ಯತ್ನಾಳ್ ಬಗ್ಗೆ ಮಾತಾಡಲ್ಲ, ದೂರು ಕೊಡಲ್ಲ: ಯಡಿಯೂರಪ್ಪ

By Kannadaprabha NewsFirst Published Dec 25, 2023, 4:23 AM IST
Highlights

ಬಸನಗೌಡ ಪಾಟೀಲ್ ಯತ್ನಾಳ್‌ ಅವರು ಮಾತನಾಡಲು ಸರ್ವ ಸ್ವತಂತ್ರರು. ನಾನು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ. ವರಿಷ್ಠರಿಗೂ ದೂರು ನೀಡುವುದಿಲ್ಲ: .ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ದಾವಣಗೆರೆ(ಡಿ.25):  ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಅವರ ಆರೋಪ, ಟೀಕೆಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ಜತೆಗೆ, ಬಿಜೆಪಿಯ ಹೊಸ ಪದಾಧಿಕಾರಿಗಳ ಆಯ್ಕೆ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಗರದ ಜಿಎಂಐಟಿ ಅತಿಥಿ ಗೃಹದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಸನಗೌಡ ಪಾಟೀಲ್ ಯತ್ನಾಳ್‌ ಅವರು ಮಾತನಾಡಲು ಸರ್ವ ಸ್ವತಂತ್ರರು. ನಾನು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ. ವರಿಷ್ಠರಿಗೂ ದೂರು ನೀಡುವುದಿಲ್ಲ ಎಂದರು.

ಹಿಂದಿನ ಜಾತಿಗಣತಿ ವ್ಯವಸ್ಥಿತವಾಗಿ ನಡೆದಿಲ್ಲ; ಹೊಸದಾಗಿ ಸಮೀಕ್ಷೆ ಆಗಬೇಕು: ಬಿಎಸ್ ಯಡಿಯೂರಪ್ಪ

ವಿರೋಧ ಇಲ್ಲ: 

ಕೇಂದ್ರ ನಾಯಕರೊಂದಿಗೆ ಚರ್ಚಿಸಿದ ನಂತರವೇ ಬಿಜೆಪಿ ರಾಜ್ಯ ಘಟಕಕ್ಕೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪದಾಧಿಕಾರಿಗಳನ್ನು ನೇಮಕ ಮಾಡಿದ್ದಾರೆ. ಅಳೆದು ತೂಗಿ, ಕೆಲಸ ಮಾಡುವವರಿಗೆ ಆದ್ಯತೆ ನೀಡಿದ್ದಾರೆ. ಹೊಸ ಪದಾಧಿಕಾರಿಗಳ ಆಯ್ಕೆ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಯಾರೂ ವಿರೋಧ‍ ಮಾಡಿಲ್ಲ ಎಂದರು.

ಕಾಂಗ್ರೆಸ್ಸಿಗರು ತಮ್ಮ ಮನೆಗೆ ಟಿಪ್ಪು ಹೆಸರಿಡಲಿ: ಎಂ.ಪಿ.ರೇಣುಕಾಚಾರ್ಯ ಲೇವಡಿ

ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ‌ ಗೆಲುವು ಸಾಧಿಸಲಿದೆ. ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಆಯ್ಕೆಯಾದ ನಂತರ ವಿಶೇಷವಾಗಿ ಯುವಕರು ರಾಜ್ಯದಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಇದು ಪ್ಲಸ್ ಆಗಲಿದೆ. ಈಗಾಗಲೇ ವಿಜಯೇಂದ್ರ ನೂತನ ಪದಾಧಿಕಾರಿಗಳನ್ನು ರಾಜ್ಯ ಸಮಿತಿಗೆ ನೇಮಿಸಿದ್ದು, ರಾಜ್ಯದ ವಿವಿಧೆಡೆ ಪ್ರವಾಸದಲ್ಲೂ ತೊಡಗಿದ್ದಾರೆ ಎಂದರು.

ಸಿದ್ದು ವಿಷದ ಬೀಜ ಬಿತ್ತೋದು ನಿಲ್ಲಿಸಲಿ

ರಾಜ್ಯದಲ್ಲಿ ಹಿಜಾಬ್ ಮೇಲಿನ ನಿಷೇಧ ಹಿಂಪಡೆಯುವುದಾಗಿ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಟೀಕೆಗಳು, ಒತ್ತಡಕ್ಕೆ ಮಣಿದು ತಮ್ಮ ಹೇಳಿಕೆ ವಾಪಸ್‌ ಪಡೆದಿದ್ದಾರೆ. ನಾವು ಅಲ್ಪಸಂಖ್ಯಾತರ ವಿರೋಧಿಗಳಲ್ಲ. ಸಿದ್ದರಾಮಯ್ಯನವರು ವಿಷದ ಬೀಜ ಬಿತ್ತುವುದನ್ನು ನಿಲ್ಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. 

click me!