ಲಿಂಗಸೂಗೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ ಭಾರೀ ಪೈಪೋಟಿ, ಹಾಲಿ ಕಾಂಗ್ರೆಸ್ ಶಾಸಕರು ಇದ್ರೂ ಟಿಕೆಟ್ ಗಾಗಿ ತೆರೆಮರೆಯಲ್ಲಿ ಓಡಾಟ. ಅಸ್ಪೃಶ್ಯರಿಗೆ ಟಿಕೆಟ್ ನೀಡಲು ಹೈಕಮಾಂಡ್ ಕದತಟ್ಟಿದ ಲಿಂಗಸೂಗೂರು ನಾಯಕರು.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ರಾಯಚೂರು
ರಾಯಚೂರು(ಜ.03): ರಾಯಚೂರು ಜಿಲ್ಲೆ ಲಿಂಗಸೂಗೂರು ವಿಧಾನಸಭಾ ಕ್ಷೇತ್ರವೂ ಎಸ್ ಸಿ ಮೀಸಲು ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಮೂರು ಪಕ್ಷದಲ್ಲಿ ಭೋವಿ ಸಮಾಜದ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಾ ಬಂದಿದ್ದಾರೆ. ಹೀಗಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅಸ್ಪೃಶ್ಯರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ನಾಯಕರು ಹೈಕಮಾಂಡ್ ಬಾಗಿಲು ತಟ್ಟುತ್ತಿದ್ದಾರೆ. ಆದ್ರೆ ಲಿಂಗಸೂಗೂರು ಮೀಸಲು ಕ್ಷೇತ್ರದಲ್ಲಿ ಹಾಲಿ ಶಾಸಕ ಡಿ.ಎಸ್. ಹೂಲಗೇರಿ ಬೋವಿ ಸಮಾಜದವರಾಗಿದ್ದು, ಲಿಂಗಸೂಗೂರು ವಿಧಾನಸಭಾ ಕ್ಷೇತ್ರದಲ್ಲಿ ಮೂಲ ಅಸ್ಪೃಶ್ಯರಿಗೆ ಅನ್ಯಾಯ ಮಾಡಲಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಸಾಮಾಜಿಕ ನ್ಯಾಯದ ಅಡಿಯಲ್ಲಿ ಕಾಂಗ್ರೆಸ್ ಟಿಕೆಟ್ ಅಸ್ಪೃಶ್ಯರಿಗೆ ನೀಡಬೇಕೆಂದ ಕಾಂಗ್ರೆಸ್ ಮುಖಂಡರು ಭಾರೀ ಕಸರತ್ತು ನಡೆಸಿದ್ದಾರೆ.
undefined
ಒಂದು ಮಾಹಿತಿ ಪ್ರಕಾರ ಹಾಲಿ ಶಾಸಕರು ಇರುವ ಕಡೆ ಕೆಪಿಸಿಸಿ ನಿರ್ದೇಶನದಂತೆ ಹಾಲಿ ಶಾಸಕರ ಹೆಸರು ಅದರ ಜೊತೆಗೆ ಒಂದು ಹೆಸರು ಮತ್ತು ಶಾಸಕರಿಲ್ಲದ ಕ್ಷೇತ್ರಗಳಲ್ಲಿ ಮೂರು ಹೆಸರು ಶಿಫಾರಸ್ಸು ಮಾಡಲು ಜಿಲ್ಲಾ ಚುನಾವಣಾ ಸಮಿತಿಯು ನಿರ್ಧರಿಸಿದ್ದು, ಪ್ರದೇಶ ಕಾಂಗ್ರೆಸ್ ಸಮಿತಿಯ ನಿರ್ದೇಶನದಂತೆ ಜಿಲ್ಲಾ ಚುನಾವಣಾ ಸಮಿತಿ ಸಭೆಯು ಮಾಜಿ ಸಚಿವ, ಚುನಾವಣೆ ಸಮಿತಿ ಉಸ್ತುವಾರಿ ಶರಣಪ್ರಕಾಶ್ ಪಾಟೀಲ್ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ನೇತೃತ್ವದಲ್ಲಿ ರಾಯಚೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಭಾಗವಹಿಸಿದ ಲಿಂಗಸೂಗೂರು ಟಿಕೆಟ್ ಆಕಾಂಕ್ಷಿಗಳು ಸಭೆ ಬಳಿಕ ಮಾಧ್ಯಮಗಳ ಮುಂದೆ ತಮಗೆ ಟಿಕೆಟ್ ನೀಡಬೇಕೆಂದು ಹೇಳಿಕೆ ನೀಡಿದ್ರು.
ಸಂಪರ್ಕ ರಸ್ತೆಗಳ ನಿರ್ಮಾಣಕ್ಕೆ ಕೇಂದ್ರದ ಆದ್ಯತೆ: ಸಂಸದ ರಾಜಾ ಅಮರೇಶ್ವರ ನಾಯಕ
ಕಾಂಗ್ರೆಸ್ ಟಿಕೆಟ್ ಬಗ್ಗೆ ನಾಯಕರ ಆಕ್ರೋಶದ ಮಾತು: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಲ್ಕೋಡ್ ಹಣಮಂತ ಹೇಳುವುದೇನು?
ರಾಯಚೂರಿನ ಕಾಂಗ್ರೆಸ್ ಕಚೇರಿಯಲ್ಲಿ ವಿಧಾನಸಭಾ ಚುನಾವಣಾ ಸಮಿತಿ ಆಗಮಿಸಿ ಟಿಕೆಟ್ ಆಕಾಂಕ್ಷಿಗಳನ್ನ ಕರೆದು ಅವರ ಅಭಿಪ್ರಾಯ ಸಂಗ್ರಹಿಸಿದ್ರು. ಈ ವೇಳೆ ಲಿಂಗಸೂಗೂರು ಮೀಸಲು ಕ್ಷೇತ್ರಕ್ಕೆ ಟಿಕೆಟ್ ಗಾಗಿ ಅರ್ಜಿ ಸಲ್ಲಿಕೆ ಮಾಡಿದ ಮಾಜಿ ಸಚಿವ ಆಲ್ಕೋಡ್ ಹಣಮಂತಪ್ಪ ಸಹ ಸಭೆಗೆ ಹಾಜರ್ ಆಗಿದ್ರು. ಸಭೆ ಬಳಿಕ ಲಿಂಗಸೂಗೂರು ಕ್ಷೇತ್ರಕ್ಕೆ ಸ್ಥಳೀಯರಿಗೆ ಟಿಕೆಟ್ ನೀಡಬೇಕು. ನಾನು ಮಾಜಿ ಸಚಿವ ಇದ್ದೇನೆ. ಯಾವುದೇ ಕಪ್ಪು ಚುಕ್ಕೆ ಆರೋಪವೂ ನನ್ನ ಮೇಲೆ ಇಲ್ಲ. ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ನೀವೂ ಜನರ ಅಭಿಪ್ರಾಯ ಸಂಗ್ರಹಿಸಿ, ಒಂದೇ ಒಂದು ಆರೋಪ ಬಂದ್ರೂ ನನಗೆ ಟಿಕೆಟ್ ನೀಡಬೇಡಿ, ನಾನು ಹಾಗೇ ಪಕ್ಷಕ್ಕಾಗಿ ದುಡಿಯುವೆ, ನಮ್ಮ ರಾಯಚೂರು ಜಿಲ್ಲೆಯಲ್ಲಿ ಒಂದೇ ಒಂದು ಮೀಸಲು ಕ್ಷೇತ್ರ ಇರುವುದು ಅದು ಲಿಂಗಸೂಗೂರು ವಿಧಾನಸಭಾ ಕ್ಷೇತ್ರ. ಲಿಂಗಸೂಗೂರು ಕ್ಷೇತ್ರದಲ್ಲಿ ಬೇರೆ ಜಿಲ್ಲೆಯವರಿಗೆ ಕಾಂಗ್ರೆಸ್ ಟಿಕೆಟ್ ನೀಡುವುದು ಬೇಡ. ಸ್ಥಳೀಯ ಅಸ್ಪೃಶ್ಯರಿಗೆ ಟಿಕೆಟ್ ನೀಡಿ, ಹಾಲಿ ಶಾಸಕ ಡಿ.ಎಸ್. ಹೂಲಗೇರಿಗೆ ಲಿಂಗಸೂಗೂರು ಕ್ಷೇತ್ರದ ಮೇಲೆ ಪ್ರೀತಿಯಿಲ್ಲ. ಜಿ.ಪಂ. ಸಭೆಯೂ ಶಾಸಕ ಡಿ.ಎಸ್. ಹೂಲಗೇರಿ ಹೋಗಿಲ್ಲ. ತ್ರೈಮಾಸಿಕ ಸಭೆಗೂ ಶಾಸಕ ಡಿ.ಎಸ್. ಹೂಲಗೇರಿ ಹಾಜರ್ ಇರಲ್ಲ. ಸ್ಥಳೀಯರಿಗೆ ಟಿಕೆಟ್ ನೀಡಬೇಕು, ಅದರಲ್ಲೂ ಮಾದಿಗ ಸಮುದಾಯಕ್ಕೆ ಟಿಕೆಟ್ ನೀಡಬೇಕು. ಇಡೀ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದಲ್ಲಿ ಮಾದಿಗ ಸಮುದಾಯವೂ 40 ಸಾವಿರಕ್ಕೂ ಅಧಿಕ ಮತದಾರರು ನಾವು ಇದ್ದೇವೆ. ನಮ್ಮ ಸಮುದಾಯವನ್ನ ಕಾಂಗ್ರೆಸ್ ಹೈಕಮಾಂಡ್ ಕಡೆಗಣಿಸಲ್ಲ ಎಂಬ ಭರವಸೆ ಇದೆ ಎಂದ್ರು.
ಮೂಲ ಅಸ್ಪೃಶ್ಯರಿಗೆ ಕೈ ಟಿಕೆಟ್ ನೀಡಲು ಎಚ್.ಬಿ. ಮುರಾರಿ ಆಗ್ರಹ:
ಲಿಂಗಸೂಗೂರು ವಿಧಾನಸಭಾ ಕ್ಷೇತ್ರವೂ ಮೀಸಲು ಕ್ಷೇತ್ರ. ಆದ್ರೆ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಲಿಂಗಸೂಗೂರು ಕ್ಷೇತ್ರದಲ್ಲಿ ಮೂಲ ಅಸ್ಪೃಶ್ಯರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಸಿಕ್ಕಿಲ್ಲ. ವಲಸೆ ಬಂದವರಿಗೆ ಮಾತ್ರ ಕೈ ಟಿಕೆಟ್ ಸಿಕ್ಕಿದೆ. ಈ ಸಹ ಕಾಂಗ್ರೆಸ್ ಟಿಕೆಟ್ ಗಾಗಿ ನಾಲ್ಕು ಜನ ಮೂಲ ಅಸ್ಪೃಶ್ಯ ನಾಯಕರು ಅರ್ಜಿ ಸಲ್ಲಿಕೆ ಮಾಡಿದ್ದೇವೆ. ನಾಲ್ಕು ಜನರಲ್ಲಿ ಯಾರಾದರೂ ನೀಡಲಿ.ಆದ್ರೆ ಮೂಲ ಅಸ್ಪೃಶ್ಯರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಹೈಕಮಾಂಡ್ ನಾಯಕರಿಗೆ ನಾವು ಮನವರಿಕೆ ಮಾಡಿದ್ದೇವೆ. ಪಕ್ಷವು ಸಾಮಾಜಿಕ ನ್ಯಾಯದ ಅಡಿಯಲ್ಲಿ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಮೂಲ ಅಸ್ಪೃಶ್ಯರಿಗೆ ನೀಡುತ್ತಾರೆ ಎಂಬ ಭರವಸೆ ಇದೆ ಎಂದು ಎಚ್.ಬಿ. ಮುರಾರಿ ತಿಳಿಸಿದರು.
ಹಾಲಿ ಶಾಸಕ ಡಿ.ಎಸ್. ಹೂಲಗೇರಿ ಕ್ಷೇತ್ರದಲ್ಲಿ ಬಿರುಸಿನ ಓಡಾಟ:
ಲಿಂಗಸೂಗೂರು ಹಾಲಿ ಶಾಸಕ ಡಿ.ಎಸ್.ಹೂಲಗೇರಿ ಬೋವಿ ಸಮುದಾಯಕ್ಕೆ ಸೇರಿದವರು. ನೇರ- ನುಡಿ ಸ್ವಭಾವದ ಶಾಸಕ ಡಿ.ಎಸ್. ಹೂಲಗೇರಿ, ನನಗೆ ಈ ಬಾರಿಯೂ ಕಾಂಗ್ರೆಸ್ ಟಿಕೆಟ್ ಸಿಗುತ್ತೆ ಅಂತ ನಂಬಿಕೆ ಇಟ್ಟುಕೊಂಡು ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಕಾರ್ಯದಲ್ಲಿ ತೊಡಗಿದ್ದಾರೆ. ಅಷ್ಟೇ ಅಲ್ಲದೆ ಇಡೀ ಕ್ಷೇತ್ರದಲ್ಲಿ ನಾನು ನೂರಾರು ಅಭಿವೃದ್ಧಿ ಕಾರ್ಯಗಳು ಮಾಡಿದ್ದೇನೆ. ಕ್ಷೇತ್ರದ ಜನರು ಮತ್ತು ಪಕ್ಷ ಸದಾಕಾಲ ನನ್ನ ಜೊತೆಗೆ ಇರುತ್ತೆ...ಏಕೆಂದರೆ ನಾನು ಶಾಸಕನಾದ ಮೇಲೆ ಲಿಂಗಸೂಗೂರು ಪಟ್ಟಣದ ಗಾರ್ಡನ್ ಅಭಿವೃದ್ಧಿಗೊಳಿಸಿದ್ದೇನೆ. ಆಟದ ಮೈದಾನ, ಡಿಗ್ರಿ ಕಾಲೇಜು, ಅಂಬೇಡ್ಕರ್ ಭವನ ಕಟ್ಟಿಸಿದ್ದೇನೆ. ಸಬ್ ರಿಜಿಸ್ಟರ್ ಆಫೀಸ್ ಹೊಸದಾಗಿ ನಿರ್ಮಿಸಲಾಗಿದೆ. ಲಿಂಗಸೂಗೂರು ಪಟ್ಟಣಕ್ಕೆ 24X7 ಕುಡಿಯುವ ನೀರಿಗಾಗಿ 220 ಕೋಟಿ ರೂಪಾಯಿ ಯೋಜನೆ ಸಿದ್ದವಾಗುತ್ತಿದೆ. ಅದರಲ್ಲಿ 100 ಕೋಟಿ ಬಿಡುಗಡೆ ಆಗಿದೆ. ಲಿಂಗಸೂಗೂರು ಕ್ಷೇತ್ರದಲ್ಲಿ ಎರಡು- ಮೂರು ಕಡೆ ರಸ್ತೆ ಅಭಿವೃದ್ಧಿ ಬಿಟ್ಟರೇ ಕ್ಷೇತ್ರದ ಎಲ್ಲಾ ರಸ್ತೆಗಳನ್ನು ಮಾಡಿದ್ದೇನೆ. ಮುದಗಲ್ ಪಟ್ಟಣವನ್ನು ತಾಲೂಕಾ ಕೇಂದ್ರ ಮಾಡುವುದು ಇದೆ. ಹಟ್ಟಿ ಪಟ್ಟಣದಲ್ಲಿ ಒಂದು ಗಾರ್ಮೆಂಟ್ ಸ್ಕೂಲ್ ಮಾಡುವುದು ಇದೆ. ಮುದಗಲ್ ಪಟ್ಟಣದಲ್ಲಿ ಗುತ್ತಿಗೆದಾರ ಮತ್ತು ಸರ್ಕಾರದ ವೈಮನಸ್ಸಿನಿಂದ 24X7 ಕುಡಿಯುವ ನೀರಿನ ಯೋಜನೆ ನೆನೆಗುದ್ದಿಗೆ ಬಿದ್ದಿದೆ. ಲಿಂಗಸೂಗೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ಎಷ್ಟೇ ಜನರು ಅರ್ಜಿ ಸಲ್ಲಿಕೆ ಮಾಡಿದ್ರೂ ನನಗೆ ಟಿಕೆಟ್ ಸಿಗುತ್ತೆ. ನೂರಕ್ಕೆ ನೂರು ನನಗೆ ಟಿಕೆಟ್ ಖಾಯಂ ಅಂತ ಶಾಸಕ ಡಿ.ಎಸ್. ಹೂಲಗೇರಿ ಓಡಾಟ ನಡೆಸಿದ್ದಾರೆ.
ಸಿಎಂ ಬೊಮ್ಮಾಯಿಗೆ ಅಧಿಕಾರವಿಲ್ಲ: ಸಿ.ಎಂ.ಇಬ್ರಾಹಿಂ
ಆರ್. ರುದ್ರಯ್ಯ ಪತ್ನಿ ಕಾಂಗ್ರೆಸ್ ಪರ ಪ್ರಚಾರ:
ಮತ್ತೊಂದು ಕಡೆ ನಿವೃತ್ತ ಇಂಜಿನಿಯರ್ ಆರ್. ರುದ್ರಯ್ಯ. ಲಿಂಗಸೂಗೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನ ಪ್ರಬಲ ಆಕಾಂಕ್ಷಿಯಾಗಿದ್ದು, ಕಾಂಗ್ರೆಸ್ ಟಿಕೆಟ್ ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅರ್ಜಿ ಸಲ್ಲಿಕೆಗೂ ಮುನ್ನವೂ ಲಿಂಗಸೂಗೂರು ಕ್ಷೇತ್ರದಲ್ಲಿ ಓಡಾಟ ಮಾಡಿ ಲಿಂಗಸೂಗೂರು ಕ್ಷೇತ್ರದಲ್ಲಿ ನನಗೆ ಆರ್ಶಿವಾದ ಮಾಡಿ ಎಂದು ಮನವಿ ಮಾಡುತ್ತಾ ಓಡಾಟ ನಡೆಸಿದ್ದರು. ಈಗ ವಿಧಾನಸಭಾ ಚುನಾವಣೆಗೆ ಇನ್ನೂ 3-4 ತಿಂಗಳು ಮಾತ್ರ ಬಾಕಿಯಿದೆ. ಹೀಗಾಗಿ ಆರ್. ರುದ್ರಯ್ಯ ನವರ ಪತ್ನಿ ಗಿರಿಜಮ್ಮ ಕೂಡ ಜನರಿಗೆ ಹೊಸ ಕ್ಯಾಲೆಂಡರ್ ವಿತರಣೆ ಮಾಡುತ್ತಾ ವಿದ್ಯಾವಂತರಿಗೆ ತಾವೂಗಳು ಬೆಂಬಲಿಸಿ ಎಂದು ಕಾಂಗ್ರೆಸ್ ಪರ ಪ್ರಚಾರ ಶುರು ಮಾಡಿದ್ದಾರೆ.
ಒಟ್ಟಿನಲ್ಲಿ ಲಿಂಗಸೂಗೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ಭಾರೀ ಪೈಪೋಟಿ ಶುರುವಾಗಿದೆ. ಆದ್ರೆ ಕಾಂಗ್ರೆಸ್ ಹೈಕಮಾಂಡ್ ಹಾಲಿ ಶಾಸಕರಿಗೆ ಟಿಕೆಟ್ ನೀಡುತ್ತಾ ಅಥವಾ ಹೊಸ ಮುಖಂಡರಿಗೆ ಟಿಕೆಟ್ ನೀಡುತ್ತಾರಾ ಎಂಬುವುದು ಕಾದು ನೋಡಬೇಕಾಗಿದೆ.