ಕಾರ್ಮಿಕ ಕಾನೂನು ವ್ಯಾಪ್ತಿಗೆ ಐಟಿ, ಬಿಟಿ ಕಂಪನಿ?: ಸಚಿವ ಸಂತೋಷ್‌ ಲಾಡ್‌

By Kannadaprabha NewsFirst Published Dec 23, 2023, 5:43 AM IST
Highlights

ಕಾರ್ಮಿಕ ಕಾನೂನು ವ್ಯಾಪ್ತಿಗೆ ಐಟಿ ಬಿಟಿ ಕಂಪನಿಗಳನ್ನು ತರುವ ಕುರಿತು ಮುಖ್ಯಮಂತ್ರಿಗಳ ಮತ್ತು ಐಟಿ ಕಂಪನಿಗಳ ಜತೆ ಚರ್ಚಿಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಹೇಳಿದ್ದಾರೆ. 

ಬೆಂಗಳೂರು (ಡಿ.23): ಕಾರ್ಮಿಕ ಕಾನೂನು ವ್ಯಾಪ್ತಿಗೆ ಐಟಿ ಬಿಟಿ ಕಂಪನಿಗಳನ್ನು ತರುವ ಕುರಿತು ಮುಖ್ಯಮಂತ್ರಿಗಳ ಮತ್ತು ಐಟಿ ಕಂಪನಿಗಳ ಜತೆ ಚರ್ಚಿಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಹೇಳಿದ್ದಾರೆ. ಶುಕ್ರವಾರ ವಿಕಾಸಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 7,500ಕ್ಕೂ ಹೆಚ್ಚು ಐಟಿ ಬಿಟಿ ಕಂಪನಿಗಳಿದ್ದು, ಲಕ್ಷಾಂತರ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಕೆಲಸ ನಿರ್ವಹಣೆ ಮಾಡುವ ನೌಕರರಿಗೆ ಹಲವು ಸಮಸ್ಯೆಗಳಿರುತ್ತವೆ. ಕೆಲವು ಕಡೆ ಕೆಲಸದಿಂದ ತೆಗೆದುಹಾಕುವುದು, ಲೈಂಗಿಕ ಕಿರುಕುಳ, ಮಾನಸಿಕ ಒತ್ತಡ, ಕೇವಲ ರಾತ್ರಿ ಪಾಳಿ ಹಾಕುವುದು ಸೇರಿದಂತೆ ಹಲವು ಸಮಸ್ಯೆಗಳಿವೆ. 

ಈ ಸಂಬಂಧ ದೂರುಗಳು ಬಂದಿವೆ. ಆದರೆ, ಕಾರ್ಮಿಕ ಕಾನೂನುಗಳಿಂದ ಐಟಿ-ಬಿಟಿ ಕಂಪನಿಗಳು ಹೊರಗಿರುವುದರಿಂದ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದರು. ಐಟಿ-ಬಿಟಿ ನೌಕರರು ನೀಡುವ ದೂರಿಗೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಲು ಬರುವುದಿಲ್ಲ. ಹೀಗಾಗಿ ಐಟಿ ಬಿಟಿ ಕಂಪನಿಗಳನ್ನು ಕಾರ್ಮಿಕ ಕಾನೂನು ವ್ಯಾಪ್ತಿಗೆ ತರುವ ಬಗ್ಗೆ ಮುಖ್ಯಮಂತ್ರಿಗಳ ಮತ್ತು ಐಟಿ ಕಂಪನಿಗಳ ಜೊತೆ ಚರ್ಚೆ ಮಾಡಲಾಗುವುದು. ಈ ಹಿಂದೆ ಈ ಬಗ್ಗೆ ಪ್ರಸ್ತಾಪ ಇತ್ತು. ಆದರೆ ಕ್ರಮ ಕೈಗೊಂಡಿರಲಿಲ್ಲ.

ತೆಂಗು, ಕೊಬ್ಬರಿಗೆ ಹೆಚ್ಚುವರಿ ದರ ನಿಗದಿಪಡಿಸಿ: ಶೋಭಾಗೆ ದೇವೇಗೌಡ ಮನವಿ

ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿಲ್ಲ. ಮುಂದಿನ ದಿನದಲ್ಲಿ ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದರು. ಐಟಿ ಬಿಟಿ ಕಂಪನಿಗಳು ಕಾರ್ಮಿಕ ಕಾನೂನು ವ್ಯಾಪ್ತಿಗೆ ಬಂದರೆ ನೌಕರರಿಗೆ ಸಹಾಯವಾಗಲಿದೆ. ಹಾಗಂತ ಕಂಪನಿಗಳು ಒಳ್ಳೆಯ ಕೆಲಸ ಮಾಡುತ್ತಿಲ್ಲ ಎಂದರ್ಥವಲ್ಲ ಮತ್ತು ಕಂಪನಿಗಳಿಗೆ ತೊಂದರೆ ನೀಡುವ ಉದ್ದೇಶವೂ ಇಲ್ಲ. ಕಂಪನಿಯ ನೌಕರರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಕಂಪನಿಗಳನ್ನು ಕರೆಸಿ ಮಾತುಕತೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ತಿಂಗಳೊಳಗೆ ಸಾರಿಗೆ ಮಂಡಳಿ ಸ್ಥಾಪನೆ: ಆಟೋ, ಟ್ಯಾಕ್ಸಿ, ಸರಕು ಸಾಗಣೆ ಚಾಲಕರು ಸೇರಿದಂತೆ ಸಾರಿಗೆ ಕ್ಷೇತ್ರದಲ್ಲಿ ಪೂರಕವಾಗಿರುವ ಕೆಲಸ ಮಾಡುವವರ ಅಭಿವೃದ್ಧಿಗೆ ಇನ್ನೊಂದು ತಿಂಗಳೊಳಗೆ ಸಾರಿಗೆ ಮಂಡಳಿ ಸ್ಥಾಪಿಸುವುದಾಗಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ತಿಳಿಸಿದರು. ಬಿಜೆಪಿಯ ಪ್ರತಾಪಸಿಂಹ ನಾಯಕ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸಾರಿಗೆ ಕ್ಷೇತ್ರದ ಸೇರಿದಂತೆ ಇತರ ಮೂಲಗಳಿಂದ ಸುಮಾರು 274 ಕೋಟಿ ರು. ಸೆಸ್‌ ಸಂಗ್ರಹವಾಗಲಿದೆ. ಈ ಮೊತ್ತವನ್ನು ಚಾಲಕರು, ಕ್ಲಿನರ್‌, ಪಂಕ್ಚರ್‌ ಹಾಕುವವರು ಮೊದಲಾದವರ ಕಲ್ಯಾಣಕ್ಕೆ ಬಳಸಲಾಗುವುದು. ಈ ಯೋಜನೆಯಿಂದ ಸುಮಾರು 35 ಲಕ್ಷ ವಿವಿಧ ರೀತಿಯ ವಾಹನ ಚಾಲಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಶಬರಿಮಲೆಯಿಂದ ಬರುವವರಿಗೆ ಕೋವಿಡ್‌ ಪರೀಕ್ಷೆ: ಸಚಿವ ರಾಜಣ್ಣ

ಪಿಂಚಣಿ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ; ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೀಡಲಾಗುತ್ತಿರುವ ಪಿಂಚಣಿ ಧನಸಹಾಯ ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ ಎಂದು ಹೇಳಿದರು. ನೋಂದಾಯಿತ ಕಾರ್ಮಿಕರು ಮಂಡಳಿಯಲ್ಲಿ ಕನಿಷ್ಟ ಮೂರು ವರ್ಷಗಳ ಸದಸ್ಯತ್ವದೊಂದಿಗೆ 60 ವರ್ಷ ಪೂರ್ಣಗೊಂಡ ಆರು ತಿಂಗಳೊಳಗೆ ಪಿಂಚಣಿ ಕೋರಿ ನಿಗದಿತ ದಾಖಲೆಗಳೊಂದಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಿರುವುದರಿಂದ ವಯೋಮಾನ ಮೀರಿದವರು ಪಿಂಚಣಿಯಿಂದ ವಂಚಿತರಾಗಬಾರದೆಂಬ ಕಾರಣಕ್ಕೆ ಹಾಲಿ ಇರುವ ಆರು ತಿಂಗಳ ಅವಧಿಯನ್ನು ಒಂದು ವರ್ಷಕ್ಕೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಲಾಡ್‌ ವಿವರಿಸಿದರು.

click me!