ಸಂವಿಧಾನ ತಿದ್ದದೆ ಮೀಸಲಾತಿ ಹೆಚ್ಚಳ ಹೇಗೆ?: ಸಿದ್ದರಾಮಯ್ಯ ಪ್ರಶ್ನೆ

Published : Oct 11, 2022, 02:15 AM IST
ಸಂವಿಧಾನ ತಿದ್ದದೆ ಮೀಸಲಾತಿ ಹೆಚ್ಚಳ ಹೇಗೆ?: ಸಿದ್ದರಾಮಯ್ಯ ಪ್ರಶ್ನೆ

ಸಾರಾಂಶ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳದ ನಿರ್ಧಾರವನ್ನು ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿರುವ ರಾಜ್ಯದ ಬಿಜೆಪಿ ಸರ್ಕಾರ, ಈ ಹೆಚ್ಚಳದ ಅನುಷ್ಠಾನದ ಪ್ರಕ್ರಿಯೆ ಬಗ್ಗೆ ವಿವರ ನೀಡದೆ ಮೌನವಾಗಿದೆ. ಈ ಮೂಲಕ ಆ ಸಮುದಾಯಗಳನ್ನು ತಪ್ಪುದಾರಿಗೆಳೆಯುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. 

ಬೆಂಗಳೂರು (ಅ.11): ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳದ ನಿರ್ಧಾರವನ್ನು ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿರುವ ರಾಜ್ಯದ ಬಿಜೆಪಿ ಸರ್ಕಾರ, ಈ ಹೆಚ್ಚಳದ ಅನುಷ್ಠಾನದ ಪ್ರಕ್ರಿಯೆ ಬಗ್ಗೆ ವಿವರ ನೀಡದೆ ಮೌನವಾಗಿದೆ. ಈ ಮೂಲಕ ಆ ಸಮುದಾಯಗಳನ್ನು ತಪ್ಪುದಾರಿಗೆಳೆಯುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ರಾಜ್ಯದಲ್ಲಿ ಒಟ್ಟು ಮೀಸಲಾತಿಯ ಮಿತಿ ಶೇ.50ಕ್ಕಿಂತ ಹೆಚ್ಚಾಗಬೇಕಾದರೆ ಸಂವಿಧಾನ ತಿದ್ದುಪಡಿ ಅಗತ್ಯ. ಸಂವಿಧಾನ ತಿದ್ದುಪಡಿಗೆ ಕ್ರಮವೇ ಕೈಗೊಳ್ಳದೆ ಎಸ್ಸಿ ಮೀಸಲಾತಿಯನ್ನು ಶೇ.15ರಿಂದ 17ಕ್ಕೆ, ಎಸ್ಟಿ ಮೀಸಲಾತಿ ಶೇ.3ರಿಂದ 7ಕ್ಕೆ ಹೆಚ್ಚಳ ಮಾಡುವುದಾಗಿ ಹೇಳುತ್ತಿದ್ದೀರಿ. 

ಸಂವಿಧಾನದ ತಿದ್ದುಪಡಿ ಮಾಡದೆ ಒಟ್ಟು ಮೀಸಲಾತಿ ಮಿತಿಯನ್ನು ಶೇ.56ಕ್ಕೆ ಹೇಗೆ ಹೆಚ್ಚಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಎಸ್ಸಿ-ಎಸ್ಟಿಮೀಸಲಾತಿ ಹೆಚ್ಚಿಸಬೇಕೆಂಬ ಬೇಡಿಕೆಯ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ನ್ಯಾ.ನಾಗಮೋಹನ್‌ದಾಸ್‌ ಸಮಿತಿ ನೇಮಿಸಿತ್ತು. ಸಮಿತಿಯ ಶಿಫಾರಸುಗಳಿಗೆ ಅನುಗುಣವಾಗಿ ಎಸ್ಸಿ, ಎಸ್‌ಟಿ ಮೀಸಲಾತಿಯನ್ನು ಕ್ರಮವಾಗಿ ಶೇ.17 ಮತ್ತು ಶೇ.7ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ. ಈ ಮೀಸಲಾತಿ ಅನುಷ್ಠಾನಕ್ಕೆ ಮೊದಲು ರಾಜ್ಯದ ವಿಧಾನಮಂಡಲ ನಿರ್ಣಯ ಕೈಗೊಂಡು ಸಂವಿಧಾನದ ತಿದ್ದುಪಡಿಗಾಗಿ ಕೇಂದ್ರ ಸರ್ಕಾರಕ್ಕೆ ಕಳಿಸಬೇಕು. 

ಬಿಜೆಪಿ ಮಹಾನ್‌ ಸುಳ್ಳುಗಾರನೆಂದು ಮತ್ತೆ ಸಾಬೀತು: ಸಿದ್ದರಾಮಯ್ಯ

ಕೇಂದ್ರ ಸರ್ಕಾರ ಸಂಸತ್‌ನಲ್ಲಿ ಸಂವಿಧಾನ ತಿದ್ದುಪಡಿ ಮಸೂದೆಗೆ ಅಂಗೀಕಾರ ಪಡೆದು ಮಸೂದೆಗೆ ರಾಷ್ಟ್ರಪತಿಗಳ ಅಂಕಿತ ಪಡೆದರೆ ಮಾತ್ರ ಜಾರಿಯಾಗಲಿದೆ ಎಂದು ಸ್ಪಷ್ಟಪಡಿಸಿದರು. ಹೀಗಾಗಿ ಈ ಮೀಸಲಾತಿ ಹೆಚ್ಚಳದ ಅನುಷ್ಠಾನದ ಪ್ರಕ್ರಿಯೆ ದೀರ್ಘವಾದದ್ದು ಮಾತ್ರವಲ್ಲ, ಆಳುವ ಪಕ್ಷದ ರಾಜಕೀಯ ಇಚ್ಛಾಶಕ್ತಿಯನ್ನೂ ಅವಲಂಬಿಸಿದೆ. ಮೀಸಲಾತಿ ಹೆಚ್ಚಳದ ಈ ಪ್ರಕ್ರಿಯೆ ಸುಲಭದ ಕೆಲಸ ಅಲ್ಲ. ಹೀಗಾಗಿ ಹೇಗೆ ಹೆಚ್ಚಿಸುತ್ತೇವೆ ಎಂಬ ಬಗ್ಗೆ ರಾಜ್ಯ ಸರ್ಕಾರ ತನ್ನ ನಿಲುವು ತಿಳಿಸಬೇಕು ಎಂದು ಒತ್ತಾಯಿಸಿದರು.

ಸಂವಿಧಾನ ತಿದ್ದುಪಡಿ ಅನಿವಾರ್ಯ: ರಾಜ್ಯದಲ್ಲಿ ಈಗ ಹಿಂದುಳಿದ ಜಾತಿಗಳಿಗೆ ಶೇ.32, ಪರಿಶಿಷ್ಟಜಾತಿಗಳಿಗೆ ಶೇ.15 ಮತ್ತು ಪರಿಶಿಷ್ಟಪಂಗಡಗಳಿಗೆ ಶೇ.3ರಷ್ಟುಅಂದರೆ ಒಟ್ಟು ಶೇ.50ರಷ್ಟುಮೀಸಲಾತಿ ಇದೆ. ಎಸ್ಸಿ, ಎಸ್ಟಿಮೀಸಲು ಹೆಚ್ಚಳದಿಂದ ಈ ಪ್ರಮಾಣ ಶೇ.56ರಷ್ಟುಆಗಲಿದೆ. ಸುಪ್ರೀಂಕೋರ್ಟ್‌ (ಇಂದಿರಾ ಸಹಾನಿ ಪ್ರಕರಣದ) ತೀರ್ಪಿನ ಪ್ರಕಾರ ಒಟ್ಟು ಮೀಸಲಾತಿ ಶೇ. 50 ಮೀರುವಂತಿಲ್ಲ. ಈ ಮಿತಿಯನ್ನು ಮೀರದೆ ಎಸ್ಸಿ, ಎಸ್ಟಿಗೆ ಶೇ.6ರಷ್ಟು ಮೀಸಲಾತಿ ಹೆಚ್ಚಳ ಸಾಧ್ಯವಿಲ್ಲ. ಈ ಮಿತಿ ಮೀರಲು ಸಂವಿಧಾನ ತಿದ್ದುಪಡಿ ಅನಿವಾರ್ಯ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಐಕ್ಯತೆಗಾಗಿ ಜೋಡೊ ಯಾತ್ರೆಯಲ್ಲಿ ಭಾಗವಹಿಸಿ: ಧರ್ಮ ಮತ್ತು ಜಾತಿ ರಾಜಕಾರಣ ಮೂಲಕ ದ್ವೇಷ, ಅಸೂಯೆ ಬಿತ್ತುತ್ತಿರುವ ಬಿಜೆಪಿ ಸರ್ಕಾರವನ್ನು ಧಿಕ್ಕರಿಸಲು ಮತ್ತು ಐಕ್ಯತೆ, ಶಾಂತಿಗಾಗಿ ‘ಭಾರತ ಜೋಡೊ’ ಯಾತ್ರೆಯಲ್ಲಿ ಪಾಲ್ಗೊಳ್ಳಿ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಮನವಿ ಮಾಡಿದರು. ನಗರದ ಎಂ.ಪಿ. ಪ್ಯಾಲೆಸ್‌ನಲ್ಲಿ ಸೋಮವಾರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಹಮ್ಮಿಕೊಂಡಿದ್ದ ‘ಭಾರತ ಐಕ್ಯತಾ ಯಾತ್ರೆ’ಯ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು. ಭಾರತದ ಇತಿಹಾಸದಲ್ಲಿಯೇ ಇಷ್ಟೊಂದು ದೊಡ್ಡ ಪಾದಯಾತ್ರೆಯಾಗಿಯೇ ಇಲ್ಲ. 

ನಾನು ಸಿದ್ದು ಒಂದಾಗಿದ್ದೇವೆ, ಬಿಜೆಪಿ ಆಟ 6 ತಿಂಗಳಷ್ಟೇ: ಡಿಕೆಶಿ

ಇದೇ ಮೊದಲ ಬಾರಿಗೆ ರಾಜಕೀಯ ಉದ್ದೇಶ ಇಲ್ಲದೆ, ಶಾಂತಿಗಾಗಿ ಮತ್ತು ಬಾಂಧವ್ಯಕ್ಕಾಗಿ ರಾಜಕೀಯ ಪಕ್ಷವೊಂದು ಪಾದಯಾತ್ರೆಯನ್ನು ಮಾಡುತ್ತಿದೆ. ರಾಹುಲ್‌ ಗಾಂಧಿಯವರು ವಿಶೇಷವಾದ ಪಾದಯಾತ್ರೆ ಮಾಡುತ್ತಿದ್ದಾರೆ. ದೇಶದಲ್ಲಿ ಬಿಜೆಪಿ ಜಾತಿಗಳಲ್ಲಿ ವಿಷ ಹಿಂಡುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಜನರ ಸಮಸ್ಯೆ, ಬಡತನ, ಬೆಲೆ ಏರಿಕೆ, ಭ್ರಷ್ಟಾಚಾರ, ರೈತರ ಸಮಸ್ಯೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬೊಮ್ಮಾಯಿ ಪರಿಹಾರ ಮಾಡುತ್ತಿಲ್ಲವಾದ್ದರಿಂದ ಜನರು ರೋಸಿ ಹೋಗಿದ್ದಾರೆ. ರಾಹುಲ್‌ ಗಾಂಧಿ ಅವರು ಸ್ವಾರ್ಥಕ್ಕಾಗಿ ಪಾದಯಾತ್ರೆ ಮಾಡುತ್ತಿಲ್ಲ. ಜನರ ರಕ್ಷಣೆ, ಏಕತೆ, ಒಗ್ಗೂಡಿಸಲು ‘ಭಾರತ ಜೋಡೊ’ ಯಾತ್ರೆ ಮಾಡುತ್ತಿದ್ದಾರೆ. ಬಿಜೆಪಿ 40 ಪರ್ಸೆಂಟ್‌ ಸರ್ಕಾರವಾಗಿದೆ. ಈ ಸರ್ಕಾರ ಕಿತ್ತೊಗೆಯಲು ಸಮಾವೇಶದಲ್ಲಿ ಭಾಗವಹಿಸಿ ಎಂದು ಕೋರಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೋಗಿಲು ಅಕ್ರಮ ನಿವಾಸಿಗಳು 20 ವರ್ಷದಿಂದಲ್ಲ, 6 ತಿಂಗಳ ಹಿಂದೆ ಬಂದವರು: 2023ರ ನಕ್ಷೆ ತೋರಿಸಿದ-ಆರ್. ಅಶೋಕ್
28 ವರ್ಷದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ; Rahul Gandhi-Priyanka Gandhi ಫುಲ್‌ ಖುಷ್!