ಹೆಸರು ಬದಲಾಯಿಸಿಕೊಳ್ಳಲು ನನಗೇನು ತಲೆಕೆಟ್ಟಿದೆಯಾ: ಶೋಭಾ ಕರಂದ್ಲಾಜೆ

By Anusha KbFirst Published Sep 30, 2022, 12:52 PM IST
Highlights

 ಹೆಸರು ಬದಲಾಯಿಸಿಕೊಳ್ಳಲು ನನಗೇನು ತಲೆಕೆಟ್ಟಿದೆಯಾ ಎಂದು ಕೇಂದ್ರ ಸಚಿವೆ ಶೋಭಾ ಕೆರಂದ್ಲಾಜೆ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ಇದು ಯಾರೋ ಹಬ್ಬಿಸಿದ ಸುಳ್ಳು ಸುದ್ದಿ ಎಂದು ಹೇಳಿದರು.

ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ:  ಹೆಸರು ಬದಲಾಯಿಸಿಕೊಳ್ಳಲು ನನಗೇನು ತಲೆಕೆಟ್ಟಿದೆಯಾ ಎಂದು ಕೇಂದ್ರ ಸಚಿವೆ ಶೋಭಾ ಕೆರಂದ್ಲಾಜೆ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ಇದು ಯಾರೋ ಹಬ್ಬಿಸಿದ ಸುಳ್ಳು ಸುದ್ದಿ ಎಂದು ಹೇಳಿದರು.

ಶೋಭಾ ಕರಂದ್ಲಾಜೆ ತಮ್ಮ ಹೆಸರನ್ನು ಶೋಭಾ ಗೌಡ ಎಂದು ಬದಲಿಸಿಕೊಳ್ಳುತ್ತಿರುವ ಬಗ್ಗೆ ಇತ್ತೀಚೆಗೆ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸಿದರು. ನನ್ನ ವಿರುದ್ಧ ಯಾರೋ ಷಡ್ಯಂತ್ರ ಮಾಡುತ್ತಿದ್ದಾರೆ. ಯಾಕೆ ಈ ಚರ್ಚೆ ಶುರುವಾಯಿತು ಗೊತ್ತಿಲ್ಲ. 'ರಾಜಕಾರಣಿಗಳನ್ನು ಕೆಲವರು ಜೋಕರ್ ಅಂದುಕೊಂಡಿದ್ದಾರೆ. ಮಾಧ್ಯಮ, ಸಾಮಾಜಿಕ  ಜಾಲತಾಣ, ರಾಜಕೀಯ ವಲಯ ಅಥವಾ ವಿರೋಧ ಪಕ್ಷದವರು ಅಪಪ್ರಚಾರವನ್ನು ನಿಲ್ಲಿಸಿ' ಹೀಗೆ ಅಪಪ್ರಚಾರ ಮಾಡ್ತಿರುವವರಿಗೆ ಇದು ನನ್ನ ಮನವಿ ಎಂದು ಅವರು ಹೇಳಿದರು.

ಎಸ್‌ಡಿಪಿಐನಲ್ಲಿ ಇರುವ ಪಿಎಫ್‌ಐ ಕಾರ್ಯಕರ್ತರ ವಿಚಾರಣೆ 

ಪಿಎಫ್ಐ (PFI) ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದಕ್ಕೆ ಸಾಕ್ಷ್ಯಗಳು (Evidence) ದೊರಕಿದೆ. ಪಿಎಫ್‌ಐ ಭಯೋತ್ಪಾದಕ ಚಟುವಟಿಕೆಗಳಿಗೆ ತರಬೇತಿ ನೀಡುವ ಸಂಸ್ಥೆಯಾಗಿದ್ದು, ಹಿಂದೂ ಯುವಕರ ಕೊಲೆಯಲ್ಲಿ ಭಾಗಿಯಾಗಿದೆ. ಪಿಎಫ್‌ಐ ಬ್ಯಾನ್ ಮಾಡುವ ನಿರ್ಧಾರಕ್ಕೂ ಮೊದಲು ಎನ್‌ಐಎ (NIA) ಮೂರು ವರ್ಷ ಸಾಕ್ಷ್ಯ ಸಂಗ್ರಹಿಸಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. 

ಬಾಂಬ್ ತಯಾರಿಕೆ, ಶಸ್ತ್ರಾಸ್ತ್ರ (Arms) ಬಳಕೆ ಬಗ್ಗೆ ಪಿಎಫ್‌ ಐ ತರಬೇತಿ ನೀಡುತ್ತಿತ್ತು. ಸಾಮಾಜಿಕ ಜಾಲತಾಣಗಳ ದುರ್ಬಳಕೆ ಮಾಡಿಕೊಂಡು ಈ ಕೃತ್ಯ ಮಾಡುತ್ತಿತ್ತು. ಶಿವಮೊಗ್ಗದಲ್ಲಿ ಮೂವರು ಇಂಜಿನಿಯರ್‌ಗಳ ಬಂಧನದ ನಂತರ ಈ ಮಾಹಿತಿ ಸಿಕ್ಕಿದೆ. ತುಂಗಾ ನದಿ (Tunga river) ತೀರದಲ್ಲಿ ಬಾಂಬು ಪ್ರಯೋಗ ಯಶಸ್ವಿ ಆದಾಗ ರಾಷ್ಟ್ರಧ್ವಜ (National Flag)ಅರ್ಧ ಸುಟ್ಟು ಸಂಭ್ರಮಿಸಿದ್ದಾರೆ. ಭಾರತವನ್ನು ದುರ್ಬಲಗೊಳಿಸುವುದು ಪಿಎಫ್ಐ ಉದ್ದೇಶವಾಗಿತ್ತು. ಭಾರತದ ಎಲ್ಲಾ ಸವಲತ್ತು ಪಡೆದು ದೇಶದ ವಿರುದ್ಧ ಇರುವವರ ಮಾನಸಿಕತೆ ಬದಲಾಗಬೇಕು ಎಂದರು. 

ಪ್ರಧಾನಿ ಮೋದಿಯಿಂದ ಬಲಾಢ್ಯ ರಾಷ್ಟ್ರಗಳೇ ಭಾರತದತ್ತ ನೋಡುತ್ತಿವೆ: ಸಚಿವೆ ಶೋಭಾ

ಎಸ್‌ಡಿಪಿಐ ಒಂದು ರಾಜಕೀಯ ಪಕ್ಷ, ಎಸ್‌ಡಿಪಿಐ (SDPI) ಮೇಲೆ ಕ್ರಮ ಕೈಗೊಳ್ಳಬೇಕಾದ್ದು ಚುನಾವಣಾ ಆಯೋಗ. ಎಸ್‌ಡಿಪಿಐನಲ್ಲಿರುವ ಪಿಎಫ್‌ಐ ಕಾರ್ಯಕರ್ತರ ಬಗ್ಗೆ ತನಿಖೆಯಾಗುತ್ತಿದೆ. ಆಸ್ತಿ ಮುಟ್ಟುಗೋಲುಗೆ ಗೃಹ ಇಲಾಖೆ (HOme Ministry) ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದು, ದೇಶಾದ್ಯಂತ ಜಿಲ್ಲಾಧಿಕಾರಿಗಳು ಈ ಕೆಲಸ ಮಾಡುತ್ತಿದ್ದಾರೆ. 

ಆರ್‌ಎಸ್‌ಎಸ್‌  ಬ್ಯಾನ್ ಬೇಡಿಕೆ ವಿಚಾರ

ಕಾಂಗ್ರೆಸ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು, ದೋಣಿಗೆ ನಾವಿಕನಿಲ್ಲದ ಪಕ್ಷ ಕಾಂಗ್ರೆಸ್ ಆಗಿದೆ. ಕಾಂಗ್ರೆಸ್ (Congress) ತನ್ನ ಅಸ್ತಿತ್ವ ಕಳೆದುಕೊಳ್ಳುವ ಭಯದಲ್ಲಿದೆ. ಆರ್ ಎಸ್ ಎಸ್ ನಿಷೇಧ ಮಾಡಿದಾಗ ಕಾಂಗ್ರೆಸ್‌ಗೆ ಸುಪ್ರೀಂಕೋರ್ಟ್ (Supreme Court) ಛೀಮಾರಿ ಹಾಕಿತ್ತು. ಆರ್ ಎಸ್ ಎಸ್ ಬ್ಯಾನ್ ಮಾಡಿದ ಇಂದಿರಾಗಾಂಧಿಯನ್ನು ಜನ ಸೋಲಿಸಿದ್ದರು, ಆರ್ ಎಸ್ ಎಸ್ ಯಾವ ದೇಶದ್ರೋಹಿ ಚಟುವಟಿಕೆ ಮಾಡಿದೆ? ಒಂದು ಬಾರಿ ಆರ್‌ಎಸ್‌ಎಸ್ ಶಾಖೆ ಗೆ ಭೇಟಿ ಕೊಡಿ, ಮುಸಲ್ಮಾನರನ್ನು ಓಲೈಸಲು ಈ ರೀತಿ ಹೇಳಿಕೆ ಕೊಡಬೇಡಿ ಎಂದರು. 

ಕರ್ನಾಟಕವನ್ನು ಪಿ ಎಫ್ ಐ ಫೈನಾನ್ಸಿಯಲ್ ಹಬ್ ಮಾಡಿದ್ದು ಸಿದ್ದರಾಮಯ್ಯ, ಅವರು ಪಿಎಫ್ ಐ ಕಾರ್ಯಕರ್ತರ ಕೇಸು ವಾಪಸ್ ತೆಗೆದುಕೊಂಡಿದ್ದೇ ಇದಕ್ಕೆಲ್ಲಾ ಕಾರಣ. ಆರ್ ಎಸ್ ಎಸ್ ಬಗ್ಗೆ ಪ್ರಶ್ನೆ ಮಾಡುವ ಅಧಿಕಾರ ಅರ್ಹತೆ ಕಾಂಗ್ರೆಸ್ ಗೆ ಇಲ್ಲ ಎಂದರು.

ಸಿಮಿ ಇನ್ನೊಂದು ಮುಖ ಪಿಎಫ್‌ಐ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಭಾರತ ಜೋಡೋ ರಾಹುಲ್ ಗಾಂಧಿ ಪ್ರವಾಸ

ಭಾರತವನ್ನು ಎಲ್ಲಿ ವಿಭಜನೆ ಮಾಡಿದ್ದರೋ ಅಲ್ಲಿ ಹೋಗಿ ಭಾರತ್ ಜೋಡೋ ಮಾಡಿ, ಪಾಕ್ ಆಕ್ರಮಿತ ಕಾಶ್ಮೀರ ಯಾರ ಕೊಡುಗೆ..? ಹಿಮಾಲಯದ ನೆಲದಲ್ಲಿ ಒಂದು ಹುಲ್ಲು ಕಡ್ಡಿಯೂ ಬೆಳೆಯುವುದಿಲ್ಲ ಎಂದು ನೆಹರು ಹೇಳಿದ್ದರು. ಹಾಗಾಗಿ ಹಿಮಾಲಯವನ್ನು ಬಿಟ್ಟುಕೊಡಲಾಯಿತು, ತಿನ್ ಭಿಗಾದಲ್ಲಿ ಭಾರತ ಜೋಡೋ ಮಾಡಿ, ಪಾಕ್ ಅಕ್ರಮಿತ ಕಾಶ್ಮೀರದಲ್ಲಿ ಭಾರತ ಜೋಡೋ ಮಾಡಿ. ರಾಹುಲ್ ಗಾಂಧಿ ಭಾರತದಲ್ಲಿ ಭಾರತ್ ಜೋಡು ಮಾಡುವ ಅಗತ್ಯವಿಲ್ಲ, ಪಾಕಿಸ್ತಾನ , ಚೀನಾ,  ಬಾಂಗ್ಲಾ ಗಡಿಯಲ್ಲಿ ನಿಮ್ಮ ಯಾತ್ರೆ ಮಾಡಿ. ಪಾಕಿಸ್ತಾನ ಜಿಂದಾಬಾದ್ ಅಂದವರ ಜೊತೆ ಯಾತ್ರೆ ಮಾಡುತ್ತಾ ಇದ್ದೀರಿ, ಭಾರತ್ ಜೋಡೋ ಮಾಡ್ತಾ ಇದ್ದೀರಾ ? ಭಾರತ್ ತೋಡೋ ಮಾಡ್ತಾ ಇದ್ದೀರಾ? ಸ್ಪಷ್ಟಪಡಿಸಿ ಎಂದು ಕಿಡಿಕಾರಿದರು.

ಗಂಗೊಳ್ಳಿಯಲ್ಲಿ ಮೀನುಗಾರಿಕಾ ಜಟ್ಟಿ ಕುಸಿತ

ಮೀನುಗಾರಿಕಾ ಜಟ್ಟಿ ಕಳಪೆ ಕಾಮಗಾರಿಯಾಗಿದ್ದರೆ ತಕ್ಷಣ ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ಇದೇ ವೇಳೆ  ಸಚಿವೆ ಶೋಭಾ ಕರಂದ್ಲಾಜೆ ಸೂಚನೆ ನೀಡಿದರು. ಜಟ್ಟಿ ನಿರ್ಮಾಣ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಹಾಕಿ, ಈ ನಿರ್ಮಾಣ ಸಂಸ್ಥೆ ಮುಂದೆ ಯಾವುದೇ ಕೆಲಸ ಮಾಡಲು ಅವಕಾಶ ಕೊಡಬಾರದು. ಈ ಕಾಮಗಾರಿಯ ಬಗ್ಗೆ ತನಿಖೆ ಮಾಡಿ, ಠೇವಣಿ ಇಟ್ಟಿದ್ದರೆ ಮುಟ್ಟುಗೋಲು ಹಾಕಿ, ಮೊಟಕುಗೊಂಡ ಕಾಮಗಾರಿಯನ್ನು ತಕ್ಷಣ ಆರಂಭಿಸಬೇಕು ಎಂದರು.
 

click me!