ಬಿಜೆಪಿ ಅಕ್ರಮಗಳ ತನಿಖೆ ಕೊನೆಯ ಹಂತದಲ್ಲಿವೆ: ಗೃಹ ಸಚಿವ ಪರಮೇಶ್ವರ್

By Sathish Kumar KHFirst Published Oct 10, 2024, 3:37 PM IST
Highlights

ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಅಕ್ರಮ ಪ್ರಕರಣಗಳ ತನಿಖೆಗಳು ಕೊನೆಯ ಹಂತದಲ್ಲಿವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ. ಕೋವಿಡ್ ಹಗರಣದ ತನಿಖೆಗೆ ಪ್ರತ್ಯೇಕ ಸಮಿತಿ ರಚಿಸಲಾಗಿದ್ದು, ತನಿಖೆ ಪೂರ್ಣಗೊಂಡ ಬಳಿಕ ವರದಿ ಸಲ್ಲಿಸಲಾಗುವುದು.

ಬೆಂಗಳೂರು (ಅ.10): ರಾಜ್ಯದಲ್ಲಿ ಬಿಜೆಪಿ ಸರ್ಕಾರದಲ್ಲಿ ನಡೆದ ಅಕ್ರಮ ಪ್ರಕರಣಗಳ ತನಿಖೆಯ ಪರಿಶೀಲನೆ ಸಮಿತಿಯ ಸಭೆಯನ್ನು ನಿನ್ನೆ ನಡೆಸಿದ್ದೇನೆ. ಬಿಜೆಪಿ ಆಡಳಿತದಲ್ಲಿ ನಡೆದ ಹಗರಣಗಳ ತನಿಖೆಯ ಪೈಕಿ, ಕೆಲವು ಕೊನೆಯ ಹಂತದಲ್ಲಿವೆ. ಪೂರ್ಣಗೊಂಡ ಬಳಿಕ ವರದಿ ಸಲ್ಲಿಸಲಾಗುವುದು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿನ ಹಗರಣದ ತನಿಖೆಯ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಕಲೆ ಹಾಕಬೇಕು ಎಂದು ಹೇಳುತ್ತಿದ್ದಾರೆ. ಹಿಂದಿನ ಸರ್ಕಾರದಲ್ಲಿ ನಡೆದ ಅಕ್ರಮ ಪ್ರಕರಣಗಳ ತನಿಖೆಯ ಪರಿಶೀಲನೆ ಸಮಿತಿಯ ಸಭೆಯನ್ನು ನಿನ್ನೆ ನಡೆಸಿದ್ದೇನೆ. ಹಲವು ವಿಚಾರಗಳು ಚರ್ಚಿಸಲಾಗಿದೆ. ಕೋವಿಡ್‌ ತನಿಖೆಯ ಪ್ರಕರಣಕ್ಕೆ ಪ್ರತ್ಯೇಕ ಸಮಿತಿ ಮಾಡಿರುವುದರಿಂದ ವಿಷಯ ನಮ್ಮ‌ ಮುಂದೆ ಚರ್ಚೆಗೆ ಬಂದಿಲ್ಲ. ಬಿಜೆಪಿ ಆಡಳಿತದಲ್ಲಿ ನಡೆದ ಹಗರಣಗಳ ತನಿಖೆ, ಕೆಲವು ಕೊನೆ ಹಂತದಲ್ಲಿವೆ. ಪೂರ್ಣಗೊಂಡ ಬಳಿಕ ವರದಿ ಸಲ್ಲಿಸಬೇಕಾಗುತ್ತದೆ. ಬೇರೆಬೇರೆ ಸಂದರ್ಭದಲ್ಲಿ ಆಗಿರುವ ಪ್ರಕರಣಗಳು ಇವೆ. ಎಲ್ಲ ಪ್ರಕರಣಗಳ ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದು ಹೇಳಿದರು‌.

Latest Videos

ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿ, ಈಗಾಗಲೇ ನಾನು 5 ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಅನೇಕ ಸಲ ಹೇಳಿದ್ದೇನೆ. ನಿನ್ನೆ ಮೈಸೂರಿನಲ್ಲಿಯೂ ಸಹ ಇದೇ ಮಾತನ್ನು ಹೇಳಿದ್ದೇನೆ. ನಾವು ಯಾರು ಸಹ ಮುಖ್ಯಮಂತ್ರಿಯನ್ನು ಬದಲಾಯಿಸಿ, ಬೇರೆಯವರನ್ನು ಮಾಡಿ ಎಂದು ಮಾತನಾಡಿಲ್ಲ. ಈವರೆಗೆ ನಾನಾಗಲಿ, ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಮಹದೇವಪ್ಪ ಅವರಾಗಲಿ ಮುಖ್ಯಮಂತ್ರಿ ಪದವಿ ಬಗ್ಗೆ ಯಾವತ್ತು ಚರ್ಚೆ ಮಾಡಿಲ್ಲ. ಇನ್ನು ಮುಂದೆ ನಾನು ವೈಯಕ್ತಿಕವಾಗಿ ಮುಖ್ಯಮಂತ್ರಿ ವಿಚಾರದಲ್ಲಿ ಮಾಧ್ಯಮದವರು ಕೇಳಿದರೂ ಪ್ರತಿಕ್ರಿಯಿಸುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಕೇರಳದ 25 ಕೋಟಿ ರೂ. ಓಣಂ ಲಾಟರಿ ಗೆದ್ದ ಮಂಡ್ಯದ ಮೆಕ್ಯಾನಿಕ್ ಅಲ್ತಾಫ್; ಕೈಗೆ ಸಿಗೋ ಹಣವೆಷ್ಟು?

ಕೆಲವು ವಿಚಾರಗಳಲ್ಲಿ ಅಗತ್ಯ ಇದ್ದರೆ ಭೇಟಿ ಮಾಡುತ್ತೇವೆ. ಅನವಶ್ಯಕವಾಗಿ ಡಿನ್ನರ್ ಮೀಟಿಂಗ್, ರಾಜಕೀಯ ಸಭೆಗಳನ್ನು ನಾವು ಈವರೆಗೂ ಮಾಡಿಲ್ಲ, ಮುಂದೆಯೋ ಮಾಡೋದಿಲ್ಲ. ಏನೂ ಇಲ್ಲದೇ ಅಪಾದಿತರ ಸ್ಥಾನದಲ್ಲಿ ನಿಲ್ಲಿಸಿದರೆ ನಮಗೆ ಬೇಜಾರಾಗುವುದಿಲ್ಲವೇ? ನಾವು ಜವಾಬ್ದಾರಿ ಇರುವವರು. ಸುಮ್ಮನೇ ಹುಡುಗಾಟಿಕೆ ಮಾಡುವುದಿಲ್ಲ. ನಾನು ಕಾಂಗ್ರೆಸ್ ಪಕ್ಷದ ಹಿರಿಯ ರಾಜಕಾರಣಿ, ನನಗು ಜವಾಬ್ದಾರಿ ಇದೆ ಎಂದು ಹೇಳಿದರು.

ವಿಪಕ್ಷ ನಾಯಕ ಆರ್.ಅಶೋಕ್ ಆರೋಪದ ಕುರಿತು ಪ್ರತಿಕ್ರಿಯಿಸಿ, ಸಿದ್ಧಗಂಗಾ‌ ಮಠಕ್ಕು ನಮಗೂ ಇರುವ ಸಂಬಂಧವೇ ಬೇರೆ. ಇತ್ತೀಚೆಗೆ ನಾನು ಮಠಕ್ಕೆ ಹೋಗೇ ಇಲ್ಲ. ಸಿದ್ಧಗಂಗಾ ಮಠಕ್ಕೆ ಹೋದರೆ ಸ್ವಾಮೀಜಿಯವರ ಗದ್ದುಗೆಗೆ ಮತ್ತು ಸಿದ್ಧಲಿಂಗ ಸ್ವಾಮೀಜಿಯವರಿಗೆ ನಮಸ್ಕರಿಸಿ ಬರುತ್ತೇನೆ. ನನ್ನ ತಂದೆಯವರ ಕಾಲದಿಂದ ದೊಡ್ಡ ಸ್ವಾಮಿಜಿಯವರು ನಮಗೆಲ್ಲ ಆದರ್ಶ. ಮಠಕ್ಕೆ ಹೋಗಿ ರಾಜಕೀಯ ಮಾತಾಡುವುದಿಲ್ಲ. ಸಿದ್ದಗಂಗಾ ಮಠಕ್ಕು ನಮ್ಮ ಕುಟುಂಬಕ್ಕು ಅಪಾರವಾದ ಸಂಬಂಧ. ಮಠಕ್ಕೆ ಹೋದಾಗಲೆಲ್ಲ ಮುಖ್ಯಮಂತ್ರಿ ಆಗಬೇಕೆಂದು ಪೂಜೆ ಮಾಡುವುದಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: ರಾಜ್ಯಪಾಲರ ಪತ್ರಗಳಿಗೆ ಸಂಪುಟದಿಂದಲೇ ಉತ್ತರ: ಸರ್ಕಾರದ ನಿರ್ಧಾರ

ರತನ್ ಟಾಟಾ ನಿಧನಕ್ಕೆ ಸಂತಾಪ: ರತನ್ ಟಾಟಾ ಅವರು ದೇಶಕ್ಕೆ ಅತ್ಯಂತ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಅವರು ತೆಗೆದುಕೊಂಡತಹ ಅನೇಕ ನಿರ್ಧಾರಗಳು, ಕೈಗಾರಿಕೆಗಳು ಭಾರತವನ್ನೇ ಪ್ರತಿನಿಧಿಸುವಂತೆ ಕಟ್ಟಿದ್ದಾರೆ. ಅತಿದೊಡ್ಡ ಮಾನವತಾ ವ್ಯಕ್ತಿ. ಅನೇಕ ರೀತಿಯಲ್ಲಿ ಸಮಾಜಕ್ಕೆ ಸೇವೆ ಮಾಡುವುದು, ಅವರಿಗೆ ಬಂದಂತಹ ಲಾಭದಲ್ಲಿ ವಿದ್ಯಾರ್ಥಿಗಳಿಗೆ, ಕಷ್ಟದಲ್ಲಿರುವ ಸಮುದಾಯಗಳಿಗೆ, ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ರೂ. 1500 ಕೋಟಿ ಸಹಾಯವನ್ನು ಸ್ಮರಿಸಬೇಕಿದೆ. ಅವರನ್ನು ದೇಶ, ಸಮಾಜ‌ ಕಳೆದುಕೊಂಡಿದೆ. ಇದು ನಮಗೆ ಅದ ನಷ್ಟ. ನಷ್ಟ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ರತನ್ ಟಾಟಾ ಸೇವೆಯನ್ನು ಸೂರ್ಯ ಚಂದ್ರ ಇರುವವರೆಗೂ ದೇಶ ಮರೆಯುವುದಿಲ್ಲ ಎಂದು ಹೇಳಿದರು.

click me!