ವಿಧಾನಸಭೆ ಚುನಾವಣೆ 2023ರಲ್ಲಿ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರಿಗಾಗಿ ಕಾಂಗ್ರೆಸ್ ಮುಖಂಡರು ಕೋಲಾರದಲ್ಲಿ ವಾಸ್ತು ಇರುವ ಮನೆ ಹಾಗೂ ಕಚೇರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಕೋಲಾರ (ಜ.20): ವಿಧಾನಸಭೆ ಚುನಾವಣೆ 2023ರಲ್ಲಿ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರಿಗಾಗಿ ಕಾಂಗ್ರೆಸ್ ಮುಖಂಡರು ಕೋಲಾರದಲ್ಲಿ ವಾಸ್ತು ಇರುವ ಮನೆ ಹಾಗೂ ಕಚೇರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಬೈರೇಗೌಡ ನಗರ, ಜಯನಗರ ಮತ್ತು ಇತರ ಸ್ಥಳಗಳಲ್ಲಿ ಕೆಲವು ಮನೆಗಳನ್ನು ಗುರುತಿಸಲಾಗಿದೆ, ಆದರೆ ಇಲ್ಲಿಯವರೆಗೆ ಯಾವುದನ್ನೂ ಅಂತಿಮಗೊಳಿಸಲಾಗಿಲ್ಲ. ಮನೆ ಹಾಗೂ ಕಚೇರಿಯ ಆಯ್ಕೆಯಲ್ಲಿ ಕೆಲ ಷರತ್ತುಗಳನ್ನು ವಿಧಿಸಲಾಗಿದೆ.
ಮನೆಯು ಬೆಂಗಳೂರು-ಚೆನ್ನೈ ಹೆದ್ದಾರಿ ಪಕ್ಕದಲ್ಲಿಯೇ ಇರಬೇಕು ಎಂದು ಸೂಚಿಸಲಾಗಿದೆ. ಇದರಿಂದ ಜನರಿಗೆ ತಲುಪಲು ಅನುಕೂಲವಾಗಲಿದೆ. ಅಲ್ಲದೆ, ತಮ್ಮನ್ನು ಭೇಟಿ ಮಾಡಲು ಬರುವ ನಾಯಕರ ವಾಹನ ನಿಲುಗಡೆಗೆ ಸ್ಥಳಾವಕಾಶ, ಮನೆ ನಿರ್ಮಿಸಿಕೊಡಬೇಕು ಎಂಬುದು ಹಾಗೂ ವಾಸ್ತು ಗಮನದಲ್ಲಿಟ್ಟುಕೊಂಡು ಹುಡುಕಾಟ ನಡೆಸಲಾಗುತ್ತಿದೆ. ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಜನವರಿ ಅಂತ್ಯ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಕುಟುಂಬದೊಂದಿಗೆ ಹೊಸ ಮನೆಗೆ ಪೂಜೆ ನೆರವೇರಿಸಲಿದ್ದಾರೆ ಎನ್ನಲಾಗಿದೆ.
ನನಗೆ ಮೋದಿ ಕಂಡರೆ ಭಯವಿಲ್ಲ, ನನ್ನನ್ನು ಕಂಡರೆ ಬಿಜೆಪಿಯವರಿಗೆ ಭಯ: ಸಿದ್ದರಾಮಯ್ಯ
ಬಿಜೆಪಿ ಸುಳ್ಳು ಉತ್ಪಾದಿಸುವ ಫ್ಯಾಕ್ಟರಿ: ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ. ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಆಗುತ್ತಿರುವುದಕ್ಕೆ ಕಾಂಗ್ರೆಸ್ ಕಾರಣ. ಆದರೆ ಆ ಕೆಲಸವನ್ನು ತಾನು ಮಾಡಿರುವುದಾಗಿ ಬಿಜೆಪಿ ಹೇಳಿಕೊಳ್ಳುತ್ತಿದೆ. ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಸುಳ್ಳು ಹೇಳಿ ಹಕ್ಕುಪತ್ರ ವಿತರಣೆ ಕಾರ್ಯಕ್ರಮಕ್ಕೆ ಕರೆಸಲಾಗಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯಕಿಡಿಕಾರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಂಡಾ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಹೆಚ್ಚಿನ ಕೆಲಸ ಮಾಡಿದೆ. ಬಿಜೆಪಿಯವರು ಎಲ್ಲ ತಾವೇ ಮಾಡಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ನಾವು ಮಾಡಿದ ಅಡುಗೆಯನ್ನು ಅವರು ತಿನ್ನುವುದಲ್ಲದೆ, ಅದನ್ನು ತಯಾರಿಸಿದ್ದು ತಾವೇ ಎಂದು ಹೇಳುತ್ತಿದ್ದಾರೆ ಎಂದು ಹರಿಹಾಯ್ದರು.
ವಾಸಿಸುವವನೇ ಒಡೆಯ: ಉಳುವವನೇ ಭೂಮಿಯ ಒಡೆಯ ಕಾನೂನಿನಂತೆ ವಾಸಿಸುವವನೇ ಮನೆಯ ಒಡೆಯ ಎಂಬ ಐತಿಹಾಸಿಕ ಕಾನೂನನ್ನು ಕಾಂಗ್ರೆಸ್ ಜಾರಿ ಮಾಡಿದೆ. 1992ರಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಪ್ರಯತ್ನಿಸಿದ್ದರು. ನಾನು ಮುಖ್ಯಮಂತ್ರಿಯಾಗಿದ್ದಾಗ ನರಸಿಂಹಯ್ಯ ಎಂಬುವರ ಅಧ್ಯಕ್ಷತೆಯಲ್ಲಿ ತಾಂಡಾ, ಹಟ್ಟಿ, ಕುರುಬರ ಹಟ್ಟಿ, ನಾಯಕರ ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಲು ಅಧ್ಯಯನಕ್ಕೆ ಸಮಿತಿ ರಚಿಸಿದ್ದೆ. ಬಳಿಕ ಹೀರಾನಾಯ್ಕ ಎಂಬುವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿತ್ತು. ಅದರಿಂದಾಗಿ ಇಂದು ಅವರಿಗೆ ಹಕ್ಕುಪತ್ರ ಸಿಗುತ್ತಿದೆ. ಇದೀಗ ಬಿಜೆಪಿಯವರು ಲಂಬಾಣಿ ಜನರ ಕಾಳಜಿ ಮಾಡುವ ನೆಪದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು ಮುಂದಾಗಿದ್ದಾರೆ. ಈಗಲೂ ಕೂಡ ನಾವೇ ತಾಂಡಾ ಜನರ ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಮಾಡಬೇಕಿದೆ ಎಂದು ಕುಟುಕಿದರು.
ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸುವೆ: ಸಿದ್ದರಾಮಯ್ಯ ಪುನರುಚ್ಚಾರ
ಸೇವಾಲಾಲರ ಜಯಂತಿ ಆರಂಭಿಸಿ, ಅವರ ಜನ್ಮಸ್ಥಳ ಸೂರಗೊಂಡನಕೊಪ್ಪ ಅಭಿವೃದ್ಧಿಗೆ .130 ಕೋಟಿ ನೀಡಿದ್ದೆ. ಲಂಬಾಣಿ ಅಭಿವೃದ್ಧಿ ನಿಗಮಕ್ಕೆ . 450 ಕೋಟಿ ಅನುದಾನ ಕೊಟ್ಟಿದ್ದು, ಪರಿಶಿಷ್ಟರ ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕೆ ಎಸ್‌ಸಿಪಿ, ಟಿಎಸ್‌ಪಿ ಕಾಯ್ದೆ ಜಾರಿ ಮಾಡಿದ್ದೆ. ಅದಕ್ಕೆ ನಮ್ಮ ಸರ್ಕಾರದಲ್ಲಿ 30 ಸಾವಿರ ಕೋಟಿ ಇತ್ತು. ಅದು ಈಗ 42 ಸಾವಿರ ಕೋಟಿ ಆಗಬೇಕಿತ್ತು. ಆದರೆ 28 ಸಾವಿರ ಕೋಟಿಯಾಗಿದೆ. ಎಸ್‌ಸಿಪಿ, ಟಿಎಸ್‌ಪಿ ಅನುದಾನವನ್ನು ಬಿಜೆಪಿಯವರು ಬೇರೆ ಉದ್ದೇಶಕ್ಕೆ ಬಳಸುತ್ತಿದ್ದಾರೆ ಎಂದು ಆರೋಪಿಸಿದರು. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಈಗ ಸುಳ್ಳು ಹೇಳಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸಿ ನಾವೇ ಎಲ್ಲ ಕೆಲಸ ಮಾಡಿದವರು ಎಂದು ಬಿಜೆಪಿಯವರು ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಹಕ್ಕುಪತ್ರ ವಿತರಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.