ನನ್ನ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಸಿಡಿ ಇಲ್ಲ. ಸೆಕ್ಸ್ ಸ್ಕ್ಯಾಂಡಲ್‌ನಲ್ಲಿ ಸಿಲುಕಿಲ್ಲ. ನನಗೆ ಟಿಕೆಟ್ ನಿರಾಕರಣೆಗೆ ಕಾರಣವೇನು? ಎಂಬುದಕ್ಕೆ ಹೈಕಮಾಂಡ್‌ನಲ್ಲಿ ಒಬ್ಬರೂ ಉತ್ತರಿಸುತ್ತಿಲ್ಲ. ನನ್ನ ಕುಟುಂಬದವರಿಗೆ ಯಾರಿಗಾದರೂ ಟಿಕೆಟ ಕೊಡುತ್ತೇವೆ ಎಂದು ವರಿಷ್ಠರು ಹೇಳಿದ್ದರು. ಆದರೆ ನನಗ್ಯಾಕೆ ಟಿಕೆಟ್ ಕೊಡುತ್ತಿಲ್ಲ ಎಂಬುದಕ್ಕೆ ಅವರು ಬಳಿ ಉತ್ತರವಿಲ್ಲ ಎಂದರು.
ಹುಬ್ಬಳ್ಳಿ (ಏ.16) : ನಾನೇ ಕಟ್ಟಿದ ಮನೆಯಿಂದ ಹೊರಹೋಗುವಂತಹ ಪರಿಸ್ಥಿತಿ ಬಂದಿದೆ. ಇದು ನನಗೆ ತುಂಬಾ ದುಃಖವಾಗುತ್ತಿದೆ ಎಂದು ಭಾವನಾತ್ಮಕವಾಗಿ ನುಡಿದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ನನ್ನ ವಿರುದ್ಧ ಯಾರಾರಯರು ಷಡ್ಯಂತ್ರ ಮಾಡಿದರು. ಏನೆಲ್ಲ ಮಾಡಿದರು ಎಂಬುದನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಜನರ ಮುಂದಿಡುವೆ ಎಂದು ತಿಳಿಸಿದ್ದಾರೆ ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ವಿಶ್ವದಲ್ಲೇ ಎತ್ತರದ ಸ್ಥಾನಕ್ಕೆ ಒಯ್ಯುತ್ತಿದ್ದರೆ, ಅವರಿಗೆ ಗೊತ್ತಿಲ್ಲದೇ ಕೆಲವರು ಸ್ವಹಿತಕ್ಕಾಗಿ ಪಕ್ಷವನ್ನು ಬಲಿಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ಟಿಕೆಟ್(BJP Ticket)ಗಾಗಿ ಪಟ್ಟು ಹಿಡಿದಿದ್ದ ಶೆಟ್ಟರ್(Jagadish shettar) ಅವರು, ಶನಿವಾರ ರಾತ್ರಿ ನಡೆದ ತುರ್ತು ಸುದ್ದಿಗೋಷ್ಠಿ ನಡೆಸಿ ತಮ್ಮ ನೋವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. 3 ತಿಂಗಳಿಂದ ಪಕ್ಷದಲ್ಲಿ ಉಸಿರು ಗಟ್ಟುವ ವಾತಾವರಣ ಸೃಷ್ಟಿಮಾಡಿದ್ದರು. ನನ್ನ ವಿರುದ್ಧ ಭಾರೀ ಷಡ್ಯಂತ್ರ ನಡೆಸಿದ್ದರು. ಅದನ್ನೆಲ್ಲ ಯಾರಾರು ಮಾಡಿದ್ದರು. ಏಕೆ ಮಾಡಿದರು ಎಂಬುದನ್ನೆಲ್ಲ ತಿಳಿಸುತ್ತೇನೆ ಎಂದರು.
Jagadish shettar: ಹೈಕಮಾಂಡ್ ಏನು ನಿರ್ಧಾರ ಮಾಡುತ್ತದೆ ಎಂಬುದನ್ನು ನೋಡಿಕೊಂಡು ಮುಂದಿನ ನಿರ್ಧಾರ: ಜಗದೀಶ ಶೆಟ್ಟರ್
ಜನಸಂಘದ ಕಾಲದಿಂದಲೂ ಪಕ್ಷದಲ್ಲಿದ್ದೇನೆ. ಆಕಸ್ಮಿಕವಾಗಿ ಈ ರಾಜಕೀಯಕ್ಕೆ ಬಂದವನು. ರಾಷ್ಟ್ರಧ್ವಜ ಹೋರಾಟದಲ್ಲಿ ಜೈಲು ಕೂಡ ಸೇರಿಕೊಂಡಿದ್ದೆ. ಊರೂರು ಅಲೆದು ಪಕ್ಷ ಕಟ್ಟಿದ್ದೆ. ಯಡಿಯೂರಪ್ಪ,(BS Yadiyurappa) ದಿ.ಅನಂತಕುಮಾರ ಅವರ ನೇತೃತ್ವದಲ್ಲಿ ಉತ್ತರ ಕರ್ನಾಟಕ ಅಷ್ಟೇ ಇಡೀ ರಾಜ್ಯದಲ್ಲೇ ಪಕ್ಷವನ್ನು ಕಟ್ಟಿದ್ದೇವು. ಇದೀಗ ಕೆಲ ವ್ಯಕ್ತಿಗಳ ಸ್ವಹಿತಾಸಕ್ತಿಗಾಗಿ ಪಕ್ಷವನ್ನು ಬಲಿಕೊಡುವ ಕೆಲಸ ಮಾಡಲಾಗುತ್ತಿದೆ. ನಾವೇ ಕಟ್ಟಿದ ಮನೆಯನ್ನು ಬಿಟ್ಟು ಹೋಗುವ ಪರಿಸ್ಥಿತಿ ಬಂದಂತಾಗಿದೆ ಎಂದು ಭಾವುಕರಾದರು.
ನನ್ನ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಸಿಡಿ ಇಲ್ಲ. ಸೆಕ್ಸ್ ಸ್ಕಾ್ಯಂಡಲ್‌ನಲ್ಲಿ ಸಿಲುಕಿಲ್ಲ. ನನಗೆ ಟಿಕೆಟ್ ನಿರಾಕರಣೆಗೆ ಕಾರಣವೇನು? ಎಂಬುದಕ್ಕೆ ಹೈಕಮಾಂಡ್‌ನಲ್ಲಿ ಒಬ್ಬರೂ ಉತ್ತರಿಸುತ್ತಿಲ್ಲ. ನನ್ನ ಕುಟುಂಬದವರಿಗೆ ಯಾರಿಗಾದರೂ ಟಿಕೆಟ ಕೊಡುತ್ತೇವೆ ಎಂದು ವರಿಷ್ಠರು ಹೇಳಿದ್ದರು. ಆದರೆ ನನಗ್ಯಾಕೆ ಟಿಕೆಟ್ ಕೊಡುತ್ತಿಲ್ಲ ಎಂಬುದಕ್ಕೆ ಅವರು ಬಳಿ ಉತ್ತರವಿಲ್ಲ ಎಂದರು.
ಯಡಿಯೂರಪ್ಪ ಹಾಗೂ ಈಶ್ವರಪ್ಪ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗಿದ್ದಾರೆ. ಹೀಗಾಗಿ ಪಕ್ಷದಲ್ಲಿ ಅತ್ಯಂತ ಸಿನಿಯರ್ ಅಂತ ಇದ್ದವನು ನಾನೊಬ್ಬನೇ. ಬಿಜೆಪಿ ಅಧಿಕಾರಕ್ಕೆ ಬಂದರೆ ಸಿಎಂ ಸ್ಥಾನಕ್ಕೆ ಕ್ಲೇಮು ಮಾಡುತ್ತೇನೆ ಎಂಬ ಭಯ ಕೆಲವರಿಗೆ ಇತ್ತು. ಹೀಗಾಗಿ ನನ್ನನ್ನು ಸೈಡ್‌ಗೆ ಸರಿಸಿಬಿಟ್ಟರೆ ಮುಗಿತು ಎಂದುಕೊಂಡು ನನ್ನ ವಿರುದ್ಧ ಷಡ್ಯಂತ್ರ ಮಾಡಿದರು ಎಂದು ಕಿಡಿಕಾರಿದರು. ನಿಮ್ಮ ವಿರುದ್ಧ ಷಡ್ಯಂತ್ರ ಮಾಡಿದವರು ಯಾರು? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇನ್ನು ದಿನಗಳು ಬಹಳ ಇವೆ. ಇವತ್ತೇ ಎಲ್ಲ ಹೇಳಿದರೆ ಸರಿ ಅನಿಸುವುದಿಲ್ಲ. ಯಾರಾರು ಷಡ್ಯಂತ್ರ ಮಾಡಿದರು ಎಂಬುದನ್ನೆಲ್ಲ ಮುಂದೆ ಹೇಳುತ್ತೇನೆ ಎಂದರು
ನಿವೃತ್ತಿಯಾದರೂ ಗೌರವಯುತವಾಗಿ ಆಗಬೇಕು: ಜಗದೀಶ ಶೆಟ್ಟರ್
ಲಿಂಗಾಯತರು ಟಾರ್ಗೆಟ್:
ಲಿಂಗಾಯತ ನಾಯಕರನ್ನು ಟಾರ್ಗೆಟ್ ಮಾಡಲಾಗುತ್ತಿದೆಯೇ? ಎಂಬ ಪ್ರಶ್ನೆಗೆ, ಈಗ ನೋಡಿದರೆ ಹಾಗೆ ಅನಿಸುತ್ತದೆ ಎಂದು ಮಾರ್ಮಿಕವಾಗಿ ನುಡಿದರು. ಟಿಕೆಟ್ ವಂಚಿತರು, ನಿಮ್ಮೊಂದಿಗೆ ಮಾತನಾಡಿದ್ದಾರೆಯೇ ಎಂಬ ಪ್ರಶ್ನೆಗೆ, ಬೇರೆ ಬೇರೆ ಹಂತಗಳಲ್ಲಿ ಹಲವರು ಮಾತನಾಡಿದ್ದಾರೆ. ನಾಳೆಯಿಂದ ಅತೃಪ್ತರೊಂದಿಗೂ ಮಾತನಾಡುತ್ತೇನೆ ಎಂದು ನುಡಿದರು.
ಸಂಧಾನಕ್ಕೆ ಬಂದ ಮುಖಂಡರಿಗೆ ಪ್ರತಿಭಟನೆ ಬಿಸಿ
ಜಗದೀಶ ಶೆಟ್ಟರ್ ಅವರೊಂದಿಗೆ ಸಂಧಾನ ನಡೆಸಲು ಆಗಮಿಸಿದ್ದ ಪಕ್ಷದ ವರಿಷ್ಠರಿಗೆ ಬೆಂಬಲಿಗರಿಂದ ಪ್ರತಿಭಟನೆ ಬಿಸಿ ತಟ್ಟಿತು. ಮುತ್ತಿಗೆ ಹಾಕಲು ಯತ್ನಿಸಿದ್ದ ಬೆಂಬಲಿಗರನ್ನು ದಾಟಿಕೊಂಡು ಹೊರಹೋಗುವುದೇ ಮುಖಂಡರಿಗೆ ದೊಡ್ಡ ಸವಾಲಾಗಿತ್ತು. ಪೊಲೀಸರು, ಭದ್ರತಾ ಸಿಬ್ಬಂದಿ ಮಧ್ಯ ಪ್ರವೇಶಿಸಿ ಮುಖಂಡರನ್ನು ಸುರಕ್ಷಿತವಾಗಿ ಕಳುಹಿಸಿದರು.
ಬೆಳಿಗ್ಗೆಯಿಂದಲೇ ನಾನಾ ನಾಟಿಕೀಯ ಬೆಳವಣಿಗೆಗೆ ಕಾರಣವಾಗಿದ್ದ ಶೆಟ್ಟರ್ ಅವರ ನಿವಾಸಕ್ಕೆ ಬೆಳಿಗ್ಗೆ 10ರ ಸುಮಾರಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗಮಿಸಿದ್ದರು. ಈ ವೇಳೆಯಲ್ಲೂ ಬೆಂಬಲಿಗರಿಂದ ಪ್ರತಿಭಟನೆ ಎದುರಿಸುವಂತಾಯಿತು. ಶೆಟ್ಟರ್ ಭಾವಚಿತ್ರಗಳನ್ನಿಡಿದು ಬೆಂಬಲಿಗರು ಪ್ರತಿಭಟನೆ ನಡೆಸಿದರು.
ಬಳಿಕ ರಾತ್ರಿ ಪಕ್ಷದ ಹೈಕಮಾಂಡ್ ಸೂಚನೆ ಮೇರೆಗೆ ಶೆಟ್ಟರ್ ನಿವಾಸಕ್ಕೆ ರಾಜ್ಯ ಚುನಾವಣಾ ಪ್ರಭಾರಿ ಧಮೇಂದ್ರ ಪ್ರಧಾನ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗಮಿಸಿದ್ದರು. ಈ ವೇಳೆಯಲ್ಲೂ ಶೆಟ್ಟರ್ ನಿವಾಸದ ಸರ್ಕಲ್‌ನಿಂದಲೇ ಮೂವರು ಮುಖಂಡರು ಪ್ರತಿಭಟನೆ ಎದುರಿಸಬೇಕಾಯಿತು. ಈ ಮೂವರು ಮುಖಂಡರು ಒಳಗೆ ಸಭೆ ನಡೆಸುತ್ತಿದ್ದರೆ, ಇತ್ತ ಹೊರಗೆ ಪ್ರತಿಭಟನೆ ಕಾವು ಪಡೆಯುತ್ತಿತ್ತು.
ಒಂದು ಗಂಟೆ ಬಳಿಕ ಹೊರ ಬಂದ ಮುಖಂಡರ ಹೇಳಿಕೆ ಪಡೆಯಲು ಮಾಧ್ಯಮದವರು ಮುಂದೆ ಹೋದರು. ಆದರೆ ಮಾಧ್ಯಮಗಳಿಗೆ ಹೇಳಿಕೆ ನೀಡಲು ಮುಖಂಡರು ಹಿಂಜರಿದು ಅಲ್ಲಿಂದ ಕಾಲ್ಕತ್ತಲು ಪ್ರಯತ್ನಿಸಿದರು. ಮುಖಂಡರು ಹೀಗೆ ಮಾಡುತ್ತಿದ್ದಂತೆ ನೆರೆದಿದ್ದ ಶೆಟ್ಟರ್ ಬೆಂಬಲಿಗರಿಗೆ ಸಂಧಾನ ವಿಫಲವಾಗಿದೆ ಎಂಬುದು ಖಚಿತವಾಯಿತು. ಆಗ ಶೆಟ್ಟರ್ ಪರ ಘೋಷಣೆ ಕೂಗುತ್ತಾ ಮುತ್ತಿಗೆ ಹಾಕಲು ಯತ್ನಿಸಿದರು. ನೆರೆದಿದ್ದ ಬೆಂಬಲಿಗರನ್ನು ದಾಟಿಕೊಂಡು ಬೊಮ್ಮಾಯಿ, ಜೋಶಿ, ಧಮೇಂದ್ರ ಪ್ರಧಾನ ಅವರು ಹೊರಹೋಗುವುದೇ ಕಷ್ಟವಾಯಿತು. ಕೊನೆಗೆ ಎದುರಿಗಿದ್ದ ಮಾಧ್ಯಮದವರನ್ನು ಭದ್ರತಾ ಸಿಬ್ಬಂದಿ ತಳ್ಳಿಕೊಂಡು ಗೇಟ್ ಹೊರಗೆ ಕರೆದುಕೊಂಡು ಹೋದರೆ ಅಲ್ಲಿ ಬೆಂಬಲಿಗರ ಗುಂಪು ದೊಡ್ಡದಾಗಿತ್ತು. ಅಲ್ಲೂ ಭದ್ರತಾ ಸಿಬ್ಬಂದಿ ಸುರಕ್ಷತಾ ವಲಯದಂತೆ ಸುತ್ತಲೂ ಮಾನವ ಸರಪಳಿಯಂತೆ ಮಾಡಿಕೊಂಡು ಮೂವರನ್ನು ಸುರಕ್ಷಿತವಾಗಿ ಕಾರು ಹತ್ತಿಸಿ ಅಲ್ಲಿಂದ ಕಳುಹಿಸಿದರು.
ಟಿಕೆಟ್ ನೀಡಲು ಘೋಷಣೆ, ಕಣ್ಣೀರು
ಇನ್ನು ಶೆಟ್ಟರ್ ನಿವಾಸದ ಮುಂದೆ ಸಾವಿರಾರು ಜನ ಅಭಿಮಾನಿಗಳು ಸೇರಿ ಶೆಟ್ಟರ್ ಭಾವಚಿತ್ರ ಹಿಡಿದು ಮಾಜಿ ಸಿಎಂ ಜಗದೀಶ ಶೆಟ್ಟರ್‌ಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.
ಬೇಕೆ ಬೇಕು ಶೆಟ್ಟರ ಬೇಕು, ಮಾಜಿ ಮುಖ್ಯ ಮಂತ್ರಿ ಜಗದೀಶ ಶೆಟ್ಟರಗೆ ಟಿಕೆಟ್ ನೀಡಬೇಕು ಎಂದು ಘೋಷಣೆ ಕೂಗಿದರು. ಕೆಲವು ಮಹಿಳಾ ಕಾರ್ಯಕರ್ತೆಯರು ಅಜಾತ ಶತ್ರು ಶೆಟ್ಟರ್‌ಗೆ ಟಿಕೆಟ್ ಕೊಡದೇ ಮತ್ಯಾರಿಗೆ ಟಿಕೆಟ್ ಕೊಡುತ್ತೀರಿ, ಮಗುವಿನಿಂಥ ಮನಸ್ಸಿನ ನಾಯಕನ ಮನಸ್ಸು ನೋಯಿಸಿದರೆ ನಿಮಗೆ ಒಳ್ಳೆಯದಾಗಲ್ಲ ಎನ್ನುತ್ತಲೇ ಕಣ್ಣೀರು ಹಾಕಿದರು.