ಬಿಜೆಪಿಗರ ವಿರುದ್ಧ ಪೊಲೀಸ್‌ ದಬ್ಬಾಳಿಕೆ: ವಿಜಯೇಂದ್ರ ಕಿಡಿ

By Kannadaprabha News  |  First Published May 23, 2024, 4:49 PM IST

ರಾಜಕಾರಣಿಗಳ ಒತ್ತಡಕ್ಕೆ ಮಣಿದು ಪೊಲೀಸರು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.


ಬೆಂಗಳೂರು (ಮೇ.23): ಪೊಲೀಸ್‌ ಠಾಣೆಯಲ್ಲೇ ಪ್ರತಿಭಟನೆ ನಡೆಸಿ ಪೊಲೀಸರಿಗೆ ಧಮ್ಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಹರೀಶ್ ಪೂಂಜಾ ಬಂಧಿಸಲು ಮುಂದಾಗಿದ್ದು ಸರಿಯಲ್ಲ ಮತ್ತು ರಾಜಕಾರಣಿಗಳ ಒತ್ತಡಕ್ಕೆ ಮಣಿದು ಪೊಲೀಸರು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಪದೇಪದೇ ಬಿಜೆಪಿ ಮೇಲಿನ ದಬ್ಬಾಳಿಕೆಯನ್ನು ಸಹಿಸಲು ಸಾಧ್ಯವಿಲ್ಲ. ಶಾಸಕರ ಬಂಧನದ ದುಸ್ಸಾಹಸಕ್ಕೆ ಪೊಲೀಸರು ಮುಂದಾದರೆ ಮುಂದೆ ನಡೆಯುವ ಘಟನೆಗೆ ರಾಜ್ಯ ಸರ್ಕಾರ, ಪೊಲೀಸ್ ಅಧಿಕಾರಿಗಳು ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ದಕ್ಷಿಣ ಕನ್ನಡದಲ್ಲಿ ಕಾನೂನು- ಸುವ್ಯವಸ್ಥೆ ಸುಗಮವಾಗಿ ಹೋಗುತ್ತಿರುವ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡುವುದನ್ನು ಸಹಿಸಲು ಅಸಾಧ್ಯ ಎಂದು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು. ಪೊಲೀಸರು ಕಾನೂನು- ಸುವ್ಯವಸ್ಥೆ ಹದಗೆಡಲು ಕುಮ್ಮಕ್ಕು ನೀಡುತ್ತಿದ್ದಾರೆ. ಶಾಸಕರ ಮೇಲೆ ಕ್ರಮ ಸಲ್ಲದು ಮತ್ತು ವಿನಾಕಾರಣ ಪಕ್ಷದ ಕಾರ್ಯಕರ್ತರ ಮೇಲೆ ಎಫ್ಐಆರ್ ದಾಖಲಿಸಿದ್ದು, ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಇತ್ತೀಚೆಗೆ ಅಕ್ರಮ ಕ್ವಾರಿ ವಿಚಾರವಾಗಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಈ ವಿಚಾರವಾಗಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರನ್ನು ಬಂಧನ ಮಾಡಲು ಪೊಲೀಸರು ಪ್ರಯತ್ನ ಮಾಡುತ್ತಿರುವುದು ಖಂಡನೀಯ. 

Tap to resize

Latest Videos

ಶಾಸಕರ ಬಂಧನ ಪ್ರಯತ್ನದಿಂದ ಉತ್ತಮ ಸಂದೇಶ ರಾಜ್ಯಕ್ಕೆ ಹೋಗುವುದಿಲ್ಲ. ದಕ್ಷಿಣ ಕನ್ನಡ ಮಾತ್ರವಲ್ಲದೆ ರಾಜ್ಯದಾದ್ಯಂತ ಪೊಲೀಸ್ ಅಧಿಕಾರಿಗಳು ಬಿಜೆಪಿ ಕಾರ್ಯಕರ್ತರ ವಿರುದ್ಧ ದೌರ್ಜನ್ಯ ಎಸಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವಂತೆ ಗೃಹ ಸಚಿವರು, ಪೊಲೀಸ್ ವರಿಷ್ಠರ ಜೊತೆ ಮಾತನಾಡಬೇಕು ಎಂದು ಒತ್ತಾಯಿಸಿದರು. ನಮ್ಮ ಕಾರ್ಯಕರ್ತರ ವಿರುದ್ಧ ಸೇಡಿನ ಎಫ್ಐಆರ್ ದಾಖಲಿಸಿ ದೌರ್ಜನ್ಯ ಮಾಡುವುದರ ವಿರುದ್ಧ ಶಾಸಕ ಹರಿಶ್‌ ಪೂಂಜ ಠಾಣೆಗೆ ಹೋಗಿ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡಿದ್ದಾರೆ. ಬಳಿಕ ಹೋರಾಟಕ್ಕೂ ಕರೆ ಕೊಟ್ಟಿದ್ದು ಸತ್ಯ. 

ಪಂಚಮಸಾಲಿ ಮೀಸಲಾತಿಗೆ ಸಿಎಂ ನಿರ್ಲಕ್ಷ್ಯ: ಬಸವಜಯ ಮೃತ್ಯುಂಜಯ ಸ್ವಾಮೀಜಿ

ಪೊಲೀಸ್ ಅಧಿಕಾರಿಗಳು ಚುನಾವಣೆ ನೀತಿ ಸಂಹಿತೆಯ ನೆಪವೊಡ್ಡಿ ಹೋರಾಟ ಹತ್ತಿಕ್ಕುವ ಕೆಲಸ ಮಾಡಿದ್ದಾರೆ. ಇದು ಖಂಡನೀಯ ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಬೇರೆ ಬೇರೆ ವಿಚಾರದಲ್ಲಿ ಹೋರಾಟ ಮಾಡಿದರೆ ಅವರಿಗೆ ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ. ಆದರೆ, ನಾವು ನಮ್ಮ ಕಾರ್ಯಕರ್ತರ ಮೇಲೆ ದುರುದ್ದೇಶದ ಕ್ರಮವನ್ನು ಪ್ರಶ್ನಿಸಿ ಪ್ರತಿಭಟನೆಗೆ ಮುಂದಾದರೆ ಅದನ್ನು ಹತ್ತಿಕ್ಕುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ. ನಮ್ಮ ಶಾಸಕರು ಸಹಜವಾಗಿ ಉದ್ವೇಗದಲ್ಲಿ ಕೆಲವು ಮಾತನಾಡಿದ್ದಾರೆ. ಅದು ಸರಿಯಲ್ಲ ಎಂದು ಅವರಿಗೂ ಅನಿಸಿದೆ ಎಂದು ತಿಳಿಸಿದರು.

click me!