‘ಬಿಜೆಪಿ ಬಿ ಟೀಂ’ ಬಗ್ಗೆ ನಾನು ಚರ್ಚೆಗೆ ರೆಡಿ: ಕುಮಾರಸ್ವಾಮಿ

By Kannadaprabha NewsFirst Published Jan 24, 2023, 12:51 AM IST
Highlights

ಜೆಡಿಎಸ್‌ ಅನ್ನು ಬಿಜೆಪಿಯ ಬಿ ಟೀಂ ಎಂದು ದೂರಿದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದು, ‘ಸಿದ್ಧಹಸ್ತ’ರ ಪ್ರಭಾವಕ್ಕೊಳಗಾಗಿ ಸವಕಲು ಸುಳ್ಳುಗಳನ್ನೇ ಹೇಳುವ ಕರ್ಮ ನಿಮಗೇಕೆ ಬಂತು ಎಂದು ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು (ಜ.24) : ಜೆಡಿಎಸ್‌ ಅನ್ನು ಬಿಜೆಪಿಯ ಬಿ ಟೀಂ ಎಂದು ದೂರಿದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದ್ದು, ‘ಸಿದ್ಧಹಸ್ತ’ರ ಪ್ರಭಾವಕ್ಕೊಳಗಾಗಿ ಸವಕಲು ಸುಳ್ಳುಗಳನ್ನೇ ಹೇಳುವ ಕರ್ಮ ನಿಮಗೇಕೆ ಬಂತು ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್‌ ಮಾಡಿರುವ ಅವರು, ಬಿ ಟೀಂ(BJP B team) ಭಾಗವತಿಕೆ ಇಲ್ಲಿಗೇ ನಿಲ್ಲಿಸಿದರೆ ಉತ್ತಮ. ಇಲ್ಲವಾದರೆ ಮುಂದಿನ ಪರಿಣಾಮಗಳಿಗೆ ನೀವೇ ಹೊಣೆ. ರಾಜ್ಯದಲ್ಲಿ ಜಾತ್ಯತೀತ ಶಕ್ತಿಗಳು ದುರ್ಬಲವಾದರೆ ಆ ಪಾಪಕ್ಕೂ ನೀವೇ ಹೊಣೆ. ಬಿ ಟೀಂ ಯಾವ ಪಕ್ಷ ಎಂಬ ಬಹಿರಂಗ ಚರ್ಚೆಗೆ ನಾನು ಸಿದ್ಧ. ವಿಧಾನಸೌಧದ ಮುಂದೆಯೇ ಚರ್ಚೆ ನಡೆಯಲಿ. ನಿಮ್ಮ ಸಿದ್ಧಪುರುಷರ ಜತೆ ನೀವೂ ಬನ್ನಿ. ಸಮಯ, ದಿನಾಂಕ ನಾನು ನಿಗದಿ ಮಾಡಲಾ ಅಥವಾ ನೀವು ಮಾಡುತ್ತೀರಾ? ಉತ್ತರಕ್ಕೆ ಕಾಯುತ್ತಿರುತ್ತೇನೆ ಎಂದು ನೇರ ಸವಾಲು ಹಾಕಿದ್ದಾರೆ.

ಕಾಂಗ್ರೆಸ್ಸೇ ಬಿಜೆಪಿ ಬಿ ಟೀಂ: ಎಚ್‌ಡಿಕೆ ವಾಗ್ದಾಳಿ

‘ನಮ್ಮ ಜೆಡಿಎಸ್‌ ಪಕ್ಷ(JDS Party)ವನ್ನು ಬಿಜೆಪಿ ಬಿ ಟೀಂ ಎಂದು ಹಾಸನದಲ್ಲಿ ದೂರಿದ್ದಾರೆ. ಪಾಪ... ನಿಮ್ಮನ್ನು ಪ್ರಜ್ಞಾವಂತ ರಾಜಕಾರಣಿ ಎಂದು ಭಾವಿಸಿದ್ದೆ. ನೀವು ನೋಡಿದರೆ ‘ಸಿದ್ಧಭಾಷಣ’ವನ್ನೇ ನಕಲು ಮಾಡಿ ನಗೆಪಾಟಲಿಗೊಳಗಾಗಿದ್ದೀರಿ. ಸತ್ಯ ಅರಿತು ಮಾತನಾಡಿದ್ದರೆ ನಾನೂ ಖುಷಿಪಡುತ್ತಿದ್ದೆ. ಬಿಜೆಪಿ ಬಾಲಂಗೋಚಿಯನ್ನು ಪಕ್ಕದಲ್ಲೇ ಕೂರಿಸಿಕೊಂಡು ಜೆಡಿಎಸ್‌ ಅನ್ನು ಬಿಜೆಪಿ ಟೀಂ ಎಂದು ದೂರಲಾಗಿದೆ. ನಿಜಕ್ಕೂ ಆ ಬಿ ಟೀಂ ಯಾವುದು? ಅ ಟೀಂ ಕ್ಯಾಪ್ಟನ್‌ ಯಾರು? ಎನ್ನುವುದನ್ನು ನಿಮ್ಮ ಪಕ್ಕದಲ್ಲಿಯೇ ಇದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಕೇಳಬಾರದಿತ್ತೇ? ಅರೆಬರೆ ಆಲಾಪದಿಂದ ಅಪಹಾಸ್ಯಕ್ಕೆ ಈಡಾಗಿದ್ದೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'JDS, ಬಿಜೆಪಿ ಬಿ ಟೀಂ ಅಂತಾರೆ, ಕತ್ತಿಗೆ ಸ್ಲೇಟ್ ಕಟ್ಕೊಂಡು ಓಡಾಡಲಿ'

ಇಡೀ ರಾಜ್ಯವನ್ನೇ ಕೋಮುದಳ್ಳುರಿಯಲ್ಲಿ ಬೇಯುವಂತೆ ಮಾಡಿದ, ಬಿಜೆಪಿ ಸರ್ಕಾರ ಬರಲು ಮೂಲ ಕಾರಣಕರ್ತರೇ ನಿಮ್ಮ ಶಾಸಕಾಂಗ ಪಕ್ಷದ ನಾಯಕರು. ಆಪರೇಷನ್‌ ಕಮಲವೆಂಬ ಕೆಟ್ಟಕೊಳಕು ರಾಜಕೀಯದ ಸಿದ್ಧಪುರುಷರೂ ಅವರೇ. ಈಗ ಹೇಳಿ ಬಿಜೆಪಿ ಬಿ ಟೀಂ ಯಾವ ಪಕ್ಷ ? ಅದರ ಕ್ಯಾಪ್ಟನ್‌ ಯಾರು? ಧರ್ಮಸ್ಥಳದ ಸಿದ್ಧವನ, ಕಾವೇರಿ ನಿವಾಸದಲ್ಲಿ ನನ್ನ ವಿರುದ್ಧ ಮತ್ತು ನಿಮ್ಮ ಕೇಂದ್ರ ನಾಯಕರೇ ರಚಿಸಿದ ಮೈತ್ರಿ ಸರ್ಕಾರ ಕೆಡವಲು ಮುಹೂರ್ತ ಇಟ್ಟವರು ಯಾರು ಎಂದು ಕುಮಾರಸ್ವಾಮಿ ಖಾರವಾಗಿ ಪ್ರಶ್ನಿಸಿದ್ದಾರೆ.

click me!