ನಾನು ಮುಂಬರುವ ಲೋಕಸಭಾ ಚುನಾವಣೆಯ ಅಭ್ಯರ್ಥಿಯಲ್ಲ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಸ್ಪಷ್ಟಪಡಿಸಿದರು.
ಮೈಸೂರು (ಫೆ.10): ನಾನು ಮುಂಬರುವ ಲೋಕಸಭಾ ಚುನಾವಣೆಯ ಅಭ್ಯರ್ಥಿಯಲ್ಲ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸ್ಪಷ್ಟಪಡಿಸಿದರು. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ನಿಂದ ಸಿದ್ಧತೆ ನಡೆಯುತ್ತಿದೆ. ಮಂತ್ರಿಗಳು ಸ್ಪರ್ಧಿಸಬೇಕೆಂದು ಚರ್ಚೆಯಾಗಿಲ್ಲ. ಮಂತ್ರಿಗಳು ಸ್ಪರ್ಧಿಸಬೇಕೆಂಬ ಒತ್ತಾಯವಿಲ್ಲ. ಗೆಲ್ಲುವ ಅವಕಾಶ ಆಧರಿಸಿ ಅಭ್ಯರ್ಥಿಗಳ ಆಯ್ಕೆಯಾಗಲಿದೆ ಎಂದು ತಿಳಿಸಿದರು.
ನಾನು ಲೋಕಸಭೆಗೆ ಅಭ್ಯರ್ಥಿಯಲ್ಲ. ನಾನು ಅಭ್ಯರ್ಥಿ ಗೆಲುವಿಗೆ ಕೆಲಸ ಮಾಡುತ್ತೇನೆ. ನನ್ನ ಮಗ ಸುನಿಲ್ ಬೋಸ್ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತ. ಸುನಿಲ್ ಬೋಸ್ ಗೆ ಮೂರು ಬಾರಿ ವಿಧಾನಸಭೆ ಚುನಾವಣೆಯ ಟಿಕೆಟ್ ಕೊಟ್ಟಿಲ್ಲ. ಆದರೂ ಬೇಸರ ಮಾಡಿಕೊಳ್ಳದೇ ಪಕ್ಷದ ಒಳಿತಿಗಾಗಿ ಕೆಲಸ ಮಾಡುತ್ತಿದ್ದಾನೆ. ಸಹಜವಾಗಿಯೇ ಅವನಿಗಿಂತ ಕಿರಿಯರು, ಪಕ್ಷದ ಸದಸ್ಯರಲ್ಲದವರೂ ಕಾಂಗ್ರೆಸ್ ನಲ್ಲಿ ಶಾಸಕರಾಗಿದ್ದಾರೆ ಎಂದರು.
ಜೆಡಿಎಸ್‌ನ ಇಬ್ಬರು ಶಾಸಕರು ಕಾಂಗ್ರೆಸ್‌ಗೆ?: ಶಾಸಕ ಕೊತ್ತೂರು ಮಂಜುನಾಥ್
ನನ್ನ ಮಗನಿಗೇ ಟಿಕೆಟ್ ಎಂದು ಕೂಡ ನಾನು ಶಿಫಾರಸ್ಸು ಮಾಡಿಲ್ಲ. ನಂಜನಗೂಡು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಧ್ರುವನಾರಾಯಣ್ ಹಠಾತ್ ನಿಧನಾನಂತರ ಅವರ ಮಗ ದರ್ಶನ್ ಗೆ ಟಿಕೆಟ್ ನೀಡಲು ಶಿಫಾರಸು ಮಾಡಿದೆ. ಸ್ವತಃ ಸುನಿಲ್ ಬೋಸ್ ದರ್ಶನ್ ಗೆ ಟಿಕೆಟ್ ಕೊಡುವಂತೆ ಹೇಳಿದ ಎಂದು ಅವರು ಹೇಳಿದರು.
ನಮ್ಮ ಪಕ್ಷದ ಸದಸ್ಯರಲ್ಲದ ಕಳಲೆ ಕೇಶವಮೂರ್ತಿಯನ್ನು ಕಾಂಗ್ರೆಸ್ ಗೆ ಕರೆ ತಂದಾಗ, ನಂಜನಗೂಡು ಉಪ ಚುನಾವಣೆಯಲ್ಲಿ ಸುನಿಲ್ ಬೋಸ್ ಕೆಲಸ ಮಾಡಿ ಗೆಲ್ಲಿಸಿದ್ದಾನೆ. ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ. ಆದರೆ, ಇದುವರೆಗೂ ಸಿಇಸಿ ಸಭೆಯೇ ನಡೆದಿಲ್ಲ. ಹೀಗಾಗಿ, ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಿದೆ ಎಂಬ ವಿಚಾರ ಅಂತೆಕಂತೆ ಅಷ್ಟೇ ಎಂದು ಅವರು ತಿಳಿಸಿದರು.
ಮಂಡ್ಯ ಪ್ರಗತಿಪರ ಜಿಲ್ಲೆ, ಅಲ್ಲಿನ ಜನರು ಸೌಹಾರ್ದ ಒಗ್ಗಟ್ಟು ಕಾಪಾಡಿಕೊಳ್ಳಬೇಕು: ಮಂಡ್ಯ ಪ್ರಗತಿಪರ ಜಿಲ್ಲೆಯಾಗಿದೆ. ಅಲ್ಲಿನ ಜನರು ಸೌಹಾರ್ದ ಒಗ್ಗಟ್ಟು ಕಾಪಾಡಿಕೊಳ್ಳಬೇಕು. ಮಂಡ್ಯದ ಜನರು ಪ್ರಬುದ್ದರಾಗಿದ್ದು ಸಂಯಮ ಕಾಯ್ದುಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು. ಮಂಡ್ಯದ ಕೆರಗೋಡುವಿನಲ್ಲಿ ಧ್ವಜ ಸ್ತಂಭ ತೆರವು ವಿರೋಧಿಸಿ ಬಂದ್ ವಿಚಾರಕ್ಕೆ ಮೈಸೂರಿನಲ್ಲಿ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ಇದೆಲ್ಲ ಜನರ ವೈಯುಕ್ತಿಕ ವಿಚಾರ.
ಸಿದ್ದರಾಮಯ್ಯ ಸರ್ಕಾರ ಅಧಿಕಾರದಿಂದ ಕೆಳಗಿಳಿಯಲಿ: ಆರ್.ಅಶೋಕ್
ಧಾರ್ಮಿಕ ಆಚಾರ ವಿಚಾರಗಳನ್ನು ರಾಜಕೀಯಗೊಳಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ, ಸಂವಿಧಾನಕ್ಕೆ ಶೋಭೆ ತರುವುದಿಲ್ಲ ಎಂದರು. ಧರ್ಮ, ದೇವರ ಹೆಸರಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಅವಕಾಶ ಮಾಡಿಕೊಡಬಾರದು. ಕಾಂಗ್ರೆಸ್ ಸಂವಿಧಾನ, ಪ್ರಜಾಪ್ರಭುತ್ವದಲ್ಲಿ ನಂಬಿಕೆಯುಳ್ಳ ಪಕ್ಷ. ಕಾಂಗ್ರೆಸ್ ಜಾತಿ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವುದಿಲ್ಲ. ಬಿಜೆಪಿಯವರು ಜೆಡಿಎಸ್ ಜೊತೆ ಸೇರಿದ ಬಳಿಕ ಬಲ ಹೆಚ್ಚಿಸಿಕೊಳ್ಳಲು ಮುಗ್ದ ಜನರನ್ನು ಬಲಿಪಶು ಮಾಡುವುದು ಸರಿಯಲ್ಲ ಎಂದು ಅವರು ಖಂಡಿಸಿದರು.