
ಬೆಂಗಳೂರು (ಡಿ.23): ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬಾಯಿಗೆ ಬೀಗ ಹಾಕುವ ಶಕ್ತಿ ನನ್ನಲ್ಲಿಲ್ಲ. ಅಧಿಕಾರವಿಲ್ಲದೆ ಹತಾಶೆಯಿಂದ ಏನೇನೋ ಪ್ರಯತ್ನ ಮಾಡುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು. ‘ಕರ್ನಾಟಕದ ಕಾಂಗ್ರೆಸ್ ಸರ್ಕಾರದಲ್ಲಿ ಅಜಿತ್ ಪವಾರ್ ಹಾಗೂ ಏಕನಾಥ ಶಿಂಧೆಯಂತಹವರು ಇದ್ದಾರೆ’ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರಲ್ಲಾ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ಇದಕ್ಕೆ ಉತ್ತರಿಸಿದ ಶಿವಕುಮಾರ್, ‘ಅವರು ಮೇಧಾವಿಗಳು. ಅನುಭವ ಹೆಚ್ಚಾಗಿದೆ. ಜೋತಿಷ್ಯವೂ ಗೊತ್ತಿದೆ. ಅವರ ನುಡಿಮುತ್ತುಗಳನ್ನು ನಾವು ಸಂತೋಷದಿಂದ ಕೇಳುತ್ತಿದ್ದೇವೆ. ಅವರ ಬಾಯಿಗೆ ಬೀಗ ಹಾಕುವ ಶಕ್ತಿ ನನ್ನಲ್ಲಿಲ್ಲ’ ಎಂದು ಟಾಂಗ್ ನೀಡಿದರು.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವುದನ್ನು ಕುಮಾರಸ್ವಾಮಿ ಅವರಿಂದ ಸಹಿಸಲು ಆಗುತ್ತಿಲ್ಲ. ಅಧಿಕಾರ ಸಿಗಲಿಲ್ಲ ಎಂಬ ಹತಾಶೆಯಿಂದ ಏನೇನೋ ಪ್ರಯತ್ನ ಮಾಡುತ್ತಿದ್ದಾರೆ. ಅವರು ಮಾತನಾಡುತ್ತಿರಬೇಕು. ಅವರಿಗೆ ಒಳ್ಳೆಯದಾಗಲಿ ಎಂದು ವ್ಯಂಗ್ಯವಾಗಿ ಆಶೀರ್ವದಿಸಿದರು. ಬರಗಾಲದ ಸಂದರ್ಭದಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಾಸಗಿ ವಿಮಾನದಲ್ಲಿ ದೆಹಲಿಗೆ ತೆರಳಿದ್ದಾರೆ ಎಂದು ವಿರೋಧ ಪಕ್ಷಗಳು ಮಾಡುತ್ತಿರುವ ಟೀಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ‘ಸಮಯ ಉಳಿಸುವ ಉದ್ದೇಶದಿಂದ ಮುಖ್ಯಮಂತ್ರಿಗಳು ವಿಮಾನಗಳಲ್ಲಿ ಓಡಾಡುವುದು ಸಹಜ’ ಎಂದು ಸ್ಪಷ್ಟಪಡಿಸಿದರು.
ನಿನ್ನೆ ತನಕ ಬಿಜೆಪಿಯಲ್ಲಿನ ಕೆಲವರಲ್ಲಿ ಅಸಮಾಧಾನ ಇತ್ತು, ಈಗ ಸರಿಯಾಗಿದೆ: ಈಶ್ವರಪ್ಪ
ನೀರಿನ ದರ ಏರಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ಜನಸಾಮಾನ್ಯರ ಮನೆಗಳ ನೀರಿನ ದರ ಏರಿಕೆ ಆಗಿಲ್ಲ. 2018ರಲ್ಲಿ ತೆಗೆದುಕೊಂಡಿದ್ದ ನಿರ್ಧಾರಕ್ಕೆ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಇತ್ತು. ಹೀಗಾಗಿ 2018ರಲ್ಲಿ ನಿಗದಿ ಮಾಡಿದಂತೆ ಕೈಗಾರಿಕೆಗಳ ನೀರಿನ ದರ ಏರಿಕೆ ಮಾಡಲಾಗಿದೆ. 2013ರಿಂದ ಇಲ್ಲಿಯವರೆಗೂ ಬೆಂಗಳೂರಿನ ಜನಸಾಮಾನ್ಯರು ಬಳಸುವ ನೀರಿನ ದರವನ್ನು ಏರಿಕೆ ಮಾಡಿಲ್ಲ. ಈಗ 2018 ರ ಕಾನೂನನ್ನು ಸಕ್ರಮ ಮಾಡಿದ್ದೇವೆ’ ಎಂದು ವಿವರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.