
ತುಮಕೂರು (ನ.02): ರಾಜ್ಯದಲ್ಲಿ ದಲಿತ ಸಮಾವೇಶಕ್ಕೆ ಯಾರೂ ಬ್ರೇಕ್ ಹಾಕಿಲ್ಲ, ನಡೆಯಬೇಕು ಅಂದಾಗ ಅದು ನಡೆಯುತ್ತದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ತುಮಕೂರಿಗೆ ಸಿಎಂ ಸ್ಥಾನ ನೀಡುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಿಎಂ ಸ್ಥಾನ ನೀಡುವ ವಿಚಾರ ನಮ್ಮ ಕೈಯಲ್ಲಿ ಇಲ್ಲ. ಈ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ ಎಂದರು. ನವೆಂಬರ್ ಕ್ರಾಂತಿ ಕುರಿತ ಪ್ರಶ್ನೆಗೆ, ಆ ಬಗ್ಗೆ ನನಗೇಗೂ ಗೊತ್ತಿಲ್ಲ ಎಂದರು. ದಲಿತ ಸಮಾವೇಶ ಕುರಿತು ಪ್ರತಿಕ್ರಿಯಿಸಿ, ದಲಿತ ಸಮಾವೇಶಕ್ಕೆ ಯಾರೂ ಬ್ರೇಕ್ ಹಾಕಿಲ್ಲ. ಹಿಂದೆಯೂ ನಡೆದಿದೆ, ಮುಂದೆಯೂ ನಡೆಯಬೇಕು ಅಂದಾಗ ಅದು ನಡೆಯುತ್ತದೆ ಎಂದರು.
ಜಿಲ್ಲೆಯಲ್ಲಿ 10 ಸಾವಿರ ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಿಂತಿಲ್ಲ. ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದ ಜತೆ ಜತೆಯಲ್ಲಿಯೇ ರಾಜ್ಯಾದ್ಯಂತ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಅಂತೆಯೇ ತುಮಕೂರು ಜಿಲ್ಲೆಯಲ್ಲಿ ಸುಮಾರು 10 ಸಾವಿರ ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ಕನ್ನಡದ ನೆಲ ಮತ್ತು ಜಲ ಸಂರಕ್ಷಣೆ ಸರ್ಕಾರದ ಆದ್ಯತೆಯಾಗಿದೆ ಎಂದ ಅವರು, ಕೆಲವು ಕಟ್ಟಡಗಳ ನಿರ್ಮಾಣ ಕಾರ್ಯ ಕುಂಠಿತವಾಗಿದ್ದ ಹಿನ್ನೆಲೆಯಲ್ಲಿ ಉದ್ಘಾಟನೆಗೆ ತಡವಾಗಿದ್ದ ತುಮಕೂರು ನಗರದ ಬಿದರಕಟ್ಟೆಯಲ್ಲಿ ನಿರ್ಮಾಣಗೊಂಡಿರುವ ತುಮಕೂರು ವಿಶ್ವ ವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸನ್ನು ನವೆಂಬರ್ 7ರಂದು ರಾಜ್ಯಪಾಲರು ಉದ್ಘಾಟಿಸಲಿದ್ದಾರೆ. ಅಂದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುಮಕೂರು ನಗರದಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಅವರು ತಿಳಿಸಿದರು.
ತುಮಕೂರು ಜಿಲ್ಲಾಸ್ಪತ್ರೆ ಆವರಣದಲ್ಲಿ 66 ಕೋಟಿ ವೆಚ್ಚದಲ್ಲಿ 100 ಹಾಸಿಗೆಯ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣವಾಗಿರುವ ಕಟ್ಟಡ, 22 ಕೋಟಿ ವೆಚ್ಚದ ತಾಯಿ- ಮಕ್ಕಳ ಆಸ್ಪತ್ರೆ ಹಾಗೂ 42 ಕೋಟಿ ವೆಚ್ಚದಲ್ಲಿ ತುರ್ತು ನಿಗಾ ಘಟಕ, 78 ವರ್ಷದ ಹಳೆಯ ಜಿಲ್ಲಾ ಆಸ್ಪತ್ರೆ ಕಟ್ಟಡ ಶಿಥಿಲವಾಗಿರುವುದರಿಂದ 130 ಕೋಟಿ ವೆಚ್ಚದಲ್ಲಿ ಆಧುನಿಕ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ, 29 ಕೋಟಿ ವೆಚ್ಚದಲ್ಲಿ ಭೀಮಸಂದ್ರದ ಬಳಿ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಹಾಗೂ 130 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ೩ನೇ ಹಂತದ ಶುದ್ಧೀಕರಣ ಘಟಕ ಸೇರಿದಂತೆ ವಿವಿಧ ಕಾಮಗಾರಿಗಳನ್ನು ನವೆಂಬರ್ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದು ಅವರು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.