ಸದ್ಯ ಆರ್ ಆರ್ ನಗರ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿಕೆ ರವಿ ಅವರ ಪತ್ನಿ ಕುಸುಮಾ ಕಣಕ್ಕೆ ಇಳಿದಿದ್ದು, ಅವರ ಬೆನ್ನಿಗೆ ಕಾಂಗ್ರೆಸ್ ಮಹಿಳಾ ನಾಯಕಿರು ನಿಂತಿದ್ದಾರೆ
ಬೆಂಗಳೂರು (ಅ.13) : ರಾಜರಾಜೇಶ್ವರಿನಗರ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ‘ಡಿ.ಕೆ.ರವಿ ಹೆಸರನ್ನು ಯಾರು ಬಳಸಿಕೊಂಡರೂ ಅವರಿಗೆ ಒಳ್ಳೆಯದಾಗಲ್ಲ’ ಎಂಬ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಕಾಂಗ್ರೆಸ್ ನಾಯಕಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಶಾಸಕಿ ಸೌಮ್ಯಾರೆಡ್ಡಿ, ಎಐಸಿಸಿ ವಕ್ತಾರೆ ಐಶ್ವರ್ಯ ಮಹದೇವ್ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವೆ ಉಮಾಶ್ರೀ, ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ಕಾನೂನುಬದ್ಧವಾಗಿ ಹಾಗೂ ಶಾಸೊತ್ರೕಕ್ತವಾಗಿ ಮದುವೆಯಾಗಿದ್ದ ತನ್ನ ಪತಿಯ ಹೆಸರು ಹೇಳಬಾರದು ಎಂದು ಹೇಳಲು ನಿಮಗೆ ಯಾವ ಅಧಿಕಾರ ಇದೆ? ಸತ್ತವರ ಹೆಸರಿನಲ್ಲಿ ಈ ಹಿಂದೆ ರಾಜಕೀಯ ಮಾಡಿದವರು ಯಾರು ಎಂದು ತರಾಟೆಗೆ ತೆಗೆದುಕೊಂಡರು. ಕುಸುಮಾ ಅಭ್ಯರ್ಥಿಯಾಗಿರುವುದಕ್ಕೆ ಬಿಜೆಪಿಗೆ ಹೆದರಿಕೆಯಾಗಿದೆ. ಹೀಗಾಗಿ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಇಂತಹ ಹೇಳಿಕೆಗಳನ್ನು ಮುನ್ನೆಲೆಗೆ ತರುತ್ತಿದೆ ಎಂದರು.
ಕುಸುಮಾ ತನ್ನ ಪತಿಯ ಹೆಸರು ಹಾಕಿಕೊಳ್ಳಬಾರದು ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ
ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮಾತನಾಡಿ, ಉಪ ಚುನಾವಣೆಯಲ್ಲಿ ನಾಲಿಗೆ ಹರಿಬಿಡುತ್ತಿರುವ ಶೋಭಾ ಕರಂದ್ಲಾಜೆ ಇಲ್ಲಿಯವರೆಗೆ ಎಲ್ಲಿ ಹೋಗಿದ್ದರು? ಹೆಣ್ಣಾಗಿ ಹುಟ್ಟಿದ್ದಕ್ಕೆ ಶೋಭಾ ಕರಂದ್ಲಾಜೆಗೆ ನಾಚಿಕೆಯಾಗಬೇಕು. ತಾನೂ ಒಬ್ಬ ಹೆಣ್ಣು ಎನ್ನುವುದನ್ನು ಮರೆತು ವರ್ತಿಸಬಾರದು ಎಂದರು.
ಎಐಸಿಸಿ ವಕ್ತಾರೆ ಐಶ್ವರ್ಯ ಮಹದೇವ್ ಮಾತನಾಡಿ, ಉತ್ತರ ಪ್ರದೇಶದಲ್ಲಿ ಯುವತಿ ಮೇಲೆ ನಡೆದ ಅತ್ಯಾಚಾರ ಹತ್ಯೆ ಸೇರಿದಂತೆ ಸಾಲು-ಸಾಲು ಶೋಷಣೆ ನಡೆಯುತ್ತಿದ್ದರೂ ಮಾತನಾಡದೆ ಎಲ್ಲಿ ಹೋಗಿದ್ದಿರಿ? ಮೊದಲು ಶವದ ಮೇಲೆ ರಾಜಕೀಯ ಮಾಡುವುದು ಬಿಡಿ ಎಂದು ಕರಂದ್ಲಾಜೆ ವಿರುದ್ಧ ಕಿಡಿ ಕಾರಿದರು.
ಇತ್ತೀಚೆಗೆ ಉಡುಪಿಯಲ್ಲಿ ಮಾತನಾಡಿದ್ದ ಶೋಭಾ ಕರಂದ್ಲಾಜೆ, ಡಿ.ಕೆ.ರವಿ ಹೆಸರನ್ನು ಯಾರು ಬಳಸಿಕೊಂಡರೂ ಅವರಿಗೆ ಒಳ್ಳೆಯಾದಗಲ್ಲ. ಡಿ.ಕೆ.ರವಿ ಬದುಕಿದ್ದಾಗ ಕುಸುಮಾ ಕುಟುಂಬ ಏನು ಮಾಡಿತ್ತು? ರವಿ ಮಾವ ಏನು ಮಾಡಿದ್ದರು? ರವಿ ಸತ್ತ ತಕ್ಷಣ ಕುಸುಮಾ ಎಲ್ಲಿಗೆ ಹೋದರು? ಇದೆಲ್ಲವೂ ಚರ್ಚೆಯಾಗುತ್ತದೆ ಎಂದು ಹೇಳಿದ್ದರು.