ದೇಶದಲ್ಲಿ ಹಿಂದಿ ಹೇರಿಕೆ ಸಂಬಂಧ ರಾಷ್ಟ್ರಪತಿಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಮಿತಿ ಸಲ್ಲಿಸಿರುವ ವರದಿ ಆಘಾತಕಾರಿ ಮಾತ್ರವಲ್ಲ ಒಕ್ಕೂಟ ವ್ಯವಸ್ಥೆಯ ವಿನಾಶಕ್ಕೆ ದಾರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಅ.11): ದೇಶದಲ್ಲಿ ಹಿಂದಿ ಹೇರಿಕೆ ಸಂಬಂಧ ರಾಷ್ಟ್ರಪತಿಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಸಮಿತಿ ಸಲ್ಲಿಸಿರುವ ವರದಿ ಆಘಾತಕಾರಿ ಮಾತ್ರವಲ್ಲ ಒಕ್ಕೂಟ ವ್ಯವಸ್ಥೆಯ ವಿನಾಶಕ್ಕೆ ದಾರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸೋಮವಾರ ಸರಣಿ ಟ್ವೀಟ್ ಮೂಲಕ ಕಿಡಿಕಾರಿರುವ ಅವರು, ಕೇಂದ್ರ ಸರ್ಕಾರ ತನ್ನ ಹಿಂದಿ ಹೇರಿಕೆ ಮಾಡುವ ಚಾಳಿ ಮುಂದುವರಿಸಿದೆ. ಇಡೀ ಭಾರತವನ್ನು ಹಿಡೆನ್ ಅಜೆಂಡಾ ಮೂಲಕ ಹಿಡಿದಿಟ್ಟುಕೊಳ್ಳುವ ಕಪಟ ಯತ್ನ ಮಾಡುತ್ತಿದೆ ಎಂದು ಕಟುವಾಗಿ ಟೀಕಿಸಿದ್ದಾರೆ.
ಕೇಂದ್ರದ ವರದಿಯ ಶಿಫಾರಸುಗಳನ್ನು ಓದಿ ನನಗೆ ದೊಡ್ಡ ಆಘಾತವೇ ಆಯಿತು. ಸರ್ವಾಧಿಕಾರಿ ಮನಸ್ಥಿತಿಯಿಂದ ಕನ್ನಡವೂ ಸೇರಿ ಪ್ರಾದೇಶಿಕ ಭಾಷೆಗಳನ್ನು ಹೊಸಕಿ ಹಾಕಿ ಇಡೀ ದೇಶದ ಮೇಲೆ ಹಿಂದಿ ಹೇರಿ ಬಹುತ್ವದ ಭಾರತವನ್ನು ’ಹಿಂದಿಸ್ತಾನ್’ ಮಾಡುವ ಹುನ್ನಾರ ಇದರ ಹಿಂದಿದೆ ಎಂದು ಅವರು ದೂರಿದ್ದಾರೆ. ವರದಿಯಲ್ಲಿರುವ ಅನೇಕ ಶಿಫಾರಸುಗಳು ಭಾರತೀಯ ಒಕ್ಕೂಟ ವ್ಯವಸ್ಥೆಯನ್ನು ಸೀಳಿ, ಛಿದ್ರ ಮಾಡುವಂತಿವೆ. ಒಂದು ದೇಶ, ಒಂದು ಧರ್ಮ, ಒಂದು ಭಾಷೆ ಎನ್ನುವ ವಿಚ್ಛಿದ್ರಕಾರಿ ನೀತಿಯ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ನಿರ್ನಾಮ ಮಾಡುವುದೇ ಅಮಿತ್ ಶಾ ಸಮಿತಿಯ ಅಮಿತೋದ್ದೇಶ.
ವಾಗ್ದಾನ ಪೂರೈಸದಿದ್ದರೆ ಜೆಡಿಎಸ್ ಪಕ್ಷ ವಿಸರ್ಜನೆ: ಎಚ್.ಡಿ.ಕುಮಾರಸ್ವಾಮಿ
ಏಕಭಾಷೆಯ ಅಧಿಪತ್ಯವನ್ನು ಭಾರತ ಒಪ್ಪುವುದಿಲ್ಲ. ಬಹುತ್ವದಲ್ಲಿ ಏಕತೆಯ ಮೂಲಕ ಅಖಂಡವಾಗಿರುವ ಭಾರತವನ್ನು ಒಡೆದು ಆಳುವ ನೀತಿ ರಾಷ್ಟ್ರದ ಒಡಕಿಗೆ ಕಾರಣವೂ ಆಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ಈ ವರದಿಯನ್ನು ಹಿಂಪಡೆದು, ಎಲ್ಲ ಭಾಷೆಗಳನ್ನೂ ಸಮಾನವಾಗಿ ನೋಡುವ ಸಂವಿಧಾನದ ಆಶಯವನ್ನು ಎತ್ತಿ ಹಿಡಿಯಬೇಕು. ಹಿಂದಿ ಪ್ರದೇಶಗಳಲ್ಲಿಯೂ ಹಿಂದಿ ಮಾತನಾಡುವವರ ಸಂಖ್ಯೆ ಕಡಿಮೆ ಇದೆ. ಹಿಂದಿಗಿಂತ ಇತರೆ ಭಾಷೆಗಳನ್ನು ಮಾತನಾಡುವ ಜನರೇ ದೇಶದಲ್ಲಿ ಹೆಚ್ಚಿದ್ದಾರೆ. ಸತ್ಯಸ್ಥಿತಿ ಹೀಗಿದ್ದರೂ ಬಿಜೆಪಿ ಹಿಂದಿ ಹೇರಿಕೆ ಮಾಡುತ್ತಿದೆ.
ನನ್ನ ಕಣ್ಮುಂದೆ ಜೆಡಿಎಸ್‌ಗೆ ಮತ್ತೆ ಅಧಿಕಾರ: ದೇವೇಗೌಡ
ತ್ರಿಭಾಷಾ ಸೂತ್ರಕ್ಕೆ ತಿಲಾಂಜಲಿ ನೀಡುವ ಹುನ್ನಾರ ಇದು. ಆರ್ಯ ಸಂಸ್ಕೃತಿಯ ತುಷ್ಟೀಕರಣವನ್ನು ಸಹಿಸುವ ಪ್ರಶ್ನೆ ಇಲ್ಲ ಎಂದು ಗುಡುಗಿದ್ದಾರೆ. ದಕ್ಷಿಣ ಭಾರತದಲ್ಲಿ ಆಟ ನಡೆಯುವುದಿಲ್ಲ ಎನ್ನುವ ಕಾರಣಕ್ಕೇ ಬಿಜೆಪಿ ಅಡ್ಡದಾರಿಯಲ್ಲಿ ಕರ್ನಾಟಕದಲ್ಲಿ ಅಧಿಕಾರ ಹಿಡಿಯಿತು. ಅದರ ಪರಿಣಾಮ ಹೆಜ್ಜೆಹೆಜ್ಜೆಗೂ ಕನ್ನಡಕ್ಕೆ ಕಂಟಕ ಎದುರಾಯಿತು. ಈಗ ಕನ್ನಡ ಸೇರಿ ತೆಲುಗು, ತಮಿಳು, ಮಲೆಯಾಳಂ, ಮರಾಠಿ, ಒರಿಯಾ ಸೇರಿ ಎಲ್ಲ ಅನ್ಯಭಾಷೆಗಳ ಅವಸಾನಕ್ಕೆ ಕೇಂದ್ರ ಸರ್ಕಾರ ಮಹೂರ್ತ ಇಟ್ಟಿದೆ. ಯಾವುದೇ ಕಾರಣಕ್ಕೂ ಈ ವರದಿಯ ಶಿಫಾರಸುಗಳ ಜಾರಿಗೆ ಅವಕಾಶ ನೀಡಬಾರದು. ಎಲ್ಲ ರಾಜ್ಯಗಳೂ, ಅದರಲ್ಲೂ ದಕ್ಷಿಣದ ರಾಜ್ಯಗಳು ಒಗ್ಗಟ್ಟಾಗಿ ವಿರೋಧಿಸಬೇಕು. ಎಲ್ಲ ಭಾಷೆಗಳಲ್ಲಿ ಒಂದಷ್ಟೇ ಆಗಿರುವ ಹಿಂದಿ ಭಾಷೆಯ ಹೇರಿಕೆ ಎಂದರೆ, ಒಕ್ಕೂಟ ವ್ಯವಸ್ಥೆಗೆ ಹೆಡೆಮುರಿ ಕಟ್ಟುವ ದುಸ್ಸಾಹಸ ಎಂದೇ ಭಾವಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.