
ಬೆಂಗಳೂರು(ಅ.13): ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಮುಂದೂಡುವಂತೆ ಕೋರಿ ಸರ್ಕಾರ ಬರೆದಿರುವ ಪತ್ರದ ಬಗ್ಗೆ ತನ್ನ ನಿಲುವು ತಿಳಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ. ಅವಧಿ ಮುಗಿದಿರುವ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸುವಂತೆ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ವಿಧಾನಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿತು.
ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್. ಫಣೀಂದ್ರ, ಚುನಾವಣೆಗೆ ಸಂಬಂಧಿಸಿದ ವಸ್ತುಸ್ಥಿತಿ ವರದಿ ಮತ್ತು ಸಂಭಾವ್ಯ ವೇಳಾಪಟ್ಟಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಪೀಠಕ್ಕೆ ನೀಡಿದರು.
ನಂತರ ವಾದ ಮಂಡಿಸಿದ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅ.3ಕ್ಕೆ ಆಯೋಗಕ್ಕೆ ಪತ್ರ ಬರೆದು ಚುನಾವಣೆ ಮುಂದೂಡುವಂತೆ ಮನವಿ ಮಾಡಿದ್ದಾರೆ. ಸದ್ಯ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ನಿಮ್ಮ ಮನವಿಯನ್ನು ಕೋರ್ಟ್‌ಗೆ ಸಲ್ಲಿಸುವಂತೆ ಹೇಳಿ ಅ.6ಕ್ಕೆ ಆಯೋಗದಿಂದ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಶ್ರೀರಾಮುಲು ಖಾತೆ ಬದಲಾವಣೆ ಏಕೆ? ಕಾರಣ ಬಿಚ್ಚಿಟ್ಟ ಡಿಕೆ ಶಿವಕುಮಾರ್..! .
ಸರ್ಕಾರ ಪರ ಹಾಜರಾಗಿದ್ದ ರಾಜ್ಯ ಅಡ್ವೋಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ, ಚುನಾವಣೆ ಮುಂದೂಡುವಂತೆ ಮನವಿ ಮಾಡಿಲ್ಲ. ಸದ್ಯದ ಪರಿಸ್ಥಿತಿ ಅವಲೋಕಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವಂತೆ ಕೋರಲಾಗಿದೆ. ಚುನಾವಣೆ ನಡೆಸಬೇಕೆಂಬುದು ಸರ್ಕಾರದ ಉದ್ದೇಶವೂ ಆಗಿದೆ. ಈಗ ಜನರ ಆರೋಗ್ಯ ಮುಖ್ಯವಾಗಿದ್ದು, ಆಯೋಗದ ನಿಲುವು ತೆಗೆದುಕೊಳ್ಳುವ ಮೊದಲು ಸರ್ಕಾರದ ಪತ್ರ ಪರಿಗಣಿಸಬೇಕೆಂಬುದು ನಮ್ಮ ಕೋರಿಕೆಯಾಗಿದೆ ಎಂದು ತಿಳಿಸಿದರು.
ನ್ಯಾಯಪೀಠ ಪ್ರತಿಕ್ರಿಯಿಸಿ, ಕೊರೋನಾ ಸಮಸ್ಯೆ ಇಡೀ ರಾಜ್ಯದಲ್ಲಿ ಒಂದೇ ರೀತಿ ಇಲ್ಲ. ಕೆಲವು ಜಿಲ್ಲೆಗಳಲ್ಲಿ ಕಡಿಮೆ ಪ್ರಕರಣಗಳಿವೆ. ಅಂತಹ ಕಡೆ ಮೊದಲ ಹಂತದಲ್ಲಿ ಚುನಾವಣೆ ನಡೆಸಬಹುದು. ಆದರೆ, ಚುನಾವಣಾ ಆಯೋಗ ಸಾಂವಿಧಾನಿಕ ಸಂಸ್ಥೆ. ಸರ್ಕಾರ ಬರೆದ ಪತ್ರಕ್ಕೆ ಆಯೋಗ ಸ್ಪಷ್ಟನಿಲುವು ತೆಗೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಸರ್ಕಾರದ ಪತ್ರದ ಬಗ್ಗೆ ಸ್ಪಷ್ಟನಿಲುವನ್ನು ಮೊದಲು ಆಯೋಗವು ತಿಳಿಸಿದರೆ, ಅದನ್ನು ನ್ಯಾಯಾಲಯ ಪರಿಶೀಲಿಸಲಿದೆ ಎಂದು ಸಲಹೆ ನೀಡಿತು.
RR ನಗರ ಬೈ ಎಲೆಕ್ಷನ್: ಮುನಿರತ್ನ ಪರ ಗೆಳೆಯರ ಗ್ಯಾಂಗ್ ಅಖಾಡಕ್ಕೆ..! ..
ತಮ್ಮ ನಿಲುವು ತಿಳಿಸಲು ಚುನಾವಣಾ ಆಯೋಗದ ಪರ ವಕೀಲರು ಕಾಲಾವಕಾಶ ಕೋರಿದ್ದರಿಂದ ನ್ಯಾಯಪೀಠ, ಅರ್ಜಿ ವಿಚಾರಣೆಯನ್ನು ಅ.16ಕ್ಕೆ ಮುಂದೂಡಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.