ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತ್ತು ಮೂವರು ಮಾಜಿ ಸಚಿವರ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಗಳು ತಮ್ಮ ಬಳಿ ಬಾಕಿ ಇಲ್ಲ ಎಂದು ರಾಜಭವನ ಅಧಿಕೃತ ದಾಖಲೆಯನ್ನು ನ್ಯಾಯಾಲಯಕ್ಕೆ ನೀಡಿದೆ.
ಬೆಂಗಳೂರು (ಸೆ.01): ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತ್ತು ಮೂವರು ಮಾಜಿ ಸಚಿವರ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಗಳು ತಮ್ಮ ಬಳಿ ಬಾಕಿ ಇಲ್ಲ ಎಂದು ರಾಜಭವನ ಅಧಿಕೃತ ದಾಖಲೆಯನ್ನು ನ್ಯಾಯಾಲಯಕ್ಕೆ ನೀಡಿದೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಪೀಠಕ್ಕೆ ಟಿ.ಜೆ.ಅಬ್ರಾಹಂ ಪರ ವಕೀಲ ರಂಗನಾಥ್ ರೆಡ್ಡಿ ಈ ದಾಖಲೆ ಸಲ್ಲಿಸಿದರು. ರಾಜ್ಯಪಾಲರು ಕೇಂದ್ರ ಸಚಿವರು ಸೇರಿದಂತೆ ಮೂವರು ಮಾಜಿ ಸಚಿವರ ವಿರುದ್ಧ ಪ್ರಾಸಿಕ್ಯೂಷನ್ ಕೋರಿ ಸಲ್ಲಿಸಿರುವ ಅರ್ಜಿಗಳು ಬಾಕಿ ಇವೆ ಎಂದು ಆರೋಪಿಸಲಾಗುತ್ತಿದೆ.
ಆದರೆ ಯಾವುದೇ ಅರ್ಜಿಗಳು ಬಾಕಿ ಇಲ್ಲ ಎಂದು ರಂಗನಾಥ್ ರೆಡ್ಡಿ ಅವರು ಹೇಳಿದರು. ಇದಕ್ಕೆ ನ್ಯಾಯಮೂರ್ತಿ ನಾಗಪ್ರಸನ್ನ ಅವರು ನಿಮಗೆ ಈ ವಿಷಯ ಹೇಗೆ ಗೊತ್ತು ಎಂದು ಪ್ರಶ್ನಿಸಿದಾಗ, ರಂಗನಾಥ್ ರೆಡ್ಡಿ ಅವರು ಈ ಸಂಬಂಧ ಆರ್‌ಟಿಐ ಮೂಲಕ ಮಾಹಿತಿ ಪಡೆಯಲಾಗಿದೆ. ರಾಜಭವನ ಕಚೇರಿ ನೀಡಿರುವ ಉತ್ತರದಲ್ಲಿ ಯಾವುದೇ ಅರ್ಜಿ ಬಾಕಿ ಇಲ್ಲ ಎಂದು ತಿಳಿಸಲಾಗಿದೆ ಎಂದು ಹೇಳಿ, ಅಧಿಕೃತ ದಾಖಲೆಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ರಾಜ್ಯಪಾಲರ ಹೇಳಿಕೆ ಪರಿಶೀಲನೆ: ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಮೂವರು ಮಾಜಿ ಸಚಿವರ ವಿರುದ್ದ ಪ್ರಾಸಿಕ್ಯೂಷನ್ ಅನುಮತಿ ಕೋರಿ ಅನುಮತಿ ಸಲ್ಲಿಸಿರುವ ಅರ್ಜಿಗಳು ತಮ್ಮ ಬಳಿ ಬಾಕಿ ಇಲ್ಲ ಎಂದು ರಾಜ್ಯಪಾಲರು ಹೇಳಿರುವ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದರು. ಪ್ರಾಸಿಕ್ಯೂಷನ್‌ಗೆ ನೀಡುವಂತೆ ರಾಜ್ಯಪಾಲರಿಗೆ ಮನವಿ ಅರ್ಪಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿರುದ್ದದ ಪ್ರಾಸಿಕ್ಯೂಷನ್ ಅರ್ಜಿ ವಿಲೇವಾರಿ ಮಾಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೇವೆ.
ಬಿಜೆಪಿಯವರು ಪಶ್ಚಾತಾಪ ಪಡುವ ಸ್ಥಿತಿ ಬರಲಿದೆ, ಸಿದ್ದರಾಮಯ್ಯಗೆ ನ್ಯಾಯ ಸಿಕ್ಕೇ ಸಿಗುತ್ತದೆ: ಸಚಿವ ಎಂ.ಬಿ.ಪಾಟೀಲ್
ಆದರೆ ರಾಜ್ಯಪಾಲರು ನನ್ನ ಬಳಿ ಯಾವ ಅರ್ಜಿಯೂ ಬಾಕಿ ಉಳಿದಿಲ್ಲ ಎಂದು ಹೇಳಿದ್ದಾರೆ. ರಾಜ್ಯಪಾಲರು ಹೇಳಿರುವುದು ಸತ್ಯವೋ ಅಥವಾ ಸುಳ್ಳೋ ಗೊತ್ತಿಲ್ಲ. ಯಾಕೆ ಹೀಗೆ ಹೇಳಿದ್ದಾರೆ ಎಂಬುದನ್ನು ಮತ್ತೊಮ್ಮೆ ಪರಿಶೀಲಿಸಲಾಗುವುದು ಒಂದಷ್ಟು ವಿಚಾರದಲ್ಲಿ ಅವರು ಸ್ಪಷ್ಟನೆ ಕೇಳಿರಬಹುದು. ಇದನ್ನು ಸಹ ನಾವು ಪರಿಶೀಲಿಸುತ್ತೇವೆ ಎಂದು ಹೇಳಿದರು. ಅರ್ಜಿಗಳು ಇತ್ಯರ್ಥ ಆಗಿವೆ ರಾಜ್ಯಪಾಲರು ತಿಳಿಸಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಒಳಗಿನ ವಿಚಾರವನ್ನು ನಿಮ್ಮ ಬಳಿ ಚರ್ಚಿಸುವುದಿಲ್ಲ. ಅವರು ನನ್ನ ಬಳಿ ಯಾವುದೇ ಅರ್ಜಿ ಇಲ್ಲ ಎಂದು ಹೇಳಿದ್ದಾರೆ. ಅದನ್ನು ನಾವು ಪರಿಶೀಲಿಸುತ್ತೇವೆ ಎಂದು ಪ್ರತಿಕ್ರಿಯಿಸಿದರು.