಯಾಲಯದ ಬಗ್ಗೆ ಗೌರವವಿದೆ. ದೇವರ ಮೇಲೆ ನಂಬಿಕೆ ಇದೆ. ಪ್ರಜ್ವಲ್ ರೇವಣ್ಣ ವಿದೇಶದಿಂದ ಬರುವ ವಿಚಾರ ಏನು ಗೊತ್ತಿಲ್ಲ ಎಂದು ಶಾಸಕ ಎಚ್‌.ಡಿ.ರೇವಣ್ಣ ಹೇಳಿದರು. ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯಕ್ಕೆ ೨೨ ದಿನಗಳ ಬಳಿಕ ಬುಧವಾರ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಮಾಧ್ಯಮದ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಕ್ಷೇತ್ರದ ಜನತೆ ದೇವೇಗೌಡರಿಗೆ ೬೦ ವರ್ಷಗಳು ರಾಜಕೀಯವಾಗಿ ಬೆಂಬಲ ನೀಡಿದ್ದಾರೆ. ಕಳೆದ ೨೫ ವರ್ಷಗಳಿಂದ ನಾನು ಜನರ ಆಶೀರ್ವಾದಿಂದ ಶಾಸಕನಾಗಿ ಕೆಲಸ ಮಾಡಿದ್ದೇನೆ. ಈ ಜಿಲ್ಲೆಯ ಜನರ ಋಣ ನನ್ನ ಮೇಲಿದೆ, ನಾನು ಋಣಿಯಾಗಿರುತ್ತೇನೆ. ಜತೆಗೆ ನಾನು ಬದುಕಿರುವವರೆಗೂ ನನ್ನನ್ನ ಜನ ಕೈ ಬಿಡೋದಿಲ್ಲ ಎಂಬ ವಿಶ್ವಾಸ ನನಗಿದೆ’ ಎಂದು ಎಚ್.ಡಿ.ರೇವಣ್ಣ ನುಡಿದರು. ‘ಜಿಲ್ಲೆ ಹಾಗೂ ತಾಲೂಕಿನ ಜನರ ಜೊತೆ ನಾನು ಬದುಕಿರುವವರೆಗೆ ನಿಮ್ಮ ಜೊತೆ ನಾನು, ದೇವೇಗೌಡರು, ಕುಮಾರಸ್ವಾಮಿ ಮತ್ತು ನಮ್ಮ ಕುಟುಂಬ ಇರುತ್ತದೆ. ಯಾರು ದೃತಿಗೆಡಬೇಕಾದ ಪ್ರಮೇಯವಿಲ್ಲ. 

ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆ ಸಂಬಂಧ ಹಾಸನದಲ್ಲಿ ಸಭೆ ಇದೆ, ನಾನು ಸಭೆಯಲ್ಲಿ ಭಾಗವಹಿಸುತ್ತೇನೆ, ಮೈಸೂರಿನಲ್ಲಿ ಇದ್ದ ಸಭೆಯಲ್ಲೂ ಭಾಗವಹಿಸಿದ್ದೆ. ಶಿಕ್ಷಕರ ಕ್ಷೇತ್ರಕ್ಕೆ ಕುಮಾರಸ್ವಾಮಿ ಯಡಿಯೂರಪ್ಪ ಇಬ್ಬರೂ ಅಪಾರ ಕೊಡುಗೆ ನೀಡಿದ್ದಾರೆ. ವಿವೇಕಾನಂದಗೆ ನಮ್ಮ ಪಕ್ಷ ಟಿಕೆಟ್ ನೀಡಿದೆ, ಅವರ ಗೆಲುವಿಗಾಗಿ ಹೋರಾಡುತ್ತೇವೆ’ ಎಂದು ಹೇಳಿದರು. ದಕ್ಷಿಣ ಶಿಕ್ಷಕರ ಕ್ಷೇತ್ರದ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಪರಿಣಾಮ ಬೀರುವ ವಿಚಾರ ಕುರಿತು ಕೇಳಿದ ಪ್ರಶ್ನೆಗೆ, ‘ಅದರ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ’ ಎಂದರು. ಶ್ರೀಕಂಠೇಗೌಡ ಅಸಮಾಧಾನ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು. 

ಯಾರು ಆತಂಕಪಡಬೇಕಾಗಿಲ್ಲ, ಕಾಲವೇ ಸರಿಯಾದ ಉತ್ತರ ಕೊಡಲಿದೆ: ಎಚ್.ಡಿ.ರೇವಣ್ಣ

ಮುಂಜಾನೆ ಹರದನಹಳ್ಳಿಯ ಶ್ರೀ ದೇವೇಶ್ವರ ದೇವಾಲಯ, ಪಟ್ಟಣದ ಶ್ರೀ ಎದುರುಮುಖ ರಾಮಲಿಂಗಜಾನೇಯಸ್ವಾಮಿ ದೇವಾಲಯ, ಶ್ರೀ ಲಕ್ಷ್ಮಣೇಶ್ವರ ದೇವಾಲಯ, ಶ್ರೀ ರಘುಪತಿ ದೇವಾಲಯ ಹಾಗೂ ಶ್ರೀ ಲಕ್ಷ್ನೀನರಸಿಂಹಸ್ವಾಮಿ ದೇವಾಲಯದಲ್ಲಿ ಕುಟುಂಬ ಸದಸ್ಯರ ಹೆಸರಿನಲ್ಲಿ ಅರ್ಚನೆ ಮಾಡಿಸಿ, ಪ್ರಾರ್ಥಿಸಿ, ಮಂಗಳಾರತಿ, ತೀರ್ಥ ಪ್ರಸಾದ ಸ್ವೀಕರಿಸಿದರು. ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಗರುಡಧ್ವಜದ ಮುಂದೆ ತೆಂಗಿನಕಾಯಿ ಮೇಲೆ ಕರ್ಪೂರ ಬೆಳಗಿಸಿ, ಪ್ರಾರ್ಥಿಸಿ, ಈಡಗಾಯಿ ಹಾಕಿದರು. ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ಜಮಾಯಿಸಿದ್ದ ನೂರಾರು ಕಾರ್ಯಕರ್ತರಲ್ಲಿ ಕೆಲವು ಜನರು ಶಾಸಕ ಎಚ್.ಡಿ.ರೇವಣ್ಣನವರ ಕಾಲಿಗೆ ನಮಸ್ಕರಿಸಿ, ಗೌರವ ಸೂಚಿಸಿದರು. ಕೆಲವರು ಕಣ್ಣೀರು ಹಾಕಿ ಜೈಕಾರ ಹಾಕಿದರು.

click me!