ಕಾಂಗ್ರೆಸ್‌ನವರು ಕಾಲು ಮುರಿದ ಕುದುರೆ ಕೊಟ್ಟರೆ ಓಡುವುದೇ?- ನಿಖಿಲ್

Published : Feb 14, 2023, 03:47 PM IST
ಕಾಂಗ್ರೆಸ್‌ನವರು ಕಾಲು ಮುರಿದ ಕುದುರೆ ಕೊಟ್ಟರೆ ಓಡುವುದೇ?- ನಿಖಿಲ್

ಸಾರಾಂಶ

- ಬ್ರಾಹ್ಮಣ ಪೇಶ್ವೆ ಕುಟುಂಬವನ್ನಷ್ಟೇ ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ - ನಾನು ರಾಮನಗರದಿಂದ ಸ್ಪರ್ಧೆ ಮಾಡುವುದು ಖಚಿತ

ಕನ್ನಡಪ್ರಭ ವಾರ್ತೆ, ಮಂಡ್ಯ
ಮಂಡ್ಯ (ಫೆ.14): ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿಗೆ ಅಧಿಕಾರದ ಕುದುರೆ ಕೊಡುವಾಗ ಕಾಂಗ್ರೆಸ್‌ನವರು ಅದರ ನಾಲ್ಕು ಕಾಲನ್ನು ಕಿತ್ತು ಕೊಟ್ಟರು. ಕಾಲಿಲ್ಲದ ಕುದುರೆ ಓಡಲು  ಹೇಗೆ ಸಾಧ್ಯ ಎಂದು ಕೊಟ್ಟ ಕುದುರೆಯನ್ನು ಏರಲಾಗದವ ವೀರನೂ ಅಲ್ಲ, ಶೂರನೂ ಅಲ್ಲ ಎನ್ನುವ ಕಾಂಗ್ರೆಸ್‌ನವರ ಟೀಕೆಗೆ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದರು.

ಸಮರ್ಥ ಆಡಳಿತ ನೀಡುವ ಸಾಮರ್ಥ್ಯ ಕುಮಾರಸ್ವಾಮಿ ಅವರಿಗಿತ್ತು. ಅದಕ್ಕೆ ರೈತರ ಹಿತದೃಷ್ಟಿಯಿಂದ ೨೬ ಸಾವಿರ ಕೋಟಿ ರು. ಸಾಲ ಮನ್ನಾ ಸಾಕ್ಷಿ. ಅಧಿಕಾರಕ್ಕಾಗಿ ಕಾಂಗ್ರೆಸ್‌ನವರು ನಮ್ಮ ಮನೆ ಬಾಗಿಲಿಗೆ ಬಂದರು. ಒಳ್ಳೆಯ ಆಡಳಿತ ನೀಡಬೇಕೆಂದು ನಾವೂ ಕೈಜೋಡಿಸಿದೆವು. ಅಧಿಕಾರವೆಂಬ ಕುದುರೆಯ ಕಾಲುಗಳನ್ನು ಕಿತ್ತುಹಾಕಿದವರು ಕಾಂಗ್ರೆಸ್‌ನವರು ಎಂದು ಟೀಕಿಸಿದ್ದರು.

ಕರ್ನಾಟಕದಲ್ಲಿ ಗೆದ್ದೇ ಗೆಲ್ತೀವಿ ಎಂದ ಅಮಿತ್‌ ಶಾ, ಜೆಡಿಎಸ್‌ಗೂ ನೀಡಿದ್ರು ಸಂದೇಶ!

ಕಾಂಗ್ರೆಸ್  ಬಿಜೆಪಿಯ ಬಿ-ಟೀಂ ಆಗಿದೆ: 2023ರ ಚುನಾವಣೆಯನ್ನು ಜೆಡಿಎಸ್ ಸ್ವತಂತ್ರವಾಗಿ ಎದುರಿಸಲಿದೆ. ಯಾರೊಂದಿಗೂ ಒಳ ಒಪ್ಪಂದ ಮಾಡಿಕೊಳ್ಳುವುದಿಲ್ಲ. ೧೨೩ ಸ್ಥಾನಗಳೊಂದಿಗೆ ಜೆಡಿಎಸ್ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸದಿಂದ ನುಡಿದ ನಿಖಿಲ್‌ಕುಮಾರಸ್ವಾಮಿ, ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನ್ನು ಬಿಜೆಪಿ ಬಿ-ಟೀಂ ಎಂದು ಕಾಂಗ್ರೆಸ್‌ನವರು ಅಪಪ್ರಚಾರ ಮಾಡಿದರು. ಆದರೆ, ನಿಜವಾದ ಬಿ-ಟೀಂ ಕಾಂಗ್ರೆಸ್ ಎಂದು ದೃಢವಾಗಿ ಹೇಳಿದರು. ರಾಷ್ಟ್ರದಲ್ಲಿ ಕಾಂಗ್ರೆಸ್-ಬಿಜೆಪಿ ಒಂದಾಗುವುದನ್ನು ಮಂಡ್ಯದಲ್ಲಷ್ಟೇ ನೋಡಲು ಸಾಧ್ಯ. ಕಳೆದ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್, ಬಿಜೆಪಿ, ರೈತಸಂಘ ಒಗ್ಗೂಡಿ ನನ್ನನ್ನು ಸೋಲಿಸಿದರು. ಇದಾದ ಬಳಿಕ ವಿಧಾನಪರಿಷತ್ ಚುನಾವಣೆಯಲ್ಲೂ ಅಪ್ಪಾಜಿಗೌಡರನ್ನು ಸೋಲಿಸಲು ಕಾಂಗ್ರೆಸ್-ಬಿಜೆಪಿ ಮತ್ತೆ ಒಂದಾದವು ಎಂದು ದೂಷಿಸಿದರು. 

ರಾಮನಗರದಿಂದ ನನ್ನ ಸ್ಪರ್ಧೆ: 2023ರ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಪಕ್ಷದ ನಾಯಕರು ಸೂಚಿಸಿದ್ದಾರೆ. ಅವರ ಅಣತಿಯಂತೆ ನಡೆಯುವುದು ನನ್ನ ಕರ್ತವ್ಯ. ರಾಮನಗರದ ಜನರು ಬಹಳ ಪ್ರೀತಿಯಿಂದ ನನ್ನನ್ನು ಕ್ಷೇತ್ರದಿಂದ ಸ್ಪರ್ಧಿಸುವಂತೆ ಕರೆದಿದ್ದಾರೆ. ಅದೇ ರೀತಿ ಮಂಡ್ಯ ಜನರೂ ನನಗೆ ಆಹ್ವಾನ ನೀಡಿದ್ದಾರೆ. ಲೋಕಸಭಾ ಚುನಾವಣಾ ಸೋಲಿನಿಂದ ನನಗೆ ಆತಂಕವೂ ಆಗಿಲ್ಲ, ಭಯವೂ ಆಗಿಲ್ಲ. ರಾಜಕೀಯ ಪಕ್ಷಗಳ ಷಡ್ಯಂತ್ರದಿಂದ ನನಗೆ ಸೋಲಾಯಿತೇ ವಿನಃ ಇದರಲ್ಲಿ ಮಂಡ್ಯ ಜನರ ತಪ್ಪಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಕಾಲು ಮುರಿದ ಕುದುರೆ ಕೊಟ್ಟು ನನಗೆ ಅಧಿಕಾರ ನಡೆಸಲು ಬಿಟ್ಟರು; ಎಚ್‌ಡಿಕೆ

 

ಹಾಸನದಿಂದ ಸ್ಪರ್ಧೆ ಬಗ್ಗೆ ಖಚಿತ ಮಾಹಿತಿಯಿಲ್ಲ: ಹಾಸನದಿಂದ ಯಾರು ಕಣಕ್ಕಿಳಿಯುತ್ತಾರೆ ಎಂಬ ಬಗ್ಗೆ ನನಗೆ ಖಚಿತ ಮಾಹಿತಿ ಇಲ್ಲ. ಅದನ್ನು ನಮ್ಮ ನಾಯಕರು ತೀರ್ಮಾನ ಮಾಡುತ್ತಾರೆ. ಅರಸೀಕೆರೆಯಲ್ಲಿ ಶಿವಲಿಂಗೇಗೌಡರ ನಿಗೂಢ ನಡೆಯಿಂದ ಸ್ಥಳೀಯವಾಗಿ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಚುನಾವಣಾ ಸಮಯದಲ್ಲಿ ಗೊಂದಲ ಸೃಷ್ಟಿ ಮಾಡಬಾರದೆಂಬ ಕಾರಣಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರು ಬೇರೆಯವರಿಗೆ ಟಿಕೆಟ್ ನೀಡಲು ನಿರ್ಧರಿಸಿದ್ದಾರೆ ಎಂದರು.

ಪೇಶ್ವೆ ಕುಟುಂಬವನ್ನಷ್ಟೇ ಗುರಿ: ಎಚ್.ಡಿ.ಕುಮಾರಸ್ವಾಮಿಯವರು ಬ್ರಾಹ್ಮಣ ಸಮುದಾಯದ ಪೇಶ್ವೆ ಕುಟುಂಬವನ್ನಷ್ಟೇ ಗುರಿಯಾಗಿಸಿಕೊಂಡು ಟೀಕಿಸಿದ್ದಾರೆಯೇ ವಿನಃ ಇಡೀ ಬ್ರಾಹ್ಮಣ ಸಮುದಾಯವನ್ನಲ್ಲ. ಇದರ ಹಿಂದೆ ವೀರಶೈವ, ಲಿಂಗಾಯಿತ ಸಮುದಾಯದವರ ಮತಗಳನ್ನು ವಿಭಜನೆ ಮಾಡುವ ಷಡ್ಯಂತ್ರವಿದೆ ಎನ್ನುವುದೆಲ್ಲಾ ಸುಳ್ಳು ಎಂದ ನಿಖಿಲ್, ಆರ್‌ಎಸ್‌ಎಸ್‌ನವರು ಪ್ರಹ್ಲಾದ ಜೋಶಿ ಅವರನ್ನು ಮುಖ್ಯಮಂತ್ರಿ ಮಾಡಲಿದ್ದಾರೆಂಬ ಮಾಹಿತಿ ಕುಮಾರಸ್ವಾಮಿಗೆ ಗೊತ್ತಾಗಿದ್ದು ಹೇಗೆ ಎಂಬ ಪ್ರಶ್ನೆಗೆ, ಕುಮಾರಸ್ವಾಮಿ ಒಬ್ಬ ರಾಜಕೀಯ ನಾಯಕರು. ಅವರಿಗೆ ಮಾಹಿತಿ ಗೊತ್ತಾಗುವುದು ಸಹಜ ಎಂದಷ್ಟೇ ಹೇಳಿದರು.

ಪತ್ರಿಕಾ ಗೋಷ್ಠಿಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಎನ್.ಅಪ್ಪಾಜಿಗೌಡ, ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರ, ಪಿಇಟಿ ಅಧ್ಯಕ್ಷ ವಿಜಯಾನಂದ, ಜಿಲ್ಲಾಧ್ಯಕ್ಷ ಡಿ.ರಮೇಶ್, ಜಿಪಂ ಮಾಜಿ ಸದಸ್ಯರಾದ ಹೆಚ್.ಎನ್.ಯೋಗೇಶ್, ಕಂಸಾಗರ ರವಿ ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!
Karnataka News Live: ಬೆಂಗಳೂರು - ಕ್ಯಾಬ್ ಚಾಲಕನ ಮೇಲೆ ಯುವತಿ ರೇಪ್ ಆರೋಪ, ತನಿಖೆ ವೇಳೆ ಬಿಗ್ ಟ್ವಿಸ್ಟ್!