Karnataka Politics:'ರಾಮನಗರ ಜಿಲ್ಲೆ ಮಾಡಿದವನು ನಾನು, ಅವರಿಬ್ಬರು ಅಲ್ಲಿ ಕಿತ್ತಾಡ್ತಿದ್ದಾರೆ'

By Suvarna News  |  First Published Jan 3, 2022, 7:52 PM IST

* ಸಂಸದ ಡಿ.ಕೆ.ಸುರೇಶ್- ಸಚಿವ ಅಶ್ವತ್ಥ ನಾರಾಯಣ ಕಿತ್ತಾಟ
* ಇಬ್ಬರು ನಾಯಕರಿಗೆ ಟಾಂಗ್ ಕೊಟ್ಟ ಎಚ್‌ಡಿ ಕುಮಾರಸ್ವಾಮಿ
* ರಾಮನಗರ ಜಿಲ್ಲೆ ಮಾಡಿದವನು ನಾನು, ಅವರಿಬ್ಬರು ಅಲ್ಲಿ ಕಿತ್ತಾಡ್ತಿದ್ದಾರೆ ಎಂದು ಎಚ್‌ಡಿಕೆ


ಮೈಸೂರು, (ಜ.03): ರಾಮನಗರ (Ramanagara) ಜಿಲ್ಲೆ ಮಾಡಿದವನು, ಜಿಲ್ಲೆಯ ಅಭಿವೃದ್ಧಿ ಮಾಡಿದವನು ನಾನು ಇಲ್ಲಿದ್ದೀನಿ. ಅವರು ವೇದಿಕೆ ಮೇಲೆ ಕಿತ್ತಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ(HD Kumaraswmy) ಅವರು ಸಂಸದ ಡಿ.ಕೆ.ಸುರೇಶ್- ಸಚಿವ ಅಶ್ವತ್ಥ ನಾರಾಯಣ(Dr CN Ashwath Narayan) ಕಿತ್ತಾಟಕ್ಕೆ ಟಾಂಗ್ ಕೊಟ್ಟಿದ್ದಾರೆ.

ಇಂದು (ಸೋಮವಾರ) ಮೈಸೂರಿನಲ್ಲಿ(Mysuru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದಾಗ ರಾಜೀವ್ ಗಾಂಧಿ ಹೆಲ್ತ್ ಯುನಿವರ್ಸಿಟಿಗೆ ಅನುಮೋದನೆ ಮಾಡಿದ್ದೆ. ರಾಮನಗರ ಜಿಲ್ಲೆಗೆ ನರ್ಸಿಂಗ್ ಮೆಡಿಕಲ್ ಕಾಲೇಜು ಮಂಜೂರು ಮಾಡಿದ್ದೆ. 360 ಕೋಟಿ ರೂ. ಅನುದಾನವನ್ನೂ ಬಿಡುಗಡೆ ಮಾಡಿದ್ದೆ. ನಮ್ಮ ಸರ್ಕಾರ ಇಳಿಯುತ್ತಿದ್ದಂತೆಯೇ ಎಲ್ಲವನ್ನೂ ನಿಲ್ಲಿಸಿಬಿಟ್ಟರು. ಎಂಟು ವರ್ಷ ಬಿಜೆಪಿ ಸರ್ಕಾರ ಅಧಿಕಾರ ಮಾಡಿದೆ. 5 ವರ್ಷ ಕಾಂಗ್ರೆಸ್‌ ಸರ್ಕಾರವಿತ್ತು. ಅವರಿಬ್ಬರೂ ಏನು ಮಾಡಿದ್ರು? ನಾನು ಅನುಮೋದನೆ ಮಾಡಿದ್ದ ಆಸ್ಪತ್ರೆ ಕಟ್ಟಿಸಿದ್ದರೆ ಕೋವಿಡ್ ಸಂದರ್ಭದಲ್ಲಿ ಎಷ್ಟು ಪ್ರಾಣ ಉಳಿಸಬಹುದಿತ್ತು ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ಕಿಡಿಕಾರಿದರು,

Latest Videos

undefined

Karnataka Politics: ಡಿಕೆ ಸುರೇಶ್-ಅಶ್ವತ್ಥ್ ನಾರಾಯಣ ಕಿತ್ತಾಟ, ಗುಡುಗಿದ ಡಿಕೆ ಶಿವಕುಮಾರ್

ಬಂಡೆಗಳನ್ನೇ ಜೀರ್ಣಿಸಿಕೊಂಡವರಿಗೆ ಟೀಕೆಗಳನ್ನು ಜೀರ್ಣಿಸಿಕೊಳ್ಳುವುದು ಯಾವ ಲೆಕ್ಕ. ನೀವು ರಾಮನಗರ ಜಿಲ್ಲೆಯ ಕಲ್ಲು ಬಂಡೆಗಳನ್ನು ಜೀರ್ಣಿಸಿಕೊಂಡವರು. ಮೇಕೆದಾಟು ಯೋಜನೆಗದ ಡಿಪಿಆರ್ ಮಾಡಿಸಿದವನು ನಾನು. ನಿತಿನ್ ಗಡ್ಕರಿ ಅವರಿಗೆ ಡಿಪಿಆರ್ ಸಲ್ಲಿಸಿ ಅನುಮೋದನೆ ಪಡೆದುಕೊಂಡವನು ನಾನು. ಆಗ ನೀವು ನನ್ನೊಟ್ಟಿಗೆ ದೆಹಲಿಗೆ ಬಂದಿದ್ದೀರಾ ಎಂದು ಡಿಕೆ ಶಿವಕುಮಾರ್‌ಗೆ ಕುಮಾರಸ್ವಾಮಿ ತಿರುಗೇಟು ನೀಡಿದರು.

ರಾಜಕೀಯ ಲಾಭಕ್ಕಾಗಿ ಪಾದಯಾತ್ರೆ ಹೊರಟ್ಟಿದ್ದೀರಿ. ನಾನು ನಿಮ್ಮ ವಿಡಿಯೋಗಳನ್ನ ನೋಡಿದ್ದೇನೆ. ಮದುವೆಗೂ ಮುನ್ನ ಗಂಡು ಹೆಣ್ಣು ಪ್ರಿ ವೆಡ್ಡಿಂಗ್ ಶೂಟ್ ಮಾಡಿಸುತ್ತಾರೆ. ನೀವು ಪ್ರಿ ಪಾದಯಾತ್ರೆ ಫೋಟೋ ಶೂಟ್ ಮಾಡಿಸಿದ್ದೀರಿ. ಚಾಮರಾಜನಗರದಿಂದ ಕಬ್ಬಿನ ಜ್ಯೂಸ್ ಬರಬೇಕಂತೆ. ಭಾಗವಹಿಸಿದವರಿಗೆ ಸರ್ಟಿಫಿಕೆಟ್ ಕೊಡುತ್ತಾರಂತೆ. ನಿಮ್ಮ ಹೈಟೆಕ್ ಪಾದಯಾತ್ರೆಯನ್ನು ಜನರು ಗಮನಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಅಷ್ಟಕ್ಕೂ ಆಗಿದ್ದೇನು?
ಕಾರ್ಯಕ್ರಮಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿದ್ದನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಸಚಿವ ಅಶ್ವತ್ಥನಾರಾಯಣ ' ಇವತ್ತು ಏನು ತಪ್ಪಾಗಿದೆ ಎಂದು ನಾಲ್ಕು ಜನರನ್ನು‌‌ ಸೇರಿಸಿ ಘೋಷಣೆ ಕೂಗುತ್ತೀರಿ.  ನಾನೇನು ಯಾರ ಜಮೀನಿಗೂ ಕೈ ಹಾಕಿಲ್ಲ. ಯಾವನೋ ಅವನು‌ ಗಂಡಸು ಅನ್ನೋನು' ಎಂದು ಪ್ರಚೋದಿಸಿದರು.

ಇದರಿಂದ ಕುಪಿತಗೊಂಡ ಸುರೇಶ್ ' ನನ್ನ ಗಂಡಸ್ಥನ ತೋರಿಸಲ' ಎಂದು ಅಶ್ವತ್ಥನಾರಾಯಣರತ್ತ ನುಗ್ಗಿದರು. ಇದರಿಂದ ಗಲಾಟೆ ಜೋರಾಯಿತು. ಬಳಿಕ‌ ಸುರೇಶ್ ವೇದಿಕೆಯಲ್ಲೇ ಧರಣಿ‌‌ ಕುಳಿತರು.

ಡಿಕೆ ಸುರೇಶ್ ಸ್ಪಷ್ಟನೆ
ಮಂತ್ರಿಗಳು ಮಂತ್ರಿಗಳ ರೀತಿ ನಡೆದುಕೊಳ್ಳಲಿಲ್ಲ. ಸಚಿವರು ಸವಾಲೆಸೆದು ಕರೆದಾದ ಸುಮ್ಮನೆ ಕೂರಲು ಆಗಲಿಲ್ಲ. ಇದು ರಾಜ್ಯ ಸರ್ಕಾರದ ವತಿಯಿಂದ ನಡೆದ ಕಾರ್ಯಕ್ರಮ. ಆದರೆ, ಇದು ಬಿಜೆಪಿ ಕಾರ್ಯಕ್ರಮದಂತೆ ಕಾಣುತ್ತಿತ್ತು. ರಾಮನಗರ ಜಿಲ್ಲಾ ಪಂಚಾಯತ್ ವತಿಯಿಂದ ಅನುದಾನ ಪಡೆದಿದ್ದಾರೆ. ಇಲ್ಲಿ ಹಾಕಿರುವ ಎಲ್ಲಾ ಕಲ್ಲುಗಳನ್ನು ನಾವು ತಂದಿದ್ದೆವು. ಸಚಿವರು ಎಲ್ಲವನ್ನು ನಾವೇ ಮಾಡಿದ್ದೇವೆಂದು ವೀರಾವೇಷ ಪ್ರದರ್ಶಿಸಿದಾಗ ಸುಮ್ಮನಿರಲಾಗಲಿಲ್ಲ. ಸಿಎಂ ಸಮ್ಮುಖದಲ್ಲಿ ವೇದಿಕೆಯಲ್ಲೇ ಅವರಿಗೆ ಉತ್ತರ ಕೊಟ್ಟಿದ್ದೇವೆ ಎಂದು ಘಟನೆ ಬಳಿಕ ರಾಮನಗರದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್​ ಹೇಳಿಕೆ ನೀಡಿದ್ದಾರೆ.

ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ
ತಮ್ಮ ಎದುರಲ್ಲೇ ಸಚಿವ ಡಾ, ಸಿಎನ್  ಅಶ್ವತ್ಥ ನಾರಾಯಣ (Dr CN Ashwath Narayan) ಹಾಗೂ ಡಿಕೆ ಸುರೇಶ್(DK Suresh) ನಡುವೆ ಗಲಾಟೆಗೆ ಸಂಬಂಧಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಪ್ರತಿಕ್ರಿಯೆ ನೀಡಿದ್ದಾರೆ.

ಜಿಲ್ಲೆಯ ಅಭಿವೃದ್ಧಿ, ಕರ್ನಾಟಕದ ಅಭಿವೃದ್ಧಿಗೆ ಸಂಕಲ್ಪ ಮಾಡಲಾಗಿದೆ. ಈ ಘಟನೆಗಳು ಅಭಿವೃದ್ಧಿಯ ಮೇಲೆ ಪರಿಣಾಮ ಬೀರಲ್ಲ. ಚುನಾವಣೆಗೆ 1 ತಿಂಗಳಿರುವಾಗ ರಾಜಕಾರಣ ಮಾಡೋಣ ಎಂದರು.

ರಾಮನಗರ(Ramanagara) ಜಿಲ್ಲೆ ಕರ್ನಾಟಕಕ್ಕೆ ಮಾದರಿಯಾಗುವ ಜಿಲ್ಲೆ. ಅಭಿಮಾನ, ಸಂತಸದಿಂದ ರಾಮನಗರಕ್ಕೆ ಬಂದಿದ್ದೇನೆ. ಜಿಲ್ಲೆಯ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಚುನಾವಣೆಯ 1 ತಿಂಗಳು ಮಾತ್ರ ರಾಜಕಾರಣ ಮಾಡೋಣ. ರಾಮನಗರ ಜಿಲ್ಲೆಗೆ ಬಂದು ಪ್ರಚಾರ ಪಡೆಯುವ ಅಗತ್ಯವಿಲ್ಲ. ರಾಮನಗರ ಜಿಲ್ಲೆಗೆ ಕೊಡುಗೆ ಕೊಡಲು ಇಲ್ಲಿಗೆ ಬಂದಿದ್ದೇನೆ. ಹಲವಾರು ವಿಚಾರಗಳು ನನೆಗುದಿಗೆ ಬಿದ್ದಿರುವುದು ಗೊತ್ತಿದೆ. ಜನರು ರಾಜಕಾರಣ ಮಾಡುವುದನ್ನು ಕಲಿಯಬೇಕು ಎಂದು ಬೊಮ್ಮಾಯಿ ತಿಳಿಸಿದ್ದಾರೆ.

click me!