
ಮೈಸೂರು (ಡಿ.25): ಶಾಲಾ, ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ವಾಪಸ್‌ಗೆ ಯೋಚನೆ ಮಾಡಿದ್ದೀವಿ ಅಷ್ಟೆ. ಈ ಕುರಿತ ಆದೇಶವನ್ನು ಇನ್ನೂ ವಾಪಸ್ ಪಡೆದಿಲ್ಲ ಎನ್ನುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ. ನಂಜನಗೂಡು ತಾಲೂಕಿನ ದೊಡ್ಡಕೌಲಂದೆ ಗ್ರಾಮದಲ್ಲಿ ಶುಕ್ರವಾರ ಮಾತನಾಡಿದ್ದ ಸಿಎಂ, ರಾಜ್ಯದ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಹಿಂದಿನ ಬಿಜೆಪಿ ಸರ್ಕಾರ ಹಿಜಾಬ್ ನಿಷೇಧಿಸಿ ಜಾರಿಗೆ ತಂದಿದ್ದ ಆದೇಶವನ್ನು ಹಿಂಪಡೆಯಲು ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ ಎಂದು ಹೇಳಿದ್ದರು.
ಮೈಸೂರಿನಲ್ಲಿ ಈ ಕುರಿತಾದ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಅದನ್ನು (ಹಿಜಾಬ್) ಇನ್ನೂ ವಾಪಸ್ ಪಡೆದಿಲ್ಲ. ಯಾರೋ ಒಬ್ಬರು ಈ ಬಗ್ಗೆ ಪ್ರಶ್ನೆ ಮಾಡಿದರು, ಅದಕ್ಕೆ ಆ ಉತ್ತರ ಕೊಟ್ಟಿದ್ದೀನಿ ಎಂದು ಹೇಳಿದರು. ಹಿಜಾಬ್ ನಿಷೇಧ ವಾಪಸ್‌ಗೆ ಯೋಚನೆ ಮಾಡಿದ್ದೀವಿ. ಸರ್ಕಾರದಲ್ಲಿ ಈ ಬಗ್ಗೆ ಚರ್ಚೆ ಮಾಡಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.
ನಮಗೆ ಟಿಪ್ಪು ಸುಲ್ತಾನ ಪರ ಅನ್ನೋರು ಬ್ರಿಟಿಷರ ಬೂಟು ನೆಕ್ಕೋರು: ಬಿ.ಕೆ.ಹರಿಪ್ರಸಾದ್
ಸಿಎಂ ಹಿಜಾಬ್ ಹೇಳಿಕೆಯಿಂದ ಭುಗಿಲೆದ್ದ ಸಂಘರ್ಷ: ರಾಜ್ಯದ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಹಿಂದಿನ ಬಿಜೆಪಿ ಸರ್ಕಾರ ಹಿಜಾಬ್ ನಿಷೇಧಿಸಿ ಜಾರಿಗೆ ತಂದಿದ್ದ ಆದೇಶವನ್ನು ವಾಪಸ್ ಪಡೆಯಲಾಗುವುದು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆ ರಾಜ್ಯದಲ್ಲಿ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಸಿಎಂ ಹೇಳಿಕೆಯನ್ನು ಕಾಂಗ್ರೆಸ್ ನಾಯಕರು, ಸಚಿವರು ಸ್ವಾಗತಿಸಿ, ಸಮರ್ಥಿಸಿಕೊಂಡರೆ, ಇದೊಂದು ಅಲ್ಪಸಂಖ್ಯಾತರ ಓಲೈಕೆ ಕ್ರಮ ಎಂದು ಪ್ರತಿಪಕ್ಷ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಇದೇ ವೇಳೆ, ಹಿಜಾಬ್ ಹಿಂಪಡೆದರೆ ರಾಜ್ಯದ ಶಾಲೆಗಳು ಕೇಸರಿಮಯವಾಗಲಿವೆ ಎಂದು ವಿಶ್ವ ಹಿಂದೂ ಪರಿಷತ್ ಸೇರಿ ಹಿಂದೂಪರ ಸಂಘಟನೆಯ ನಾಯಕರು ಎಚ್ಚರಿಕೆ ನೀಡಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಸಚಿವ ಶಿವರಾಜ ತಂಗಡಗಿ, ಹಿಜಾಬ್ ವಿಷಯವನ್ನು ತಣ್ಣಗಾಗಿಸುವ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಆರ್‌ಎಸ್‌ಎಸ್‌ನವರು ಈ ಹಿಂದೆ ಚಡ್ಡಿ ಹಾಕುತ್ತಿದ್ದರು. ಈಗ ಪ್ಯಾಂಟ್ ಹಾಕುತ್ತಿದ್ದಾರೆ. ಅದ್ಯಾವುದನ್ನೂ ನಾವು ಪ್ರಶ್ನಿಸುವುದಿಲ್ಲ. ಈ ಹಿಂದೆ ಬಿಜೆಪಿ ಕೋಮುಭಾವನೆ ಕೆರಳಿಸುವ ಕೆಲಸ ಮಾಡಿತ್ತು. ಅದನ್ನು ಸರಿಪಡಿಸಲಾಗುತ್ತಿದೆ ಎಂದಿದ್ದಾರೆ. ಸಿಎಂ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ದಂಗೆ ಆಗಲಿ, ಗಲಭೆ ಆಗಲಿ ಎಂಬುದು ಬಿಜೆಪಿಯ ಬಯಕೆ ಎಂದು ಕಿಡಿ ಕಾರಿದ್ದಾರೆ. ಸಚಿವ ಬೋಸ್‌ರಾಜು ಕೂಡ ಸಿಎಂ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇದೇ ವೇಳೆ, ಸಿಎಂ ಹೇಳಿಕೆಗೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡುವುದನ್ನು ಬಿಟ್ಟು ಸಿದ್ದರಾಮಯ್ಯ ಹಿಜಾಬ್ ವಿಷಯದಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿಯ ಮಾಜಿ ಸಚಿವ ಗೋವಿಂದ ಕಾರಜೋಳ ಆರೋಪಿಸಿದ್ದಾರೆ. ಹಿಜಾಬ್ ನಿಷೇಧ ಕುರಿತ ಸಿಎಂ ಉಲ್ಟಾ ಹೇಳಿಕೆ ಹಿಂದುತ್ವದ ಶಕ್ತಿಗೆ ಸಿಕ್ಕ ಜಯ ಎಂದು ಕೆ.ಎಸ್.ಈಶ್ವರಪ್ಪ ಕುಟುಕಿದ್ದಾರೆ. ಕೋಮುವಾದದ ಓಲೈಕೆಗೂ ಒಂದು ಮಿತಿ ಇರಬೇಕು. ಅದನ್ನು ಮೀರಿ ಶಾಲೆಗಳಿಗೂ ಪ್ರವೇಶಿಸಿದರೆ ಅದರ ಪರಿಸ್ಥಿತಿ ಏನು ಎನ್ನುವ ಅರಿವಿಟ್ಟುಕೊಂಡು ನಿರ್ಣಯ ತೆಗೆದುಕೊಳ್ಳಬೇಕು ಎಂದು ಸಿ.ಟಿ.ರವಿ ಕಿಡಿಕಾರಿದ್ದಾರೆ.
ಒಂದು ವೇಳೆ ಹಿಜಾಬ್ ನಿಷೇಧ ವಾಪಸ್ ಪಡೆದರೆ ಅವರು ಜೇನುಗೂಡಿಗೆ ಕೈ ಹಾಕಿದಂತೆ, ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದ್ದಾರೆ. ಹಿಜಾಬ್ ವಿಚಾರದಲ್ಲಿ ನ್ಯಾಯಾಲಯದ ಆದೇಶ ಬರುವವರೆಗೂ ಸಿಎಂ ತಾಳ್ಮೆಯಿಂದ ಕಾಯಬೇಕಾಗಿತ್ತು ಎಂದು ಮಾಜಿ ಸಚಿವ ಎನ್. ಮಹೇಶ್ ಹೇಳಿದ್ದಾರೆ. ಇದೇ ವೇಳೆ, ಮಂಗಳೂರಿನಲ್ಲಿ ಮಾತನಾಡಿದ ವಿಹಿಂಪ ಮುಖಂಡ ಶರಣ್ ಪಂಪ್‌ವೆಲ್, ಈ ಆದೇಶ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗಲಿದೆ. ವಾರ್ಷಿಕ ಪರೀಕ್ಷೆಗಳು ಹತ್ತಿರ ಬರುತ್ತಿದ್ದು, ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಮತಾಂಧತೆಯ ವಿಷ ಬೀಜವನ್ನು ಬಿತ್ತಬೇಡಿ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮುಸ್ಲಿಂ ಪಾರ್ಟಿಯಾಗಿ ನಿರ್ಮಾಣಗೊಂಡಿದೆ : ಚಕ್ರವರ್ತಿ ಸೂಲಿಬೆಲೆ
ಅಲ್ಲದೆ, ರಾಜ್ಯದಲ್ಲಿ ಹಿಜಾಬ್ ನಿಷೇಧವನ್ನು ಸರ್ಕಾರ ವಾಪಸ್ ಪಡೆದರೆ ಶಾಲಾ ಕಾಲೇಜುಗಳು ಕೇಸರಿಮಯವಾಗಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಈ ಹೇಳಿಕೆಗೆ ಧ್ವನಿಗೂಡಿಸಿದ್ದಾರೆ. ಕಳೆದ ಬಾರಿ ಹಿಜಾಬ್ ವಿವಾದ ತಲೆದೋರಿದಾಗ ಶಾಸಕರಾಗಿದ್ದ ಯು.ಟಿ.ಖಾದರ್ ಅವರು ಶೈಕ್ಷಣಿಕ ಶಿಸ್ತು ಕಾಪಾಡುವುದು ಮುಖ್ಯ ಎಂದಿದ್ದರು. ಈಗ ಅವರ ನಿಲುವು ಏನು ಕಾಮತ್ ಪ್ರಶ್ನಿಸಿದ್ದಾರೆ. ಇದು ತುಷ್ಟೀಕರಣದ ಪರಮಾವಧಿ ಎಂದು ಶಾಸಕ ಮಹೇಶ ಟೆಂಗಿನಕಾಯಿ ಟೀಕಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.