149 ಸ್ಥಾನಗಳಿಗೆ ಟಿಕೆಟ್ ಘೋಷಣೆ, 76 ಕ್ಷೇತ್ರ ಬಾಕಿ, ಬಿಎಸ್‌ವೈ ಆಪ್ತ ಎನ್.ಆರ್.ಸಂತೋಷ್ ಜೆಡಿಎಸ್‌ಗೆ.
ಬೆಂಗಳೂರು(ಏ.16): ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ನಲ್ಲಿ ಟಿಕೆಟ್ ಸಿಗದೆ ಜೆಡಿಎಸ್‌ನತ್ತ ಮುಖ ಮಾಡಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಹಿರಿಯ ನಾಯಕ ಎ.ಬಿ.ಮಾಲಕರಡ್ಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಪ್ತ ಎನ್.ಆರ್.ಸಂತೋಷ್ ಅವರು ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಯಾದರು.
ಶನಿವಾರ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಹಲವು ನಾಯಕರು ಜೆಡಿಎಸ್‌ಗೆ ಸೇರಿದರು. ಪಕ್ಷಕ್ಕೆ ಸೇರ್ಪಡೆಯಾದ ಬೆನ್ನಲ್ಲೇ ಮಾಲಕರಡ್ಡಿ ಅವರಿಗೆ ಯಾದಗಿರಿ ಕ್ಷೇತ್ರದಿಂದ ಟಿಕೆಟ್ ಘೋಷಣೆ ಮಾಡಲಾಯಿತು. ಶುಕ್ರವಾರಷ್ಟೇ 50 ಮಂದಿಯ ಅಭ್ಯರ್ಥಿಯನ್ನು ಅಂತಿಮಗೊಳಿಸಿದ ಎಚ್.ಡಿ.ಕುಮಾರಸ್ವಾಮಿ, ಶನಿವಾರ ಮತ್ತೆ ಆರು ಮಂದಿಯ ಹೆಸರನ್ನು ಅಖೈರುಗೊಳಿಸಿದರು. ಇದುವರೆಗೆ ಒಟ್ಟು 149 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದಂತಾಗಿದೆ.
ಚಾಮರಾಜಕ್ಕೆ ಭವಾನಿ, ನರಸಿಂಹರಾಜಕ್ಕೆ ಇಬ್ರಾಹಿಂ ಬರ್ತಾರ?
ಕಾಂಗ್ರೆಸ್ ತೊರೆದು ಜೆಡಿಎಸ್‌ಗೆ ಸೇರ್ಪಡೆಯಾದ ವಿಧಾನಪರಿಷತ್‌ನ ಮಾಜಿ ಸದಸ್ಯ ರಘು ಆಚಾರ್ ಅವರಿಗೆ ಚಿತ್ರದುರ್ಗ ಕ್ಷೇತ್ರದಿಂದ ಟಿಕೆಟ್ ಘೋಷಣೆ ಮಾಡಲಾಗಿದೆ. ಯಾದಗಿರಿ ಕ್ಷೇತ್ರದಿಂದ ಮಾಲಕರೆಡ್ಡಿ ಅವರಿಗೆ ಟಿಕೆಟ್ ನೀಡಲಾಗಿದೆ. ಮಡಿಕೇರಿ ಕ್ಷೇತ್ರದಿಂದ ಎನ್.ಎಂ. ಮುತ್ತಪ್ಪ, ಮೂಡಬಿದಿರೆ ಕ್ಷೇತ್ರದಿಂದ ಅಮರಶ್ರೀ, ವರುಣ ಕ್ಷೇತ್ರದಿಂದ ಮಾಜಿ ಶಾಸಕ ಡಾ.ಭಾರತಿ ಶಂಕರ್ ಸ್ಪರ್ಧಿಸಲಿದ್ದಾರೆ. ಬಾಗಲಕೋಟೆ ಕ್ಷೇತ್ರದಿಂದ ಕಾಂಗ್ರೆಸ್ ಬಿಟ್ಟು ಜೆಡಿಎಸ್‌ಗೆ ಬಂದ ದೇವರಾಜ್ ಪಾಟೀಲ್‌ಗೆ ಟಿಕೆಟ್ ನೀಡಲಾಗಿದೆ. ಸಂತೋಷ್ ಅವರಿಗೂ ಅರಸೀಕೆರೆ ಕ್ಷೇತ್ರದಿಂದ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ. ಪುನರ್‌ವಿಂಗಡನೆಗೂ ಮುನ್ನ ಭಾರತಿ ಶಂಕರ್ ಟಿ.ನರಸೀಪುರ ಕ್ಷೇತ್ರದ ಶಾಸಕರಾಗಿದ್ದು ಆಗ ವರುಣ ಸಹ ಟಿ.ನರಸೀಪುರ ಕ್ಷೇತ್ರದ ವ್ಯಾಪ್ತಿಯಲ್ಲಿತ್ತು. ಈಗ ವರುಣ ಪ್ರತ್ಯೇಕ ಕ್ಷೇತ್ರವಾಗಿದ್ದು, ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಮತ್ತೆ 5 ವರ್ಷದವರೆಗೂ ನಿಮ್ಮ ಜೊತೆಗಿರುವಂತೆ ಮಾಡಿ
ಬಿಜೆಪಿಯಿಂದ ಟಿಕೆಟ್ ಸಿಗದ ಕಾರಣ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಭಾರತಿ ಶಂಕರ್ ಕಣಕ್ಕಿಳಿಯಲಿದ್ದಾರೆ. ಜೆಡಿಎಸ್‌ನ ಮೊದಲಪಟ್ಟಿಯಲ್ಲಿ ಅಭಿಷೇಕ ಎಂಬುವರನ್ನು ವರುಣ ಕ್ಷೇತ್ರಣದ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿತ್ತು. ಆದರೆ, ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದು, ಕಾರ್ಯಕರ್ತರಿಗೆ ಲಭ್ಯವಾಗುತ್ತಿಲ್ಲ. ಪಕ್ಷದ ನಾಯಕರ ಸಂಪರ್ಕದಲ್ಲಿಯೂ ಇಲ್ಲ. ಹೀಗಾಗಿ ಜೆಡಿಎಸ್, ವರುಣ ಕ್ಷೇತ್ರದ ಅಭ್ಯರ್ಥಿಯನ್ನು ಬದಲಿಸಿ ಭಾರತಿಶಂಕರ್‌ಗೆ ಟಿಕೆಟ್ ನೀಡಲಾಗಿದೆ.
ಎನ್.ಆರ್.ಸಂತೋಷ್, ಮಾಲಕರೆಡ್ಡಿ ಅವರನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರನ್ನು ಪಕ್ಷದ ಶಾಲು ಹೊದಿಸಿ ಬರಮಾಡಿಕೊಂಡರು. ಜೆಡಿಎಸ್ ಇದೀಗ 148 ಮಂದಿಯನ್ನು ಅಂತಿಮಗೊಳಿಸಿದಂತಾಗಿದ್ದು, ಇನ್ನು 76 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟಿಸಬೇಕಾಗಿದೆ. ಶೀಘ್ರದಲ್ಲಿಯೇ ಜೆಡಿಎಸ್ ಉಳಿದ ಕ್ಷೇತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.